Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ರಂಗಭೂಮಿಯ ಜಂಗಮ ಬಿ.ವಿ. ಕಾರಂತ
    Article

    ವಿಶೇಷ ಲೇಖನ | ರಂಗಭೂಮಿಯ ಜಂಗಮ ಬಿ.ವಿ. ಕಾರಂತ

    September 19, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರಿನ ನೆಲದ ಮಹತ್ವವನ್ನು ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆಲ್ಲ ತಿಳಿಯುವ ಹಾಗೆ ಮಾಡಿದ ಇಬ್ಬರು ಮಹನೀಯರೆಂದರೆ…
    ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಬಿ.ವಿ. ಕಾರಂತ.

    ಡಾ. ಶಿವರಾಮ ಕಾರಂತರು, ಬಿ.ವಿ. ಕಾರಂತರಂತಹ ಹಿರಿಯರು ರಂಗಭೂಮಿಯಲ್ಲಿ ಸಾಂಸ್ಕೃತಿಕ ಶಿಕ್ಷಣವನ್ನು ನಾಡಿನಾದ್ಯಂತ ಪಸರಿಸುವುದರಲ್ಲಿ ಹೆಸರು ಮಾಡಿದವರು, ಮಾತ್ರವಲ್ಲ ನಾಡಿನ ಎಲ್ಲರ ಸಾಂಸ್ಕೃತಿಕ ಬದುಕಿನಲ್ಲಿ ಎಚ್ಚರವಾಗಿಯೂ ಕೆಲಸ ಮಾಡಿದವರು.
    ಮುಖ್ಯವಾಗಿ ಮಕ್ಕಳ ಸಾಂಸ್ಕೃತಿಕ ಶಿಕ್ಷಣಕ್ಕೆ ಬಹುಮುಖ್ಯ ಕೊಡುಗೆ ನೀಡಿದವರು ಶಿವರಾಮ ಕಾರಂತರು. ಇವರು ಪುತ್ತೂರನ್ನು ಅರಸಿ ಬಂದು ಇಲ್ಲಿ ನೆಲೆಯಾಗಿ ಸುದೀರ್ಘ ಕಾಲ ತಮ್ಮ ಸಾಹಿತ್ಯ, ರಂಗಭೂಮಿ, ಶಿಕ್ಷಣ, ಪರಿಸರ ಮುಂತಾದ ಹಲವು ಹತ್ತು ಮುಖಗಳನ್ನು ತೆರೆದಿಡುತ್ತಾರೆ.

    ಬಿ.ವಿ. ಕಾರಂತರು ಪುತ್ತೂರಿಗೆ ಬಂದು ಇಲ್ಲಿ ನಿಲ್ಲದೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎನ್ನುತ್ತಾ ಜಗದಗಲಕ್ಕೆ ಜಂಗಮರ ಹಾಗೆ ಪಯಣ ನಡೆಸುತ್ತಾ ರಂಗಭೂಮಿಯ ಬಹುಮುಖ್ಯ ಆಯಾಮಗಳ ಸಾಧ್ಯತೆಗಳನ್ನು ಪರಿಚಯಿಸುತ್ತಾರೆ. ಕನ್ನಡದಲ್ಲಿ ಒಂದು ಮಾತಿದೆ. ‘ಹತ್ತೂರು ಕೊಟ್ಟರೂ ಪುತ್ತೂರು ಬಿಡ’ ಎಂಬುದಾಗಿ. ಪುತ್ತೂರಿನ ನೆಲದಲ್ಲಿಯೇ ಈ ಇಬ್ಬರು ಕಾರಂತರು ಹೇಳಿಕೊಟ್ಟ ಮಕ್ಕಳ ರಂಗಭೂಮಿಯ ಕೆಲಸಗಳನ್ನು ನಾವು ಅಭಿಜ್ಞಾನ ಮಕ್ಕಳ ನಾಟಕ ಬಳಗದವರು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇವೆ.

    ಇವತ್ತು ಸಪ್ಟೆಂಬರ್ 19 ಬಿ.ವಿ. ಕಾರಂತ ಎಂದೇ ಪ್ರಸಿದ್ಧರಾದ ಬಾಬುಕೋಡಿ ವೆಂಕಟರಮಣ ಕಾರಂತ ಇವರ ಜನುಮ ದಿನ. ಭಾರತೀಯ ರಂಗಭೂಮಿಗೆ ವಿಶೇಷ ಆಯಾಮ ನೀಡಿದ ಬಿ.ವಿ. ಕಾರಂತರ ನೆನಪಿನ ದಿನವಾಗಿ ಅವರ ಹುಟ್ಟುಹಬ್ಬವನ್ನು ‘ಅಭಿಜ್ಞಾನ ಮಕ್ಕಳ ನಾಟಕ ಬಳಗ’ದ ಕಲಿಕಾರ್ಥಿಗಳು ಸಿದ್ದಪಡಿಸಿದ ‘ಕಾರಂತಜ್ಜನಿಗೊಂದು ಪತ್ರ’ ಮಕ್ಕಳ ನಾಟಕ ಅಭಿನಯಿಸುವುದರ ಮೂಲಕ ಆಚರಿಸುತ್ತಿದ್ದೇವೆ. ಬಿ.ವಿ. ಕಾರಂತರು ಪುತ್ತೂರಿಗೆ ಬಂದು ತನ್ನ ಮೊದಲನೆಯ ನಾಟಕ ‘ಡೋಂಗಿ ಬಜೆಟ್’ನ್ನು ನಿರ್ದೇಶಿಸಿದ್ದು ಪುತ್ತೂರಿನ ನೆಲದಲ್ಲಿರುವ ಮಹಾಲಿಂಗೇಶ್ವರ ದೇವಳ ವಠಾರದಲ್ಲಿ ಅಂದರೆ ಈಗ ನನ್ನೂರಿನವರು ಸಂಭ್ರಮದಿಂದ ಆಚರಿಸುತ್ತಿರುವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ.

    ನನ್ನ ಸ್ಮೃತಿಪಟಲದಿಂದ ನೆನಪಾಗಿರುವ ಬಿ.ವಿ. ಕಾರಂತರನ್ನು ಕುರಿತ ಕೆಲವು ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕಾರಂತರು ಭೋಪಾಲ್ ಪ್ರಕರಣದಿಂದ ಬೇಸರಗೊಂಡು ಕರ್ನಾಟಕಕ್ಕೆ ಬಂದ ಬಳಿಕ ಅವರಿಗೆ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್ ಘೋಷಣೆಯಾಗಿತ್ತು. ಆ ಸಂದರ್ಭದಲ್ಲಿ ಅವರ ಹುಟ್ಟೂರಾದ ‘ಮಂಚಿ ಕುಕ್ಕಾಜೆ’ ಶಾಲೆಯಲ್ಲಿ ಅವರಿಗೊಂದು ಸರಳ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು.
    ಕಾರಂತರ ಮೇಲಿನ ಗೌರವ ಪ್ರೀತಿಯಿಂದ ನಾನೂ ಹೋಗಿದ್ದೆ. ಅತಿಥಿಗಳಾಗಿ ಉಡುಪಿಯಿಂದ ಕು.ಶಿ. ಹರಿದಾಸಭಟ್ಟರು, ತರಂಗ ಸಂಪಾದಕ ಸಂತೋಷ್ ಕುಮಾರ್ ಗುಲ್ವಾಡಿ ಬಂದಿದ್ದರು.

    ಗುಲ್ವಾಡಿಯವರು ತಮ್ಮ ಭಾಷಣದಲ್ಲಿ ಕಾರಂತರನ್ನು ಹೊಗಳುತ್ತಾ ಅವರೊಬ್ಬ ‘ಅದ್ಭುತ ನಿರ್ದೇಶಕ’. ಇವರ ನಾಟಕದ ಸಂಭ್ರಮ ದೃಶ್ಯಗಳು ಪ್ರತಿಮೆಗಳು ಅನನ್ಯ. ಇವರ ಹಯವದನ ನೋಡಬೇಕೆಂದು ನಾನು ಎರಡು ಮೂರು ಸಾರಿ ಬೊಂಬಾಯಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಹೋಗಿದ್ದೆ. ಅದರಲ್ಲಿ ಬರುವ ಮದುವೆಯ ಸಂದರ್ಭದಲ್ಲಿ ಬಳಸುವ ವಿಶಿಷ್ಟ ತಂತ್ರವಂತೂ ಈಗಲೂ ನನಗೆ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮದುಮಕ್ಕಳ ಹಾರಾರ್ಪಣೆಯ ಮೊದಲು ಕ್ಷಣಮಾತ್ರದಲ್ಲಿ ಒಂದು ಬಿಳಿವಸ್ತ್ರವನ್ನು ತಲೆಯ ಮೇಲ್ಪರದೆಯಾಗಿ ಬಳಸುವ ವಿಶಿಷ್ಟ ತಂತ್ರ ನನಗೆ ತುಂಬಾ ಮೆಚ್ಚುಗೆಯಾಗಿತ್ತು ಎಂದೆಲ್ಲಾ ಹೊಗಳಿದ್ದರು.

    ಆ ಬಳಿಕ ಸನ್ಮಾನಕ್ಕೆ ಉತ್ತರವೋ ಎಂಬ ಹಾಗೆ ಮಾತನಾಡಿದ ಬಿ.ವಿ. ಕಾರಂತರು ನಿರ್ಭಾವುಕಾರಾಗಿ ಮಾತನಾಡಿದ್ದು ಹೀಗೆ.. ‘ನನ್ನ ನಾಟಕಗಳಲ್ಲಿ ಅದ್ಭುತವಾದ ಸಂಗತಿಗಳೇನೂ ಇಲ್ಲ. ಅವೆಲ್ಲವನ್ನು ಕಲಿತದ್ದು ನಾನು ಇದೇ ಊರಿನಲ್ಲಿ. ಇದೇ ಮಂಚಿ ಕುಕ್ಕಾಜೆ ಶಾಲೆಯ ಪರಿಸರದಲ್ಲಿ. ಗುಲ್ವಾಡಿಯವರು ಹೇಳಿದ ಹಯವದನ ನಾಟಕ ದೃಶ್ಯ ಕುರಿತು ಹೇಳಲೇಬೇಕು. ನಾನು ಇಲ್ಲಿ ಇದ್ದಾಗ ಯಾವುದೇ ಮದುವೆ ಸಮಾರಂಭಗಳಿಗೆ ತಪ್ಪದೇ ಹೋಗುತ್ತಿದ್ದೆ. ಮದುವೆ ಅಂದರೆ ಊಟ ಗ್ಯಾರಂಟಿ. ಬಹಳ ಕುತೂಹಲದಿಂದ ತಲೆಗೆ ತೆರೆ ಹಿಡಿಯುವ ಸಂದರ್ಭವನ್ನೇ ಕಾಯುತ್ತಿದ್ದೆ. ಅದಾದ ಬಳಿಕವಷ್ಟೇ ನಮಗೆ ಊಟ ದಕ್ಕುತ್ತಿತ್ತು. ಹಾಗಾಗಿ ನನ್ನ ಮನಸ್ಸಿನಲ್ಲಿಯೇ ಕೂತ.. ತಲೆ ಮೇಲೆ ತೆರೆ ಹಿಡಿಯುವ ಪ್ರಸಂಗವನ್ನು ಅದೇ ರೀತಿ ಹಯವದನದಲ್ಲಿ ಬಳಕೆ ಮಾಡಿದೆ.

    ಆಗ ಮಂಚಿಯಲ್ಲಿ ಪತ್ತುಮುಡಿ ಪಟೀಲರು ಊರಿಗೆ ದೊಡ್ಡವರು. ಪಂಚಾಯಿತಿಕೆಯ ಹಿರಿತನ ಅವರದ್ದೇ. ಆ ಸಂದರ್ಭದಲ್ಲಿ ಭಾಗಿಯಾಗುವ ಯಾರು ಕೂಡಾ ಪಟೇಲರ ಹತ್ತಿರಕ್ಕೆ ಹೋಗುವ ಹಾಗಿರಲಿಲ್ಲ. ದೂರದಲ್ಲಿರುವ ಎತ್ತರದ ವೇದಿಕೆಯಲ್ಲಿ ಪತ್ತುಮುಡಿ ಪಟೇಲರು ಆರಾಮ ಕುರ್ಚಿಯಲ್ಲಿ ಕುಳಿತರೆ, ಉಳಿದವರು ದೂರದಲ್ಲಿ ಕುಳಿತೋ.. ಬಾಗಿಯೋ… ಇರಬೇಕಾಗಿತ್ತು. ಅದೇ ದೃಶ್ಯವನ್ನು ನಾನು ಡಿಸ್ಟೆನ್ಸ್ ಸ್ಪೇಸ್ ಆಗಿ ಜೋಕುಮಾರ ಸ್ವಾಮಿ ನಾಟಕದಲ್ಲಿ ಬಳಕೆ ಮಾಡಿಕೊಂಡೆ.’

    ಓ ಅಲ್ಲಿ ಒಬ್ಬರು ಸಾಯಿಬರು ಕಾಣ್ತಾರಲ್ಲಾ.. ಅವರು ನನ್ನ ಕ್ಲಾಸ್ ಮೇಟ್. ನನ್ನ ನಾಟಕದ ಆಸಕ್ತಿಗೆ ಕಾರಣರಾದವರು ಗುರುಗಳಾದ ಪಿ.ಕೆ. ನಾರಾಯಣ ಮಾಸ್ಟ್ರು. ಆದರೆ ನನಗೆ ತುಳು ಭಾಷೆಯ ಸಾವಿರಾರು ಬೈಗುಳಗಳನ್ನು ಹೇಳಲು, ಬೀಡಿ ಎಳೆಯಲು ಹೇಳಿಕೊಟ್ಟದ್ದು ಈ ಸಾಯಿಬರೇ… ಭಾಷೆಯ ಚಂದ ಗ್ರಹಿಸಲು ಕಾರಣವಾದದ್ದೇ ಆ ಬೈಗುಳಗಳು. ಈ ಗುಡ್ಡೆಯ ಮೇಲೆ ನಿಂತು ಎಷ್ಟು ಗಟ್ಟಿ ಸಾಧ್ಯವೋ ಅಷ್ಟು ಗಟ್ಟಿಯಾಗಿ ಆ ಬೈಗುಳಗಳನ್ನೆಲ್ಲಾ ಹೇಳುತ್ತಿದ್ದೆ. ನನ್ನ ನಾಟಕಗಳ ಭಾಷಾ ವೈವಿಧ್ಯತೆಯ ಹುಡುಕಾಟಕ್ಕೆ ಅದುವೇ ಕಾರಣವಾಗಿರಬೇಕು.

    ಮತ್ತು …. ನಾನು ಮತ್ತು ನನ್ನ ಕ್ಲಾಸ್ಮೇಟ್ ಶಾಲೆಯ ಕತ್ತಲೆಯ ಕೋಣೆಯ ಒಳಗೆ ಕಿಟಕಿ ಬಾಗಿಲು ಹಾಕಿ ಕುಳಿತು ಅವಸರ ಅವಸರವಾಗಿ ಬೀಡಿ ಸೇದುತ್ತಿದ್ದೆವು. ಬೀಡಿ ಸೇದಿದ ಬಳಿಕ ಉಳಿದ ಕೊನೆಯ ಕುತ್ತಿಯನ್ನು ವೃತ್ತಾಕಾರವಾಗಿ ಮತ್ತು ಬೇಕು ಬೇಕಾದ ಹಾಗೆಲ್ಲಾ ತಿರುಗಿಸಿದಾಗ ಅದ್ಭುತವಾದ ಬೆಂಕಿಯ ಕೆಂಡದ ವಿನ್ಯಾಸ ಸೃಷ್ಟಿಯಾಗುತ್ತಿತ್ತು. ಅದನ್ನೇ ನಾನು ‘ಗೋಕುಲ ನಿರ್ಗಮನ’ದ ಮಧ್ಯಂತರ ವೇಳೆಯಲ್ಲಿ ಅಗರಬತ್ತಿಯ ಸಹಾಯದಿಂದ ವಿಶಿಷ್ಟ ವಿನ್ಯಾಸ ರೂಪುಗೊಳ್ಳುವಂತೆ ಪ್ರಯೋಗ ಮಾಡಿದೆ.

    ನನ್ನ ಬಾಲ್ಯದ ಬಡತನ, ಹಸಿವು, ನನಗೆ ಬದುಕಿನ ಉದ್ದಕ್ಕೂ ಸಹಾಯವನ್ನೇ ಮಾಡಿದೆ. ಮಂಚಿಯಲ್ಲಿ ವಾರಕ್ಕೊಮ್ಮೆ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲೆಲ್ಲಾ ನಾನು ಭಾಗವಹಿಸುತ್ತಿದ್ದೆ. ಅದಕ್ಕೆ ಮುಖ್ಯ ಕಾರಣ ದೈವಭಕ್ತಿಯಲ್ಲ ಬದಲಿಗೆ ಭಜನೆಯ ಬಳಿಕ ಪ್ರಸಾದ ರೂಪದಲ್ಲಿ ಅವಲಕ್ಕಿ ಕೊಡುತ್ತಿದ್ದರಲ್ಲ… ಅದಕ್ಕೆ …

    ಆದರೆ ಅಲ್ಲೆಲ್ಲ ಹಾಡಿದ ಹಾಡನ್ನೇ ಹಾಡಲು ಮನಸ್ಸು ಕೇಳುತ್ತಿರಲಿಲ್ಲ. ಮೊದಲು ಬೇರೆ ಬೇರೆ ಹಾಡು ಹುಡುಕಿ ಹಾಡುತಿದ್ದೆ. ಬಳಿಕ ಅದೇ ಹಾಡುಗಳನ್ನು ಬೇರೆ ಬೇರೆ ರಾಗದಲ್ಲಿ.. ಬೇರೆ ಬೇರೆ ತಾಳದಲ್ಲಿ ಹಾಡುತ್ತಿದ್ದೆ.. ಹಾಗಾಗಿ ‘ಸತ್ತವರ ನೆರಳು’ ನಾಟಕಕ್ಕೆ ಹೊಸ ಬಗೆಯ ಸಂಗೀತ ಬಳಕೆ ಮಾಡಲು ಸಾಧ್ಯವಾಯಿತು.

    ನಾನು ಕಾರಂತರು ನಡೆಸಿದ ಬೇರೆ ಬೇರೆ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಅಲ್ಲೆಲ್ಲಾ ಅವರು ಹೇಳುತ್ತಿದ್ದುದು ಹೀಗೆಯೇ… ನನ್ನ ಊರಿನ ಭಟ್ಟರು ನಡೆಯುವುದು ಹೀಗೆ. ನನ್ನೂರಿನ ಕೊಂಕಣಿ ಮಾತನಾಡುವುದು ಹೀಗೆ. ಬ್ಯಾರಿ ವ್ಯಾಪಾರ ಮಾಡುವುದು ಹೀಗೆ ಇತ್ಯಾದಿ.

    ತಮಾಷೆ ಎಂದರೆ ಹಿಂದಿ ಮಾತನಾಡುವ ಭೋಪಾಲಿನಲ್ಲೂ ಕನ್ನಡ ಮಾತನಾಡುವ ಮೈಸೂರಿನಲ್ಲೂ ತುಳು ಭಾಷೆಯ ಪುತ್ತೂರಿನಲ್ಲೂ ಇದೇ ಉದಾಹರಣೆಗಳನ್ನು ನೀಡಿದ್ದಾರೆ. ಅವರಿಗೆ ಭಾಷೆ ಊರು ಬೇರೆ ಬೇರೆಯಾದಾಗಲೂ ನೆನಪಿನಲ್ಲಿ ಉಳಿದದ್ದು ತನ್ನ ಬಾಲ್ಯದ ಮಂಚಿ ಕುಕ್ಕಾಜೆ ಪರಿಸರವೇ ಆಗಿತ್ತು.

    ಬಿ.ವಿ.ಕಾರಂತರೊಂದಿಗೆ ಲೇಖಕ ಐ.ಕೆ. ಬೊಳುವಾರು

    ಐ.ಕೆ. ಬೊಳುವಾರು:
    ಸೃಜನಶೀಲ, ಸರಳ ಸಜ್ಜನಿಕೆ ಹಾಸ್ಯ ಪ್ರವೃತ್ತಿಯ ವ್ಯಕ್ತಿತ್ವದ ಐ.ಕೆ. ಬೊಳುವಾರು. ಕಳೆದ 44 ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿದಂತೆ ನಟನೆ, ನಿರ್ದೇಶನ, ನಾಟಕ ರಚನೆ, ನೇಪಥ್ಯ, ಪ್ರಕಟಣೆ, ತರಬೇತು, ಸಂಘಟನೆ ಮುಂತಾದ ವಿಭಾಗಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದವರು. ಮಕ್ಕಳ ರಂಗಭೂಮಿಯ ಬಗ್ಗೆ ವಿಶೇಷ ಆಸಕ್ತಿ ಇರುವ ಇವರು ಕಳೆದ 30 ವರುಷಗಳಿಂದ ತಮ್ಮ ನೇತೃತ್ವದ ‘ನಿರತನಿರಂತ’ ನಾಟಕ ಸಂಸ್ಥೆಯ ಮೂಲಕ ಮಕ್ಕಳ ನಾಟಕ ಪ್ರಯೋಗ, ಸೋಣಂಗೇರಿ ಬಯಲು ಚಿತ್ರಾಲಯ, ಥೇಟರ್ ಮಾರ್ಟ್, ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ ಮುಂತಾದ ಹೊಸ ಬಗೆಯ ಕಾರ್ಯಕ್ರಮಗಳ ಹುಡುಕಾಟದೊಂದಿಗೆ ರಂಗಭೂಮಿಯ ಬಹುಮುಖೀ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

    2004ರಿಂದ 2009ರವರೆಗೆ ರಂಗಾಯಣ ಮೈಸೂರು ಹಾಗೂ ಸ್ವೀಡಿಷ್ ಐಟಿಐ ಸಹಕಾರದೊಂದಿಗೆ ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯನ್ವಯ ಮಕ್ಕಳ ನಾಟಕಗಳನ್ನು ಸಿದ್ಧಪಡಿಸಿ ಶಾಲೆ ಶಾಲೆಗಳಲ್ಲಿ, ರಂಗಮಂದಿರಗಳಲ್ಲಿ ಹಾಗೂ ನಾಟಕೋತ್ಸವಗಳಲ್ಲಿ ಹೀಗೆ ರಾಜ್ಯದ 125ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನ ನಡೆಯುವಂತೆ ಪ್ರಯತ್ನಿಸಿದ್ದಾರೆ. ಇವರು ನಿರ್ದೇಶಿಸಿದ ನಾಟಕಗಳು ರಾಜ್ಯ ಹಾಗೂ ಅನೇಕ ಹೊರ ರಾಜ್ಯಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ಯಶಸ್ವೀ ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ರಂಗಭೂಮಿಯಲ್ಲಿ ವಿಶೇಷ ಕೆಲಸ ಮಾಡಿರುವ ರಂಗ ನಿರ್ದೇಶಕರಾದ ಬಿ.ವಿ. ಕಾರಂತ, ಪ್ರಸನ್ನ, ಕನ್ನಯ್ಯಲಾಲ, ಚಿದಂಬರರಾವ್ ಜಂಬೆ, ಸಿಜಿಕೆ ಕೃಷ್ಣಮೂರ್ತಿ, ಮೋಹನ ಸೋನ ಮುಂತಾದವರ ನಿಕಟ ಒಡನಾಟದ ಮೂಲಕ ರಂಗಭೂಮಿಯ ಅರಿವನ್ನು ವಿಸ್ತರಿಸಿಕೊಂಡಿದ್ದಾರೆ.

    ರಂಗ ತರಬೇತು ಕಾರ್ಯಾಗಾರಗಳನ್ನು ಆಕರ್ಷಕವಾಗಿ ನಡೆಸುವುದರ ಮೂಲಕ 50ಕ್ಕೂ ಹೆಚ್ಚು ನಾಟಕಗಳ ನಿರ್ಮಾಣ, ನಿರ್ದೇಶನದ ಕೆಲಸ ಮಾಡಿದ್ದು, ಮಾತ್ರವಲ್ಲದೆ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರಿಗಿದೆ. ಇವರು ಬರೆದ ರಂಗಭೂಮಿಯ ಕುರಿತ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

    ಇವರು ನಿರ್ದೇಶಿಸಿದ ಮಕ್ಕಳ ನಾಟಕಗಳು – ಗ್ರಹಣ, ಕಾಡುಕಾಡೆಂದರೆ, ಬೌವ್‌ ವೊವ್‌ ಟರ್ ಟ‌ರ್, ಅಳಿಲು ರಾಮಾಯಣ, ಹಸಿರು ಮನೆ, ಕೆರೆಗೆ ಹಾರ, ಮಾಯಾಕುದುರೆ, ಮಳೆಹಕ್ಕಿ ಹಾರ್ನ್‌ಬಿಲ್, ತಧಿಗಿಣತೋಂ, ಕುಣಿ ಕುಣಿ ನವಿಲೇ, ಚಂದ್ರಮ ವೃತ್ತಾಂತ, E =ಐನ್‌ಸ್ಟೈನ್, ನೆರಳಿನ ಕೋಟೆ, ನಾಯಿ ನಡತೆ, ಬಿದಿರ ಬೆಟ್ಟ, ಆಯಿಶಾ…., ಜಾಗತಿಕ ವೀರನ ಕಥೆ, ಗಣಿತಾರ್ಥ ಚರಿತೆ, ಕಸ ಸಮಸ್ಯಾ ನಾಟಕಂ, ಬೇಂದ್ರೆಯವರ ಸಾಯೋ ಆಟ, .. ..ಮತ್ತೆ ಹೇಳಿದ ಕಥೆ, ….ಗ್ರಹಣ ಕಂಕಣ ಹಾಗೂ ಇವರ ಪ್ರಕಟಿತ ನಾಟಕಗಳು – ಗ್ರಹಣ, ಮುದುಕಸೆಟ್ಟಿಯೂ ಮೂವರು ಮಕ್ಕಳು, ಮಾಯಾಕುದುರೆ ಮತ್ತು ಡೋಲು.

    ಪುತ್ತೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರನ್ನರಸಿ ಬಂದುದು ಇವರ ಹೆಗ್ಗಳಿಕೆ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕೆ.ಎಸ್. ಪುಟ್ಟಣ್ಣಯ್ಯ ನೆನಪಿನ ಜನಪದ ಜೀವಾಳ ರಂಗ ಪ್ರಶಸ್ತಿ, ಮೈಸೂರು ರಂಗಾಯಣ ಹಸಿರು ದಸರಾ ಪ್ರಶಸ್ತಿ, ದ.ಕ. ಜಿಲ್ಲಾ ಸಿಜಿಕೆ ರಂಗ ಪ್ರಶಸ್ತಿ, ರಂಗ ಸುರಭಿ ಬೈಂದೂರು ರಂಗ ಸಂಮಾನ, ಚಿತ್ರಭಾರತಿ ಪ್ರಶಸ್ತಿ ಮತ್ತು ರಂಗ ಭಾಸ್ಕರ ಪ್ರಶಸ್ತಿ ಹಾಗೂ ಅನೇಕ ಸನ್ಮಾನ ಪುರಸ್ಕಾರಗಳು ಇವರು ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಂದ ಗೌರವ.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಕೆ.ರಾಮಮೂರ್ತಿ ರಾವ್ ಆಯ್ಕೆ 
    Next Article ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.