ಉಜಿರೆ : ವಿದುಷಿ ಚೈತ್ರಾ ಭಟ್ ಇವರ ಭರತನಾಟ್ಯ ರಂಗಪ್ರವೇಶ ಸಮಾರಂಭವು ದಿನಾಂಕ 22-06-2024ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಇವರು ಮಾತನಾಡಿ “ಭಾರತದ ಅಪೂರ್ವ ಕಲೆಗಳು ಮತ್ತು ಮಾನವಸಂಪನ್ಮೂಲ ಇವು ದೇಶದ ಅಮೂಲ್ಯ ಸಂಪತ್ತು ಹಾಗೂ ವರದಾನವಾಗಿದೆ. ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಕಲೆಗಳನ್ನೂ ಹವ್ಯಾಸವಾಗಿ ಕರಗತ ಮಾಡಿಕೊಳ್ಳಬೇಕು. ಎಂಟು ವಿಧದ ಶಾಸ್ತ್ರೀಯ ನೃತ್ಯಗಳಲ್ಲಿ ಭರತನಾಟ್ಯ ಸರ್ವಶ್ರೇಷ್ಠ ಕಲೆಯಾಗಿದೆ. ಹಿಂದೆ ಕೇವಲ ಬೆರಳಣಿಕೆಯಷ್ಟು ನೃತ್ಯ ಶಿಕ್ಷಕರಿದ್ದರೆ ಇಂದು ಕರ್ನಾಟಕದಲ್ಲಿ ಸುಮಾರು ಮೂರು ಸಾವಿರ ನೃತ್ಯ ಶಿಕ್ಷಕರಿದ್ದಾರೆ. ನೃತ್ಯ ಅಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ” ಎಂದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, “ಭಾವ ಪ್ರಧಾನವಾದ ನಾಟ್ಯಕ್ಕೆ ಭಾಷೆಯ ಹಂಗಿಲ್ಲ” ಎಂದರು. ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು” ಎಂದು ಹೇಳಿದರು. ರಾಜಶ್ರೀ ಉಳ್ಳಾಲ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದುಷಿ ಚೈತ್ರಾ ಭಟ್ ಇವರು ಗುರುಗಳಾದ ಗೀತಾ ಸರಳಾಯ, ರಶ್ಮಿ ಚಿದಾನಂದ ಇವರನ್ನು ಗೌರವಿಸಿದರು. ಸುಧಾಕರರಾವ್ ಪೇಜಾವರ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಭರತನಾಟ್ಯ ರಂಗಪ್ರವೇಶಕ್ಕೆ ಹಿಮ್ಮೇಳದಲ್ಲಿ ನೃತ್ಯ ಭಾರತಿಯ ಗುರು ಗೀತಾ ಸರಳಾಯ ಇವರ ನೃತ್ಯ ನಿರ್ದೇಶನ, ನೃತ್ಯ ಭಾರತಿಯ ವಿದುಷಿ ರಶ್ಮಿ ಚಿದಾನಂದ ನಟುವಾಂಗ, ಮಾಹೆಯ ಸ್ವರಾಗ್ ಹಾಡುಗಾರಿಕೆ, ಉಡುಪಿಯ ವಿದ್ವಾನ್ ಶ್ರೀ ಬಾಲಚಂದ್ರ ಭಾಗವತ್ ಮೃದಂಗ ಮತ್ತು ಖಂಜೀರ, ಬೆಂಗಳೂರಿನ ದೂರದರ್ಶನ ಕಲಾವಿದರಾದ ವಿದ್ವಾನ್ ಗಣೇಶ್ ಕೆ.ಎಸ್. ಕೊಳಲು ವಾದನದಲ್ಲಿ ಸಹಕರಿಸಿದರು.