ಧಾರವಾಡ : ಗುರುಗಳ ಅನ್ವೇಷಣೆಗಾಗಿ ಮನೆ ಬಿಟ್ಟು ಉತ್ತರ ಭಾರತದಾದ್ಯಂತ ಸಂಚರಿಸಿ, ಅಲ್ಲಿ ವಿವಿಧ ಸಂಗೀತಗಾರರ ಸೇವೆಗೈದು ಪಂ. ವಿನಾಯಕರಾವ್ ಪಟವರ್ಧನರಿಂದ ದೊರೆತ ಸಲಹೆಯ ಮೇರೆಗೆ ಕುಂದಗೋಳದ ಸವಾಯಿ ಗಂಧರ್ವರ ಕಠೋರ ಶಿಷ್ಯತ್ವ ಸ್ವೀಕರಿಸಿ, ‘ಭೀಮಸೇನಿ ಗಾಯಕಿ’ಯಿಂದ ಸಂಗೀತ ಲೋಕದ ಧ್ರುವತಾರೆಯಾಗಿ ರಾರಾಜಿಸುತ್ತಿರುವವರು ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಇವರ ಸಂಸ್ಮರಣೆಯಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಅನೇಕ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ‘ಭೀಮಣ್ಣ’ನವರ ಜನ್ಮದಿನ ಹಾಗೂ ಪುಣ್ಯತಿಥಿ ಅಂಗವಾಗಿ ಸಂಗೀತೋತ್ಸವಗಳನ್ನು ಆಯೋಜಿಸಿದೆ.
ಭೀಮಪಲಾಸ ಸಂಗೀತೋತ್ಸವದ ಸರಣಿ ಕಾರ್ಯಕ್ರಮದ ಮುಂದಿನ ಭಾಗವಾಗಿ ಈಗ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಪಂಡಿತ್ ಭೀಮಸೇನ ಜೋಶಿಯವರ 104ನೇ ಜನ್ಮದಿನದ ಅಂಗವಾಗಿ ದಿನಾಂಕ 04 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ಸ್ವರ ಝಂಕಾರ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಗಾಯನ-ವಾದನಗಳ ನಿನಾದ ಹರಿದುಬರಲಿದೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕ್ಷಮತಾ ಸಂಸ್ಥೆ ಹಾಗೂ ಪುಣೆಯ ವಯೋಲಿನ್ ಅಕಾಡೆಮಿ ಕೈಜೋಡಿಸಿವೆ.
ಜೈಪುರ-ಅತ್ರೌಲಿ ಘರಾಣೆಯ ಪುಣೆಯ ವಿದುಷಿ ಸಾನಿಯಾ ಪಾಟಣಕರ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಪಂಡಿತ್ ತೇಜಸ್ ಉಪಾಧ್ಯೆ ಇವರಿಂದ ವಯೋಲಿನ್ ವಾದನದ ಝೇಂಕಾರ ಮೊಳಗಲಿದೆ. ನಂತರ ಕಿರಾನಾ ಘರಾಣೆಯ ಪಂಡಿತ್ ಆನಂದ ಭಾಟೆ ಇವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ. ಸಹಕಲಾವಿದರಾಗಿ ತಬಲಾದಲ್ಲಿ ಪುಣೆಯ ಪಂಡಿತ್ ಭರತ್ ಕಾಮತ್ ಮತ್ತು ಅನುರಾಗ ಆಲೂರಕರ ಹಾಗೂ ಹಾರ್ಮೋನಿಯಂದಲ್ಲಿ ಪಂಡಿತ್ ಸುಯೋಗ ಕುಂಡಾಲ್ಕರ ಪಾಲ್ಗೊಳ್ಳಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಸಂಘಟಕ ಸಮೀರ ಜೋಶಿ ತಿಳಿಸಿದ್ದಾರೆ.

ವಿದುಷಿ ಸಾನಿಯಾ ಪಾಟಣಕರ ಪುಣೆ (ಗಾಯನ) : ಮೂಲತಃ ಪುಣೆಯವರಾದ ಸಾನಿಯಾ ಪಾಟಣಕರ ಅವರು ಜೈಪುರ-ಅತ್ರೌಲಿ ಘರಾಣೆಯ ಗಾಯಕಿ. ವಿದುಷಿ ಅಶ್ವಿನಿ ದೇಶಪಾಂಡೆ ಅವರಲ್ಲಿ 14 ವರ್ಷಗಳ ಸುದೀರ್ಘ ಸಂಗೀತ ಮಾರ್ಗದರ್ಶನ ಪಡೆದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ಪಂಡಿತ್ ಅರವಿಂದ ಥಟ್ಟೆ ಹಾಗೂ ಡಾ. ಮಿಲಿಂದ ಮಾಲಶೆ ಅವರಲ್ಲಿ ಸಂಗೀತಶಾಸ್ತ್ರದ ಮಾರ್ಗದರ್ಶನ ಪಡೆದ ಸಾನಿಯಾ, ಪಂಡಿತ್ ವಸಂತರಾವ್ ರಾಜೂರಕರ ಇವರಿಂದ ಟಪ್ಪಾ ಗಾಯನ ವಿಶೇಷ ಶೈಲಿಯಲ್ಲಿ ಪರಿಣತಿ ಸಾಧಿಸಿದ್ದಾರೆ. ಆಕಾಶವಾಣಿಯ ಎ ಶ್ರೇಣಿಯ ಗಾಯಕಿಯಾಗಿರುವ ಸಾನಿಯಾ ಅವರು ಪಂಡಿತ್ ಡಿ.ವಿ. ಪಲುಸ್ಕರ ಪುರಸ್ಕಾರ, ಸುರಮಣಿ, ಕಲಾಗೌರವ್ ಪ್ರಶಸ್ತಿ, ಸ್ವರವಿಲಾಸ ಪುರಸ್ಕಾರ, ಪಂಡಿತ್ ರಾಮಕೃಷ್ಣಬುವಾ ವಝೆ ಪ್ರಶಸ್ತಿ, ಬಾಲಗಂಧರ್ವ ಪುರಸ್ಕಾರ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ ಯುವ ಪುರಸ್ಕಾರ ಹೀಗೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ತೇಜಸ್ ಉಪಾಧ್ಯೆ ಪುಣೆ (ವಯೋಲಿನ್) : ಮೂಲತಃ ಪುಣೆಯವರಾದ ತೇಜಸ್ ಉಪಾಧ್ಯೆ ಇವರು ವಯೋಲಿನ್ ವಾದನದ ಭರವಸೆಯ ಪ್ರತಿಭೆ. 70 ವರ್ಷಗಳ ಇತಿಹಾಸವಿರುವ ವಯೋಲಿನ್ ವಾದನಕಾರರ ಹಿನ್ನೆಲೆಯುಳ್ಳ ತೇಜಸ್ ಅವರು ವಯೋಲಿನ್ ಕಲಿಕೆಯೊಂದಿಗೆ ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ತಮ್ಮ 9ನೇ ವಯಸ್ಸಿಗೆ ವೇದಿಕೆ ಕಾರ್ಯಕ್ರಮ ನೀಡಿದ ತೇಜಸ್ ಅತ್ಯಂತ ಕಡಿಮೆ ಅವಧಿಯಲ್ಲಿ ವಯೋಲಿನ್ ವಾದನದಲ್ಲಿ ಪ್ರಬುದ್ಧತೆಯನ್ನು ಸಾಧಿಸಿದ್ದಾರೆ. ವಿವಿಧ ಪ್ರಶಸ್ತಿಗಳು ಹಾಗೂ ಶಿಷ್ಯವೇತನಗಳಿ ಭಾಜನರಾಗಿರುವ ತೇಜಸ್ ಸ್ವರಝಂಕಾರ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲದೆ ಇಂಗ್ಲೆಂಡ್, ಜರ್ಮನಿ, ಸ್ವಿಝರಲೆಂಡ್, ಫ್ರಾನ್ಸ್ಗಳಲ್ಲಿ ವಯೋಲಿನ್ ವಾದನ ಝೇಂಕಾರವನ್ನು ಹರಿಸಿದ್ದಾರೆ.
ಪಂಡಿತ್ ಆನಂದ ಭಾಟೆ ಪುಣೆ (ಗಾಯನ) : 1971ರಲ್ಲಿ ಜನಿಸಿದ ಕಿರಾನಾ ಘರಾಣೆಯ ಪ್ರತಿಭಾನ್ವಿತ ಗಾಯಕರಲ್ಲಿ ಪುಣೆಯ ಆನಂದ ಭಾಟೆ ಅವರೂ ಒಬ್ಬರು. ಭಾಟೆ ಅವರದು ಸಂಗೀತ ಹಾಗೂ ಮರಾಠಿ ರಂಗಮಂಚದ ಹಿನ್ನೆಲೆಯುಳ್ಳ ಮನೆತನ. ಮುತ್ತಜ್ಜ ಭಾಟೆ ಬುವಾ ಅವರು ನಾಟ್ಯಸಂಗೀತ ಹಾಗೂ ಠುಮರಿ ಗಾಯಕಿ ಪ್ರವೀಣರು. ಹೀಗಾಗಿ ಸಹಜವಾಗಿ ಆನಂದ ಭಾಟೆ ಅವರಿಗೆ ಸಂಗೀತದತ್ತ ಒಲವು ಮೂಡಿತು. ಚಂದ್ರಶೇಖರ ದೇಶಪಾಂಡೆ ಅವರಲ್ಲಿ ನಾಟ್ಯಸಂಗೀತದ ಮಾರ್ಗದರ್ಶನ ಪಡೆದುಕೊಂಡರು. ಫಲವಾಗಿ ಅತೀ ಕಡಿಮೆ ಸಮಯದಲ್ಲಿ ಬಾಲಗಂಧರ್ವರ ಗಾಯಕಿ ಶೈಲಿಯಲ್ಲಿ ಸಾರ್ವಜನಿಕ ಮಂಚ ಪ್ರದರ್ಶನ ನೀಡಿ ಆನಂದ ಗಂಧರ್ವ ಎಂಬ ಬಿರುದು ಪಡೆದ ಪ್ರತಿಭೆ. ಪಂಡಿತ್ ಯಶವಂತರಾವ್ ಮರಾಠೆಯವರಿಂದ ಖ್ಯಾಲ್ ಗಾಯಕಿಯ ಮಾರ್ಗದರ್ಶನ ಪ್ರತಿಫಲವಾಗಿ ಉದಯೋನ್ಮುಖ ಗಾಯಕರಾಗಿ ಹೊರಹೊಮ್ಮಿದರು. 1988ರಲ್ಲಿ ಸಂಗೀತ ದಿಗ್ಗಜ, ಸ್ವರ ಭಾಸ್ಕರ ಪಂಡಿತ್ ಭೀಮಸೇನ ಜೋಶಿ ಇವರಿಂದ ದೊರೆತ ಮಾರ್ಗದರ್ಶನದಿಂದ ಕಿರಾನಾ ಗಾಯಕಿಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆಯ ಖ್ಯಾಲ್ ಹಾಗೂ ಅತ್ಯುತ್ತಮ ಠುಮರಿ-ನಾಟ್ಯಸಂಗೀತದ ಗಾಯಕರೆಂಬ ಹೆಗ್ಗಳಿಕೆ ಪಡೆದರು. ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಆನಂದ ಭಾಟೆ ಅವರು ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸ್ವರಯೋಗಿನಿ ಡಾ. ಪ್ರಭಾ ಅತ್ರೆ ಪುರಸ್ಕಾರ, ಪಂಡಿತ್ ರಾಮಬುವಾ ವಝೆ ಯುವ ಪುರಸ್ಕಾರ, ಮಾಣಿಕ ವರ್ಮಾ ಪುರಸ್ಕಾರ, ಕಲಾಗೌರವ ಪುರಸ್ಕಾರ ಬಾಲಗಂಧರ್ವ ಗುಣಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಅಮೇರಿಕ, ಕೆನಡಾ ಮುಂತಾದ ದೇಶಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
