ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗದ 114ನೇ ಸರಣಿಯಲ್ಲಿ ಬೆಂಗಳೂರಿನ ಆಚಾರ್ಯ ಇಂದಿರಾ ಕಡಂಬಿಯವರ ಶಿಷ್ಯೆ ಕುಮಾರಿ ಅಪೇಕ್ಷಾ ಕಾಮತ್ ಇವರಿಂದ ಬಹಳ ಅಚ್ಚುಕಟ್ಟಾದ ಭರತನಾಟ್ಯ ಕಾರ್ಯಕ್ರಮ ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 13-07-2024ರಂದು ನಡೆಯಿತು.
ಪುತ್ತೂರಿನ ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷರಾದ ಶ್ರೀ ದಾಮೋದರ ಪಾಟಾಳಿಯವರು ಅಭ್ಯಾಗತರಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಾದ ಅಭಿನವ್, ಹೃಷಿಕೇಶ, ಅಭಿವ್ ರಾಜ್, ಆದಿತ್ಯ ಕೃಷ್ಣ, ಪ್ರಚೇತ್ ಪ್ರಾರ್ಥನೆಗೈದರು. ಕುಮಾರಿ ಸೃಷ್ಟಿ ಮತ್ತು ಜನ್ಯ ಕಲಾವಿದರ ಪರಿಚಯ ಮಾಡಿದರು. ಕುಮಾರಿ ರಿತಿಕಾ ಪಂಚಾಂಗ ವಾಚನಗೈದರು. ಅಭಿನವ್ ರಾಜ್ ಶಂಖನಾದಗೈದರು. ಕುಮಾರಿ ಪ್ರಣಮ್ಯ ಕಾರ್ಯಕ್ರಮದ ನಿರೂಪಣೆ ಮಾಡಿದರು. ಗುರು ದೀಪಕ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಅಂದಿನ ವಿಷಯ ‘ರೌದ್ರ ರಸ’ ಇದರ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಕುಮಾರಿ ಅಪೇಕ್ಷಾ ಕಾಮತ್ ಇವರ ಭರತನಾಟ್ಯ ಕಾರ್ಯಕ್ರಮದಲ್ಲಿ ನಾರಾಯಣ ಶ್ಲೋಕ, ಕೃಷ್ಣನ ಕುರಿತಾದ ಕನ್ನಡದ ಪದವರ್ಣ ಹಾಗೂ ಪುರಂದರ ದಾಸರ ‘ಚಿಕ್ಕವನೇ ಇವನು’ ದೇವರನಾಮ ಪ್ರಸ್ತುತಪಡಿಸಲಾಯಿತು.
ಅಭ್ಯಾಗತರಾದ ದಾಮೋದರ ಪಾಟಾಳಿ ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಹಾಗೂ ಮೂಕಾಂಬಿಕಾ ಅಕಾಡೆಮಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭಿಕರ ಪರವಾಗಿ ವಿದುಷಿ ಸುಮಂಗಲ ಗಿರೀಶ್, ಕುಮಾರಿ ಮನೀಷ ಕಜೆ ಹಾಗೂ ವಿದುಷಿ ಮೇಘನಾ ಪಾಣಾಜೆ ಅಭಿಪ್ರಾಯ ಹಂಚಿಕೊಂಡರು. ಕಲಾವಿದೆ ಅಪೇಕ್ಷಾ ಕಾಮತ್ ಕೂಡ ಈ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.