ಕೊಲ್ಯ : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರ ನಾಟ್ಯನಿಕೇತನ ಅಂಗಣದಲ್ಲಿ ‘ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ 13’ ಹಾಗು ‘ನಾಟ್ಯಾಂಜಲಿ ನಲವತ್ತರ ನಲಿವು’ ಕಾರ್ಯಕ್ರಮವು ದಿನಾಂಕ 29 ಜನವರಿ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾಪೋಷಕ ಹಾಗೂ ಯುವ ಉದ್ಯಮಿಗಳಾದ ಗೋಪಿನಾಥ ಶೇಟ್ ಮಾತನಾಡಿ “ಭಾರತೀಯ ಲಲಿತ ಕಲೆಗಳಲ್ಲಿ ನೃತ್ಯವು ಇಂದ್ರಿಯಗಳು ಮೆಚ್ಚುವ ಕಲೆ. ಓರ್ವ ಸಮರ್ಥ ಗುರುಗಳ ಮಾರ್ಗದರ್ಶನ ಸಿಕ್ಕಿದಾಗ ಕಲಾವಿದ ಪರಿಪೂರ್ಣನಾಗಲು ಸಾಧ್ಯ. ಅಂತಹ ಸೃಜನಶೀಲ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ಗುರುಗಳಾದ ಉಲ್ಲಾಳ ಮೋಹನ್ ಕುಮಾರ್ ಹಾಗೂ ಅವರ ಸುಪುತ್ರಿ ರಾಜಶ್ರೀ ಇವರಿಗೆ ಸಲ್ಲಲೇ ಬೇಕು.” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಮಧುಸೂಧನ ಅಯ್ಯರ್ ಮಾತನಾಡಿ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯ ಶ್ರೀಮಂತಿಕೆಯನ್ನು ಬೆಳಗಿಸಿದ ಹಾಗೂ ಕಲಾ ಕ್ಷೇತ್ರದಲ್ಲಿ 68 ವರ್ಷಗಳನ್ನು ಪೂರೈಸಿದ ಹೆಮ್ಮೆಯ ಸಂಸ್ಥೆ ಇದ್ದಾಗಿದೆ” ಎಂದರು.
ನಾಟ್ಯಾಚಾರ್ಯ ಮೋಹನ ಕುಮಾರ್ ನಟರಾಜ ದೇವರ ದೀಪ ಪ್ರಜ್ವಲನ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಶ್ರೀಧರ ಹೊಳ್ಳ ಸ್ವಾಗತಿಸಿ, ನಿರೂಪಿಸಿ, ವಿದುಷಿ ರಾಜಶ್ರೀ ಉಳ್ಳಾಲ್ ಧನ್ಯವಾದವಿತ್ತರು. ಸಭಾಕಾರ್ಯಕ್ರಮದ ಬಳಿಕ ಅಬುಧಾಬಿಯ ಸುರೇಶ್ ಕಾಸರಗೋಡು ಇವರಿನ ನೃತ್ಯ ಕಾರ್ಯಕ್ರಮ ನಡೆಯಿತು. ಇವರಿಗೆ ಹಾಡುಗಾರಿಕೆಯಲ್ಲಿ ಪವಿತ್ರ ವಿನಯ್, ಮೃದಂಗದಲ್ಲಿ ಮನೋಹರ ರಾವ್, ವಯೋಲಿನ್ ವಾದನದಲ್ಲಿ ಶ್ರೀಧರ ಆಚಾರ್ಯ ಹಾಗೂ ನಟವಾಂಗದಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಸಹಕರಿಸಿದ್ದರು.