ಮಂಗಳೂರು : ಕರಾವಳಿಯ ಶ್ರೀಮಂತ ಜಾನಪದ ಸಂಸ್ಕೃತಿಗೆ ವೈಚಾರಿಕ ಆಯಾಮ ನೀಡುವ ಮಹತ್ವದ ಸಂಶೋಧನಾ ಕೃತಿಯಾದ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿಯ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ದಿನಾಂಕ 20 ಡಿಸೆಂಬರ್ 2025ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನು ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರು ಅನಾವರಣಗೊಳಿಸಿ ಮಾತನಾಡಿ, “ಭೂತಾರಾಧನೆ ಕೇವಲ ಆಚರಣೆಯಲ್ಲ. ಅದು ಸಮುದಾಯದ ಸ್ಮೃತಿ, ನಂಬಿಕೆ ಮತ್ತು ಬದುಕಿನ ದರ್ಶನ. ಡಾ. ಕೆ. ಚಿನ್ನಪ್ಪ ಗೌಡರ ಈ ಕೃತಿ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.” ಎಂದು ಅಭಿಪ್ರಾಯಪಟ್ಟರು.
ಕೃತಿ ಅವಲೋಕನವನ್ನು ಡಾ. ರಾಜಶೇಖರ್ ಹಳೆಮನೆ ಇವರು ನಡೆಸಿ, “ಭೂತಾರಾಧನೆಯ ಆಚರಣೆ, ನುಡಿ, ನಡೆ ಮತ್ತು ಸಮಾಜದ ಒಳಹೊಮ್ಮುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸುವ ಗಂಭೀರ ಸಂಶೋಧನಾ ಕೃತಿಯಿದು” ಎಂದು ಪ್ರಶಂಸಿಸಿದರು.

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ ಆರ್. ಮಾತನಾಡಿ, “ಭೂತಾರಾಧನೆ ಕುರಿತ ಸಂಶೋಧನೆಗಳು ಕನ್ನಡ ಸಂಸ್ಕೃತಿಯ ಬೇರುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ” ಎಂದರು.

ಲೇಖಕರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ, “ಈ ಕೃತಿ ಕ್ಷೇತ್ರ ಅಧ್ಯಯನ, ಅನುಭವ ಮತ್ತು ಸಂಶೋಧನೆಯ ಫಲವಾಗಿದ್ದು, ಭೂತಾರಾಧನೆಯ ಒಳಾರ್ಥವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ಹೊಂದಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್.ಎಲ್. ಇವರು “ಜಾನಪದ ಸಂಸ್ಕೃತಿ ಕೇವಲ ಆಚರಣೆಯಲ್ಲ, ಅದು ಸಮುದಾಯದ ಬದುಕಿನ ಜ್ಞಾನಭಂಡಾರ. ಇಂತಹ ಸಂಶೋಧನಾ ಕೃತಿಗಳು ಆ ಜ್ಞಾನವನ್ನು ಸಮಾಜದ ಮುಂದೆ ತರುವ ಮಹತ್ವದ ಕೆಲಸ ಮಾಡುತ್ತವೆ. ಕ್ರಿಯೇಟಿವ್ ಪುಸ್ತಕ ಮನೆ ಇಂತಹ ಮೌಲ್ಯಯುತ ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಖ್ಯಾತ ದೈವ ನರ್ತಕರಾದ ಶ್ರೀ ಶೇಖರ ಪರವ ಕಾಪುಮಜಲು ಇವರಿಗೆ ಗೌರವ ಸನ್ಮಾನ ಮಾಡಲಾಯಿತು. ಜಾನಪದ ವಿದ್ವಾಂಸ ಡಾ. ಅಶೋಕ ಆಳ್ವರವರು ಸನ್ಮಾನಪತ್ರ ವಾಚಿಸಿದರು. ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಅತಿಥಿ ಅಭ್ಯಾಗತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕರಾವಳಿ ಲೇಖಕಿಯರ – ವಾಚಕಿಯರ ಸಂಘ, ಗಿಳಿವಿಂಡು (ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ) ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಮಂಗಳೂರು ಕಾರ್ಯಕ್ರಮಕ್ಕೆ ಸಹಕಾರ ನೀಡಿದವು. ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಆಸಕ್ತರಿಂದ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉಪನ್ಯಾಸಕರಾದ ಡಾ. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಪ್ರಿಯಾಂಕ ಸ್ವಾಗತಿಸಿ, ಡಾ. ಮಹಾಲಿಂಗ ಭಟ್ ಕೆ. ವಂದಿಸಿದರು.

