ಬಂಟ್ವಾಳ : ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ‘ಭಾವಾಭಿವ್ಯಕ್ತಿ’ ಭರತನಾಟ್ಯ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ದಿನಾಂಕ 28 ನವೆಂಬರ್ 2025ರಂದು ಆರಂಭಗೊಂಡಿದ್ದು, ಖ್ಯಾತ ನೃತ್ಯ ಗುರುಗಳಾದ ವಿದುಷಿ ಶೀಲ ಚಂದ್ರಶೇಖರ್ ಹಾಗೂ ದೀಪ್ತಿ ರಾಧಾಕೃಷ್ಣ ಇವರ ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ಧಗೊಳಿಸಿತು.




ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕಿ ಮತ್ತು ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕಿ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯ ಹಾಗೂ ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಸಂಶೋಧಕಿ ಮತ್ತು ಉಪನ್ಯಾಸಕಿ ದೀಪ್ತಿ ರಾಧಾಕೃಷ್ಣ ಇವರಿಂದ ಭರತನಾಟ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನ ಇಬ್ಬರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ ಪಟುಗಳ ನಾಟ್ಯ, ಆಂಗಿಕ ಚಲನೆ, ಭಾವಾಭಿನಯ ಕಲಾನಿಕೇತನದ ವಿದ್ಯಾರ್ಥಿಗಳು ಕಣ್ಣು ಮಿಟುಕಿಸದೆ ನೋಡುವಂತೆ ಮಾಡಿತು. ಬಸವಣ್ಣನ ವಚನ, ಮಮತೆಯ ಸುಳಿ ಮಂಥರೆ, ಶ್ರೀ ಕೃಷ್ಣ ಅರ್ಜುನ ಸಂವಾದ – ವಿಶ್ವರೂಪ ದರ್ಶನ ಮತ್ತಿತರ ರೂಪಕವನ್ನು ಭರತನಾಟ್ಯದಲ್ಲಿ ಇಬ್ಬರೂ ಕಲಾವಿದರೂ ಮನೋಜ್ಞಾವಾಗಿ ಪ್ರಸ್ತುತ ಪಡಿಸಿದರು. ನೃತ್ಯ ಗುರುಗಳಾದ ವಿದ್ವಾನ್ ಚಂದ್ರಶೇಖರ್ ನಾವಡ ಹಾಗೂ ವಿದುಷಿ ರಾಜಶ್ರೀ ಉಳ್ಳಾಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆ ನಿರ್ದೇಶಕಿ ವಿದ್ಯಾಮನೋಜ್, ನೃತ್ಯ ಗುರುಗಳು, ಪೋಷಕರು ಉಪಸ್ಥಿತರಿದ್ದರು.


