ಮಂಗಳೂರಿನ ಡಾನ್ ಬೋಸ್ಕೊ ಸಭಾಂಗಣದಲ್ಲಿ ನವೆಂಬರ್ 9ರಂದು ನಡೆದ ಭರತನಾಟ್ಯ ಪ್ರದರ್ಶನವು ಸಂಸ್ಕೃತಿ ಪ್ರೇಮಿಗಳನ್ನು ಮೋಡಿ ಮಾಡಿತು. ಖ್ಯಾತ ಭರತನಾಟ್ಯ ಕಲಾವಿದೆ ಮೀರಾ ಶ್ರೀನಾರಾಯಣನ್ ಅವರ ನೃತ್ಯ ವೈಭವವು ಶ್ರಾವಣೀಯ ಸಂಗೀತ, ದೃಢ ತಾಳ ಮತ್ತು ಮನಸ್ಸಿಗೆ ತಾಕುವ ಅಭಿನಯಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿತು.

ಈ ನೃತ್ಯಸಂಜೆಯನ್ನು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಾಂಜಲಿ ಕೊಟ್ಟಾರ, ಮಂಗಳೂರು ಇವರ 30 ವರ್ಷಗಳ ಸಂಭ್ರಮಾಚರಣೆಯ ‘ಕಿಂಕಿಣಿ ತ್ರಿಂಶತ್’ ಪ್ರಯುಕ್ತ ಆಯೋಜಿಸಲಾಗಿತ್ತು. ಮಂಗಳೂರಿನ ಸಾಂಸ್ಕೃತಿಕ ವಲಯಕ್ಕೆ ಇದೊಂದು ಕಲಾಮಧುರ ಕ್ಷಣವಾಯಿತು.
ಮೀರಾ ಶ್ರೀನಾರಾಯಣನ್ ಅವರು ವೇದಿಕೆಯ ಮೇಲೆ ತೋರಿಸಿದ ನೃತ್ಯಾಭಿನಯವು ಕೇವಲ ಕೌಶಲ್ಯವಲ್ಲ, ಅದು ಭಾವನೆ ಮತ್ತು ಭಕ್ತಿ ತುಂಬಿದ ಕಲಾತ್ಮಕ ಪ್ರಯಾಣವಾಗಿತ್ತು. ಆಕೆಯ ತಾಳ, ಲಯ ಮತ್ತು ಭಾವ ಸಂಯೋಜನೆಗಳು ಪ್ರೇಕ್ಷಕರನ್ನು ಆಳವಾಗಿ ಸ್ಪರ್ಶಿಸಿತು. ಪರಂಪರೆ, ಕಲಾತತ್ಪರತೆ ಮತ್ತು ಕಲಾಸಾಧನೆ ಎಲ್ಲವೂ ಮೇಳೈಸಿದ ಆಕೆಯ ನೃತ್ಯವು, ಕಲೆಯ ಸೌಂದರ್ಯವನ್ನು ಹೊಸ ದೃಷ್ಟಿಕೋನದಿಂದ ಪರಿಚಯಿಸಿತು.
ಕಾರ್ಯಕ್ರಮವನ್ನು ನವಮಂಗಳೂರು ಬಂದರು ಪ್ರಾಧಿಕಾರದ ಹಿರಿಯ ಉಪ ಕಾರ್ಯದರ್ಶಿ ಕೃಷ್ಣ ಬಾಪಿ ರಾಜು ಜಿ. ಉದ್ಠಾಟಿಸಿದರು. ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ ಕುಮಾರ್, ಕರ್ನಾಟಕ ವಿಧಾನ ಪರಿಷತ್ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನೇಶನ್ ವೈಡ್ ಕಂಪೆನಿ ಯು.ಎಸ್.ಎ. ಇದರ ಸೀನಿಯರ್ ವೈಸ್ ಪ್ರೆಸಿಡೆಂಟ್ ಗುರು ಪ್ರಸಾದ್ ಸಿ.ವಿ., ಕಲಾವಿದೆ ನೀರಾ ಶ್ರೀನಾರಾಯಣನ್, ಭರತಾಂಜಲಿಯ ನೃತ್ಯ ಗುರುಗಳಾದ ಗುರು ಶ್ರೀಧರ ಹೊಳ್ಳ, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಪ್ರಕ್ಷೀಲ ಜೈನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡುತ್ತಾ, “ಮೀರಾ ಶ್ರೀನಾರಾಯಣನ್ ಅವರ ನೃತ್ಯವು ಕೇವಲ ಪ್ರದರ್ಶನವಲ್ಲ, ಅದು ಭರತನಾಟ್ಯದ ಆತ್ಮಸ್ಪರ್ಶಿ ಅಭಿವ್ಯಕ್ತಿ. ಇಂತಹ ಕಲಾವಿದರು ಯುವ ಪೀಳಿಗೆಯಲ್ಲಿಯೂ ಸಂಸ್ಕೃತಿ ಪ್ರೀತಿಯನ್ನು ಬಿತ್ತುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಸಂಜೆಯ ಕೊನೆಯಲ್ಲಿ ಸಭಾಂಗಣದಲ್ಲಿ ದೀರ್ಘ ಕಾಲದ ಚಪ್ಪಾಳೆ ಮೊಳಗಿತು. ಮೀರಾ ಶ್ರೀನಾರಾಯಣನ್ ಅವರ ನೃತ್ಯಮಾಧುರ್ಯವು ಮಂಗಳೂರಿನ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
ಹಿಮ್ಮೇಳದಲ್ಲಿ…
ನಟುವಾಂಗ: ಶ್ರೀಲತಾ ಆಚಾರ್ಯ
ಗಾಯನ: ಬಿಜೀಶ್ ಕೃಷ್ಣ
ಮೃದಂಗ: ಚಾರುದತ್ ವಿ. ವಿ.
ವೀಣೆ: ವಿ. ಸೌಂದರರಾಜನ್

