ಮಂಗಳೂರು : ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನಲ್ಲಿ ದಿನಾಂಕ 19-10-2023ರಂದು ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹೊರತಂದ ಡಾ. ರೇಶ್ಮಾ ಉಳ್ಳಾಲ್ ಅವರ ‘ಬಿಂಬದೊಳಗೊಂದು ಬಿಂಬ’ ಸಂಶೋಧನಾ ಕೃತಿಯನ್ನು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿಯವರು ಬಿಡುಗಡೆಗೊಳಿಸಿ ಮಾತನಾಡುತ್ತಾ “ನನಗೆ ದೊರೆತ ಗೌರವ, ಸನ್ಮಾನ ನನ್ನ ಸಮುದಾಯಕ್ಕೆ ದೊರೆತಂತೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ, ಗ್ರಹಿಕೆ ದೂರವಾಗಬೇಕಾದರೆ ಇಂಥ ಕೃತಿ, ಸಿನಿಮಾಗಳು ಹೆಚ್ಚು ಬರಬೇಕು” ಎಂದು ಹೇಳಿದರು.
ಈ ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, “ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಂಘರ್ಷ, ಹೋರಾಟವನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಬೇಕಾದ ಅನಿವಾರ್ಯತೆ ಇದ್ದು, ರೇಶ್ಮಾ ಅವರ ಕೃತಿಯು ಅದಕ್ಕೆ ಪೂರಕ” ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, “ಮಂಜಮ್ಮ ಜೋಗತಿ ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಭರವಸೆ, ನಂಬಿಕೆ ಹುಟ್ಟುಹಾಕಿದ್ದಾರೆ. ತೃತೀಯ ಲಿಂಗಿಗಳ ಬದುಕಿಗೆ ನೆರವಾಗುವ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧವಿದೆ” ಎಂದರು.
ರೋಶನಿ ನಿಲಯದ ಉಪ ಪ್ರಾಂಶುಪಾಲೆ ಡಾ. ಜೆನಿಸ್ ಮೇರಿ ಬಿ., ಪಯಣ ಸಂಸ್ಥೆಯ ನಿರ್ದೇಶಕಿ ಸವಿತಾ, ರೇಷ್ಮಾ ಉಳ್ಳಾಲ್ ಮಾತನಾಡಿದರು. ಕಿಶೋರ್ ಕುಮಾರ್ ರೈ ಶೇಣಿ ನಿರೂಪಿಸಿದರು. ಹಿರಿಯ ಪತ್ರಕರ್ತ ರಾಮಕೃಷ್ಣ ಆರ್., ರಕ್ಷಿತ್ ಜಿ. ಉಳ್ಳಾಲ್, ಆರ್. ತನ್ವಿ ಉಪಸ್ಥಿತರಿದ್ದರು. ಸುಯೆಜ್ ಸಂಸ್ಥೆಯ ರಾಕೇಶ್ ಶೆಟ್ಟಿ ವಂದಿಸಿದರು.