ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ರೇವಾ ಯುನಿವರ್ಸಿಟಿಯ ಪ್ರದರ್ಶನ ಕಲೆಗಳ ವಿಭಾಗ ಮತ್ತು ಧಾರಣಾ- ಭಾರತೀಯ ಜ್ಞಾನ ವ್ಯವಸ್ಥೆ ಅಧ್ಯಯನ ಕೇಂದ್ರದ ವತಿಯಿಂದ ಕರಾವಳಿಯ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ.ಎನ್ ಪುತ್ತೂರು ಅವರು ರೂಪಿಸಿರುವ ಪರಿಕಲ್ಪನೆ “ಭರತನಾಟ್ಯದಲ್ಲಿ ತಾಳಾವಧಾನ” ಶೈಕ್ಷಣಿಕವಾಗಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ರೂಪದಲ್ಲಿ ಮೂಡಿಬರುತ್ತಿದೆ. ಪ್ರದರ್ಶನ ಕಲೆಗಳ ವಿಭಾಗದ ನಿರ್ದೇಶಕರಾದ ಹಿರಿಯ ನೃತ್ಯಗುರು ಡಾ.ವಿದ್ಯಾ ಕುಮಾರಿ ಅವರು ಆನ್ಲೈನ್ ಮುಖಾಂತರ ಈ ಕೋರ್ಸಿಗೆ ಸೆಪ್ಟೆಂಬರ್ 6 ರಂದು ಅಧಿಕೃತವಾಗಿ ಚಾಲನೆ ನೀಡಿ ಶ್ಲಾಘಿಸಿದರು. ಇದನ್ನು ಭರತನಾಟ್ಯ ಕ್ಷೇತ್ರಕ್ಕೆಂದೇ ಅನ್ವೇಷಿಸಿ,ರೂಪಿಸಿದವರು ಯುವ ವಿದ್ವಾಂಸರಾದ ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್ ಪುತ್ತೂರು. ಈ ಕೋರ್ಸಿನಲ್ಲಿ ನಾಲ್ಕು ಅಧ್ಯಾಯಗಳಿದ್ದು, ಹೊಸ ಪ್ರಯೋಗಗಳನ್ನು ಮತ್ತು ನೃತ್ಯಕ್ಕೆ ಸಂಬಂಧಪಟ್ಟ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ.ಆಳ್ವಾಸ್ ಪದವಿ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಪ್ರಾರಂಭಗೊಂಡು ಇದೀಗ ರೇವಾ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ರೂಪದಲ್ಲಿ ಮೂಡಿಬರುತ್ತಿದೆ.