ಬೆಂಗಳೂರು : ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಜನ್ಮ ಶತಮಾನೋತ್ಸವ ಮತ್ತು ಎನ್.ಎಸ್. ಶ್ರೀಧರ ಮೂರ್ತಿಯವರು ಬರೆದಿರುವ ವಿಜಯಭಾಸ್ಕರ್ ಜೀವನ ಮತ್ತು ಸಾಧನೆ ಕುರಿತ ʼಎಲ್ಲೆಲ್ಲು ಸಂಗೀತವೇʼ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ನೇ ಭಾನುವಾರ ಮಧ್ಯಾಹ್ನ ಘಂಟೆ 2-00 ಗಂಟೆಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಗೀತ ಸಭಾ ಪುರಂದರ ಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ ಎರಡು ಗಂಟೆಗೆ ‘ಚಿತ್ರರಂಗಕ್ಕೆ ವಿಜಯಭಾಸ್ಕರ್ ಅವರ ಕೊಡುಗೆಗಳುʼ ಎಂಬ ಮೊದಲ ಗೋಷ್ಠಿಯು ಪದ್ಮಶ್ರೀ ಡಾ. ದೊಡ್ಡ ರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನಾಡೋಜ ಡಾ. ಬಿ.ಕೆ. ಸುಮಿತ್ರ, ಎಸ್.ಆರ್. ರಾಮಕೃಷ್ಣ, ಪ್ರೊ. ಮನು ಚಕ್ರವರ್ತಿ ಹಾಗೂ ಚಿದಂಬರ ಕಾಕತ್ಕರ್, ವಿಜಯಭಾಸ್ಕರ್ ಅವರ ಕೊಡುಗೆಗಳನ್ನು ವಿಶ್ಲೇಷಿಸಲಿದ್ದಾರೆ. ‘ವಿಜಯಭಾಸ್ಕರ್ ಒಡನಾಟದ ನೆನಪುಗಳುʼ ಎಂಬ ಎರಡನೇ ಗೋಷ್ಠಿಯು ಪ್ರಣಯರಾಜ ಡಾ. ಶ್ರೀನಾಥ್ ಇವರು ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ರಾಮಕೃಷ್ಣ, ಶ್ರೀಧರ್, ಕಸ್ತೂರಿ ಶಂಕರ್, ಎಚ್.ಎಂ.ಎಂ. ಪ್ರಕಾಶ್, ವಿಜಯಭಾಸ್ಕರ್ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿ ಕೊಳ್ಳಲಿದ್ದಾರೆ.
ಡಾ. ಟಿ.ಎಸ್. ನಾಗಾಭರಣ ಇವರ ಅಧ್ಯಕ್ಷತೆಯಲ್ಲಿ ಪ್ರಧಾನ ಸಮಾರಂಭ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಎನ್.ಎಸ್. ಶ್ರೀಧರ ಮೂರ್ತಿಯವರು ಬರೆದು ವೀರಲೋಕ ಬುಕ್ಸ್ ಪ್ರಕಟಿಸಿರುವ ವಿಜಯಭಾಸ್ಕರ್ ಅವರ ಜೀವನ ಚಿತ್ರಣ ʼಎಲ್ಲೆಲ್ಲು ಸಂಗೀತವೇʼ ಕೃತಿಯನ್ನು ಲೋಪರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾದಬ್ರಹ್ಮ ಡಾ. ಹಂಸಲೇಖಾ ಹಾಗೂ ಅತಿಥಿಗಳಾಗಿ ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಮತ್ತು ಶ್ರೀ ಸಾಧು ಕೋಕಿಲ ಭಾಗವಹಿಸಲಿದ್ದಾರೆ. ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ಉಪಸ್ಥಿತರಿರುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿಜಯಭಾಸ್ಕರ್ ಇವರ ಮೊಮ್ಮಗಳಾದ ಡಾ. ಪದ್ಮ ಪ್ರಶಾಂತಿನಿಯವರಿಂದ ನೃತ್ಯ ಪ್ರದರ್ಶನ ಮತ್ತು ಸುಜಯ್ ನೇತೃತ್ವದ ಕಲಾನಮನ ತಂಡದಿಂದ ವಿಜಯಭಾಸ್ಕರ್ ಸಂಗೀತ ಸಂಯೋಜನೆಯ ಆಯ್ದ ಗೀತೆಗಳ ಗಾಯನವು ನಡೆಯಲಿದ್ದು, ಡಾ. ಹೇಮಾ ಪ್ರಸಾದ್, ನಾಗಚಂದ್ರಿಕಾ. ಭಟ್, ಭಾಗ್ಯಶ್ರೀ ಗೌಡ, ಎಚ್. ಕೆ. ರಘು, ರಾಜೀವ್ ಮೊದಲಾದ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.