ಮಂಗಳೂರು : ಬಾಬು ಶಿವ ಪೂಜಾರಿ ಪ್ರಧಾನ ಸಂಪಾದಕತ್ವದಲ್ಲಿ ಮುಂಬೈನ ಗುರುತು ಪ್ರಕಾಶನವು ಪ್ರಕಟಿಸಿರುವ ‘ಬಿಲ್ಲವರ ಗುತ್ತು’ ಸಂಶೋಧನಾ ಕೃತಿಯನ್ನು ಸಮುದಾಯದ ಮುಖಂಡ ಮಾಜಿ ಕೇಂದ್ರ ವಿತ್ತ ಸಚಿವರಾದ ಶ್ರೀ ಬಿ.ಜನಾರ್ದನ ಪೂಜಾರಿ ಅವರು ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 27-08-2023ರಂದು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ “ಬಿಲ್ಲವರ ಹಿರಿಮೆಯನ್ನು ತಿಳಿಸುವ ಇನ್ನಷ್ಟು ಕೃತಿಗಳು ಪ್ರಕಟವಾಗಬೇಕಿದೆ. ಬಾಬು ಶಿವ ಪೂಜಾರಿ ಅವರ ಅಪ್ರಕಟಿತ ಕೃತಿಗಳ ಪ್ರಕಟಣೆಗೆ ಬೆಂಬಲ ನೀಡುತ್ತೇನೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಗ್ರಂಥದ ಅಧ್ಯಯನ ತಂಡದ ಪ್ರಮುಖರಾದ ಶ್ರೀಮತಿ ಬಿ.ಎಂ. ರೋಹಿಣಿ “ಬಿಲ್ಲವರ ಗುತ್ತು ಮನೆತನಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಬಿಲ್ಲವ ಮಹಿಳೆಯರು ಯುದ್ಧದಲ್ಲಿ ಭಾಗವಹಿಸಿದ ಹಾಗೂ ದೈವ ಪಾತ್ರಿಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳಿವೆ. ಸೂಲಗಿತ್ತಿ ಕೆಲಸದಲ್ಲೂ ಮುಂಚೂಣಿಯಲ್ಲಿದ್ದರು. ನಮ್ಮ ಸಮಾಜದ ದಾಖಲೆ ನಾವೇ ಮಾಡಬೇಕು. ಶಿವ ಪೂಜಾರಿಯವರ ಈ ಅಧ್ಯಯನ ಯುವ ಸಮಾಜ ಮುಂದುವರಿಸಬೇಕು” ಎಂದರು.
“ಬಿಲ್ಲವರು ಮೂಲತಃ ಯೋಧ ವಂಶದವರು ಮಾತ್ರವಲ್ಲದೆ, ಬೈದ್ಯರೂ ಆಗಿದ್ದಾರೆ. ಈ ಕುರಿತು ಅಶೋಕನ ಶಾಸನದಲ್ಲೂ ಉಲ್ಲೇಖವಿದೆ. ಇದರ ಜತೆಗೆ ಸಾಕಷ್ಟು ಇತರ ಉಲ್ಲೇಖಗಳೂ ಇದೆ. ಇದೇ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟಿ ಚೆನ್ನಯ್ಯ ಅವರ ಹೆಸರಿನಲ್ಲಿ ಸೈನಿಕ ಶಾಲೆಯನ್ನು ನಿರ್ಮಾಣ ಮಾಡುವ ಅಗತ್ಯವಿದೆ. ಜಾತಿ ಹಾಗೂ ವೃತ್ತಿಗೆ ನಿಕಟವಾದ ಸಂಬಂಧವಿದ್ದು, ಈ ನಿಟ್ಟಿನಲ್ಲಿ ಬಿಲ್ಲವ ಸಮಾಜದ ಕುರಿತು ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿದೆ” ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಲೇಖಕ ಬಾಬು ಶಿವ ಪೂಜಾರಿ ಬಿಲ್ಲವರ ಗುತ್ತು ಬರ್ಕೆ ಮನೆಗಳ ಸಂಶೋಧನಾ ಗ್ರಂಥದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ “ಬರ್ಕೆ ಮನೆಗಳು ನಮ್ಮ ಸಮಾಜದ ಗೌರವದ ಸಂಕೇತ. ಅವುಗಳ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕಾಗಿದೆ. ವಿಜಯನಗರದ ತುಳು ಅರಸ ಕೃಷ್ಣದೇವರಾಯರಿಗೂ ಬಿಲ್ಲವರಿಗೂ ಸಾಮ್ಯತೆ ಇದೆ. ಆಲೂಪರಿಗೂ ಬಿಲ್ಲವರಿಗೂ ಸಾಮ್ಯತೆ ಇದೆ. ಬಿಲ್ಲವರು ಆಡಳಿತ ನಡೆಸಿದ್ದಾರೆ. ಬಿಲ್ಲವರ ಕುಲಕಸುಬು ಮೂರ್ತೆದಾರಿಕೆಯಲ್ಲ ಬೇಸಾಯ. ಈ ಬಗ್ಗೆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ” ಎಂದರು.
ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್. ಸಾಯಿರಾಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ, ಶ್ರೀ ಗಣೇಶ್ ಅಮೀನ್ ಸಂಕಮಾರ್, ಶ್ರೀ ಎಂ. ವೇದ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಶೋಧನಾ ತಂಡದಲ್ಲಿದ್ದ ದಿ. ತಮ್ಮಯ್ಯರ ಪತ್ನಿ ಇಂದುಮತಿ ತಮ್ಮಯ್ಯ ಹಾಗೂ ಬಾಬು ಶಿವ ಪೂಜಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ ಬಲ್ಯೋಟ್ಟು ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಉಮಾನಾಥ ಎ. ಕೋಟ್ಯಾನ್, ಖಜಾಂಚಿ ಆರ್. ಪದ್ಮರಾಜ್, ಇಂದುಮತಿ, ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್, ರಮಾನಾಥ ಕೊಟ್ಯಾನ್, ಗಡಿ ಪ್ರಧಾನರಾದ ಗೋಪಾಲ ಬಂಗೇರ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷರಾದ ಶ್ರೀ ಪೀತಾಂಬರ ಹೆರಾಜೆ, ಬ್ರಹ್ಮಾವರ ಬಿಲ್ಲವ ಸಂಘ ಅಧ್ಯಕ್ಷರಾದ ಶ್ರೀ ಬಿ.ಎನ್. ಶಂಕರ ಪೂಜಾರಿ, ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷರಾದ ಪ್ರೊ. ಎಂ. ಶಶಿಧರ ಕೋಟ್ಯಾನ್, ಯುವ ವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿ, ರಾಜೇಶ್ ಬಿ., ಕೊಕ್ಕರ್ಣೆ ಬಿಲ್ಲವ ಸಂಘ ಅಧ್ಯಕ್ಷರಾದ ಶ್ರೀ ಬೇಬಿ ಪೂಜಾರಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್, ಸಂಕೇತ ಪೂಜಾರಿ, ವೆಂಕಪ್ಪ ಮಾಸ್ಟರ್, ರಮಾನಾಥ ಕೋಟೆಕಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಮುದ್ದು ಮೂಡುಬೆಳ್ಳೆ ಸ್ವಾಗತಿಸಿ, ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿ, ಶೈಲು ಬಿರ್ವ ವಂದಿಸಿದರು.