31 ಜನವರಿ 2023, ಉಡುಪಿ: ಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸಿದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರವು ಜೋಯ್ ಆಲುಕ್ಕಾಸ್ ಜ್ಯುವೆಲ್ಲರಿಯ ಹಿಂಭಾಗದಲ್ಲಿರುವ 10.03.28, ಬಡಗು ಪೇಟೆಯಲ್ಲಿ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕರಾಗಿರು ಡಾ. ನಿರಂಜನ್ ಯು.ಸಿ. ಇವರಿಂದ ಉದ್ಘಾಟನೆಗೊಂಡಿತು. ಇಂತಹಾ ದೇಶೀಯ ಕಲೆಗಳ ಉಳಿವು ಮತ್ತು ಅವುಗಳ ಬಗೆಗಿನ ಪ್ರಚಾರ ಪ್ರದರ್ಶನಗಳು ಬಹಳಷ್ಟು ನಡೆಯಬೇಕಿದೆಯಲ್ಲದೇ ಬಡುಗುಪೇಟೆಯ ಮನೆಯೊಂದರಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರ ಮತ್ತು ಪ್ರದರ್ಶನಗಳು ನಮ್ಮ ಕರಾವಳಿಯ ದೇಶೀಯ ಸೊಗಡನ್ನು ಪ್ರದರ್ಶಿಸುತ್ತದೆ ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾದ ಆರ್ಟಿಸ್‌ಟ್ ಫೋರಂ ಅಧ್ಯಕ್ಷ ಹಿರಿಯ ಕಲಾವಿದರಾದ ರಮೇಶ್ ರಾವ್‌ರವರು ಯಾವುದೇ ಅಕಾಡೆಮಿ ಮಾಡಿ ತೋರಿಸದ ಕಾರ್ಯಗಳನ್ನು ಇಂದಿಲ್ಲಿ ಖಾಸಗಿಯಾಗಿ ಪ್ರತಿಷ್ಠಾನವು ಮಾಡುತ್ತಿದೆ. ಕಲೆ ಮತ್ತು ಕಲಾವಿದರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಈ ಕಾರ್ಯಾಗಾರಗಳು ಪರಿಣಾಮಕಾರಿಯಾಗಿದೆಯಲ್ಲದೇ ಸಮಕಾಲೀನ ಕಲಾಕಾರರು ಹಾಗೂ ಜನಪದೀಯ ಕಲಾಕಾರರ ನಡುವಿನ ಕೊಡುಕೊಳ್ಳುವಿಕೆಯ ಬಗೆಗೆ ಇಲ್ಲಿ ಚಿಂತಿಸಲ್ಪಡುತ್ತಿರುವುದು ಬಹು ಮಹತ್ವಪೂರ್ಣವಾದ ವಿಚಾರವೆಂಬುದಾಗಿ ಅಭಿಪ್ರಾಯವಿತ್ತರು.ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ನಾಟಕ ನಿರ್ದೇಶಕ ರವಿರಾಜ್ ಹೆಚ್.ಪಿ. ಹಾಗೂ ಭಾವನಾ ಪ್ರತಿಷ್ಠಾನದ ನಿರ್ದೇಶಕರಾಗಿರು ಯಕ್ಷಗುರು ಹಾವಂಜೆ ಮಂಜುನಾಥ ರಾವ್, ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈ ಉಪಸ್ಥಿತರಿದ್ದರು. ಹಾವಂಜೆಯಂತಹ ಗ್ರಾಮೀಣ ಭಾಗದಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಬೆಳೆಸುತಿರುವ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಹೊಸ್ತಿಲಲ್ಲಿ ಈ ಕಾರ್ಯಾಗಾರಗಳನ್ನು ಆಯೋಜಿಸಲಾಗಿದ್ದು, ಭಾರತದ ತುಂಬೆಲ್ಲ ಹರಡಿಕೊಂಡಿರುವ ನಾನಾ ವಿಧದ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವುದರ ಮೂಲಕ ಕಲಾಸಕ್ತರನ್ನು ರಚಿಸುವಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕಲಾಪ್ರದರ್ಶನ ಹಾಗೂ ಮಾರಾಟಗಳಿಂದ ಅಳಿವಿನಂಚಿನಲ್ಲಿರುವ ದೇಶೀಯ ಕಲೆಗಳ ಪ್ರಚಾರ ಮತ್ತು ಪ್ರೋತ್ಸಾಹದ ಉದ್ದೇಶವಿಟ್ಟುಕೊಂಡು ಈ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದರು. ಬಿಹಾರದ ಮಧುಬನಿ, ಮಹಾರಾಷ್ಟ್ರದ ವಾರ್ಲಿ ಕಲೆ, ಟಿಬೆಟ್‌ನ ಟಂಕಾ ಚಿತ್ರಕಲೆ, ಮೈಸೂರು ಹಾಗೂ ತಂಜಾವೂರು ಚಿತ್ರಕಲೆ, ಒರಿಸ್ಸಾ ಪಟಚಿತ್ರ, ಮಧ್ಯ ಪ್ರದೇಶದ ಗೋಂದ್ ಗಿರಿಜನರ ಕಲೆ ಹಾಗೂ ಪ್ರಾಂತೀಯ ಕಾವಿ ಭಿತ್ತಿಚಿತ್ರ ಕಲೆಗಳೇ ಮುಂತಾಗಿ ಸುಮಾರು ಹದಿನೈದಕ್ಕೂ ಮಿಕ್ಕಿದ ಕಲಾಪ್ರಕಾರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತಲ್ಲದೇ ಕಲಾಪ್ರದರ್ಶನದ ಉದ್ಘಾಟನೆಯ ನಂತರ ಉತ್ತರ ಕನ್ನಡ ಜಿಲ್ಲೆಯ ಹಸೆ ಚಿತ್ತಾರ ಜನಪದ ಕಲೆಯ ಕಾರ್ಯಾಗಾರವನ್ನು ಸಾಗರದ ಭಾಗೀರಥಿಯಮ್ಮ ಹಾಗೂ ಸುಶೀಲಮ್ಮ ನಡೆಸಿಕೊಟ್ಟು, ಹಸೆ ಚಿತ್ರಗಳ ಪಾರಂಪರಿ ರಚನಾಕ್ರಮ, ತಾಂತ್ರಿಕತೆಗಳನ್ನೆಲ್ಲ ಕಲಿಸಿಕೊಟ್ಟರು. ಸುಮಾರು ಮೂವತ್ತಕ್ಕೂ ಮಿಕ್ಕಿದ ಅಭ್ಯರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡಕೊಂಡರಲ್ಲದೇ ತಾವೂ ಒಂದೊಂದು ಹಸೆ ಚಿತ್ರಗಳನ್ನುಕೆಮ್ಮಣ್ಣಿನ ಮೇಲೆ ರಚಿಸಿದರು. ಭಾವನಾ ಪ್ರತಿಷ್ಠಾನ ಹಾಗೂ ಭಾಸ ಗ್ಯಾಲರಿಯು ಪ್ರತಿ ತಿಂಗಳಿಗೊಂದರಂತೆ ಈ ತೆರನಾದ ಕಾರ್ಯಾಗಾ ರಗಳನ್ನು ಉಡುಪಿಯಲ್ಲಿ ಹಮ್ಮಿಕೊಳ್ಳುತ್ತದೆಂಬುದಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ತಿಳಿಸಿದರು.