ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ 112ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯವೇ ಮುಖ್ಯವೆನ್ನುವುದನ್ನು ನಾವು ಮರೆಯಬಾರದು. ಅದೇ ರೀತಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯವನ್ನು ಭದ್ರಗೊಳಿಸಿದವರು. ಹೀಗಾಗಿ ಅವರ ಸ್ಮರಣೆಗೆ ವಿಶೇಷ ಮಹತ್ವವಿದೆ. ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್ತಿಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಕೂಡ ಜಿ.ವಿ.ಯವರ ಹೆಗ್ಗಳಿಕೆ. ಜಿ.ವಿಯವರಿಗೆ ಎಲ್ಲಾ ರೀತಿಯ ಗೌರವಗಳು ಬಹಳ ವಿಳಂಬವಾಗಿಯೇ ಬಂದರೂ ಇದರ ಕುರಿತು ಎಂದಿಗೂ ಅವರು ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ ವೆಂಕಟಸುಬ್ಬಯ್ಯನವರ ಹೆಸರು ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು 1943ರಲ್ಲಿಯೇ ಡಿ.ಎಲ್. ನರಸಿಂಹಾಚಾರ್ಯರು ಪದ ಸಂಗ್ರಹದ ತರಬೇತಿಯನ್ನು ನೀಡಿ ಅವರನ್ನು ಈ ಕ್ಷೇತ್ರಕ್ಕೆ ಕರೆ ತಂದರು. ಅವರ ಗುರುಗಳಾದ ಎ.ಆರ್. ಕೃಷ್ಣಶಾಸ್ತ್ರಿಗಳು ‘ಇದು ನೀನೇ ಮಾಡ ಬೇಕಾದ ಕೆಲಸ’ ಎಂದು ಸೂಚಿಸಿದರು. ಸ್ವತ: ಜಿ.ವಿ.ಯವರೇ ರೂಪಿಸಿದ ಹದಿನಾಲ್ಕು ನಿಘಂಟುಗಳು ಇರುವಂತೆ ನಿಘಂಟು ಶಾಸ್ತ್ರದ ಪರಿಚಯ ನೀಡುವ ಎರಡು ಮುಖ್ಯ ಕೃತಿಗಳನ್ನೂ ಅವರು ರಚಿಸಿದ್ದಾರೆ. 1993ರಲ್ಲಿ ಅವರು ‘ಕನ್ನಡ ನಿಘಂಟು ಶಾಸ್ತ್ರದ ಪರಿಚಯ’ ಕೃತಿ ರಚಿಸುವುದಕ್ಕೆ ಮೊದಲು ಆ ಕ್ಷೇತ್ರದಲ್ಲಿ ಕೃತಿಗಳೇ ಇರಲಿಲ್ಲ. ಅಲ್ಲಿಂದ ಮುಂದೆ ಅದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ ಅದು ಆಚಾರ್ಯ ಕೃತಿಯಾಯಿತು. ‘ಕನ್ನಡ ನಿಘಂಟು ಪರಿವಾರ’ ನಿಘಂಟು ರಚನೆಯ ಹಿಂದಿನ ತಾತ್ವಿಕತೆಯನ್ನು ವಿವರಿಸುವಂತಹ ಕೃತಿ. ಇಲ್ಲಿನ 19 ಲೇಖನಗಳೂ ಕೂಡ ನಿಘಂಟು ರಚನೆಯ ಹಿಂದಿನ ಕುಶಲತೆಯನ್ನು ದಕ್ಷವಾಗಿ ವಿವರಿಸುತ್ತವೆ” ಎಂದು ಹೇಳಿ ಅವರ ಜೊತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಮತ್ತು ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು, ದುಬೈ ಕನ್ನಡ ಸಂಘದ ನಾಗನಾಥ್, ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.