ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು “ಆಡಿದನೋ ರಂಗ” ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ. ಇಂತಹ ಒಂದು ಪಾರಂಪರಿಕ ನೃತ್ಯ ಕಲೆಯಲ್ಲಿ ತಮ್ಮ ಪ್ರತಿಭೆ ಹಾಗೂ ಅನೇಕ ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಗುರುವಾಗಿ “ನಟನಂ ನೃತ್ಯ ವಿದ್ಯಾಲಯ ಗಂಜಿಮಠ, ಗುರುಪುರ” ಸಂಸ್ಥೆಯ ಮೂಲಕ ಹೇಳಿಕೊಡುತ್ತಿರುವವರು ವಿದುಷಿ ಕು.ವೈಷ್ಣವಿ ವಿ ಪ್ರಭು.
21.01.2002ರಂದು ವಿವೇಕ್ ಆರ್ ಪ್ರಭು ಹಾಗೂ ಶಾಂತೇರಿ ವಿ ಪ್ರಭು ಇವರ ಮಗಳಾಗಿ ಜನನ. ಮಂಗಳೂರಿನ ಕೆನರಾ ಕಾಲೇಜ್ ಕೊಡಿಯಾಲ್ ಬೈಲ್ ನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗವನ್ನು ಮಾಡುತ್ತಿದ್ದಾರೆ.
ಭರತನಾಟ್ಯ ಕಲೆಯೆಡೆಗೆ ಆಕರ್ಷಿತರಾದದ್ದು ಹೇಗೆ ಹಾಗೂ ಭರತನಾಟ್ಯ ಕಲಾವಿದೆಯಾಗಿ ಬೆಳೆದ ಬಗ್ಗೆ ಹೇಗೆ :-
ನೃತ್ಯದಲ್ಲಿ ಇರುವ ಆಸಕ್ತಿಯನ್ನು ನೋಡಿ ನನ್ನ ತಂದೆ ತಾಯಿ 6ನೇ ವಯಸ್ಸಿನಲ್ಲಿ ತರಬೇತಿಗೆ ಸೇರಿಸಿದರು. ಗುರುಗಳಾದ ವಿದುಷಿ ಶ್ರೀಮತಿ ಗೀತಾ ಸರಳಾಯ ಹಾಗೂ ವಿದುಷಿ ಶ್ರೀಮತಿ ರಶ್ಮಿ ಚಿದಾನಂದ ಅವರು ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ. ನಾನು ನನ್ನ ಗುರಿ ಸಾಧಿಸಲು ಹೆತ್ತವರು ಹಾಗೂ ಗುರು ಹಿರಿಯರ ಆಶೀರ್ವಾದ ಮತ್ತು ಸಹಕಾರದಿಂದ ಸಾಧ್ಯವಾಯಿತು. ನನ್ನ ಪ್ರಥಮ ಹೆಜ್ಜೆಯನ್ನು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರಾರಂಭಿಸಿ ಈ ಭರತನಾಟ್ಯ ಪಯಣ ಶುರುವಾಯಿತು.
ಭರತನಾಟ್ಯ ಪಯಣ ಕಠಿಣವಾಗಿತ್ತು. ಆದರೆ ತಂದೆ ತಾಯಿಯವರ ಸಂಪೂರ್ಣ ಸಹಕಾರದಿಂದ ಈ ಮಟ್ಟಕ್ಕೆ ತಲುಪಿದೆ. ನಾನು ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿ 18ನೇ ವಯಸ್ಸಿಲ್ಲಿಯೇ ನನ್ನದೇ ಆದ “ನಟನಂ ನೃತ್ಯ ವಿದ್ಯಾಲಯ, ಗಂಜಿಮಠ” ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ ಹಾಗೂ ಸರಕಾರಿ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾದೆ. ಭರತನಾಟ್ಯ ಅಂದ್ರೆ ಅಪಾರವಾದ ಪ್ರೀತಿ ಹಾಗೂ ಗೌರವ. ಮುಂದಿನ ದಿನದಲ್ಲಿ ವಿವಿಧ ರೀತಿಯ ಭರತನಾಟ್ಯದಲ್ಲಿ ಸಂಯೋಜನೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ವೈಷ್ಣವಿ.
ಕಾರ್ಯಕ್ರಮ ನೀಡುವಾಗ ಮಾಡಿಕೊಳ್ಳುವ ಅಧ್ಯಯನ, ಸಿದ್ಧತೆಗಳೇನು:-
ಯಾವುದೇ ಕಾರ್ಯಕ್ರಮವನ್ನು ಮಾಡುವ ಮೊದಲು ನಿರಂತರವಾದ ನೃತ್ಯ ಅಭ್ಯಾಸ ಹಾಗೂ ಅದರಲ್ಲಿ ಪರಿಪೂರ್ಣತೆ ಇರಬೇಕು. ನಾನು ಏಕವ್ಯಕ್ತಿ ಪ್ರದರ್ಶನ ನೀಡುವಾಗ ಹಾಗೂ ನನ್ನ ವಿದ್ಯಾರ್ಥಿನಿಯರು ಪ್ರದರ್ಶನವನ್ನು ನೀಡುವಾಗ ನಿರಂತರವಾದ ಅಭ್ಯಾಸವನ್ನು ಮಾಡುತ್ತೇವೆ. ಅದು ನೃತ್ಯದಲ್ಲಿ ಅತ್ಯಂತ ಮುಖ್ಯವಾದ ಒಂದು ಅಂಗ, ಅಲ್ಲದೆ ಒಬ್ಬ ಕಲಾವಿದೆಯ ವೇಷಭೂಷಣ ಸಹ ಅತ್ಯಂತ ಪ್ರಮುಖವಾದದ್ದು.
ನಿಮ್ಮ ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಕಲಾವಿದರು ಮತ್ತು ಪುಸ್ತಕಗಳು, ವ್ಯಕ್ತಿಗಳ ಕುರಿತು ತಿಳಿಸಿ:-
ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಹಲವಾರು ಕಲಾವಿದರು ಆದರೆ ಪ್ರಮುಖವಾಗಿ ನಾನು ಸ್ಪೂರ್ತಿಯನ್ನು ಪಡೆದದ್ದು ನನ್ನ ಗುರುಗಳಿಂದ. ಬೇರೆ ಕಲಾವಿದರಾದ ರಾಮ ವೈದ್ಯನಾಥನ್, ನರ್ತಕಿ ನಟರಾಜ್, ಮಾಳವಿಕಾ ಸರುಕ್ಕೈ, ಶ್ವೇತಾ ಪ್ರಚಂಡೆ ಮುಂತಾದವರು.
ಹಲವಾರು ಪುಸ್ತಕಗಳಾದ ನಾಟ್ಯಶಾಸ್ತ್ರ – ಭರತಮುನಿ ಹಾಗೂ ಅಭಿನಯ ದರ್ಪಣ – ನಂದಿಕೇಶ್ವರ ಇದರ ಕೆಲವು ಭಾಗಗಳನ್ನು ಅಧ್ಯಯನ ಮಾಡಿದ್ದೇನೆ ಎಂದು ಹೇಳುತ್ತಾರೆ ವೈಷ್ಣವಿ.
ನೀವು ಭರತನಾಟ್ಯ ಶಿಕ್ಷಕರಾಗಿದ್ದೀರಾ? ಇದ್ದರೆ, ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ವಿಸಲು ನೀವೇನು ಉಪಾಯ ಮಾಡುತ್ತೀರಿ:-
ಹೌದು. ನಾನು ನನ್ನದೆಯಾದ ಭರತನಾಟ್ಯ ಸಂಸ್ಥೆ “ನಟನಂ ನೃತ್ಯ ವಿದ್ಯಾಲಯ” ಗಂಜಿಮಠ ಮತ್ತು ಗುರುಪುರದಲ್ಲಿ ನಡೆಸುತ್ತಿದ್ದೇನೆ. ಹಾಗೂ ಎಸ್. ಡಿ.ಎಂ. ಮಂಗಳಜ್ಯೋತಿ ಸರಕಾರಿ ಅನುದಾನಿತ ಶಾಲೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿದ್ದೇನೆ.
ಪ್ರಥಮವಾಗಿ ಎಲ್ಲಾ ಭರತನಾಟ್ಯ ಕಲಾವಿದರಿಗೆ ಹಾಗೂ ಬೇರೆ ಕಲಾವಿದೆಯರಿಗೂ ನೀವು ಯಾವುದೇ ಕಲೆಯಲ್ಲಿ ಪರಿಪೂರ್ಣತೆ ಆಗಬೇಕಾದರೆ ದೈನಂದಿನ ಅಭ್ಯಾಸ ಮಾಡಬೇಕು ಹಾಗೂ ಇತರ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಮತ್ತು ವೇದಿಕೆ ಪ್ರದರ್ಶನ ಮಾಡಿ ನೀವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಕಾರ್ಯಕ್ರಮದಲ್ಲಿ ಸರಿಪಡಿಸಬೇಕು. ಈ ರೀತಿ ತಿದ್ದಿಕೊಂಡರೆ ಮಾತ್ರ ನೀವು ಭರತನಾಟ್ಯದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯ.
ಪ್ರಥಮವಾಗಿ ನಿರ್ಧಿಷ್ಟ ಕಲೆಯಲ್ಲಿ ಆಸಕ್ತಿ ಇದ್ದರೆ ಮಾತ್ರ ನೀವು ಆ ಕಲೆಯನ್ನು ಕಲಿಯಬೇಕು. ನೀವು ಶ್ರಮಜೀವಿಯಾಗಿರಬೇಕು ಎಂದು ಹೇಳುತ್ತಾರೆ ವೈಷ್ಣವಿ.
ಚಲನಚಿತ್ರ / ಪಾಶ್ಚಾತ್ಯ ಸಂಗೀತ ನೃತ್ಯಗಳಿಗೆ ಆಕರ್ಷಿತರಾಗುವ ಕಾಲಘಟ್ಟದಲ್ಲಿ ಭರತನಾಟ್ಯ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಉಳಿಸಿ ಬೆಳೆಸಲು ಏನು ಮಾಡಬಹುದು:-
ಪ್ರತಿಯೊಂದು ಕಲಾವಿದರು ಪ್ರಥಮವಾಗಿ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತಕ್ಕೆ ಪ್ರಾಮುಖ್ಯತೆ ನೀಡಬೇಕು. ಆದುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾದರೆ ಪ್ರಥಮವಾಗಿ ನಮ್ಮ ಭಾರತೀಯ ಕಲೆಗೆ ಪ್ರಾಮುಖ್ಯತೆಯನ್ನು ನೀಡಬೇಕು. ಹಾಗೂ ಪ್ರತಿಯೊಬ್ಬರ ಕರ್ತವ್ಯವಾದದ್ದು.
ಈಗಿನ ಕಲಾಪ್ರೇಕ್ಷಕರ ಕುರಿತು ನಿಮ್ಮ ಅಭಿಪ್ರಾಯ:-
ಕಲಾ ಪ್ರೇಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ಅವರ ಪ್ರೋತ್ಸಾಹವೇ ಕಲಾವಿದರಿಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಪ್ರೇಕ್ಷಕರ ಪಾತ್ರ ಕಲಾವಿದರ ಜೀವನದಲ್ಲಿ ಪ್ರಮುಖವಾದದ್ದು. ಅವರ ಯಾವುದೇ ರೀತಿಯ ನಕಾರಾತ್ಮಕ ಕ್ರಿಯೆ ಕಲಾವಿದನ ಜೀವನದಲ್ಲಿ ಪರಿಣಾಮ ಬೀಳುವ ಸಾಧ್ಯತೆ ಇದೆ.
ಭರತನಾಟ್ಯ ಕಲೆಗೆ ನಿಮ್ಮ ಕೊಡುಗೆ ಎಂದು ಮುಂದಿನವರು ಯಾವುದನ್ನ ಗುರುತಿಸಬಹುದು:-
ಸಂಪೂರ್ಣ ಜೀವನವನ್ನು ಭರತನಾಟ್ಯ ಕಲೆಗೆ ಅರ್ಪಿಸಿದ್ದೇನೆ. ಅತ್ಯಂತ ಪ್ರಿಯವಾದ ಹಾಗೂ ಮನಸ್ಸಿಗೆ ನೆಮ್ಮದಿ, ಸಂತೋಷವನ್ನು ನೀಡುವ ಅತ್ಯಂತ ಸುಂದರವಾದ ಈ ಕಲೆ ಮುಂದಿನ ದಿನದಲ್ಲಿ ಹಲವು ಯೋಜನೆಯನ್ನು ಮಾಡಿದ್ದೇನೆ. ಈ ರೀತಿ ನಾನು ನೀಡುವ ಸಣ್ಣ ಕೊಡುಗೆ ಶಾಸ್ತ್ರೀಯ ಭರತನಾಟ್ಯ ಕಲೆಗೆ.
ನೃತ್ಯಾಭ್ಯಾಸಿಗಳಿಗೆ ನಿಮ್ಮ ಸಲಹೆ ಏನು:-
ನೃತ್ಯಾಭ್ಯಾಸವನ್ನು ಪ್ರತೀ ದಿನ ಅಭ್ಯಸಿಸಬೇಕು. ಅದು ನಮ್ಮ ಜೀವನದ ಭಾಗವಾಗಿರಬೇಕು. ಒಬ್ಬ ವ್ಯಕ್ತಿಯು ಯಶಸ್ವಿಕಾರನಾಗಬೇಕಾದರೆ ಪ್ರತೀ ದಿನ ಶ್ರದ್ಧೆ ಹಾಗೂ ಆಸಕ್ತಿಯಿಂದ ಅಭ್ಯಸಿಸಬೇಕು. ಹಾಗೂ ಆ ಕಲೆಯ ಮೇಲೆ ಪ್ರೀತಿ ಹಾಗೂ ಗೌರವ ಇರಬೇಕು.
ಕೇಂದ್ರ ಸರಕಾರದಿಂದ 2015 ರಲ್ಲಿ ವಿದ್ಯಾರ್ಥಿವೇತನ(C.C.R.T.) ಪಡೆದ ಹಾಗೂ ದಕ್ಷಿಣ ಕನ್ನಡದಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದರು.
ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಗುರುದೇವ ಅಕಾಡಮಿ ಆಫ್ ಫೈನ್ ಆರ್ಟ್ ಮೈಸೂರು ಇವರು ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಸಿಕ್ಕಿರುತ್ತದೆ.
ದುಬೈ, ಮುಂಬೈ, ಬೆಂಗಳೂರು, ಮೈಸೂರು, ಗೋವಾ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ 200ಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿರುತ್ತೇನೆ.
ವಿದುಷಿ ಕು.ವೈಷ್ಣವಿ ವಿ ಪ್ರಭು ಭರತನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು