ಬೆಂಗಳೂರು : ‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವರ್ಥಕವಾಗಿ ಉತ್ತಮ ಕಲಾವಿದೆ- ಬದ್ಧತೆಯ ನಾಟ್ಯ ಗುರುವಾಗಿ ಖ್ಯಾತರಾಗಿರುವ ಬೆಂಗಳೂರಿನ ‘ನೃತ್ಯೋದಯ ಅಕಾಡೆಮಿ’ ನಾಟ್ಯ ಸಂಸ್ಥೆಯ ವಿದುಷಿ ದಿವ್ಯಶ್ರೀ ಎಸ್. ವಟಿಯವರ ನುರಿತ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ ಕು. ಪ್ರೇರಣಾ ಬಾಲಾಜಿ ಪ್ರತಿಭಾವಂತ ನೃತ್ಯಪ್ರತಿಭೆ. ಐದರ ಎಳವೆಯಿಂದಲೇ ನೃತ್ಯಪ್ರೀತಿ ಬೆಳೆಸಿಕೊಂಡ ಪ್ರೇರಣಾ ಕಳೆದ ಒಂದು ದಶಕದಿಂದ ಅತ್ಯಾಸಕ್ತಿಯಿಂದ ನೃತ್ಯಾಭ್ಯಾಸವನ್ನು ಮಾಡುತ್ತಾ ಜ್ಯೂನಿಯರ್, ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದು, ವಿದ್ವತ್ತಿಗೆ ತಯಾರಾಗುತ್ತಿರುವುದು ಅವಳ ವಿಶೇಷ. ನಾಡಿನಾದ್ಯಂತ ಅನೇಕ ದೇವಾಲಯಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರೂ ಇದೀಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಿರುವ ಸುಯೋಗ ಅವಳದಾಗಿದೆ.
ಶ್ರೀ ಎಸ್. ಬಾಲಾಜಿ ಮತ್ತು ದಿವ್ಯ ಬಾಲಾಜಿಯವರ ಸುಪುತ್ರಿಯಾದ ಇವಳು ‘ಲಾ’ ಪರೀಕ್ಷೆಗೆ ಓದುತ್ತಿದ್ದು, ಉತ್ತಮ ಕ್ರೀಡಾಪಟು ಕೂಡ. ಪ್ರೇರಣಾ ದಿನಾಂಕ 23 ಫೆಬ್ರವರಿ 2025ರ ಭಾನುವಾರ ಸಂಜೆ ಗಂಟೆ 4-30ಕ್ಕೆ ಯಲಹಂಕ ಸ್ಯಾಟಲೈಟ್ ಟೌನಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲು ಸಜ್ಜಾಗಿದ್ದಾಳೆ. ಪ್ರೇರಣಳ ಸುಮನೋಹರ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.
ಪ್ರೇರಣಾ ಬಾಲಪ್ರತಿಭೆ. ಬಾಲ್ಯದಿಂದಲೇ ಅವಳಿಗೆ ನೃತ್ಯದ ಬಗ್ಗೆ ಒಲವು. ಇದಕ್ಕೆ ಹೆತ್ತವರ ಸಂಪೂರ್ಣ ಪ್ರೋತ್ಸಾಹ. ತನ್ನ ಐದನೆಯ ವರ್ಷಕ್ಕೆ ವಿದ್ವಾನ್ ಡಿ. ತ್ಯಾಗರಾಜ್ ಇವರಲ್ಲಿ ಭರತನಾಟ್ಯ ಕಲಿಯಲು ಇವಳು ಸೇರ್ಪಡೆ. ಅವರಲ್ಲಿ ನೃತ್ಯ ಕಲಿಯುವಾಗಲೇ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದಳು. ಅನಂತರ ವಿ. ದಿವ್ಯಶ್ರೀ ವಟಿ ಇವರಲ್ಲಿ ನೃತ್ಯ ಕಲಿಕೆ ಮುಂದುವರೆಸಿ ನೃತ್ಯದ ಎಲ್ಲ ಆಯಾಮಗಳನ್ನು ಅರಿಯುವ ಪ್ರಯತ್ನ ಮಾಡುತ್ತಿರುವುದು ಸ್ತುತ್ಯಾರ್ಹ. ಪರಿಶ್ರಮದಿಂದ ಅಷ್ಟೇ ಬದ್ಧತೆಯಿಂದ ಕಲಿಯುತ್ತಿರುವ ಪ್ರೇರಣಾ ನಾಡಿನಾದ್ಯಂತ ಹಲವಾರು ದೇವಾಲಯಗಳಲ್ಲಿ ನರ್ತಿಸಿದ್ದಾಳೆ. ಇವಳು ನೀಡಿರುವ ಕಾರ್ಯಕ್ರಮಗಳೆಂದರೆ ತಿರುಪತಿ ಬ್ರಮ್ಹೋತ್ಸವ, ನಾದ ನೀರಾಜನ, ಕಟೀಲ್, ಬೇಲೂರು, ದುರ್ಗಾ ದೇವಾಲಯಗಳು ಮುಂತಾದ ಕಡೆ ‘ನೃತ್ಯೋದಯ’ದ ತಂಡದೊಡನೆ ಭಾಗವಹಿಸಿದ್ದಾಳೆ. ಕನ್ನಡ ಸಾಹಿತ್ಯ ಸಮ್ಮೇಳನ, ಗಮಕ ಸಾಹಿತ್ಯ ಸಮ್ಮೇಳನ, ಯು.ಆರ್.ಎಸ್.ಸಿ., ಐ.ಎಸ್.ಆರ್.ಓ. ಮುಂತಾದ ಕಾರ್ಯಕ್ರಮಗಳಲ್ಲಿ ನರ್ತಿಸಿರುವ ಜೊತೆ ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿಯಿಂದ ‘ನೃತ್ಯ ಚಿಗುರು’ ಪ್ರಶಸ್ತಿ ಪಡೆದ ಹೆಮ್ಮೆ ಅವಳದು.
ಓದಿನಲ್ಲೂ ಚುರುಕಾಗಿರುವ ಪ್ರೇರಣಾ, ಬ್ಯಾಸ್ಕೆಟ್ ಬಾಲ್ ಮುಂತಾದ ಕ್ರೀಡೆಗಳಲ್ಲೂ ಮುಂದು. ಚರ್ಚಾಸ್ಪರ್ಧೆಗಳಲ್ಲೂ ಬಹುಮಾನ ಪಡೆದ ಇವಳು ಬಹುಮುಖ ಪ್ರತಿಭೆ. ಡೆಲ್ಲಿ ಪಬ್ಲಿಕ್ ಸ್ಕೂಲ್ ನಿಂದ ಸಿ.ಬಿ.ಎಸ್.ಸಿ.ಯಲ್ಲಿ ಶೇ.95 ಅತ್ಯುಚ್ಚ ಅಂಕಗಳನ್ನು ಪಡೆದ ಹಿರಿಮೆಯಾಗಿದ್ದು ಪ್ರಸ್ತುತ ಅವಳು ರಾಮಯ್ಯ ಕಾಲೇಜಿನಲ್ಲಿ ಎರಡನೆಯ ವರ್ಷದ ‘ಲಾ’ ಪದವಿಗೆ ಓದುತ್ತಿದ್ದಾಳೆ. ಮುಂದೆಯೂ ನೃತ್ಯ ಮುಂದುವರೆಸುತ್ತ ಹೆಚ್ಚಿನ ಸಾಧನೆ ಮಾಡುವ ಕನಸು ಅವಳದು. ರಂಗಪ್ರವೇಶದಂಥ ಸ್ಮರಣೀಯ, ಮಹತ್ವದ ಸಂದರ್ಭದಲ್ಲಿ ಗುರು-ಶಿಷ್ಯೆಯರಿಬ್ಬರಿಗೂ ಅಭಿನಂದನೆಗಳು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.