ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ವಿದುಷಿ ಸಿಂಚನಾ ಎಸ್. ಕುಲಾಲ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ “ಪ್ರಸ್ತುತ ಸಮಯದಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಭಾರತೀಯ ಶಾಸ್ತ್ರೀಯ ಕಲೆಗಳನ್ನು ಕಲಿಯಬೇಕು. ಈ ಕಲಾಶಿಕ್ಷಣವು ಯುವಜನರಿಗೆ ಸುಂದರವಾದ ಮನಸ್ಸನ್ನು ಕಟ್ಟುವ ತರಬೇತಿಯನ್ನು ನೀಡುತ್ತದೆ. ಈ ಕಲೆಯನ್ನು ಸ್ವೀಕರಿಸಿದ ವ್ಯಕ್ತಿಗಳು ಜೀವನದಲ್ಲಿ ಸೌಂದರ್ಯ ಪ್ರಜ್ಞೆಯೊಂದಿಗೆ ದೇಶದ ಸಂಪತ್ತಾಗಿ ಬೆಳೆಯುತ್ತಾರೆ. ಆದ್ದರಿಂದ ದೇಶದಲ್ಲಿರುವ ಯುವಜನ ಸಂಪತ್ತು ಇಂತಹ ಶಿಕ್ಷಣ ಪಡೆದು ರಾಷ್ಟ್ರವನ್ಮು ಕಟ್ಟಬೇಕು” ಎಂದು ಹೇಳಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಸಿಂಚನ ಕುಲಾಲ್ ಇವರ ಸಾಧನೆಯ ಹಾದಿಯನ್ನು ಶ್ಲಾಘಿಸಿದರು. ಹಿರಿಯ ನೃತ್ಯ ಗುರುಗಳಾದ ಉಳ್ಳಾಲ ಮೋಹನ ಕುಮಾರ್ ಇವರು ದೀಪ ಬೆಳಗಿ, ಕಲಾವಿದೆಗೆ ಗೆಜ್ಜೆ ಪ್ರದಾನ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಲಾವಿದೆಗೆ ಶುಭಕೋರಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರಿಗೆ ಸಿಂಚನಾ ಕುಲಾಲ್ ಗುರುನಮನ ಸಲ್ಲಿಸಿದರು. ಹಿಮ್ಮೇಳದಲ್ಲಿ ಸಹಕರಿಸಿದ ಕಲಾವಿದರನ್ನು ಗೌರವಿಸಲಾಯಿತು.
ನೃತ್ಯಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾದ ಸಿಂಚನಾ ಕುಲಾಲ್ ಪುಷ್ಪಾಂಜಲಿ, ಅಲರಿಪು, ವರ್ಣಂ ಸೇರಿದಂತೆ ರಂಗಪ್ರವೇಶದ ನೃತ್ಯ ಪ್ರಸ್ತುತಿ ನೀಡಿದರು. ಹಿಮ್ಮೇಳದಲ್ಲಿ ವಿದುಷಿ ಶಾರದಾಮಣಿ ಶೇಖರ್ ನಟ್ಟುವಾಂಗದಲ್ಲಿ, ಹಾಡುಗಾರಿಕೆಯಲ್ಲಿ ವಿನೀತ್ ಪುರವಂಕರ, ಮೃದಂಗದಲ್ಲಿ ಪಯ್ಯನೂರು ರಾಜನ್, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಸಹಕರಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ಶ್ರೀಲತಾ ನಾಗರಾಜ್ ಮತ್ತು ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಿಂಚನರವರ ಪೋಷಕರಾದ ಸದಾಶಿವ ಕುಲಾಲ್, ಚಂದ್ರಪ್ರಭಾ ಕುಲಾಲ್ ಮತ್ತು ಅಜ್ಜಿ ಜಲಜಾ ಎಂ. ಕುಲಾಲ್ ಉಪಸ್ಥಿತರಿದ್ದರು.