ಕಡಬ : ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಕಡ್ಯ ಕೊಣಾಜೆ ಭಜನೋತ್ಸವ ಕಾರ್ಯಕ್ರಮವು ದಿನಾಂಕ 10-12-2023ರಂದು ಜರಗಿತು. ಸಾಧಕರ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಕಡ್ಯ ವಾಸುದೇವ ಭಟ್ ಹಾಗೂ ಇತರ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡುತ್ತಾ “ಸಾಧಕರನ್ನು ಗೌರವಿಸುವುದರಿಂದ ನಮ್ಮ ಗೌರವ ಹೆಚ್ಚುತ್ತದೆ. ಸಾಧಕರು ನಡೆದು ಬಂದ ದಾರಿ ಇತರರಿಗೆ ಪ್ರೇರಣೆಯಾಗಲಿದೆ. ಕಡ್ಯ ವಾಸುದೇವ ಭಟ್ ಅವರು ದಾಸ ಸಾಹಿತ್ಯ ಪ್ರಸರಣ ಕಾರ್ಯದೊಂದಿಗೆ ಧರ್ಮ ಜಾಗೃತಿ ಮತ್ತು ರಾಷ್ಟ್ರ ಜಾಗೃತಿಯನ್ನು ಮಾಡಿದವರು. ದೇವ ಸೇವೆ ನಡೆದರೆ ಅಲ್ಲಿ ದೇಶ ಸುರಕ್ಷಿತವಾಗಿರುತ್ತದೆ. ಹಾಗಾದಾಗ ದೇಶವಾಸಿಗಳೂ ಸುರಕ್ಷಿತವಾಗಿರಲು ಸಾಧ್ಯ” ಎಂದು ಹೇಳಿದರು.
ಮಂಗಳೂರು ವಿಭಾಗ ಕುಟುಂಬ ಪ್ರಭೋದನ್ ಪ್ರಮುಖ್ ಅಚ್ಯುತ ನಾಯಕ್ ಮಾತನಾಡಿ, “ಭಜನೆ ಇರುವಲ್ಲಿ ವಿಭಜನೆ ಇಲ್ಲ. ಭಜನೆಯ ಮೂಲಕ ವಾಸುದೇವ ಭಟ್ ಇಡೀ ಗ್ರಾಮವನ್ನು ಒಂದಾಗಿಸಿದ್ದಾರೆ. ಸಭಾಂಗಣದಲ್ಲಿ ಇಂದು ಸೇರಿರುವ ಜನಸ್ತೋಮವೇ ಅದಕ್ಕೆ ಸಾಕ್ಷಿಯಾಗಿದೆ. ಧರ್ಮಸ್ಥಳದ ಧರ್ಮಾಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷ ಮುತುವರ್ಜಿಯಿಂದ ಇಂದು ಭಜನೆಗೆ ಎತ್ತರದ ಸ್ಥಾನ ಲಭಿಸಿದೆ. ಪ್ರತಿ ಮನೆಯಲ್ಲೂ ಭಜನೆ ನಡೆಯಬೇಕಾದ ಅಗತ್ಯ ಇದೆ” ಎಂದರು.
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎನ್. ಶುಭಹಾರೈಸಿ “ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತ ವಾಸುದೇವ ಭಟ್ ಮತ್ತು ವೀಣಾ ಭಟ್ ದಂಪತಿಯ ಸಂಸ್ಕಾರಯುತ ಜೀವನ ಎಲ್ಲರಿಗೂ ಮಾದರಿ. ಮನೆಗೆ ಬಂದವರಿಗೆ ಮೇಲು ಕೀಳೆನ್ನದೆ ಅವರು ನೀಡುವ ಆತಿಥ್ಯ ಅನುಕರಣೀಯ. ಕೊಣಾಜೆ ಗ್ರಾಮದ ಅಭಿವೃದ್ಧಿಯಲ್ಲಿ ವಾಸುದೇವ ಭಟ್ ಅವರ ಸದ್ದಿಲ್ಲದ ಶ್ರಮವಿದೆ” ಎಂದು ಹೇಳಿದರು.
ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯ ಸಂಚಾಲಕ ಸುಧಾಕರ ರಾವ್ ಪೇಜಾವರ, ಕಡಬ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಂದರ ಗೌಡ ಒಗ್ಗು, ಕಡ್ಯ ಕೊಣಾಜೆ ಗ್ರಾ. ಪಂಚಾಯತ್ ಅಧ್ಯಕ್ಷೆ ರುಕ್ಕಿಣಿ ನಾಗಪ್ಪ ಪಾದೆ, ಉದ್ಯಮಿ ಮುರಳೀಧರ ಉಡುವ ಅತಿಥಿಗಳಾಗಿದ್ದರು. ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಕಡ ವಾಸುದೇವ ಭಟ್ ಮತ್ತು ವೀಣಾ ಭಟ್ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು.
ಕಡ್ಯ ವಾಸುದೇವ ಭಟ್ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಅಚ್ಯುತ ಭಟ್ ಗುಜ್ಜಳ, ಉಪಾಧ್ಯಕ್ಷೆ ಚಿತ್ರಾವತಿ ಕೋಡಿಯಡ್ಕ, ಗೌರವ ಸಲಹೆಗಾರರಾದ ಸುಂದರ ಗೌಡ ದೊಡ್ಡಮನೆ, ಉಮೇಶ್ ಗೌಡ ಕಲ್ಲೂರು, ಕುಶಾಲಪ್ಪ ಗೌಡ ಅಯರ್ತಮನೆ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಯಶೋಧರ ಗೌಡ ಪಲ್ಲತ್ತಡ್ಕ ಪ್ರಸ್ತಾವನೆಗೈದರು. ಸತೀಶ್ ಕಲ್ಲೂರು ಸನ್ಮಾನ ಪತ್ರ ವಾಚಿಸಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ತಿಮಪ್ಪ ಗೌಡ ಬ್ರಂತೋಡು ಸ್ವಾಗತಿಸಿ, ಮುತ್ತಪ್ಪ ಕೆ. ವಂದಿಸಿದರು. ಉಪನ್ಯಾಸಕ ಜಗನ್ನಾಥ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಗುರುರಾಜ್ ಭಟ್ ಅವರಿಂದ ಭಕ್ತಿಗಾನ ಸುಧೆ ಹಾಗೂ ಆಯ್ದ ಭಜನಾ ತಂಡಗಳಿಂದ ಭಜನೋತ್ಸವ ಕಾರ್ಯಕ್ರಮ ಜರಗಿತು.