ಹಳೆಬೇರು ಹೊಸಚಿಗುರಿನಿಂದ ಕೂಡಿದಾಗಲೇ ಕಲಾ ವಿಕಸನ ಸಾಧ್ಯ. “ಪ್ರಜ್ಞಾ ನವನವೋನ್ಮೇಷ ಶಾಲಿನಿ ಕಸ್ಯಚಿತ್ ಪ್ರತಿಭಾ ಮತ” ಎಂದು ಭಟ್ಟ ತೌತನು ಹೇಳಿದಂತೆ ಜ್ಞಾನದ ವಿಕಸನದಿಂದ ಶೋಭಾಯಮಾನವಾದ್ದು ಪ್ರತಿಭೆ. ಅಧ್ಯಯನಶೀಲರು, ಚಿಂತನಾಶೀಲರು ಜತೆಗೆ ಶ್ರದ್ಧೆ, ಉತ್ಸಾಹ, ಪರಿಶ್ರಮವುಳ್ಳವರಿಗೆ ಮಾತ್ರ ಅದು ಸಿದ್ಧಿಸುತ್ತದೆ.
ಈ ಮಾತುಗಳನ್ನು ನೆನಪಾಗುವಂತೆ ಮಾಡಿದವರು ಧಾರಾವಾಡದ ರತಿಕಾ ನೃತ್ಯ ನಿಕೇತನದ ಗುರು ಶ್ರೀಮತಿ ನಾಗರತ್ನ ಹಡಗಲಿ ಅವರ ವಿದ್ಯಾರ್ಥಿನಿಯರಾದ ವಿದುಷಿ ಡಾ.ಸಮತಾ ಗೌತಮ್ ಹಾಗೂ ವಿದುಷಿ ಸೃಷ್ಟಿ ಕುಲಕರ್ಣಿ. ಇತ್ತೀಚೆಗೆ ತಮ್ಮ ನೃತ್ಯ ಜೀವನದ ಮೈಲಿಗಲ್ಲನ್ನು ನೆನಪಿಸುವ ನೆಪದಲ್ಲಿ ಪರಿಪೂರ್ಣ ಭರತನಾಟ್ಯ ಮಾರ್ಗಂ ನ ರಂಗಪ್ರಸ್ತುತಿಯನ್ನು ಅದ್ಭುತವಾಗಿ ನೀಡಿ ಜನಮನ ಗೆದ್ದವರು ಸಮತಾ ಮತ್ತು ಸೃಷ್ಟಿ.
ಕಳೆದ 2024 ಸಪ್ಟಂಬರ್ ನಲ್ಲೇ ಸಮತಾ ಕರೆ ಮಾಡಿ ತಮ್ಮ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಧಾರಾವಾಡದ “ಸೃಜನಾ” ರಂಗಂಮಂದಿರಕ್ಕೆ ಬರಬೇಕೆಂದು ವಿನಂತಿಸಿಕೊಂಡಿದ್ದರು. ಒಪ್ಪಿದೆ. “ಸಮಸೃಷ್ಟಿ ನೃತ್ಯಾರ್ಪಣಂ” – ರಜತದಶ ಸಂಭ್ರಮ ಎಂಬ ಶೀರ್ಷಿಕೆಯಲ್ಲಿ 01 ಫೆಬ್ರವರಿ 2025ರಂದು ನಡೆದ ಕಾರ್ಯಕ್ರಮ. ತಮ್ಮ ಗುರು ಕರ್ನಾಟಕ ಕಲಾಶ್ರೀ ಶ್ರೀ ರವೀಂದ್ರ ಶರ್ಮರ ಸಮ್ಮುಖದಲ್ಲಿ , ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಗುರು ನಾಗರತ್ನ ಹಡಗಲಿಯವರ ನಿರ್ದೇಶನದಲ್ಲಿ ಮೂಡಿದ ಭರತನಾಟ್ಯ ಕಾರ್ಯಕ್ರಮವದು.
ನೃತ್ಯ ಕಾರ್ಯಕ್ರಮ ನಿರೂಪಕಿ ವೈಷ್ಣವಿಯವರು ಮೊದಲ ನೃತ್ಯ ಪುಷ್ಪಾಂಜಲಿ ರಚನೆ ಇಂದಿನ ಮುಖ್ಯ ಅತಿಥಿ ವಿ|| ಸುಮಂಗಲಾ ರತ್ನಾಕರ್ ಅವರದ್ದು ಅಂದರು. ಸಂತೋಷವಾಯ್ತು. ಎರಡನೇ ನೃತ್ಯ “ಶ್ರೀರಾಮ ಕಲ್ಯಾಣ ಶಬ್ದಂ” ಎಂದಾಗ ಕಣ್ಣರಳಿಸಿದೆ. ಅದೂ ನನ್ನದೇ ರಚನೆ!!! ಮೂರನೇ ನೃತ್ಯಬಂಧವಾಗಿ ಪದವರ್ಣದ ಪ್ರಸ್ತುತಿ ಎನ್ನುತ್ತಾ ವಿಪ್ರಲಬ್ಧ ಅವಸ್ಥಾ ನಾಯಕಿ ಎಂದಾಗ ಮತ್ತೆ ಅಚ್ಚರಿ!! ನನ್ನದೇ ರಚನೆ ಅಲ್ವೆ ಅಂತ . ಜತೆಗೆ ನಿರೂಪಕಿ ಹೇಳಿದ್ದು “ಇಂದಿನ ಎಲ್ಲಾ ನೃತ್ಯಗಳ ಪ್ರಸ್ತುತಿಯೂ ಗುರು ವಿದುಷಿ ಸುಮಂಗಲಾ ರತ್ನಾಕರ್ ಅವರ ರಚನೆಯ ನೃತ್ಯಬಂಧಗಳಿಗೇ… ಇಂದಿನ ಕಾರ್ಯಕ್ರಮ ಅವರ ಸಾಹಿತ್ಯ ರಚನೆಗೆ ಅರ್ಪಣೆ”!!! ನನಗೋ ಅತ್ಯಚ್ಚರಿ ಜತೆಗೆ ಪರಮಾನಂದ… ಕಣ್ಣಂಚಲಿ ಕೊಂಚ ನೀರು ಹೃದಯವರಳಿದ ಸಂಕೇತವಾಗಿ ಮೂಡಿತ್ತು!!!. ಸತ್ಯಭಾಮಾ ಪದವರ್ಣದ ಚಂದದ ಪ್ರಸ್ತುತಿಯ ಬಳಿಕ , ಜಾವಳಿ, ಧನಂಜಯ ನವರಸ ಮತ್ತು ತಿಲ್ಲಾನದ ಪ್ರಸ್ತುತಿಯನ್ನು ಆರಿಸಿದ್ದರು. ಮನೋಹರವಾದ ನೃತ್ಯಾರ್ಪಣವನ್ನು ಶ್ರದ್ಧೆ ಭಕ್ತಿ ಸಹಿತ ನೀಡಿದ್ದು ಗಮನಾರ್ಹ.
ಸಮತಾ ಭರತನಾಟ್ಯ ಕಲಿಯಲು ಆರಂಭಿಸಿ 25 ವರುಷಗಳಾದ ಹರುಷಕೆ ತನ್ನ ಆತ್ಮೀಯ ಗೆಳತಿ ಕಿರಿಯ ಸೋದರಿ ಸಮಾನಳಾದ ಸೃಷ್ಟಿಯ ರಂಗಪ್ರವೇಶವಾಗಿ ದಶಕದ ಸಂಭ್ರಮವನ್ನೂ ಜತೆಗೂಡಿಸಿ ಜತೆಯಾಗಿ ನಡೆಸಿ ನರ್ತಿಸಿದ ಕಾರ್ಯಕ್ರಮವದು.
ನೃತ್ಯಾರ್ಪಣದಲ್ಲಿ ನಾ ಗಮನಿಸಿದ್ದು-
ಕಲಾವಿದೆಯರೀರ್ವರೂ
ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮಕ್ಕೆ ಚುರುಕಿನ ಚಾಲನೆ ನೀಡಿದರು.
ಶ್ರೀರಾಮ ಶಬ್ದಂನಲ್ಲಿ ಶ್ರೀರಾಮ ಜನ್ಮ , ತಾಟಕಿ ವಧಾ ಪ್ರಕರಣ, ಸೀತಾ ಕಲ್ಯಾಣದ ಸನ್ನಿವೇಶಗಳನ್ನು ಸುಂದರವಾಗಿ ಕಿರು ಸಂಚಾರಿ ಕಥಾಭಿನಯ ಸಹಿತವಾಗಿ ಪ್ರದರ್ಶಿಸಿದರು.
ಸತ್ಯಭಾಮೆಯ ಮನಭಾವದ ಕಲ್ಪನೆಯಲ್ಲಿ ರಚಿಸಿದ್ದ “ಸರಿಯೇನೆ ಸಖಿಯೇ” ಪದವರ್ಣವನ್ನು ಹೃದ್ಯವಾಗಿ ಪ್ರದರ್ಶಿಸಿದರು. ಭಾಮಾ ಭಾವಗಳನ್ನು ಸಮತಾ ಸಮರ್ಥವಾಗಿ ಬಿಂಬಿಸಿದರೆ, ಸಖಿಯಾಗಿ ಸೃಷ್ಟಿಯ ಅಭಿನಯ ಅದಕ್ಕೆ ಪೂರಕವಾಗಿ ಮೂಡಿಬಂದಿತು. ಭಾಮೆ ಕೃಷ್ಣನ ಬಯಕೆಯಂತೆ ಕಾಯುವ ಸನ್ನಿವೇಶದ ಕಲ್ಪನೆಯ ಪ್ರಸ್ತುತಿ ಸದಾ ನೆನಪಿನಲ್ಲಿಡುವಂತೆ ಮೂಡಿತು. ನಂತರ ಸೃಷ್ಟಿಯಿಂದ ಏಕವ್ಯಕ್ತಿಯಾಗಿ ಪ್ರಸ್ತುತಿಗೊಂಡ “ಸರಿಯಲ್ಲವೋ ಹರಿಯೆ” ಬೇಹಾಗ್ ರಾಗದ ಜಾವಳಿ ಚೆನ್ನಾಗಿತ್ತು. ಅತ್ಯಂತ ಅಪರೂಪದ “ಧನಂಜಯ ನವರಸ”ವು ಸರ್ವ ಸನ್ನಿವೇಶದ ಕಥೆಗಳೊಂದಿಗೆ ಪ್ರದರ್ಶಿತಗೊಂಡು ಹಲವೆಡೆ ಕೇಳಿಸಿದ ಜನರ ಚಪ್ಪಾಳೆ ನೃತ್ಯದ ಯಶಸ್ಸಿನ ಸಂಕೇತವಾಯ್ತು. ನಗರದಲ್ಲಿ ಸುದೀರ್ಘ ಕಥಾ ಸಹಿತ ಎಲ್ಲವೂ ಚಂದದ ಪ್ರಸ್ತುತಿಗಳೇ… ಆದರೆ , ಕರುಣ, ವೀರ, ಭಯದ ಪ್ರಸ್ತುತಿ ನನಗೆ ಬಹಳ ಇಷ್ಟ ಆಯ್ತು. “ಮಧುವಂತಿ ತಿಲ್ಲಾನ” ಸುಂದರ ಆಂಗಿಕ ಚಲನೆಗಳೊಂದಿಗೆ ಪ್ರಸ್ತುತಗೊಂಡಿತು.
ಕಾರ್ಯಕ್ರಮದ ಯಶಸ್ಸಿಗೆ ಯುವ ಪ್ರತಿಭಾವಂತ ಗಾಯಕ ವಿದ್ವಾನ್ ರೋಹಿತ್ ಭಟ್ ಉಪ್ಪೂರ್ ಅವರ ಸ್ಪಷ್ಟ ಸಾಹಿತ್ಯ ಸಹಿತ ಭಾವಪೂರ್ಣ ಗಾಯನ ಗಮನಾರ್ಹ ಮತ್ತು ಉಲ್ಲೇಖನೀಯ. ಅದರಲ್ಲೂ ಪದವರ್ಣದ ಗಾಯನವಂತೂ ಇನ್ನು ಕಬ್ಬಲ್ಲಿ ರಸವೇ ಉಳಿಯದಷ್ಟು ಹಿಂಡಿ ಬಿಸಾಡಿದ್ರು ಎಂದರೂ ತಪ್ಪಲ್ಲ!!! ನೋ ವರ್ಡ್ಸ್. ಆದಿ ತಾಳದ ಪದವರ್ಣ ಸಾಹಿತ್ಯ ರಚನೆಗೆ ಸರಿಹೊಂದುವ ಸಿಂಹೇಂದ್ರ ಮಧ್ಯಮ ರಾಗ ಸಂಯೋಜಿಸಿದವರು ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ,ಚೆನ್ನೈ.
ಗಾಯಕ ರೋಹಿತ್ ರು
ಶಬ್ದಂ, ನವರಸಗಳಲ್ಲಿ ಬಳಸಿಕೊಂಡ ರಾಗದ ನೆರವಲ್ ಗಳು ಸೂಪರ್. ಅದಕ್ಕೆ ಪೂರಕವಾಗಿ ಮೂಡಿಬಂದ ವಿದ್ವಾನ್ ನಿತೀಶ್ ಅಮ್ಮಣ್ಣಾಯರ ಕೊಳಲುವಾದನ. ತಮ್ಮ ನಾದ ಕೌಶಲದ ಮೂಲಕ ಭಾವನೆಗಳಿಗೆ ಆಧಾರವಾದರು. ಎಲ್ಲಿಗೆ ಎಷ್ಟು ಬೇಕೋ ಅಷ್ಟೆ ನುಡಿಸುವ ವೇಣುವಾದನದ ಪರಿ ಕೂಡಾ ಗಮನೀಯ. ಮೃದಂಗ ಸಾಥ್ ನೀಡಿದ ಉದಯೋನ್ಮುಖ ಪ್ರತಿಭೆ ಪಂಚಮ್ ಧಾರಾವಾಡ ಕೂಡಾ ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದರು. ನೃತ್ಯ ನಿರ್ದೇಶನ ಮತ್ತು ನಟುವಾಂಗಂ ನಲ್ಲಿ ಗುರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈರ್ವರು ಭರವಸೆಯ ನಾಳಿನ ಕಲಾ ಕುಸುಮಗಳನ್ನು ಸಮಾಜಕ್ಕೆ ನೀಡಿದ ಸಂತೃಪ್ತಿ, ಸಂತೋಷ ಮತ್ತು ಧನ್ಯತೆ ನಾಗರತ್ನ ಮೇಡಂ ಅವರಿಗೆ.
ಮಂಗಳಂ ನೃತ್ಯದ ಪ್ರಸ್ತುತಿಯಾಗುವಾಗ ನನ್ನ ಹೃದಯ ಸಂತೋಷದಿಂದ ಭಾರವಾಯ್ತು. ಸಂತೋಷ ತಡೆಯಲಾಗಲಿಲ್ಲ ಕಣ್ಣೀರು… ನನ್ನ ನಿಯಂತ್ರಣ ತಪ್ಪಿ ಇಳಿಯತೊಡಗಿತು !!! ಎಲ್ಲೂ ಯಾವ ಗುಟ್ಟು ಬಿಟ್ಟು ಕೊಡದೇ ಎಲ್ಲವೂ ನನ್ನ ಸಾಹಿತ್ಯಗಳನ್ನೇ ತಮ್ಮ ಕಲಾಕೌಶಲದ ಮೂಸೆಯಲ್ಲರಳಿಸಿ ನೀಡಿದ ಗೌರವದ ಪರಿ ನನ್ನ ಬದುಕಿನಲ್ಲಿ ಪ್ರಪ್ರಥಮ.!!! ತಿಲ್ಲಾನವನ್ನು ಹಾಡಿ ಕಳಿಸಲು ಸಮತಾ ಹೇಳಿದ್ದರಿಂದ ಆ ಒಂದು ಪ್ರಸ್ತುತಿ ಮಾತ್ರ ನನ್ನ ರಚನೆ ಅನ್ಕೊಂಡಿದ್ದೆ. ನಾನು ನನ್ನ ವಿದ್ಯಾರ್ಥಿಗಳಲ್ಲಿ ನನ್ನ ರಚನೆಯದ್ದೇ ಕಾರ್ಯಕ್ರಮ ಮಾಡಿಸಿದ್ದೇನೆ. ಬಹುಮಂದಿ ನನ್ನ ರಚನೆಯ ಒಂದೋ ಎರಡೋ ನೃತ್ಯಗಳನ್ನು ಕಾರ್ಯಕ್ರಮಗಳಲ್ಲಿ ರಂಗಪ್ರವೇಶಗಳಲ್ಲಿ ಬಳಸಿಕೊಂಡಿದ್ದಾರೆ. ಆದರೆ, ಕವಿಯ ಸಮ್ಮುಖದಲ್ಲಿ 2 ಗಂಟೆ 20 ನಿಮಿಷಗಳ ಕಾಲ ನೀಡಿದ ಪ್ರಸ್ತುತಿಯು ನನಗೆ ಬಹು ದೊಡ್ಡ ಪ್ರಶಸ್ತಿ ಎನಿಸಿತು. ಇದು ನಿಜವಾದ ಗೌರವ ಎಂಬ ಭಾವ ಮೂಡಿತು. ನಾಗರತ್ನ ಮೇಡಂ ಅವರೇ ಈ ರೀತಿಯ ಗೌರವವನ್ನು ಕನ್ನ ಸಾಹಿತ್ಯ ರಚನಾಕಾರರಿಗೆ ಕೊಡೋಣ ಅಂತ ಹೇಳಿ ತಮ್ಮ ಶಿಷ್ಯೆಯರಿಂದ ನೃತ್ಯ ಮಾಡಿಸಿದ್ದು!!! ಕಾರ್ಯಕ್ರಮದಲ್ಲಿ ಆಗಾಗ ನನ್ನನ್ನು ನೋಡುತ್ತಾ ನನ್ನ ಆನಂದದಲ್ಲಿ ಅವರೂ ಭಾಗಿಯಾದದ್ದು ನಿಜಕ್ಕೂ ನನಗೆ ಅಮಿತಾನಂದ ನೀಡಿದೆ. ನಿಮಗೆ ಹೃದಯದ ನಮನಗಳು ಮೇಡಂ.
ಇಂತಹ ಕಾರ್ಯಕ್ರಮ ಬಹಳ ಸವಾಲಿನದ್ದು. “ನೃತ್ಯ ಕಾವ್ಯ” ಪುಸ್ತಕದಲ್ಲಿ ನಾನು ಬರೆದ ಸಾಹಿತ್ಯ, ಪದ ಅರ್ಥ, ಭಾವಾರ್ಥ ಇಷ್ಟೇ ಲಭ್ಯ. ಯಾವುದಕ್ಕೂ ಹಿಂದಿನವರು ನಡೆದ ದಾರಿಯ ಧೈರ್ಯ ಅಂದರೆ, ಗಮನಿಸಲು ಆಡಿಯೋ ಇಲ್ಲ. ರೆಫರೆನ್ಸ್ ಗೆ ಯು ಟ್ಯೂಬ್ ಲಿ ಏನೂ ಇಲ್ಲ. ಪ್ರಸಿದ್ಧರೋ ಹವ್ಯಾಸಿಗಳೋ ನರ್ತಿಸಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದೂ ಇಲ್ಲ. ಹೀಗಾಗಿ ತಾವೇ ಚಿತ್ರಿಸಿಬೇಕಾದ ದೊಡ್ಡ ಕೆಲಸದ ಸವಾಲದು. ಸಾಹಿತ್ಯ ವಿಚಾರಗಳು ಎಲ್ಲವೂ ಹೊಸತೇ. ಅದನ್ನೆಲ್ಲ ಗುರುಗಳು ಮತ್ತು ಕಲಾವಿದೆಯರೀರ್ವರು ದಾಟಿ ಯಶಸ್ವಿಯಾಗಿ ಗೆದ್ದಿದ್ದಾರೆ. ತಮ್ಮ ಕಲ್ಪನೆಯಲ್ಲಿ ಹೊಸತವನ್ನು ಸೃಷ್ಟಿಸಿದ ಆನಂದದ ಅನುಭೂತಿಯುಂಡಿದ್ದಾರೆ.
ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಇನ್ನೀರ್ವರಿದ್ದಾರೆ.
ಸಮತಾ ಅವರ ತಾಯಿ ಡಾ.ಶುಭದಾ ಮೂಡಿತ್ತಾಯ ಮತ್ತು ಸೃಷ್ಟಿಯ ತಂದೆ ಶ್ರೀ ಸುನಿಲ್ ಕುಲಕರ್ಣಿಯವರು. ಈರ್ವರೂ ಅಪ್ರತಿಮ ಕಲಾ ಪೋಷಕರು. ಸೃಷ್ಟಿ ನೃತ್ಯ ತರಗತಿಗೆ ಸೇರಿದ ಕಾಲಕ್ಕೆ ವಿದ್ಯಾರ್ಥಿ ಪಾಲಕರಾಗಿ ಪರಿಚಿತರಾದವರು ಧಾರಾವಾಡದಲ್ಲಿ ಮಕ್ಕಳಿಗೆ ಕಲೆ ಸಂಸ್ಕೃತಿಗೆ ಬೇಕಾದ ವೇದಿಕೆಯನ್ನು ಕಲ್ಪಿಸುವನಿಟ್ಟಿನಲ್ಲಿ “ಸಾಕಾರ” ಎಂಬ ಸಂಸ್ಥೆಯನ್ನು 12 ವರುಷಗಳ ಹಿಂದೆ ಸ್ಥಾಪಿಸಿ ವರ್ಷಂಪ್ರತಿ ಶಿಕ್ಷಕರ ದಿನಾಚರಣೆ, ಗುರುವಂದನೆ, ಕಲೆ, ಪತ್ರಿಕಾ ಮಾಧ್ಯಮ ,ಸಾಹಿತ್ಯದಲ್ಲಿ ತೊಡಗಿಸಿಕೊಂಡ ರಾಜ್ಯದ ಸಾಧಕರನ್ನು ತಾವೇ ಗುರುತಿಸಿ ಪ್ರಶಸ್ತಿಯ ಮೂಲಕ ಗೌರವಿಸುವ ಕೆಲಸವನ್ನು ಡಾ.ಶುಭದಾ ಮತ್ತು ಸುನಿಲ್ ರು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ನಾನಾ ಕಲಾ ಶಿಬಿರಗಳನ್ನು ಆಯೋಜಿಸುತ್ತಿರುತ್ತಾರೆ. ನಾನೂ ಒಂದು ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ “ಸಾಕಾರ” ಕ್ಕೆ ಪರಿಚಿತಳಾದವಳು. ಶ್ರೀ ಸಿ.ಆರ್ ಭಟ್ ಪ್ರಶಸ್ತಿಯ ಮೂಲಕ ಸಮ್ಮಾನಿಸಲ್ಪಟ್ಟವಳಾಗಿ ಇದೀಗ ಮೂರನೇ ಬಾರಿ ಅವರ ಮಕ್ಕಳ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸಮ್ಮಾನಿತಳಾಗುವ ಭಾಗ್ಯ!!! ಅನನ್ಯ .ಅಪೂರ್ವ. ಇವರೀರ್ವರ ಪ್ರೀತಿ ಅಭಿಮಾನಕ್ಕೆ ನಾ ಸದಾ ಋಣಿ. ಇಬ್ಬರ ಮನೆಯವರೂ ಡಾ.ರವಿ ಮೂಡಿತ್ತಾಯ ಹಾಗೂ ಶ್ರೀಮತಿ ಇಂದೂ ಕುಲಕರ್ಣಿ ಅವರ ಪ್ರೋತ್ಸಾಹ ಕೂಡಾ ಮರೆಯಲಸಾಧ್ಯ.
ಕರ್ನಾಟಕ ವಿದ್ಯಾವರ್ಧಕ ಸಂಘ ಧಾರಾವಾಡದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ ಅಧ್ಯಕ್ಷತೆಯಲ್ಲಿ ನಡೆದ , ಸಂಸ್ಕಾರ ಭಾರತಿ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿಗಳಾದ ಪ್ರಮುಖರಾದ ಡಾ. ಶಶಿಧರ ನರೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿಯವರ ಜತೆ ನಾನೂ ಮುಖ್ಯ ಅಭ್ಯಾಗತಳಾಗಿದ್ದ, ಡಾ. ಶುಭದಾ ಮೂಡಿತ್ತಾಯರ ಗೌರವ ಉಪಸ್ಥಿತಿ , ಶ್ರೀ ಸುನಿಲ್ ಕುಲಕರ್ಣಿಯವರ ಸಭಾ ಕಾರ್ಯಕ್ರಮ ನಿರೂಪಣೆ ಹಾಗೂ ಗುರು ರವೀಂದ್ರ ಶರ್ಮ, ಬೆಳಗಾಂವಿ ಅವರ ಉದ್ಘಾಟನೆಯೊಂದಿಗೆ ನಡೆದ “ರತಿಕಾ ನೃತ್ಯ ಕಲಾಕೇಂದ್ರ, ಧಾರಾವಾಡ” ದ ಕಾರ್ಯಕ್ರಮ ಅವಿಸ್ಮರಣೀಯವಾಗಿ ಮೂಡಿಬಂದು ಸದಾ ಎಲ್ಲರ ಮನದಲ್ಲೂ ಹಸಿರಾಗಿ ಉಳಿಯಲಿದೆ ಎಂದರೆ ಅತಿಶಯೋಕ್ತಿಯಲ್ಲ. ಎಲ್ಲವೂ ಭಗವತ್ಕೃಪೆ. ಗುರು ಪ್ರೇರಣೆ. ಭಗವದರ್ಪಣ …. ಇಂತಹ ಚಂದದ ದಿನವಿತ್ತ ಎಲ್ಲರಿಗೂ ಕೃತಜ್ಞೆ.” ಎನಿತು ಧನ್ಯಳು ನಾ” .
ನನ್ನ ವಿದ್ಯಾರ್ಥಿಗಳಿಗಾಗಿ ಬರೆಯಲು ಆರಂಭಿಸಿ ,ಹಲವರ ಪ್ರೀತಿಯ ಒತ್ತಾಸೆಗೆ “ನೃತ್ಯ ಕಾವ್ಯ” ವಾಗಿ ಪುಸ್ತಕ ರೂಪದಲ್ಲಿ ಲೋಕಾರ್ಪಣೆ ಗೊಳಿಸಿದ್ದು ಸಾರ್ಥಕವೆಂಬಂತೆ
ನನಗೆ ಅಚ್ಚರಿಯ ನೃತ್ಯಾಪರ್ಣದ ಉಡುಗೊರೆ ನೀಡಿದ ಡಾ.ಸಮತಾ ಮತ್ತು ಸೃಷ್ಟಿಯೆಂಬ ಕಲಾ ರತ್ನಗಳ ಭವಿಷ್ಯ ಉಜ್ವಲವಾಗಲಿ ಎಂಬ ಹಾರೈಕೆಯೊಂದಿಗೆ
-ಗುರು ವಿ|| ಸುಮಂಗಲಾ ರತ್ನಾಕರ್ ರಾವ್, ಮಂಗಳೂರು.