ದೇವುಡು ನರಸಿಂಹ ಶಾಸ್ತ್ರಿಯವರು 1896 ಡಿಸೆಂಬರ್ 29 ರಂದು ಮೈಸೂರಿನಲ್ಲಿ ವೇದ ಶಾಸ್ತ್ರ ಪಾರಂಗತ ಮತ್ತು ಆಗರ್ಭ ಶ್ರೀಮಂತ ಕುಟುಂಬದಲ್ಲಿ ತಾಯಿ ಸುಬ್ಬಮ್ಮ ಮತ್ತು ತಂದೆ ಶ್ರೀ ಕೃಷ್ಣ ಶಾಸ್ತ್ರಿಯವರ ಪುತ್ರರಾಗಿ ಜನಿಸಿದರು. ದೇವುಡು ಎಂದೇ ಖ್ಯಾತರಾದ ಇವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡ ಇವರು ಆಗಲೇ ಸಂಸ್ಕೃತದ “ಅಮರ ಶಬ್ದ ಕೋಶ” ಮತ್ತು “ಶಬ್ದ ಮತ್ತು ರಘು ವಂಶ”ಗಳನ್ನು ಕಲಿತಿದ್ದರು. ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೇ ದೇವುಡು “ರಾಮಾಯಣ”, “ಮಹಾಭಾರತ”, “ಭಾಗವತ”, “ಬ್ರಹ್ಮಾಂಡ ಪುರಾಣ”ಗಳನ್ನು ಓದಿ ಮುಗಿಸಿದ್ದರು, ಮತ್ತು ಎಲ್ಲಾ ತರದ ಆಟಗಳಲ್ಲಿ ಭಾಗವಹಿಸಿ ದೇಹದಾರ್ಡ್ಯದ ಕಡೆಗೂ ಗಮನ ನೀಡಿದ್ದರು. ತಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಇವರು 1917 ರಿಂದ 1922ರವರೆಗೆ ಮೈಸೂರು ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಖ್ಯಾತ ಸಾಹಿತಿ ವಿ.ಸೀತಾರಾಮಯ್ಯ ಮತ್ತು ದೇವುಡು ಇವರು ಮೈಸೂರಿನಲ್ಲಿ ಸಹಪಾಠಿಗಳಾಗಿದ್ದು, ಇಬ್ಬರೂ ಡಾ. ರಾಧಾಕೃಷ್ಣನ್ ಇವರ ಶಿಷ್ಯರಾಗಿದ್ದರು. 1912 ರಲ್ಲಿ ತಮ್ಮ ಹದಿನಾರನೆಯ ವಯಸ್ಸಿಗೆ ಗೌರಮ್ಮ ಎಂಬುವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಮೈಸೂರಿನ ಸದ್ವಿದ್ಯಾ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿ ಬೆಂಗಳೂರಿಗೆ ಬಂದು ಆರ್ಯವೈದ್ಯ ಶಾಲೆಗೆ ಮುಖ್ಯೋಪಾಧ್ಯಾಯರಾಗಿದ್ದು ಕಾರಣಾಂತರದಿಂದ ಅದನ್ನು ಬಿಟ್ಟು ಗಾಂಧಿನಗರ ಪ್ರೌಢಶಾಲೆಯನ್ನು ಸ್ಥಾಪಿಸಿದರು.
ವಿದ್ಯಾವೈಖರಿಯ ಮತ್ತು ಆಧ್ಯಾತ್ಮದ ಬುನಾದಿಯ ಮೇಲೆ ನಿಂತ ಮಹಾ ಸಾಹಿತಿ ದೇವುಡು ಇವರು 1912 ರಲ್ಲಿಯೇ ಸಾಹಿತ್ಯ ಕೃಷಿ ಆರಂಭ ಮಾಡಿದರು. ದೇವುಡುರವರಿಗೆ ಸಾಹಿತ್ಯ ದೀಕ್ಷೆ ಕೊಟ್ಟವರು ರಾಜಕವಿ ತಿರುಮಲೆ ಶ್ರೀನಿವಾಸ ಅಯ್ಯಂಗಾರ್. ತಮ್ಮ 16ನೆಯ ವಯಸ್ಸಿನಲ್ಲಿ ಇವರು ಬರೆದ ಪ್ರಥಮ ಕೃತಿ “ಸಾಹಸವರ್ಮ” ಇದು ಪತ್ತೆದಾರಿ ಕಾದಂಬರಿ. 1920 ರಲ್ಲಿ “ಪೂರ್ವ ಮೇಘ”ಕ್ಕೆ ವಿಸ್ತೃತ ವ್ಯಾಖ್ಯಾನ ಬರೆದರು. ಸಂಸ್ಕೃತ ವಿದ್ವಾಂಸರೂ ಉತ್ತಮ ವಾಗ್ಮಿಯೂ ಆಗಿರುವ ಇವರು ಕಾದಂಬರಿ, ಕಥೆ, ನಾಟಕ, ಶಿಶು ಸಾಹಿತ್ಯ, ಅನುವಾದ ಇತ್ಯಾದಿ ಸುಮಾರು 75 ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ಅರಮನೆಯ ಗಂಧ ಮಾಲೆಗಾಗಿ ಅವರು ಅನುವಾದ ಮಾಡಿದ ಯೋಗವಾಸಿಷ್ಟವೇ 23 ಸಂಪುಟಗಳಷ್ಟಿವೆ. “ವಿಕ್ರಮೋರ್ವಶೀಯ”, “ಮೇಘ ಸಂದೇಶ” ಇವುಗಳ ಅನುವಾದ, ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಅಪೂರ್ವ ಸಂಗ್ರಹಗಳನ್ನು ನೀಡುವುದರೊಂದಿಗೆ ಗೀತೆ, ಉಪನಿಷತ್ತು, ಕಾಳಿದಾಸ, ಮತ್ತು ಕಥಾ ಸರಿತ್ಸಾಗರ ಇವುಗಳ ಅನುವಾದ ಮಾಡಿದ ಖ್ಯಾತಿ ಇವರದು. ಎಲ್ಲಾ ಸಾಹಿತ್ಯ ಪ್ರಕಾರಗಳ ಕೊರತೆಯಿದ್ದ ಸಮಯದಲ್ಲಿ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಕೈಯಾಡಿಸಿದ ಧೀಮಂತ ದೇವುಡು. “ಮಹಾಕ್ಷತ್ರಿಯ”, ” ಮಹಾ ಬ್ರಾಹ್ಮಣ” ಮತ್ತು “ಮಯೂರ” ಈ ಮೂರು ಕೃತಿಗಳು ಸಾಹಿತ್ಯ ಕ್ಷೇತ್ರದ ಮೈಲುಗಲ್ಲುಗಳು ಎಂಬುದು ವಿಮರ್ಶಕರ ಅಭಿಪ್ರಾಯ. ಇವರ ಹೆಸರನ್ನು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರಗೊಳಿಸಿದ್ದು ಮೂರು ಪೌರಾಣಿಕ ಕಾದಂಬರಿಗಳು. ಮೊದಲನೆಯದು ವಶಿಷ್ಠ ವಿಶ್ವಾಮಿತ್ರರನ್ನು ಕೇಂದ್ರವನ್ನಾಗಿರಿಸಿಕೊಂಡ “ಮಹಾ ಬ್ರಾಹ್ಮಣ” 1950 ರಲ್ಲಿ ರಚನೆ, ಎರಡನೆಯದು ನಹುಶ ಮಹಾರಾಜರನ್ನು ಕುರಿತ “ಮಹಾಕ್ಷತ್ರಿಯ” 1962ರಲ್ಲಿ, ಮೂರನೆಯದ್ದು ಯಾಜ್ಞವಲ್ಕ್ಯರನ್ನು ಕೇಂದ್ರವಾಗಿರಿಸಿಕೊಂಡ “ಮಹಾದರ್ಶನ” ಇದು 1967 ರಲ್ಲಿ. ಈ ಮೂರು ಕೃತಿಗಳು ಸಾಹಿತ್ಯ ಲೋಕದಲ್ಲಿ ಚಿರಕಾಲ ಉಳಿಯುವಂತ ಅನುಪಮ ಕೃತಿಗಳು ಮತ್ತು ಭಾರತೀಯ ಕಾದಂಬರಿ ಪ್ರಪಂಚಕ್ಕೆ ದೇವುಡು ಅವರು ನೀಡಿದ ಮಹಾ ಕಾಣಿಕೆ. “ಮಹಾಕ್ಷತ್ರಿಯ” ಕಾದಂಬರಿಗೆ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1963ರಲ್ಲಿ ದೊರೆತಿದೆ. ಈ ಕೃತಿಗಳ ಗಂಭೀರ ವಿಷಯದ ಆಯ್ಕೆಯ ಬಗ್ಗೆ ದೇವುಡು ಅವರು ‘ಮಹಾಬ್ರಾಹ್ಮಣ’ದ ಮುನ್ನುಡಿಯಲ್ಲಿ ಬಹಳ ಸ್ವಾರಸ್ಯಕರವಾದ ಮಾತುಗಳನ್ನು ಬರೆದಿದ್ದಾರೆ. “ಸಾಣೆಗೆ ಒಡ್ಡೋದು ರತ್ನವನ್ನೇ ಹೊರತು ಜಲ್ಲಿಕಲ್ಲನ್ನು ಅಲ್ಲ”. ಅವರಿಗೆ ಸರಿಯಾದ ಶಾಸ್ತ್ರ ಸಂಸ್ಕಾರ ಇದ್ದುದರಿಂದ ಮಾತ್ರ ಈ ಅಲೌಕಿಕ ಕೃತಿಗಳ ರಚನೆ ಸಾಧ್ಯವಾಯಿತು ಎಂಬುದು ಇಲ್ಲಿ ಕಂಡು ಬರುತ್ತದೆ. ಸಾಹಿತ್ಯ ರಚನೆಯ ಅಗಾಧ ಅನುಭವದಿಂದಲೇ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಅವರು ಹೇಳಿದ ಮಾತುಗಳು “ಸರ್ವಾಂಗ ಪೂರ್ಣ ಭೂಷಣ ಸಾಹಿತಿಯಾಗಬೇಕಾದರೆ ವಿದ್ಯಾರ್ಥಿ, ಉಪಾಧ್ಯಾಯ, ನಟ, ಭಾಷಣಕಾರ, ಲೇಖಕ, ಪತ್ರಕರ್ತ ಹೀಗೆ ನಾನಾ ಮುಖಗಳಲ್ಲಿ ಸೇವೆ ಮಾಡಬೇಕು. ಸಾಹಿತ್ಯ ಸೃಷ್ಟಿಗೆ ಕೈ ಇಟ್ಟಿರುವವರು ತಮ್ಮನ್ನು ತಾವು ಸಂಶೋಧನೆ ಮಾಡಿಕೊಳ್ಳಬೇಕು.” ಜೀವನದ ಎಲ್ಲಾ ರಂಗಗಳಲ್ಲಿಯೂ ಬಹುಮುಖ ಅನುಭವವನ್ನು ಪಡೆದ ಇವರು ಮೈಸೂರು ಹಿಂದಿ ಪ್ರಚಾರಕ ಸಭೆಯ ಸ್ಥಾಪಕರಲ್ಲಿ ಒಬ್ಬರಾಗಿ, ಕನ್ನಡ ಸಾಹಿತ್ಯ ಸಮಾಜವನ್ನು ಸ್ಥಾಪನೆ ಮಾಡಿ, ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಡೈರೆಕ್ಟ್ ಹಾಗೂ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಬೆಂಗಳೂರು ಸಿಟಿ ಕಾರ್ಪೊರೇಷನ್ ಚುನಾಯಿತ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಶ್ರೇಷ್ಠತೆ ಇವರದು.
1952ರಲ್ಲಿ ಕಡೂರಿನ ಒಂದು ದೊಡ್ಡ ಸಮಾರಂಭಕ್ಕೆ ಭಾಷಣಕಾರರಾಗಿ ಇವರು ಹೋಗಿದ್ದರು. ಸಂಘಟಕರು ನಿಗದಿಪಡಿಸಿದಂತೆ ಒಂದೂವರೆ ಗಂಟೆಯ ಭಾಷಣವನ್ನು ಇವರು ಮಾಡಬೇಕಾಗಿತ್ತು. ಕಿಕ್ಕಿರಿದ ಸಭೆಯನ್ನುದ್ದೇಶಿಸಿ ದೇವುಡು ಭಾಷಣವನ್ನು ಆರಂಭಿಸಿದ್ದರು. ಜನ ತಲ್ಲೀನರಾಗಿ ಆಲಿಸುತ್ತಿದ್ದರು. ಕೆಲಹೊತ್ತಿನ ನಂತರ ವೇದಿಕೆಗೆ ಗಡಿಬಿಡಿಯಿಂದ ಬಂದ ವ್ಯಕ್ತಿಯೊಬ್ಬರು ದೇವಡು ಕಿವಿಯಲ್ಲಿ ಏನು ಉಸುರಿ ಒಂದು ಪತ್ರವನ್ನು ಕೊಟ್ಟರು. ಭಾಷಣ ಮುಗಿದ ನಂತರ ವಂದನಾರ್ಪಣೆಗೂ ಕಾಯದ ದೇವುಡು, ವೇದಿಕೆಯಿಂದ ಅವಸರವಸರವಾಗಿ ಇಳಿದು ಬಂದರು. “ನಾನು ಈಗಲೇ ಬೆಂಗಳೂರಿಗೆ ಹೋಗಬೇಕು ದಯವಿಟ್ಟು ರೈಲಿನಲ್ಲಿ ಹೋಗುವ ವ್ಯವಸ್ಥೆಯನ್ನು ಮಾಡಿ” ಎಂದು ಸಂಘಟಕರಲ್ಲಿ ವಿನಂತಿಸಿದರು. ಅವರಿಗಾಗಿ ಏರ್ಪಡಿಸಿದ್ದ ಭೋಜನ ಕೂಟ ಮತ್ತು ಉಳಕೊಳ್ಳುವ ವ್ಯವಸ್ಥೆ ಇದೆ ಎಂದು ಸಂಘಟಕರು ಹೇಳಿದಾಗ “ಇಲ್ಲ ನಾನು ಈಗಲೇ ಬೆಂಗಳೂರಿಗೆ ಹೋಗಬೇಕು. ಹೆಂಡತಿಗೆ ಸಾಂತ್ವನ ನೀಡಬೇಕಾಗಿದೆ. ನನ್ನ ಮಗ ತೀರಿಕೊಂಡಿದ್ದಾರೆ” ಎಂಬುದನ್ನು ತಿಳಿಸಿದಾಗ ಸಂಘಟಕರಿಗೆ ಆಶ್ಚರ್ಯದೊಂದಿಗೆ ಮನಸ್ಸಿಗೆ ನೋವು ಆಯಿತು. ಅವರ ಹಿರಿಯ ಮಗ ರಾಮು ಅಕಾಲಿಕವಾಗಿ ತೀರಿಕೊಂಡ ವಿಚಾರ ತಿಳಿದರೂ ಸ್ವಲ್ಪವೂ ಅಳುಕದೆ ಭಾಷಣ ಮುಗಿದ ನಂತರವೇ ತೆರಳಿದ ಈ ಪರಿ ಗೀತೆಯ ಸ್ಥಿತಪ್ರಜ್ಞ ಮನೋಭಾವನೆಯನ್ನು ಇವರು ಜೀವನದಲ್ಲಿ ಸಾಧಿಸಿದ ಬಗ್ಗೆ ಅರಿವಾಗುತ್ತದೆ.
“ನವ ಜೀವನ” ಪತ್ರಿಕೆಯ ಸಂಪಾದಕರಾಗಿ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡಿದ ಇವರು ರಂಗಭೂಮಿ ಸಿನಿಮಾ, ಸರಕಾರಿ ರಂಗ ಇತ್ಯಾದಿಗಳಲ್ಲಿ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ನಾಟಕ ಹಾಗೂ ಸಾಹಿತ್ಯವನ್ನು ಎರಡು ಮುಖ್ಯ ಹವ್ಯಾಸವನ್ನಾಗಿ ಮಾಡಿಕೊಂಡ ಇವರು 1936 ರಿಂದ 57 ರವರೆಗೆ 21 ವರ್ಷಗಳ ದೀರ್ಘಕಾಲ “ನಮ್ಮ ಪುಸ್ತಕ” ಎಂಬ ಸ್ವತಂತ್ರ ಮಕ್ಕಳ ಪತ್ರಿಕೆಯನ್ನು ನಡೆಸಿಕೊಂಡು ಬಂದರು. 1921ರಲ್ಲಿ ಚಾಮುಂಡೇಶ್ವರಿ ಕಂಪನಿಯಲ್ಲಿ ನಟರಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ ಇವರು 1928ರಲ್ಲಿ ಕರ್ನಾಟಕ ಫಿಲಂ ಕಾರ್ಪೊರೇಷನ್ ಸ್ಥಾಪನೆ ಮಾಡಿದರು. ಭಕ್ತದ್ರುವ ಚಲನಚಿತ್ರಕ್ಕೆ ಸಾಹಿತ್ಯ ರಚನೆ ಮತ್ತು ಚಿರಂಜೀವಿ ಚಲನಚಿತ್ರಕ್ಕೆ ಸಾಹಿತ್ಯ ರಚನೆ ಮಾಡಿದ್ದಲ್ಲದೆ ಆ ಚಿತ್ರದಲ್ಲಿ ಪಾತ್ರವನ್ನು ನಿರ್ವಹಿಸಿದ್ದರು. 1938 ರಲ್ಲಿ ಮೀಮಾಂಸ ದರ್ಪಣಕ್ಕೆ ಶ್ರೀಮನ್ ಮಹಾರಾಜರಿಂದ ವಿಶೇಷ ಪ್ರಶಸ್ತಿ 1952 ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಕಾಶಿಯಲ್ಲಿ ಗೌರವ ಮತ್ತು ಕನ್ನಡ ಕಾದಂಬರಿಕಾರರ ಸಮ್ಮೇಳನದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು
ಜನ್ಮತಃ ಆಗರ್ಭ ಶ್ರೀಮಂತರಾಗಿದ್ದರೂ,ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಸಂಪನ್ನರಾಗಿದ್ದರೂ ಬಡತನದಲ್ಲಿ ಬಾಳಿದವರು ದೇವುಡು ನರಸಿಂಹ ಶಾಸ್ತ್ರಿಗಳು. ತಮ್ಮ ಗುರುಗಳು ಬರೆಗಾಲಲ್ಲಿ ನಡೆಯುತ್ತಾರೆಂದು ನೊಂದ ಶಿಷ್ಯ ಕೊಡಿಸಿದ ಚಪ್ಪಲಿಯಿಂದ ಕಾಲಿಗೆ ಗಾಯವಾಗಿ, ಮಧುಮೇಹಿಗಳಾಗಿದ್ದ ಕಾರಣ ಗಾಯ ಉಲ್ಬಣಿಸಿ, 1956ರಲ್ಲಿ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವುದು ಅದೇ ಕೊನೆಯಾಯಿತು. 1962 ಅಕ್ಟೋಬರ್ 27ರಂದು ಈ ಮಹಾನ್ ಮೇಧಾವಿ ಸಾಹಿತ್ಯ ಲೋಕವನ್ನು ಶೂನ್ಯ ಮಾಡಿ ಇಹವನ್ನು ತ್ಯಜಿಸಿದರು.