ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 15-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಿತಿ ವಿ. ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಅದಿತಿ ವಿ. ರಾವ್ ಇವರು ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್ ಇವರಿಂದ 15 ವರ್ಷಗಳಿಂದ ಭರತನಾಟ್ಯದಲ್ಲಿ ತರಬೇತಿ ಪಡೆಯುತ್ತಿದ್ದು, ಶ್ರೀಮತಿ ಶ್ವೇತಾ ವೆಂಕಟೇಶ್ ಇವರಿಂದ ಕಥಕ್ ತರಬೇತಿ ಪಡೆಯುತ್ತಿದ್ದಾರೆ. ಕಂಸಾಳೆ, ಕೋಲಾಟ, ಕರಗ, ಪಟ್ಟದಕುಣಿತ, ಡೊಳ್ಳು ಕುಣಿತ, ಘೂಮರ್ಮತ್ತು ಇತರ ಹಲವು ಪ್ರಕಾರಗಳ ಜಾನಪದ ನೃತ್ಯದ ಅನುಭವ ಹೊಂದಿರುತ್ತಾರೆ. ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ಹಾಗೂ ಕಥಕ್ ಜೂನಿಯರ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದು, ಭರತನಾಟ್ಯ ಪ್ರದರ್ಶನ ಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ದಿನಾಂಕ 21-05-2022ರಂದು ಭರತನಾಟ್ಯ ರಂಗ ಪ್ರವೇಶವನ್ನು ಪೂರ್ಣಗೊಳಿಸಿದ್ದು, ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.