ಬೆಂಗಳೂರಿನ ‘ಸಾಧನಾ ಡ್ಯಾನ್ಸ್ ಸೆಂಟರ್’ ನೃತ್ಯಶಾಲೆಯ ಹೆಸರಾಂತ ನೃತ್ಯಗುರು ಭಾವನಾ ವೆಂಕಟೇಶ್ವರ ಬದ್ಧತೆ ಮತ್ತು ಪ್ರಯೋಗಶೀಲತೆಗಳಿಗೆ ಹೆಸರಾದವರು. ಸುಮಾರು ಎರಡು ದಶಕಗಳಿಗೂ ಹೆಚ್ಚಿನ ನೃತ್ಯಾನುಭವವುಳ್ಳ ಇವರು ನೃತ್ಯಾಕಾಂಕ್ಷಿಗಳಿಗೆ ಉತ್ತಮ ವಿದ್ಯೆಯನ್ನು ಧಾರೆಯೆರೆಯುತ್ತ ಭರವಸೆಯ ಕಲಾವಿದೆಯರನ್ನು ರೂಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತ ಬಂದಿದ್ದಾರೆ.
ಗುರು ಭಾವನಾ ಅವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪ ಧೃತಿ ರಾಮಚಂದ್ರ ಬಹು ಆಸಕ್ತಿಯಿಂದ ಭರತನಾಟ್ಯವನ್ನು ಕಳೆದ ಒಂದು ದಶಕದಿಂದ ಕಲಿಯುತ್ತಿದ್ದಾರೆ. ಶ್ರೀಮತಿ ಕೆ. ಆರ್. ಧನುಜಾ ಮತ್ತು ಎನ್. ರಾಮಚಂದ್ರ ಅವರ ಪುತ್ರಿಯಾದ ಧೃತಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮ ಹೊಂದಿದ್ದು, ಬಹುಮುಖ ಪ್ರತಿಭೆಯಾಗಿ ನಾಡಿನಾದ್ಯಂತ ತನ್ನ ನೃತ್ಯಪ್ರದರ್ಶನಗಳನ್ನು ನೀಡಿದ್ದಾಳೆ. ನೃತ್ಯದ ಹಲವು ಆಯಾಮಗಳನ್ನು ಅಭ್ಯಸಿಸುತ್ತಿರುವ ಧೃತಿ, ತನ್ನ ಪ್ರತಿಭಾ ಪ್ರದರ್ಶನಕ್ಕಾಗಿ 23 ಆಗಸ್ಟ್ 2024ರ ಶುಕ್ರವಾರದಂದು ಸಂಜೆ 5.30 ಕ್ಕೆ ಜಯನಗರದ ‘ವಿವೇಕ ಯುವಪಥ’ ಆಡಿಟೋರಿಯಂ ನಲ್ಲಿ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾರೆ. ಅವರ ಸೊಬಗಿನ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಹದಿಹರೆಯದ ಧೃತಿಗೆ ಬಾಲ್ಯದಿಂದಲೂ ನೃತ್ಯ ಎಂದರೆ ಮಹಾ ಒಲವು. ಅವರ ನೃತ್ಯ ಪ್ರತಿಭೆಯನ್ನು ಗಮನಿಸಿದ ಹೆತ್ತವರು ಅವರ ಆರರ ಎಳವೆಯಲ್ಲೇ ಶಾಸ್ತ್ರೀಯವಾಗಿ ನೃತ್ಯ ಕಲಿಸತೊಡಗಿದರು. ಬದ್ಧತೆಗೆ ಹೆಸರಾದ ‘ಸಾಧನಾ ಡ್ಯಾನ್ಸ್ ಸೆಂಟರ್’ ಇದರ ಗುರು ಭಾವನಾ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ದಶಕಗಳ ಅಭ್ಯಾಸದಲ್ಲಿ ಧೃತಿ, ಭಾರತೀಯ ಸನಾತನ ಪರಂಪರೆಯ ಭರತನಾಟ್ಯದ ಸುಭದ್ರ ಬುನಾದಿಯನ್ನು ಪಡೆಯುತ್ತಿದ್ದಾರೆ. ನೃತ್ಯಶಾಲೆಯ ವಿಶೇಷ ನೃತ್ಯರೂಪಕಗಳಾದ ರಾಮಾಯಣ, ದಶಾವತಾರ, ಅಷ್ಟಲಕ್ಷ್ಮೀ, ಶ್ರೀನಿವಾಸ ಕಲ್ಯಾಣ ಮುಂತಾದವುಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ ವಿಶೇಷ ಇವರದು.
ಮುಂಬೈನ ಗಂಧರ್ವ ಮಹಾವಿದ್ಯಾಲಯದ ಭರತನಾಟ್ಯ ಪರೀಕ್ಷೆಗಳಾದ ಪ್ರಾರಂಭಿಕ, ಪ್ರವೇಶಿಕಾ ಪ್ರಥಮ, ಪ್ರವೇಶಿಕಾ ಪೂರ್ಣ ಮತ್ತು ಮಧ್ಯಮ ಪ್ರಥಮ ಪರೀಕ್ಷೆಗಳ ಎಲ್ಲ ಹಂತಗಳಲ್ಲೂ ಡಿಸ್ಟಿಂಕ್ಷನ್ ಗಳಿಸಿದ ಹೆಮ್ಮೆ ಧೃತಿಯದು. ಜೊತೆಗೆ ಕಳೆದ 5 ವರ್ಷಗಳಿಂದ ಮುಕ್ತ ಮಧುಸೂದನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ಬೆಂಗಾಲ್ ವಿಶ್ವವಿದ್ಯಾಲಯದ ಸಂಗೀತ ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದಾರೆ.
ಶಾಲೆ-ಕಾಲೇಜಿನ ದಿನಗಳಿಂದಲೂ ಧೃತಿ ಪ್ರತಿಭಾವಂತೆ. ಎಲ್ಲ ನೃತ್ಯಸ್ಪಧೆಗಳಲ್ಲೂ ಬಹುಮಾನಗಳ ಸೂರೆ. ಓದಿನಲ್ಲೂ ಬುದ್ಧಿವಂತೆ. ಪ್ರಸ್ತುತ ಧೃತಿ, ಪಿ.ಇ.ಎಸ್. ಯೂನಿವರ್ಸಿಟಿಯಲ್ಲಿ ಬಿ.ಕಾಂ ಆನರ್ಸ್ ಎ.ಸಿ. ಸಿ.ಎ 3 ನೇ ವರ್ಷದಲ್ಲಿ ಓದುತ್ತಿದ್ದಾರೆ. ಇವರು ನಾಡಿನಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ- ಚೆನ್ನೈನ ವೆಲ್ಲೂರು ಗೋಲ್ಡನ್ ಟೆಂಪಲ್, ಆಂಧ್ರದ ವಿಜಯವಾಡದ ನಾಟ್ಯಾಂಜಲಿ ಫೆಸ್ಟಿವಲ್, ಶಿಲ್ಪರಾಮಂ-ಹೈದರಾಬಾದ್, ಬೆಂಗಳೂರಿನ ಕಲಾಯಾನ ನೃತ್ಯೋತ್ಸವ, ಕನ್ನಡ ಕೂಟ ಫೆಸ್ಟಿವಲ್ – ಪಿ.ಇ.ಎಸ್. ಚಿಣ್ಣರ ಕಲರವ ಮುಂತಾದ ಸ್ಥಳಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮೆರೆದಿದ್ದಾರೆ. ನೃತ್ಯರಂಗದಲ್ಲಿ ಇನ್ನೂ ಅಪಾರ ಸಾಧನೆ ಮಾಡುವ ಕನಸು ಧೃತಿಯದು.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.