ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಸ್ಮೃತಿ ಸುರೇಶ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಸ್ಮೃತಿ ಸುರೇಶ್ ಇವರು ಶಾಸ್ತ್ರೀಯ ನೃತ್ಯ ಅಭ್ಯಾಸವನ್ನು ತಮ್ಮ ಎಂಟನೇ ವಯಸ್ಸಿನಲ್ಲಿ ಚೆನ್ನೈನ ‘ಕಲಾಕ್ಷೇತ್ರ’ದ ಹಿರಿಯ ವಿದ್ಯಾರ್ಥಿನಿಯಾದ, ಗುರು ಶ್ರೀಮತಿ ಶ್ರೀವಿದ್ಯಾ ಆನಂದರಲ್ಲಿ ಆರಂಭಿಸಿ, ಶಾಲಾ ಕಾಲೇಜುಗಳಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ‘ಕಲಾಕ್ಷಿತಿ ನೃತ್ಯಶಾಲೆ’ ಯ ಸಂಸ್ಥಾಪಕರಾದ ಡಾ. ಕೃಷ್ಣಮೂರ್ತಿಯವರ ಗರಡಿಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ಗುರುಗಳ ನೇತೃತ್ವದಲ್ಲಿ ಸ್ಮೃತಿ ಕಲಾಕ್ಷಿತಿ ಶಾಲೆಯ ಪ್ರಸ್ತುತಿಗಳಾದ, ‘ಗೋಕುಲ ನಿರ್ಗಮನ’, ‘ಅಕ್ಕ ಮಹಾದೇವಿ’, ‘ರುಕ್ಮಿಣಿ ದೇವಿ ಅರುಂಡೇಲ್ ರ ಹುಟ್ಟುಹಬ್ಬ’ ಹಾಗೂ ಇನ್ನೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಕಾರ್ಯಕ್ರಮ ನೀಡಿರುತ್ತಾರೆ. ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಸ್ಮೃತಿಯವರು ಸಂಗೀತಾಭ್ಯಾಸವನ್ನು ಗುರು ಲಕ್ಷ್ಮೀ ರಾಮಚಂದ್ರನ್ ಹಾಗೂ ದಿವಂಗತ ಅಂಬಾ ವೆಂಕಟರಾಮನ್ ಇವರ ಬಳಿ ಮಾಡಿರುತ್ತಾರೆ. ಪ್ರಸ್ತುತ ‘ಕಲಾರ್ಪನ’ ನೃತ್ಯ ಶಾಲೆಯನ್ನು ಆರಂಭಿಸಿ ಮಕ್ಕಳಿಗೆ ನೃತ್ಯ ಪಾಠ ಮಾಡುತ್ತಿದ್ದಾರೆ.