ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ 164ನೆಯ ಜನ್ಮದಿನ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15 ಸೆಪ್ಟೆಂಬರ್ 2024ರಂದು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದವರು. ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಬಗಳಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರು ಇಡೀ ದೇಶದ ಬೆಳವಣಿಗೆಗೆ ನೀಲಿನಕ್ಷೆಯನ್ನು ಹಾಕಿದವರು. ಶಿಸ್ತು ಮತ್ತು ಪ್ರಾಮಾಣಿಕತೆಗೆ ಒಂದು ರೂಪಕದಂತಿದ್ದ ಅವರು ತಮ್ಮ ಜೀವಿತ ಕಾಲದಲ್ಲಿಯೇ ದಂತಕತೆಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಶ್ರದ್ಧೆಯಿಂದ ಸ್ಮರಿಸಿಕೊಳ್ಳುತ್ತಾ ಅವರು ಹಾಕಿ ಕೊಟ್ಟ ದಾರಿಯಲ್ಲಿ ಮುಂದೆ ಸಾಗಲಿದೆ” ಎಂದು ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದ ಸಂಶೋಧಕ ಮತ್ತು ಕಾದಂಬರಿಕಾರ ಡಾ. ಗಜಾನನ ಶರ್ಮ “ಸರ್ ಎಂ.ವಿ.ಯವರು ನೀಡಿದ ಕೊಡುಗೆಗಳಿಗಾಗಿ ದೇಶದ ಬೇರೆ ಬೇರೆ ಪ್ರಾಂತ್ಯದವರು ಹೆಮ್ಮೆಯಿಂದ ತಮ್ಮವರು ಎಂದು ಹೇಳಿಕೊಳ್ಳುತ್ತಾರೆ. ಕನ್ನಡಿಗರು ಅವರು ನೀಡಿದ ಅಸದಳ ಕೊಡುಗೆಗಳಿಗಾಗಿ ಹೆಮ್ಮೆಯಿಂದ ಬೀಗಬೇಕು. ಅಭಿವೃದ್ಧಿ ಎನ್ನುವುದು ಅರ್ಬುದ ರೋಗವಲ್ಲ ಎಂದು ಗುರುತಿಸಿದ್ದ ಸರ್ ಎಂ.ವಿ. ಅದು ಹೇಗೆ ಯೋಜಿತವಾಗಿ ನಾಡಿಗೆ ಬರಬೇಕು ಎಂದು ಗುರುತಿಸಿದ್ದರು. ಅವರ 96ನೆಯ ವಯಸ್ಸಿನಲ್ಲಿ ಭೇಟಿ ಮಾಡಿದ್ದ ರಾಮ ಮನೋಹರ್ ಲೋಹಿಯಾ ಗಾಂಧೀಜಿಯ ನಂತರ ದೇಶ ಕಂಡ ಬಹುದೊಡ್ಡ ಧೀಶಕ್ತಿ ಸರ್ ಎಂ.ವಿ. ಎಂದಿದ್ದನ್ನು ನೆನಪು ಮಾಡಿಕೊಂಡು ಕೇವಲ ಕನಸಾಗಿದ್ದ ಎಷ್ಟೋ ಸಂಗತಿಗಳನ್ನು ಸರ್ ಎಂ.ವಿ. ಕನ್ನಡಿಗರಿಗೆ ನನಸಾಗಿಸಿದರು” ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರಾದ ರಮೇಶಚಂದ್ರ ಲಹೋಟಿಯವರು ಸರ್ ಎಂ.ವಿ.ಯವರು ಕೈಗಾರಿಕೆಯನ್ನು ಬೆಳೆಸಿದ ಹಾಗೆ ಕಲೆಯನ್ನೂ ಬೆಳೆಸಿದ ಕ್ರಮವನ್ನು ಶ್ಲಾಘಿಸಿ, ನಾಡೋಜ ಡಾ. ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಂದಿರುವ ಮಹತ್ತರ ಬದಲಾವಣೆಗಳನ್ನು ಪ್ರಶಂಸಿಸಿ ವೈಯಕ್ತಿಕವಾಗಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪುರಸ್ಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆರಂಭಿಸುವ ವಾಗ್ದಾನವನ್ನು ಮಾಡಿದರು.
ಇದೇ ಸಂದರ್ಭದಲ್ಲಿ 2024ನೆಯ ಸಾಲಿನ ʻಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿʼಯನ್ನು ಎಂ.ಎನ್. ಸತೀಶ್ ಕುಮಾರ್ ಅವರಿಗೆ ಹಾಗೂ ʻಶ್ರೀಮತಿ ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿʼಯನ್ನು ದಯಾನಂದ ಮೂರ್ತಿ ಇವರಿಗೆ ಪ್ರದಾನ ಮಾಡಲಾಯಿತು. ದತ್ತಿ ದಾನಿಗಳ ಪರವಾಗಿ ಎಂ.ಜಿ. ನಾಗರಾಜ್, ಪ್ರಶಸ್ತಿ ಪುರಸ್ಕೃತರ ಪರವಾಗಿ ಎಂ.ಎನ್. ಸತೀಶ್ ಕುಮಾರ್ ಮಾತನಾಡಿದರು. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ. ಮೀರಾ ಶಿವಲಿಂಗಯ್ಯನವರು ಮಂಡ್ಯದ ಜೊತೆಗಿನ ಸರ್ ಎಂ.ವಿ.ಯವರ ಒಡನಾಟವನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರದ ಹತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಪದಗ್ರಹಣವೂ ನಡೆಯಿತು.
ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟರು ಸ್ವಾಗತ ಕೋರಿದರೆ, ಇನ್ನೊಬ್ಬ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ವಂದನಾರ್ಪಣೆಯನ್ನು ಮಾಡಿದರು. ಗೌರವ ಕೋಶಾದ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಕಾರ್ಯಕ್ರಮವನ್ನು ನಿರ್ವಹಿಸಿದರು. ಅತ್ಯಧಿಕ ಸಂಖ್ಯೆಯಲ್ಲಿ ಸರ್ ಎಂ.ವಿ.ಯವರ ಅಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.