ಕಲಾಗ್ರಾಮದ ವಠಾರದಲ್ಲಿ ಅದೇನು ಕಾರಣವೋ ಸೆಗಣಿ, ಗಂಜಳದ ಅರ್ಥಾತ್ ಜಾನುವಾರು ಕೊಟ್ಟಿಗೆಯ ವಾಸನೆ ಪ್ರಸ್ತುತ ಅರೆಹೊಳೆ – ಕಲಾಭೀ ನಾಟಕೋತ್ಸವದ ಉದ್ದಕ್ಕೂ ಬರುತ್ತಲೇ ಇತ್ತು. ಇಂದು ಅದರ ಕಾರಣವೇ ರಂಗದ ಮೇಲೇ ಬಂದಂತೆ, ಪಕ್ಕಾ ಬೀದಿ ಕಸದ್ದೇ ರೂಪ ಹೊತ್ತಿತ್ತು ರಂಗಮಂಚ. ನಾಟಕ ಇಟಾಲಿಯನ್ ಲೇಖಕ ದಾರಿಯೋ ಪೋನ ಕೃತಿಯ, ಪ್ರಕಾಶ್ ಗರುಡರ ಕನ್ನಡ ರೂಪಾಂತರ – ಬೆತ್ತಲಾಟ. ವಿನ್ಯಾಸ ಮತ್ತು ನಿರ್ದೇಶನ – ರೋಹಿತ್ ಎಸ್. ಬೈಕಾಡಿ, ಪ್ರಸ್ತುತಿ ಬ್ರಹ್ಮಾವರದ ಮಂದಾರ (ರಿ.)
ಮುನ್ನೆಲೆಯ ಕಸದ ಕುಪ್ಪೆಗೆ ಹೊಂದುವಂತೆ ನಗರದ ಹಿಂಭಿತ್ತಿಯನ್ನೇ ರಂಗ ಹೊತ್ತಿತ್ತು. ಅದಕ್ಕೆ ದೇಶ, ಕಾಲ ಮತ್ತು ಜೀವ ತುಂಬಿದವರು ಬಿಗಿಲೂದುವ ಬೀಟ್ ಪೋಲಿಸ್, ಮರಸಿನಾಟದಲ್ಲಿರುವ ಸೂಳೆ, ಸೈಕಲ್ ಸಂಚಾರದಲ್ಲಿರುವ ಹೂಗಾರ, ಕಸಗುಡಿಸುವವರು ಮತ್ತು ರಾಯಭಾರಿ. ಅವರ ಸಹಜ ಕಲಾಪಗಳು ಕೊಡುವ ಸಾಮಾಜಿಕ ಚಿತ್ರಣದಲ್ಲಿ ಹಣಿಕುವ ಅಸಾಂಗತ್ಯವೇ ನಾಟಕದ ಸತ್ವ. ಬೀದಿ ಕಸಗುಡಿಸುವವರ ಸಂವಾದದಲ್ಲಿ ಯೋಗ, ಆತ್ಮ, ಪ್ಲೇಟೋ ಬರುತ್ತಾರೆ, ಬ್ರಹ್ಮತ್ವದ ಜಿಜ್ಞಾಸೆ ನಡೆಯುತ್ತದೆ. ತದ್ವಿರುದ್ಧವಾಗಿ ಅಧಿಕಾರ ಮತ್ತು ಸವಲತ್ತುಗಳಲ್ಲಿ ಓಲಾಡಬೇಕಾದವನು ಕಸತೊಟ್ಟಿಯ ನಡುವೆ ಬೆತ್ತಲೆ ಹುದುಗಿರುತ್ತಾನೆ. ಈ ವಿರೋಧಾಭಾಸಗಳ ಸರಣಿಯ ಕೊನೆಯಲ್ಲಿ, ಬೆತ್ತಲೆ ಅಧಿಕಾರಿ ಕಳ್ಳ ದಿರಿಸಿನಲ್ಲಿ ಸಾಮಾಜಿಕ ಮುಜುಗರದಿಂದ ಪಾರಾದರೆ, ತಿಪ್ಪೇ ಗುಡಿಸುವವನು ಉತ್ತಮ ದಿರಿಸಿನಲ್ಲಿ ಐಹಿಕ ಜವಾಬುದಾರಿಗಳಿಂದ ಮುಕ್ತನಾಗುತ್ತಾನೆ. ನಡುವೆ ಸುಳಿವ ಅಸಂಖ್ಯ ಲೋಕ ಸತ್ಯಗಳನ್ನು ಸಾರುವಲ್ಲಿ ನಾಟಕದ ಅಸಾಂಗತ್ಯ ತುಂಬ ಪರಿಣಾಮಕಾರಿಯಾಗುತ್ತದೆ.
ಮೂಲದಲ್ಲಿ ಕನಿಷ್ಠ ಅರ್ಧ ಶತಮಾನದ ಹಿಂದಿನ ‘ಬೆತ್ತಲಾಟ’, ಇಲ್ಲೇ ದಿನ ಮುಂಚೆ ಪ್ರಯೋಗ ಕಂಡ ‘ಅಶ್ವತ್ಥಾಮ ನಾಟೌಟ್’ನಂತೇ ಇಂದಿನ ಸಮಾಜೋ-ರಾಜಕೀಯ ಸಂದಿಗ್ಧಕ್ಕೂ ಪ್ರಖರ ಬೆಳಕನ್ನೇ ಚೆಲ್ಲುತ್ತದೆ. ನನಗೆ ಅಶ್ವತ್ಥಾಮ ನಾಟೌಟಿನಲ್ಲೂ ಕಂಡಂತೆ, ಇಲ್ಲೂ ಪ್ರಯೋಗದ ಅಸಂಗತ ಪ್ರಸ್ತುತಿಗೆ ಭಾಷಾ ಪ್ರಯೋಗದ ಅನೈಚ್ಛಿಕ ಅಸಾಂಗತ್ಯವಷ್ಟೇ ಸರಿಯಲ್ಲ. ಇದು ಪ್ರೇಕ್ಷಕರಿಗೆ ಸಂದೇಶ ಸಂವಹನದಲ್ಲಿ ತುಸು ದುರ್ಬಲವಾಗುತ್ತದೆ ಎಂದೇ ಅನ್ನಿಸಿತು. ಆ ನಿಟ್ಟಿನಲ್ಲಿ, ನಿರ್ದಿಗಂತದ ಪ್ರಕಾಶ ರಾಜ್ ಹಾಗೂ ನಿರ್ದೇಶಕ ಶಕೀಲ್ ಅಹ್ಮದ್ ಶುದ್ಧ ಉತ್ತರ ಕರ್ನಾಟಕದ ಕನ್ನಡ ಬನಿಯನ್ನೇ ‘ತಿಂಡಿಗೆ ಬಂದ ತುಂಡೇರಾಯ’ಕ್ಕೆ ಅಳವಡಿಸಿದ್ದು ಹೆಚ್ಚು ಮಹತ್ವದ್ದಾಗಿಯೇ ನೆನಪಾಯ್ತು.
ಜಿ. ಎನ್. ಅಶೋಕವರ್ಧನ
ವಿಮರ್ಶಕರು, ಮಂಗಳೂರು
ಚಿತ್ರ ಕೃಪೆ – ಅರವಿಂದ ಕುಡ್ಲ