04 ಏಪ್ರಿಲ್ 2023 ಬೆಂಗಳೂರು: “ಆಜೀವಿಕ” ಅರ್ಪಿಸುವ ಬಾದಲ್ ಸರ್ಕಾರ್ ಅವರ ‘ಭೂಲ್ ರಾಸ್ತ” ಟಿಪ್ಪಣಿಯನ್ನು ಆಧರಿಸಿ ಲಕ್ಷ್ಮೀಪತಿ ಕೋಲಾರ ಅವರು ರಚಿಸಿದ ಕೃತಿ “ಮರೆತ ದಾರಿ”. ಈ ಕೃತಿ ಡಾ. ಉದಯ್ ಸೋಸಲೆಯವರ ನಿರ್ದೇಶನದಲ್ಲಿ ದಿನಾಂಕ 08-04-2023ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಹನುಮಂತ್ ಮಂಡ್ಯ ಮತ್ತು ದುರ್ಗಬುಡ್ಡಿ ದೀಪರವರ ಸಂಗೀತದಲ್ಲಿ ಮೂಡಿ ಬರುವ ಈ ನಾಟಕಕ್ಕೆ ವಾಸವಿಯವರು ಸಹಾಯಕ ನಿರ್ದೇಶಕರಾಗಿದ್ದಾರೆ.
ನಾಟಕದ ಬಗ್ಗೆ:
ಭ್ರಮಾ ಬಿತ್ತಿಯ ವಾಸ್ತವ ನಿರೂಪಣೆ : ‘ಮರೆತ ದಾರಿ’
ಮರೆತ ದಾರಿ ನಾಟಕವು ದಿವಂಗತ ಬಾದಲ್ ಸರ್ಕಾರ್ ಅವರು ಬರೆಯ ಬಹುದಾಗಿದ್ದ ತಾವೇ ನಟಿಸಬೇಕೆಂದು ಆಶಿಸಿದ್ದ ಅವರ ಕೊನೆಯ ನಾಟಕ ‘ಭೂಲ್ ರಾಸ್ತಾ’ ಗೆ ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಆಧರಿಸಿದ್ದು. ಅದು ನಾಟಕವಾಗುವ ಮುನ್ನವೇ ಅವರು ಕಾಲಾತೀತರಾದರು. ಸರ್ವಾಧಿಕಾರ ಮತ್ತು ಗೆದ್ದಲು ಹಿಡಿದ ವ್ಯವಸ್ಥೆಯ ಭಾಗವಾಗಿದ್ದ ರಾಜಕುಮಾರನೊಬ್ಬ ಕಾಡಲ್ಲಿ ದಾರಿ ತಪ್ಪಿ ನಿಸರ್ಗ ಸಹಜವಾದ ಸ್ವಚ್ಛಂದವೂ, ಆನಂದಮಯವೂ ಆದ ಜೀವಂತಿಕೆಯ ಭಿನ್ನ ಬದುಕಿನ ದಾರಿಯೊಂದಿಗೆ ಅಮೂಲ್ಯವೆಂಬಂತಹ ಸಾಪೇಕ್ಷ ಸತ್ಯ ಅರಿತು ಕಾಡಿನ ಒಡಲಲ್ಲೇ ಉಳಿಯುವ ವಿವೇಕದ ನಿರ್ಧಾರ ಮಾಡುತ್ತಾನೆ. ಈ ಮೂಲಕ ಪ್ರಕೃತಿ ಮತ್ತು ಪ್ರಕೃತಿ ತತ್ವಗಳಿಂದ ಆಧುನಿಕರು ದೂರ ಸರಿದಿರುವುದೇ ಇಂದಿನ ಬಹುತೇಕ ಸಂಕೀರ್ಣ ಸಮಸ್ಯೆ, ನೋವು ಮತ್ತು ತಲ್ಲಣಗಳಿಗೆ ಮೂಲ ಕಾರಣವೆಂದು ಸೂಚಿಸುವುದಾಗಿದೆ. ಕೇವಲ ವ್ಯಕ್ತಿ ಒಬ್ಬ ಹೀಗೆ ಗುಣಾತ್ಮಕವಾಗಿ ಬದಲಾದರೆ ಸಾಲದು, ಇಡೀ ಸಮಾಜವೇ ಬದಲಾಗಬೇಕೆಂದು, ಈ ಸಂದರ್ಭದ ತುರ್ತಿಗೆ ತಕ್ಕಂತೆ ನಾವು ಅಗತ್ಯ ಬದಲಾವಣೆಗಳೊಂದಿಗೆ ವಿಡಂಬನಾತ್ಮಕತೆಯನ್ನು ನಾಟಕದ ಒಳದನಿಯಾಗಿಸಿ, ವರ್ತಮಾನಕ್ಕೆ ಹೆಚ್ಚು ಪ್ರಸ್ತುತವಾಗುವಂತೆ ರೂಪಿಸಿದ್ದೇವೆ. ಆಧುನಿಕರೆಲ್ಲರೂ ಮರೆತಿರುವ ಪ್ರಕೃತಿ-ಸಂಸ್ಕೃತಿಯ ಅನನ್ಯತೆಯನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ‘ತಾವೊ’ ತತ್ವದ ಲೇಪವನ್ನೂ ನೀಡಿದ್ದೇವೆ. ನೋಡುಗರನ್ನು ತೀವ್ರ ಆತ್ಮಾವಲೋಕನಕ್ಕೆ ಹಚ್ಚುವ ಗಂಭೀರ ಆಶಯವನ್ನು ಬೇಕಂತಲೇ ಸಾಮಾನ್ಯರ ಭಾಷೆಯಲ್ಲಿ ನಿರೂಪಿಸಿರುವ ಪ್ರಯತ್ನವೇ “ಮರೆತದಾರಿ”.
ಆಜೀವಿಕದ ಬಗ್ಗೆ
ಸತ್ಯ ಮತ್ತು ಸಾವು ಒಂದೇ ನಾಣ್ಯದ ಎರಡು ಮುಖಗಳು. ಸಾವಿಗೆ ಸಮೀಪದಲ್ಲಿರುವ ವ್ಯಕ್ತಿ ಸತ್ಯವನ್ನೇ ಹೇಳುತ್ತಾನೆ ಎಂಬುದು ತಾತ್ವಿಕ ನಂಬಿಕೆಯಷ್ಟೆ. ಧರ್ಮವೆಂಬುದು ಗುಲಾಮನಿಂದ ರೂಪಿತವಾದುದಾದರೂ ಅದರೊಳಗಿನ ವಿಭಿನ್ನ ಸಮೂದಾಯಗಳ ಸಾಂಸ್ಕೃತಿಕ-ರಾಜಕಾರಣ ಸತ್ಯವನ್ನ ಮರೆಮಾಚುತ್ತಿವೆ. ಹೊಸದೇನನ್ನೋ ಕಟ್ಟುತ್ತೇವೆ ಎಂಬ ಭ್ರಮೆಯಿಂದ ಹೊರಬಂದು ರಂಗದೊಂದಿಗಿನ ಪಯಣದೊಂದಿಗೆ ಸಾವಿಗೆ ಎದುರಾಗಿ ಸತ್ಯವನ್ನ ಉಸಿರಾಡುತ್ತೇವೆ ಎಂಬ ಸಣ್ಣ ಆಶಾವಾದದಿಂದ ರೂಪುಗೊಂಡಿರುವುದೇ ಆಜೀವಿಕಾ…. ಒಂದು ಸಮೂದಾಯ….
‘ಆಜೀವಿಕ’ ಒಂದು ತಂಡವಷ್ಟೇ ಅಲ್ಲ, ಒಂದು ಜೀವನ ಕ್ರಮ. ಹುಸಿ ಸಂಭ್ರಮಗಳ ಅಬ್ಬರದ ನಡುವೆ ತಿಳಿಯಾದ ಸತ್ಯದ ಜಾಡನ್ನು ಹುಡುಕುತ್ತಾ ಹೊರಟಿದ್ದೇವೆ. ನಮ್ಮ ಸುತ್ತಲಿನ ಜಗತ್ತಿನಲ್ಲಿ ಕಣ್ಣೆದುರಿಗೇ ಮರೆಮಾಚಲಾಗಿರುವ ಜೀವಿಕ ಎಳೆಗಳ ಹುಡುಕಿ, ಅದರಂತೆ ಜೀವಿಸುವುದು ನಮ್ಮ ಉದ್ದೇಶ. ಸಂಸ್ಕೃತಿ ಜವಾಬ್ದಾರಿಗಳನ್ನು ಮನಗಂಡು, ಅವುಗಳೆಡೆಗೆ ನಡೆಯಲು ಪೂರಕವಾಗಿ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ಆಜೀವಿಕ ಕಾರ್ಯ ನಿರ್ವಹಿಸುತ್ತಿದೆ. ಇಷ್ಟು ನಮ್ಮ ಈವರೆಗಿನ ಎಳೆಗಾಲಿನ ನಡಿಗೆ. ಸಾಮಾಜಿಕ ನ್ಯಾಯಪರತೆಯ ಮೂಲ ಬುನಾದಿಯಲ್ಲಿ ಒಂದು ಆರೋಗ್ಯಕರ ಸಾಂಸ್ಕೃತಿಕ ಸಮಾಜದೆಡೆ ಹಲವು ಧಾರೆಗಳಲ್ಲಿ ಆಜೀವಿಕ ಕೆಲಸ ಮಾಡುತ್ತಿದೆ.
• ಸಮಾಜಮುಖೀ ರಂಗಭೂಮಿ:- ಮಾನವತೆಯ ಪ್ರತಿಪಾದಿಸುವ ‘ಅಲ್ಲಮನ ಬಯಲಾಟ’, ‘ಕನ್ನಗತ್ತಿ’ ಮತ್ತು ‘ಪೋಸ್ಟ್ ಬಾಕ್ಸ್ ನಂ.9’ ರಂಗ ಪ್ರಯೋಗಗಳು; ರಂಗ ತರಬೇತಿ ಶಿಬಿರಗಳು; ಸಾಮಾಜಿಕ ಸಮತೆಯ ಕುರಿತು ಬೀದಿ ನಾಟಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು;
• ಸಂಸ್ಕೃತಿ ಚಿಂತನೆ ಕಾರ್ಯಕ್ರಮಗಳು:- ಸಾಂಸ್ಕೃತಿಕ ಅಧ್ಯಯನ (ಅಧ್ಯಯನ ಕೃತಿಗಳು, ಲೇಖನಗಳು, ಸಿದ್ಧಾಂತಗಳ) ಕುರಿತ ಚರ್ಚೆ, ಸೆಮಿನಾರ್ ಮತ್ತು ವಿಚಾರ ಗೋಷ್ಟಿಗಳು; ಯುವಜನರು ಎದುರಿಸುತ್ತಿರುವ ಸಾಮಾಜಿಕ ವಾಸ್ತವಗಳ ಬೆಗೆಗಿನ ಸಾಹಿತ್ಯ (ಕವನ, ಕಾದಂಬರಿ, ವಿಮರ್ಷೆ, ವಿಶ್ಲೇಷಣೆ) ತರಗತಿ ಹಾಗೂ ಚರ್ಚೆಗಳು;
• ಇಂದಿಗೆ ಅನಿವಾರ್ಯವೂ, ತುರ್ತಿನ ಸಂಗತಿಯೂ ಆಗಿರುವ ಸಾವಯವ ಕೃಷಿ, ನೀರು ಮತ್ತು ಮಣ್ಣಿನ ಸಂರಕ್ಷಣೆ ಕುರಿತು ಪ್ರಯೋಗ ಮತ್ತು ತರಬೇತಿ ಕಾರ್ಯಕ್ರಮಗಳು;
• ಶಿಕ್ಷಣ (ಶೈಕ್ಷಣಿಕ ನೀತಿಗಳು, ಆಡಳಿತ ವ್ಯವಸ್ಥೆಯ ಅರಿವು, ಪರ್ಯಾಯ ಶಿಕ್ಷಣ ವ್ಯವಸ್ಥೆಗಳ) ಕುರಿತ ಚರ್ಚೆಗಳು; ಇವು ನಮ್ಮ ಇಲ್ಲಿವರೆಗಿನ ನಡೆ.
ಹಿರಿಯ ಚಿಂತಕರಾದ ಲಕ್ಷ್ಮೀಪತಿ ಕೋಲಾರ, ಪದ್ಮಾಲಯ ನಾಗರಾಜ್, ನಟರಾಜ್ ಬೂದಾಳ್, ಹೋರಾಟಗಾರ್ತಿ ಗೀತಾ. ವಿ ಅವರಂತಹ ಹಲವರ ಬೆಂಬಲದೊಂದಿಗೆ ಬೆಳೆಯುತ್ತಿರುವ ಮಗುವೆ ಆಜೀವಿಕ. ನಿರ್ದೇಶಕರಾದ ಡಾ. ಉದಯ್ ಸೋಸಲೆ ನೇತೃತ್ವದಲ್ಲಿ ಒಟ್ಟು 15 ಕಲಾವಿದರು ಇಂದು ಆಜೀವಿಕದಲ್ಲಿ ಸಕ್ರಿಯವಾಗಿದ್ದು, 100ಕ್ಕೂ ಹೆಚ್ಚು ಜನ ಆಜೀವಿಕದಲ್ಲಿ ಕಲಿತು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮುಂದಿನ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಮುಂದುವರೆಯಲಿ ಎಂದು ಆಶಿಸುತ್ತೇವೆ.
2 Comments
Were is loction
Kala Grama ಕಲಾ ಗ್ರಾಮ
NGEF Layout, Stage 2, Chandra Layout, Bengaluru, Karnataka 560056