ಮಂಗಳೂರು : ಮಂಗಳೂರಿನ ಭ್ರಾಮರೀ ಯಕ್ಷಮಿತ್ರರು ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾದ ಎಂಟನೇ ವರ್ಷದ ಭ್ರಾಮರಿ ಯಕ್ಷವೈಭವ ಕಾರ್ಯಕ್ರಮ ದಿನಾಂಕ 01 ಆಗಸ್ಟ್ 2025ರ ಶನಿವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ “ಸಾಮಾಜಿಕ ಜಾಲತಾಣವನ್ನು ಕೂಡ ಸಮಾಜದ ಶ್ರೇಯಸ್ಸಿಗೆ, ಕಲಾಕ್ಷೇತ್ರದ ಪ್ರೋತ್ಸಾಹಕ್ಕೂ ವಿನಿಯೋಗಿಸಲು ಬಹಳಷ್ಟು ಅವಕಾಶವಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್‌ನಿಂದ ಆರಂಭವಾದ ಭ್ರಾಮರೀ ಯಕ್ಷಮಿತ್ರರು ಬಳಗ ಈಗ ಟ್ರಸ್ಟ್ ಮೂಲಕ ಪ್ರತೀ ವರ್ಷ ಮಳೆಗಾಲದ ಕಾಲದಲ್ಲಿ ರಾತ್ರಿ ಇಡೀ ಯಕ್ಷಗಾನ ಪ್ರದರ್ಶಿಸುವ ಕಾರ್ಯಯೋಜನೆ ಹಾಕಿಕೊಳ್ಳುವುದು ಅಭಿನಂದನೀಯ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ಮಾತನಾಡಿ “ವಾಟ್ಸಾಪ್ ಗ್ರೂಪ್‌ನಿಂದ ಆರಂಭವಾದ ಭ್ರಾಮರೀ ಯಕ್ಷಮಿತ್ರರು ಈಗ ಟ್ರಸ್ಟ್ ಮುಖೇನ ಯಕ್ಷಗಾನದ ಬಗ್ಗೆ ಸರ್ವರಿಗೂ ಆಸಕ್ತಿ ಮೂಡಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ” ಎಂದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷರಾದ ಭಾಸ್ಕರ್ ರೈ ಕುಕ್ಕುವಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಇದರ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಸಾನಿಧ್ಯ ಎಂಟರ್‌ಪ್ರೈಸಸ್ ಇದರ ಆಡಳಿತ ನಿರ್ದೇಶಕರಾದ ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಹಿಮ್ಮೇಳ ಕಲಾವಿದ ಪೆರುವಾಯಿ ನಾರಾಯಣ ಭಟ್ ಇವರಿಗೆ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’, ನೇಪಥ್ಯ ಕಲಾವಿದ ವಸಂತ ವಾಮದಪದವು ಹಾಗೂ ಯಕ್ಷಸಂಗಮ ಮೂಡುಬಿದಿರೆ ಸಂಸ್ಥೆಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಟ್ರಸ್ಟ್ ನ ಪ್ರಮುಖರಾದ ಸತೀಶ್ ಮಂಜೇಶ್ವರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಗುರುರಾಜ್ ಹೊಳ್ಳ ಬಾಯಾರು, ಉಮೇಶ್ ಶೆಟ್ಟಿ ಹಾಗೂ ಎನ್. ಕೃಷ್ಣ ಮರ್ಕಮೆ ಸಮ್ಮಾನ ಪತ್ರವನ್ನು ವಾಚಿಸಿ, ಲಕ್ಷ್ಮೀ ಮಚ್ಚಿನ ನಿರೂಪಿಸಿ ವಿನಯಕೃಷ್ಣ ಕುರ್ನಾಡು ವಂದಿಸಿದರು.

