ಕಾಸರಗೋಡು : ಚಂದ್ರಗಿರಿಯ ‘ಮೇಘರಂಜನಾ’ ತಂಡವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ‘ರಂಗ ಚಿನ್ನಾರಿ’ ಕಾಸರಗೋಡು ಇದರ ಸಹಕಾರದೊಂದಿಗೆ ಆಯೋಜಿಸಿದ ‘ಭಾವ ಶಿಬಿರ’ವು ದಿನಾಂಕ 13-07-2024 ರಂದು ಕಾಸರಗೋಡಿನ ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕ ಹಾಗೂ ಗಾಯಕರಾದ ಕೆ. ಜಿ. ಶ್ಯಾನುಭೋಗ್ ಮಾತನಾಡಿ “ಸಂಗೀತವನ್ನು ಅಭ್ಯಾಸ ಮಾಡುವ ಮೂಲಕ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯ. ಶ್ರುತಿ, ತಾಳ, ಲಯಬದ್ಧವಾಗಿ ಸಂಗೀತವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅದನ್ನೇ ನಮ್ಮ ಜೀವನದಲ್ಲಿ ಅಳವಡಿಸಿದಾಗ ನಾವು ಸಭ್ಯರಾಗಿ ಬದುಕಬಹುದು. ಭಾವಗೀತೆಯ ಮೂಲಕ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅದರಿಂದ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಬಹುದು.” ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ “ಕಲಾ ಗ್ರಾಮವಾದ ಕೂಡ್ಲಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಮತ್ತು ಉದಯೋನ್ಮಖ ಕಲಾವಿದರ ಸೃಷ್ಟಿ ಆಗಬೇಕು.” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೇಘರಂಜನದ ನಿರ್ದೇಶಕರಾದ ಪುರುಷೋತ್ತಮ ಕೊಪ್ಪಲ್ ಮಾತನಾಡಿ “ಇಂತಹ ಶಿಬಿರಗಳ ಮೂಲಕ ಮಕ್ಕಳಿಗೆ ವೇದಿಕೆ ಸೃಷ್ಟಿಸುವಲ್ಲಿ ‘ಮೇಘರಂಜನ’ ಪ್ರಯತ್ನಿಸಲಿದೆ.” ಎಂದು ಹೇಳೀದರು. ಖ್ಯಾತ ಹಾಡುಗಾರ ಕಿಶೋರ್ ಕುಮಾರ್ ಪೆರ್ಲ, ಪ್ರಭಾಕರ್, ಸವಿತಾ ಟೀಚರ್ ಕೂಡ್ಲು ಸಮಾರಂಭಕ್ಕೆ ಶುಭಹಾರೈಸಿದರು.
ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ, ವಂದಿಸಿದರು. ಬಳಿಕ ಕೂಡ್ಲು ಪ್ರೌಢಶಾಲೆಯ ಮಕ್ಕಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಹಾಡುಗಾರ ಕಿಶೋರ್ ಕುಮಾರ್ ಪೆರ್ಲ ಕಲಿಸಿಕೊಟ್ಟರು. ಪ್ರಭಾಕರ್, ಸವಿತಾ ಟೀಚರ್, ಉಷಾ ಟೀಚರ್ ಸಹಕರಿಸಿದರು.