ಮುಂಬಯಿ: ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭವು 24 ಆಗಸ್ಟ್ 2024ರಂದು ಮುಂಬಯಿಯ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ನಡೆಯಿತು.
ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ “ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ. ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ ಮತ್ತು ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ.” ಎಂದರು.

ಕಾರ್ಯಕ್ರಮವನ್ನು ಅಂಬಿಕಾ ಮಂದಿರದ ಧರ್ಮದರ್ಶಿಗಳಾದ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ ಇವರು ದೇವಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಬೈಯ ಹಿರಿಯ ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೈಸೂರಿನ ರಾಜ್ ಪ್ರಕಾಶನವು ಪ್ರಕಟಿಸಿದ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛ ಕನ್ನಡ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಹರಿದಾಸ ಭಟ್ ಮಾತನಾಡಿ “ಯಕ್ಷಗಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಭಾಸ್ಕರ ರೈಯವರು ಸ್ವತಃ ಯಕ್ಷಗಾನ ಕಲಾವಿದರಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಅವರು ರಚಿಸಿದ ಭಕ್ತಿ ಹಾಗೂ ಭಾವಗೀತೆಗಳು ವಿವಿಧ ಧ್ವನಿಸುರುಳಿಗಳ ಮೂಲಕ ಜನಪ್ರಿಯವಾಗಿವೆ.” ಎಂದರು.

‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು ತುಳು ಕವಿತಾ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ “ ‘ಸಬಿ, ಸೀಪೆ, ಸುಗಿಪು ಸೀಯನವೆಂಬ ಮೂರು ವಿಭಾಗಗಳಲ್ಲಿ ತುಳು ಭಾಷೆಯ ಬನಿ ಮತ್ತು ಶಬ್ಧ ಸಮೃದ್ಧಿ ಕುಕ್ಕುವಳ್ಳಿಯವರ ಕವಿತೆಗಳಲ್ಲಿ ಎದ್ದು ತೋರುತ್ತವೆ.” ಎಂದು ಹೇಳಿದರು.
ಯಕ್ಷಗಾನ ಕಲಾವಿದ ಹಾಗೂ ಲೇಖಕರಾದ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡಿ ಎರಡೂ ಕವನ ಸಂಕಲನಗಳನ್ನು ವಿಶ್ಲೇಷಿಸಿದರು. ಮುಂಬಯಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಶುಭ ಹಾರೈಸಿದರು.

‘ಪುಣ್ಯನೆಲ ಪೆರ್ಣಂಕಿಲ’ ಧ್ವನಿಸುರುಳಿಗೆ ಬೆಂಗಳೂರಿನ ಡಾ. ವಿದ್ಯಾಭೂಷಣರು ಹಾಡಿದ ಕವಿ ಕುಕ್ಕುವಳ್ಳಿ ವಿರಚಿತ ಗಣೇಶ ಸ್ತುತಿಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಕೃತಿ ಕರ್ತ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು) ಹಾಗೂ ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು, ಅರ್ಥದಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ ಹಾಗೂ ಗುರುತೇಜ ಶೆಟ್ಟಿ ಒಡಿಯೂರು ಪಾತ್ರ ವಹಿಸಿದರು.
