ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಗಮಕ ಕಲಾ ಪರಿಷತ್ತು ಇವುಗಳ ಸಂಯುಕ್ತ ಆಶಯದಲ್ಲಿ ಕುಮಾರವಾಲ್ಮೀಕಿ ರಚಿಸಿದ ತೊರವೆ ರಾಮಾಯಣದ ಆಯೋಧ್ಯಾ ಕಾಂಡದ ‘ಭರತನ ಸೋದರ ಪ್ರೀತಿ’ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025 ಶನಿವಾರದಂದು ಸಂದರ್ಭನಗರದ ಆಶ್ರಮ ರಸ್ತೆಯಲ್ಲಿರುವ 37 ನಂ. ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸಾಂಗವಾಗಿ ನಡೆಯಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು.
“ಭರತನು ತಂದೆ, ತಾಯಿ, ಅಣ್ಣ ಹಾಗೂ ಪ್ರಜೆಗಳನ್ನು ಸಮನಾಗಿ ಪ್ರೀತಿಸುತ್ತಿದ್ದನು. ರಾಮನಿಗೆ ಸಮನಾದ ಶ್ರೇಷ್ಠ ಗುಣಗಳು ಭರತನಲ್ಲಿದ್ದವು. ಹೀಗಾಗಿ ರಾಮಾಯಣವು ಭಾರತದ ಒಂದು ಉನ್ನತ ಕಾವ್ಯವಾಗಿದೆ” ಎಂದು ಹಿರಿಯ ಸಾಹಿತಿ ಶ್ರೀ ಜಂಬುನಾಥ ಕಂಚ್ಯಾಣಿ ತಿಳಿಸಿದರು. ಆರಂಭದಲ್ಲಿ ಗಮಕಿ ಶ್ರೀಮತಿ ಪುಷ್ಪಾ ಕುಲಕರ್ಣಿ ಇವರು ‘ಶ್ರೀ ಜನಕಚಾರಮಣ ವಿಮಲ ಸರೋಜ ಸಂಭವ ಜನಕ… ತೊರವೆಯ ರಾಯ ನರಹರಿ ಪಾಲಿಸುಗೆ ಜಗದ” ಎಂಬ ಮಂಗಲಾಚರಣ ಸ್ತುತಿಯೊಂದಿಗೆ ಅತ್ಯಂತ ಸುಮಧುರ ಧ್ವನಿಯಲ್ಲಿ ಕಾವ್ಯ ವಾಚನ ಆರಂಭಿಸಿದರು. ವಿಜಯಪುರ ಜಿಲ್ಲೆಯ ತೊರವೆಯ ನರಹರಿ ಅಥವಾ ಕುಮಾರವಾಲ್ಮೀಕಿ ಕವಿಗಳ ಪರಿಚಯವನ್ನು ವ್ಯಾಖ್ಯಾನಕಾರ ಶ್ರೀ ಕಲ್ಯಾಣರಾವ್ ದೇಶಪಾಂಡೆಯವರು ಮಾಡಿಕೊಟ್ಟು ನಂತರ ಕಾವ್ಯದ ರಸಘಟ್ಟಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ಕಥಾ ಭಾಗವನ್ನು ಅತ್ಯಂತ ಆಸಕ್ತಿಯಿಂದ ವಿದ್ಯಾರ್ಥಿಗಳು ಆಲಿಸಿದರು. ಗಮಕದ ಕೊನೆಗೆ ಗಮಕಿಗಳು ಕೇಳಿದ ಕಾವ್ಯ ಪ್ರಸಂಗದ 10 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸಿ ತಮ್ಮ ಜಾಣೆಯನ್ನು ಪ್ರದರ್ಶಿಸಿದರು.
ಸಮಾರಂಭದ ಕೊನೆಗೆ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಶೋಭಾ ನಾಯಕ್ ಅವರು ರಾಮಾಯಣವು ಒಂದು ಆದರ್ಶ ಕಾವ್ಯವೆಂದು ತಿಳಿಸಿ, ವಿದ್ಯಾರ್ಥಿಗಳಿಗೆ ರಾಮಾಯಣ ಓದಲು ಕರೆ ಕೊಟ್ಟರು. ಶಿಕ್ಷಕರಾದ ಶ್ರೀ ಎಸ್.ಎಸ್. ಕುಲಕರ್ಣಿ (ಮಲಘಾಣ) ಇವರು ಅತಿಥಿಗಳನ್ನು ಸ್ವಾಗತಿಸಿ, ಶ್ರೀ ಬಿ.ಕೆ. ಗೋಟ್ಯಾಳ್ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭದ ವಂದನಾರ್ಪಣೆಯನ್ನು ಶಿಕ್ಷಕರಾದ ಶ್ರೀ ಎಂ.ಎ. ಕನ್ನೂರ್ ಇವರು ನಿರ್ವಹಿಸಿದರು. ಸಮಾರಂಭದಲ್ಲಿ ಶಾಲೆಯ ಶಿಕ್ಷಕ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಶಾಲೆಯ ಮಕ್ಕಳ ಶಿಸ್ತು ಹಾಗೂ ವಿನಯ ಎಲ್ಲ ಅತಿಥಿಗಳ ಗಮನ ಸೆಳೆಯಿತು.