ಕಾಸರಗೋಡು : ಶರದೃತುವಿನ ಅಶ್ವಯುಜ ಮಾಸದ ಮೊದಲ 9 ದಿನಗಳಲ್ಲಿ ನಡೆಯುವ ಶಕ್ತಿ ದೇವತೆ ದುರ್ಗಾದೇವಿಯ ಆರಾಧನೆಯ ಸಂದಭ೯ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ – 2023’ವು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ದಿನಾಂಕ 22-10-2023ರಂದು ನಡೆಯಿತು.
ದ.ಕ. ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮಾತನಾಡಿ “ಮೌಲ್ಯಯುತ ಚಿಂತನೆಗಳೊಂದಿಗೆ ಬದುಕು ಸಾಕಾರಗೊಳಿಸಬೇಕು. ಸಂಸ್ಕೃತಿ ಸಂರಕ್ಷಣೆಯ ಜಾಗ್ರತಿ ನಮ್ಮ ಜವಾಬ್ದಾರಿ” ಎಂದು ನುಡಿದರು. ಅಂತರ್ ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ‘ಭರವಸೆಯ ಬೆಳಕು’ 2023 ಪ್ರಶಸ್ತಿ ಪ್ರಧಾನ ಮಾಡಿ ಯುವ ಪ್ರತಿಭೆಗಳಿಗೆ ಶುಭ ಹಾರೈಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶುಭಾಶೀರ್ವಚನ ನೀಡಿ ಯುವ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ. ಭವಿಷ್ಯದ ಭರವಸೆಯಾಗಿರುವ ಮಕ್ಕಳನ್ನು ಗುರುತಿಸಿ ಸಮ್ಮನಿಸುವ ಹಾಗೂ ಅವಕಾಶ ನೀಡುವ ಮೂಲಕ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳನ್ನು ಗುರುತಿಸಿ ಅವರಿಗೆ ‘ಭರವಸೆಯ ಬೆಳಕು’ ಪ್ರಶಸ್ತಿ ನೀಡುವ ಮೂಲಕ ಕನ್ನಡ ಭವನ ಉತ್ತಮ ಕೆಲಸ ಮಾಡಿದೆ” ಎಂದು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ, ಮಂಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಶೈಲಾ ಕೆ.ಎನ್. ಮಾತನಾಡಿ “ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಹಾಗೂ ಗ್ರಂಥಾಲಯದ ವತಿಯಿಂದ ನಡೆಯುವ ಅಂತರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ಎಲೆ ಮರೆ ಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸುವ ವೇದಿಕೆಯಾಗಿದೆ. ಯುವ ಸಾಧಕರು ತಮ್ಮ ಪ್ರತಿಭೆಗಳನ್ನು ಪೋಷಿಸಿ ಮುಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವಂತಾಗಲಿ” ಎಂದರು. ಗಡಿನಾಡಿನಲ್ಲಿ ಕನ್ನಡದ ಕಂಪು ನಿರಂತರವಾಗಿ ಪಸರಿಸುವ ಕೈ೦ಕರ್ಯದಲ್ಲಿ ತೊಡಗಿರುವ ಶ್ರೀ ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ದಂಪತಿಗಳನ್ನು ಅಭಿನಂದಿಸಿದರು. 37 ಅಂತ ರಾಜ್ಯ ಯುವ ಪ್ರತಿಭಾನ್ವಿತರಿಗೆ ‘ಭರವಸೆಯ ಬೆಳಕು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಕವಿ ಹಾಗೂ ಸಾಹಿತಿಯಾದ ಶ್ರೀ ರಾಧಾಕೃಷ್ಣ ಕೆ. ಉಳಿಯುತ್ತಡ್ಕ, ಸಾಹಿತಿ ಹಾಗೂ ಶಿಕ್ಷಕರಾದ ಶ್ರೀ ಜಯಾನಂದ ಪೆರಾಜೆ, ಕವಿ ಹಾಗೂ ವ್ಯಂಗ್ಯ ಚಿತ್ರ ಕಲಾವಿದರಾದ ಶ್ರೀ ವೆಂಕಟ್ ಭಟ್ ಎಡನೀರು, ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಅನುರಾಧ ಕುರುಂಜಿ ಸುಳ್ಯ, ಸಾಹಿತಿ ಹಾಗೂ ಶಿಕ್ಷಕಿಯಾದ ಶ್ರೀಮತಿ ಶಾಂತ ಪುತ್ತೂರು, ಕವಿ ಹಾಗೂ ಸಾಹಿತಿಯಾದ ಶ್ರೀ ಟಿ. ತ್ಯಾಗರಾಜ್ ಮೈಸೂರು, ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ವಿರಾಜ್ ಅಡೂರು, ಲೇಖಕ ಹಾಗೂ ಪತ್ರಕರ್ತರಾದ ಶ್ರೀ ಪ್ರದೀಪ್ ಬೇಕಲ್, ಸಂಘಟಕರು ಹಾಗೂ ನಿವೃತ್ತ ಪ್ರಾಂಶುಪಾಲರು ಪ್ರೊ. ಎ. ಶ್ರೀನಾಥ್, ಯಕ್ಷಗಾನ ಕಲಾವಿದರಾದ ಶ್ರೀ ವಿ.ಜಿ. ಕಾಸರಗೋಡು ತಮ್ಮ ವಿಚಾರಗಳನ್ನು ಮಂಡಿಸಿದರು.
ಮಂಗಳೂರಿನ ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶೈಲ ಕೆ.ಎನ್. ಇವರಿಗೆ ದಸರಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಸಾಹಿತಿ ರೇಖಾ ಸುರೇಶ್, ಎ.ಆರ್. ಸುಬ್ಬಯ್ಯಕಟ್ಟೆ, ಜಗನ್ನಾಥ ಶೆಟ್ಟಿ, ಶ್ರೀಮತಿ ಸಂಧ್ಯಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷರಾದ ಶ್ರೀ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು ಶ್ರೀ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯದ ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು.