ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ಜನ್ಮದಿನದ ಕಾರ್ಯಕ್ರಮವು ದಿನಾಂಕ 03 ಜುಲೈ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿ ಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದರು. ‘ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು ಹೇಳಿ ‘ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು. ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ `ಸಮಾನತೆಯ ಹರಿಕಾರರು. ಇವರಿಬ್ಬರದು ಅಪರೂಪದ ಗುರು-ಶಿಷ್ಯ ಜೋಡಿ ಹೀಗಾಗಿ ಇಬ್ಬರನ್ನೂ ಒಟ್ಟಾಗಿಯೇ ಸ್ಮರಿಸುವ ಪರಂಪರೆ ನಡೆದು ಬಂದಿದೆ” ಎಂದು ವಿಶ್ಲೇಷಿಸಿದರು.
“ಶಿಶುನಾಳದ ಶರೀಫರ ಗದ್ದುಗೆ ಇಂದಿಗೂ ಕೋಮು ಸೌಹಾರ್ದತೆ, ಹಿಂದೂ-ಮುಸ್ಲಿಂ ಭಾವೈಕ್ಯತೆ, ಭ್ರಾತೃತ್ವದ ಬಂಧುರತೆಗೆ ಸಾಕ್ಷಿಯಾಗಿದ್ದು, ಶರೀಫ-ಗೋವಿಂದ ಭಟ್ಟರ ಜೋಡಿ ಜಾತಿಮತಗಳ ಗಡಿ ದಾಟಿ ಸಾಧಿಸಿದ ಮಾನವತೆಯ ಎತ್ತರಕ್ಕೆ ನಿದರ್ಶನವಾಗಿದೆ. ಇಂದಿನ ಕಾಲಘಟ್ಟದಲ್ಲಿಯೂ ಈ ಅಚ್ಚರಿಯನ್ನು ನಾವು ನೋಡಬಹುದು. ಒಂದೆಡೆ ‘ಅಲ್ಲಾಹೋ ಅಕ್ಬರ್’ ಘೋಷಣೆ ಕೇಳಿ ಬಂದರೆ ಇನ್ನೊಂದೆಡೆ ‘ಹರ ಹರ ಮಹಾದೇವ್’ ಎಂಬ ಉದ್ಗಾರವನ್ನು ಕೇಳಬಹುದು. ಹಿಂದೂಗಳು ಹಣ್ಣು-ಕಾಯಿ ಅರ್ಪಿಸಿದರೆ, ಮುಸ್ಲೀಮರು ಸಕ್ಕರೆ ಅರ್ಪಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರೂ ಶಿಶುನಾಳಕ್ಕೆ ಭೇಟಿ ನೀಡಿ ಈ ಭಾವೈಕ್ಯತೆಯ ದರ್ಶನವನ್ನು ಪಡೆಯಬಹುದು. ಸಂತ ಶಿಶುನಾಳ ಶರೀಫರ ಚಿಂತನೆಗಳು ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸಂತಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ ಜೋಡಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು, ಮಾಧ್ಯಮ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ ಸೇರಿದಂತೆ ಪರಿಷತ್ತಿನ ಸಿಬ್ಬಂದಿ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.