ಮಂಗಳೂರು : ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಗಮಕ ಕಲಾ ಪರಿಷತ್ ಮಂಗಳೂರು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಭರತಾಂಜಲಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗಮಕ ವಾಚನ ಕಾರ್ಯಕ್ರಮವು ದಿನಾಂಕ 04-08-2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ವಸ್ತಿಕ್ ನ್ಯಾಷನಲ್ ಶಾಲೆ ಉರ್ವ ಸ್ಟೋರ್ ಇದರ ಅಧ್ಯಕ್ಷ ರಾಘವೇಂದ್ರ ಹೊಳ್ಳ “ಭಾರತೀಯ ಸನಾತನ ಸಂಸ್ಕೃತಿಯು ತನ್ನದೇ ಆದ ಮೂಲ ಆದರ್ಶಗಳನ್ನು ಮತ್ತು ತತ್ವಗಳನ್ನು ಯಶಸ್ವಿಯಾಗಿ ರಕ್ಷಿಸುವ ಏಕೈಕ ಸಂಸ್ಕೃತಿಯಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಸನಾತನ ಧರ್ಮದ ಅರಿವು ಮುಖ್ಯ. ನಮ್ಮ ಮಹಾ ಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಈ ಗಮಕ ಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ” ಎಂದರು.
ಯಕ್ಷಗಾನ ಅರ್ಥದಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡಿ “ಭಾರತೀಯರ ಪ್ರಸ್ಥಾನ ತ್ರಯಗಳಲ್ಲೊಂದಾದ ಶ್ರೀ ಮದ್ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯ ಸಂಬಂಧದ ಬೇರೆ ಬೇರೆ ಮುಖಗಳನ್ನು ಪರಿಚಯಿಸಲಾಗಿದೆ. ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕಟ್ಟಿಕೊಡುವ ಈ ಕಾವ್ಯದಲ್ಲಿ ಬೇಕಾದಷ್ಟು ಜೀವನ ಪಾಠವಿದೆ” ಎಂದು ಹೇಳಿದರು.
ಕವಿ ಹೊಸೂರಿ ರಾಮಸ್ವಾಮಿ ಅಯ್ಯಂಗಾರ್ ವಿರಚಿತ ‘ಗಮಕ ಸುರಭಿ’ ಕೃತಿಯ ‘ಭರತ ಭಕ್ತಿ’ ಕಾವ್ಯದಿಂದ ಆಯ್ದ ‘ಪಾದುಕಾ ಪ್ರದಾನ’ ಭಾಗವನ್ನು ಗಮಕಿ ಶ್ರೀ ಸುರೇಶ್ ರಾವ್ ಅತ್ತೂರು ವಾಚಿಸಿದರು. ವಿದ್ವಾಂಸರಾದ ಭಾಸ್ಕರ ರೈ ಕುಕ್ಕುವಳ್ಳಿಯವರು ಅತ್ಯಂತ ಮನೋಜ್ಞವಾಗಿ ವ್ಯಾಖ್ಯಾನಿಸಿದರು.
ಭರತಾಂಜಲಿಯ ನಿರ್ದೇಶಕ ವಿದ್ವಾನ್ ಶ್ರೀಧರ್ ಹೊಳ್ಳ ಸ್ವಾಗತಿಸಿ ಪ್ರಸ್ತಾವನೆಗೈದು, ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು.