ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಇವರ ಆಯೋಜನೆಯಲ್ಲಿ ರೆಮೋನಾ ಇವೈಟ್ ಪಿರೇರಾ ಇವರಿಂದ ‘ಅನ್ವೇಷಣೆಯ ಲಯಬದ್ಧ’ ದಾಖಲೆಗಾಗಿ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 21 ಜುಲೈ 2025ರಿಂದ 28 ಜುಲೈ 2025ರವರೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 21 ಜುಲೈ 2025ರ ಸೋಮವಾರ ಬೆಳಿಗ್ಗೆ ಘಂಟೆ 10.00 ಕ್ಕೆ ನಡೆಯಲಿದೆ.
ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರಾ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ.
ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿ, ರಾಷ್ಟ್ರೀಯ ಗೌರವ ಪ್ರಶಸ್ತಿ, ಕಲಾಶ್ರೀರತ್ನ, ನಾಟ್ಯಾ ಶಿರೋಮಣಿ, ನಾಟ್ಯ ಮಯೂರಿ ಹಾಗೂ ನೃತ್ಯ ಕಲಾ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಎಂ. ಸಿ. ಸಿ. ಕತಾರ್ ಇವರು ನಡೆಸಿದ ಬೈಲಾ ನೃತ್ಯ ಸ್ಪರ್ಧೆಯಲ್ಲಿ ‘ಬೈಲಾ ಕ್ವೀನ್’ ಎಂಬ ಬಿರುದನ್ನು ಪಡೆದ ಇವರು ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿರುತ್ತಾರೆ. ರೆಮೊನಾ ಇವರು ನೃತ್ಯದ ಮೂಲಕ ತಮ್ಮ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಲಂಡನ್ ಮತ್ತು ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಿಸಿದ್ದಾರೆ.