ಉಡುಪಿ : ಶ್ರೀ ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯ ನಿಕೇತನ ಕೊಡವೂರು ಇದರ ಜಂಟಿ ಆಶ್ರಯದಲ್ಲಿ ಆರಂಭಗೊಂಡ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 19-02-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಶಿವಮೊಗ್ಗದ ವಿದುಷಿ ಕವನ ಪಿ. ಕುಮಾರ್ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ.
ಕವನ ಪಿ. ಶಿವಮೊಗ್ಗ :
ಪ್ರೇಮ್ ಕುಮಾರ್ ಮತ್ತು ಶ್ರೀಮತಿ ಗೀತಾ ದಂಪತಿಗಳ ಸುಪುತ್ರಿಯಾಗಿರುವ ವಿದುಷಿ ಕುಮಾರಿ ಕವನ ಪಿ. ಕುಮಾರ್ ತನ್ನ ಆರನೇ ವಯಸ್ಸಿನಿಂದ ಭರತನಾಟ್ಯದ ಅಭ್ಯಾಸವನ್ನು ಶಿವಮೊಗ್ಗದ ಖ್ಯಾತ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಪುಷ್ಪ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ನಡೆಸಿದ್ದು, ತನ್ನ ವಿದ್ವತ್ತನ್ನೂ ಪೂರ್ಣಗೊಳಿಸಿದ್ದಾರೆ. ಗುರುಗಳ ತಂಡದೊಂದಿಗೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಇವರು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2019-20ನೇ ಸಾಲಿನ ಶಿಷ್ಯವೇತನ ಪಡೆದಿರುವ ಇವರು ‘ವಿಶ್ವಚೇತನ’ , ‘ವಿಶ್ವ ಕಲಾರತ್ನ’ , ‘ಶ್ರೀ ಕೃಷ್ಣoಮೂರ್ತ ನೇಷನಲ್ ಅವಾರ್ಡ್’ , ‘ಕಲ್ಪತರು ಕಲಾ ಸನ್ಮಾನ’, ‘ನೃತ್ಯಸಿರಿ’ ಹೀಗೆ ಇನ್ನೂ ಹಲವಾರು ಬಿರುದುಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ದೂರದರ್ಶನದ ಬೆಂಗಳೂರಿನ ‘ಬಿ’ ಶ್ರೇಣಿಯ ಕಲಾವಿದೆಯಾಗಿರುವ ಇವರು ತಮ್ಮ ರಂಗಪ್ರವೇಶವನ್ನು 06-11-2022ರಂದು ಮಾಡಿರುತ್ತಾರೆ , ‘ಸಂಸ್ಕೃತಿ ಸೊಬಗು’, ‘ಚಿಗುರು ಚಿತ್ತಾರ’, ‘ಭರತ ಮುನಿ ಆರಾಧನಾ ಮಹೋತ್ಸವ’, ‘ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್ ಮಲೇಷ್ಯಾ’, ‘ಪರಿಣಿತಿ ಡಾನ್ಸ್ ಫೆಸ್ಟಿವಲ್’, ‘ವರ್ಣೋತ್ಸವ’, ‘ನಿರಂತರ ಕಲೆ ಮನೆ ಉತ್ಸವ ಮೈಸೂರ್’ ಅಲ್ಲದೆ ಸುಮಾರು 200ಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಇದಲ್ಲದೆ ರಂಗೋಲಿ, ಚಿತ್ರಕಲೆ, ಗೊಂಬೆ ಜೋಡಿಸುವುದು, ನಿರೂಪಣೆ ಹಾಗೂ ಸಮಾಜ ಸೇವೆ ಮಾಡುವುದು ಇವರ ಹವ್ಯಾಸಗಳು.