ಮಂಗಳೂರು : ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ನೃತ್ಯ ಗುರು ರಾಧಿಕಾ ಶೆಟ್ಟಿ ಇವರ ಶಿಷ್ಯೆ ಅದಿತಿಲಕ್ಷ್ಮಿ ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 10 ನವೆಂಬರ್ 2024ರ ಭಾನುವಾರ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು.
ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಶೆಣೈ, ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಪ್ರಿಯದರ್ಶಿನಿ ಮಾಂಟೆಸ್ಸರಿಯ ಸ್ಥಾಪಕಾಧ್ಯಕ್ಷೆ ಭರತನಾಟ್ಯ ಕಲಾವಿದೆ ಸ್ವರೂಪ ದೇವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೋಗ್ ರಾಗ ಆದಿತಾಳದ ಪುಷ್ಪಾಂಜಲಿಯೊಂದಿಗೆ ನೃತ್ಯ ಪ್ರದರ್ಶನವನ್ನು ಆರಂಭಿಸಿದ ಅದಿತಿಯವರು ಭರತನಾಟ್ಯ ಮಾರ್ಗಂನ ಅಲರಿಪು, ಜತಿಸ್ವರ, ಶಬ್ಧಂ, ಪದವರ್ಣವನ್ನು ಮೊದಲಾರ್ಧದಲ್ಲಿಯೂ, ಕೀರ್ತನೆ, ಜಾವಳಿ, ಕೃತಿಯನ್ನು ದ್ವಿತಿಯಾರ್ಧದಲ್ಲಿ ಮುಂದುವರಿಸಿ ತಿಲ್ಲಾನವನ್ನು ಪ್ರದರ್ಶಿಸುವುದರೊಂದಿಗೇ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ನಟುವಾಂಗದಲ್ಲಿ ಅದಿತಿಯ ನೃತ್ಯಗುರುಗಳಾದ ರಾಧಿಕಾ ಶೆಟ್ಟಿಯವರು ಮತ್ತು ಗಾಯನದಲ್ಲಿ ನಂದಕುಮಾರ್ ಉಣ್ಣಿಕೃಷ್ಣನ್, ಮೃದಂಗ ವಾದಕರಾಗಿ ಜನಾರ್ಧನ್ ರಾವ್ ಹಾಗೂ ಕೊಳಲು ವಾದನದಲ್ಲಿ ನಿತೀಶ್ ಅಮ್ಮಣ್ಣಾಯ ಸಹಕರಿಸಿದ್ದರು.
ಅಚ್ಚುಕಟ್ಟಾಗಿ ನೃತ್ಯ ಪ್ರದರ್ಶನವನ್ನು ನೀಡಿದ ಕಲಾವಿದೆಗೆ ಅತಿಥಿಗಳೆಲ್ಲಾ ಶುಭ ಹಾರೈಸಿದರೆ, ಗುರು ರಾಧಿಕಾ ಶೆಟ್ಟಿಯವರು ಪ್ರಶಸ್ತಿ ಪತ್ರವನ್ನು ನೀಡಿದರು. ಅದಿತಿಯ ತಾಯಿ ಡಾ. ಚೈತ್ರ ಲಕ್ಷ್ಮಿ ಎಲ್ಲರನ್ನೂ ಸ್ವಾಗತಿಸಿ, ಮಂಜುಳಾ ಸುಬ್ರಹ್ಮಣ್ಯ ಹಾಗೂ ಅನುಷ್ಕಾ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.