ಭಾವದಲೆಯಲ್ಲಿ ಭರತನಾಟ್ಯದ ಸೊಬಗು ! ಬೆಂಗಳೂರಿನ ಭಾರತೀಯ ವಿದ್ಯಾ ಭವನ್ ನಲ್ಲಿ ಒಂದು ರಂಗ ಪ್ರವೇಶದ ಕಾರ್ಯಕ್ರಮದ ನಿರೂಪಣೆಗೆ ಹೋಗಿದ್ದೆ. ಬೆಳ್ತಂಗಡಿ ಮೂಲದ ಪ್ರಸ್ತುತ ಕುವೈಟ್ ದೇಶದಲ್ಲಿ ನೆಲೆಸಿರುವ ವಿದುಷಿ ಶಾಂತಲಾ ಸತೀಶ್ ಅವರ ಪುಷ್ಕರ ನೃತ್ಯ ನಿಕೇತನದ ವಿದ್ಯಾರ್ಥಿನಿ ಸಾನ್ವಿ ನವೀನ್ ಇವರ ಭರತನಾಟ್ಯ ರಂಗಪ್ರವೇಶದ ಕಾರ್ಯಕ್ರಮ.
ಸಾಮಾನ್ಯವಾಗಿ ರಂಗ ಪ್ರವೇಶದ ಕಾರ್ಯಕ್ರಮ ನಡೀತಾನೇ ಇರುತ್ತೆ, ಆದ್ರೆ ಇದು ನನಗೆ ಬಹಳ ವಿಶೇಷ ಅನ್ನಿಸಿದ್ದಕ್ಕಾಗಿ ಈ ಲೇಖನವನ್ನ ಬರೀತಾ ಇದೀನಿ. ಭಾವ, ರಾಗ, ತಾಳ, ರಸ ಕಾವ್ಯದ ಸುಂದರ ದೃಶ್ಯ ವೈಭವ ಅದು ಭರತನಾಟ್ಯ! ಭರತ ಮುನಿಯ ಮೂಲಕ ರಚಿತವಾದ ಭರತನಾಟ್ಯ ಸಹಸ್ರಾರು ವರ್ಷಗಳ ಭವ್ಯವಾದ, ದಿವ್ಯವಾದ ಇತಿಹಾಸವನ್ನ ಹೊಂದಿದೆ. ಇದು ಕೇವಲ ನೃತ್ಯವಲ್ಲ ಭಾರತದ ಸನಾತನ ಶಾಸ್ತ್ರೀಯ ಪರಂಪರೆಯ ಪ್ರತಿಬಿಂಬ.
ಒಂದೋ ಎರಡೋ ತಿಂಗಳು ಡಾನ್ಸ್ ಕ್ಲಾಸ್ ಗೆ ಹೋಗಿ ಭರತನಾಟ್ಯ ಕಲಿಯೋದಿಕ್ಕಾಗಲ್ಲ, ಹಲವಾರು ವರ್ಷಗಳ ಕಾಲದ ಶ್ರದ್ದಾ ಭಕ್ತಿಯ ಕಲಿಕೆ, ಗುರುವಿನ ಮಾರ್ಗದರ್ಶನದಿಂದ ಮಾತ್ರ ಭರತನಾಟ್ಯ ಒಬ್ಬ ಕಲಾವಿದೆ/ಕಲಾವಿದನಿಗೆ ಒಲಿಯೋದಿಕ್ಕೆ ಸಾಧ್ಯ. ಅದ್ರಲ್ಲೂ ರಂಗ ಪ್ರವೇಶ ಅನ್ನೋದು ಕಲಾವಿದೆ ಸ್ವತಂತ್ರವಾಗಿ ಏಕವ್ಯಕ್ತಿ ಪ್ರದರ್ಶನವನ್ನ ನೀಡೋದಿಕ್ಕೆ ಸಮರ್ಥಳು ಅನ್ನೋದನ್ನ ಸಾರಿ ಹೇಳುವ ಒಂದು ಕಾರ್ಯಕ್ರಮ! ಅದು ಅಂತ್ಯ ಅಲ್ಲ ಭರತನಾಟ್ಯ ಕಲಾವಿದೆಯ ಹೊಸ ಅಧ್ಯಾಯದ ಆರಂಭ!
ಇಲ್ಲಿ ನಾನು ನಿರೂಪಣೆ ಮಾಡಿದ ರಂಗ ಪ್ರವೇಶದ ಕಾರ್ಯಕ್ರಮ ವಿಶೇಷವಾದದ್ದು ಯಾಕೆ ಅಂದ್ರೆ ಸಾನ್ವಿ ಅನ್ನುವ ಕಲಾವಿದೆ ಬೆಳೆದಿದ್ದು, ಓದುತ್ತಿರೋದು ಎಲ್ಲವೂ ಕುವೈಟ್ ದೇಶದಲ್ಲಿ. ಒಂದೋ ಎರಡೋ ವರ್ಷಕ್ಕೊಮ್ಮೆ ಊರಿಗೆ ಬಂದು ಒಂದಷ್ಟು ದಿನ ರಜೆ ಕಳೆದು ಹೋಗೋದಷ್ಟೇ ಅವಳಿಗೆ ಭಾರತದಲ್ಲಿ ಕಳೆಯುವ ದಿನಗಳು! ಕುವೈಟ್ ಸಾಕಷ್ಟು ನಿರ್ಬಂಧಗಳನ್ನ ಹೇರಿರುವ ದೇಶ ಅಲ್ಲಿ ಮುಕ್ತವಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಚರಿಸೋದಿಕ್ಕೆ ಅವಕಾಶವಿಲ್ಲ, ಇಲ್ಲಿಂದ ಆ ದೇಶಕ್ಕೆ ಹೋದವರ ಮುಖ್ಯ ಗುರಿ ಕೆಲಸ – ದುಡಿಮೆ ಅಷ್ಟೇ! ಬಿಡುವಿನ ಸಮಯವೂ ಬಹಳ ಕಡಿಮೆ. ಒತ್ತಡದ ಆ ಜೀವನದ ನಡುವೆಯೂ ಸಾನ್ವಿಯ ಹೆತ್ತವರು ಶ್ರೀ ನವೀನ್ ಹಾಗೆ ಶ್ರೀಮತಿ ಜ್ಯೋತಿಯವರಿಗೆ ಭಾರತದ ಶಾಸ್ತ್ರೀಯ ನೃತ್ಯ ಕಲೆಗಳ ಮೇಲೆ ಅಪಾರವಾದ ಗೌರವ, ತಮ್ಮ ಮಗಳು ನಮ್ಮ ಪರಂಪರೆ – ಸಂಸ್ಕೃತಿ ಸಂಸ್ಕಾರಗಳನ್ನ ಮರೆಯಬಾರದು ಅನ್ನುವ ಯೋಚನೆಯಲ್ಲಿ, ‘ಪುಷ್ಕರ ನೃತ್ಯ ನಿಕೇತನ’ಕ್ಕೆ ಸೇರಿಸ್ತಾರೆ.
ಪುಷ್ಕರ ನೃತ್ಯ ನಿಕೇತನ ಸಂಸ್ಥೆಯನ್ನ ನಡೆಸ್ತಾ ಇರೋದು ವಿದುಷಿ ಶಾಂತಲಾ ಸತೀಶ್, ಇವರ ತಂದೆ ದಿ. ಕಮಲಾಕ್ಷ ಆಚಾರ್ ಬೆಳ್ತಂಗಡಿ, ಕರ್ನಾಟಕದ ಭರತನಾಟ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಸೇವೆಯನ್ನ ಸಲ್ಲಿಸಿದ ಒಬ್ಬ ಮಹಾನ್ ಗುರುಗಳು. ತಂದೆಯಿಂದ ಕಲಿತ ನೃತ್ಯದ ವಿದ್ವತ್ತಿನ ಜೊತೆಗೆ ಕುವೈಟ್ ದೇಶದಲ್ಲಿ ಉದ್ಯೋಗದಲ್ಲಿರುವ ಶ್ರೀ ಸತೀಶ್ ಆಚಾರ್ಯ ಅವರನ್ನ ಮದುವೆಯಾದ ಶಾಂತಲಾ ಅವರು ಮನಃಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಯನ್ನ ಪಡೆದಿದ್ದಾರೆ. ಕುವೈಟ್ ನ ನ್ಯೂ ಇಂಡಿಯನ್ ಸ್ಕೂಲ್ ನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡ್ತಾ ಜೊತೆಗೆ ನೃತ್ಯ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಪತಿ ಸತೀಶ್ ಆಚಾರ್ಯ ಕುವೈಟ್ ನ ಬೇರೆ ಬೇರೆ ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ವೈವಿದ್ಯಮಯವಾದ ಭಾರತೀಯ ಸಂಸ್ಕೃತಿಯ ಕಾರ್ಯಕ್ರಮಗಳನ್ನ ಆಯೋಜಿಸುವುದರಲ್ಲಿ ತಮ್ಮನ್ನ ತೊಡಗಿಸಿಕೊಂಡವರು. ಈ ಇಬ್ಬರು ದಂಪತಿಗಳು ಆರಂಭಿಸಿದ ‘ಪುಷ್ಕರ ನೃತ್ಯ ನಿಕೇತನ’ ಈಗ ನೂರಾರು ಅನಿವಾಸಿ ಭಾರತೀಯ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿದೆ.
ಇಲ್ಲಿ ಸೇರಿದ ಸಾನ್ವಿ ಕಳೆದ 6 ವರ್ಷಗಳ ಅವಧಿಯಲ್ಲಿ ಭಾರತನಾಟ್ಯವನ್ನ ಕಲಿತದ್ದಲ್ಲ ಅದನ್ನ ಭಾವ ಪರವಶತೆಯಲ್ಲಿ ಒಲಿಸಿಕೊಂಡಿದ್ದಾಳೆ ಅಂದ್ರೆ ತಪ್ಪಾಗಲ್ಲ ಅನ್ನುವ ರೀತಿಯಲ್ಲಿ ರಂಗ ಪ್ರವೇಶವನ್ನ ಯಶಸ್ವಿಗಿ ಪೂರೈಸಿದ್ದಾಳೆ. ಮೊದಲ ಬಾರಿಗೆ ಲೈವ್ ಮ್ಯೂಸಿಕ್ ಗೆ ನೃತ್ಯ ಪ್ರದರ್ಶನ ನೀಡಿದ್ದು ಮಾತ್ರವಲ್ಲ, ನ್ರತ್ಯದ ಪ್ರತಿ ಹೆಜ್ಜೆಯಲ್ಲಿನ ಪರಿಪೂರ್ಣತೆ, ಭಾವಾಭಿನಯದ ಪರಾಕಾಷ್ಠೆ, ಸಂಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರನ್ನ ಮಂತ್ರಮುಗ್ದಗೊಳಿಸಿ, ತುಂಬಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ಸಾನ್ವಿ ಹಾಗೂ ಆಕೆಯ ಗುರುವಿನ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿತ್ತು! ಮಹಿಷಾಸುರ ಮರ್ದನದ ದೃಶ್ಯದಲ್ಲಿ ಆಕೆಯ ಮುಖದ ಭಾವ ನೋಡಿ ಕೆಲವರು ಕೈ ಮುಗಿದದ್ದು ಕಂಡಾಗ ನಾನು ಬೆರಗಾಗಿದ್ದೆ! ನೃತ್ಯ ಹಾಗೂ ಅಭಿನಯ ಲೋಕದಲ್ಲಿ ಸಾನ್ವಿಗೆ ಉಜ್ವಲ ಭವಿಷ್ಯವಿದೆ. ಆಕೆ ಸಾಂಸ್ಕೃತಿಕ ಬಾನಂಗಳದಲ್ಲಿ ಬೆಳಗಲಿ ಅನ್ನುವ ಹಾರೈಕೆಯೊಂದಿಗೆ.
ನಮ್ಮ ಭಾರತ, ಕರ್ನಾಟಕದಲ್ಲಿ ಕಲಿಯುವವರಿಗೆ – ಕಲಿಸುವ ಗುರುಗಳಿಗೆ ಅವಕಾಶ – ಸೌಲಭ್ಯಗಳು ಬಹಳಷ್ಟಿವೆ. ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ, ಆದ್ರೆ ಭಾರತೀಯ ಸಂಸ್ಕೃತಿಯ ಒಂಚೂರು ಸ್ಪರ್ಶವಿಲ್ಲದ ಅರಬ್ ರಾಷ್ಟ್ರವೊಂದರಲ್ಲಿ ನೃತ್ಯ ಕಲಿಸುತ್ತ – ಕಲಿಯುವುದು ಅಷ್ಟು ಸುಲಭದ ಮಾತಲ್ಲ! ಆದರೂ ಅದನ್ನು ಸಾಧಿಸಿ ತೋರಿಸಿದ ವಿದುಷಿ ಶಾಂತಲ ಸತೀಶ್ ಮತ್ತವರ ಶಿಷ್ಯೆ ಸಾನ್ವಿ ನವೀನ್ ಅವರಿಗೆ ಅಭಿವಂದನೆಗಳು. ಈ ಸಾಧನೆಯನ್ನ ವಿದೇಶಗಳಲ್ಲಿರುವ ಅದೆಷ್ಟೋ ನೃತ್ಯ ಗುರುಗಳು ಮಾಡುತ್ತಿದ್ದಾರೆ ಅವರೆಲ್ಲರ ಸ್ಮರಣೆಯೊಂದಿಗೆ, ಇಂತಹ ನೃತ್ಯ ವಿದುಷಿಗಳು, ಕಲಿಯುವ ಮನಸ್ಸಿನ ವಿದ್ಯಾರ್ಥಿಗಳು ಜೊತೆಗೆ ಪ್ರೋತ್ಸಾಹ ನೀಡುವ ಹೆತ್ತವರಿಂದ ಮಾತ್ರ ಇಂತಹ ಕಲೆಗಳು ನಿರಂತರವಾಗಿ ಉಳಿಯಲು ಬೆಳೆಯಲು ಸಾಧ್ಯ.
ನೃತ್ಯ ವಿಮರ್ಶಕರು : ಆರ್.ಜೆ. ಪ್ರಸನ್ನ