ವೃತ್ತಿ ರಂಗಭೂಮಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನಾಟಕದ ಪಾತ್ರಗಳಿಗೆ ಸಹಜವಾದ ವೇಷಭೂಷಣಗಳನ್ನು ಅಳವಡಿಸಿ, ಸೃಜನಶೀಲತೆಯೊಂದಿಗೆ ರಂಗ ಪ್ರದರ್ಶನ ಮಾಡಿ, ಕನ್ನಡ ರಂಗಭೂಮಿಯನ್ನು ಜನಪ್ರಿಯಗೊಳಿಸಿದ ಖ್ಯಾತಿ ಎ. ವಿ. ವರದರಾಜರದ್ದು.
ಎ. ವಿ. ವರದಾಚಾರ್ಯ ಎಂದೇ ಪ್ರಸಿದ್ಧರಾದ ಅನಮಲಪಲ್ಲಿ ವೆಂಕಟ ವರದಾಚಾರ್ಯರು 02 ಫೆಬ್ರವರಿ 1869ರಲ್ಲಿ ಜನಿಸಿದ್ದು ಚಿತ್ರದುರ್ಗದಲ್ಲಿ. ತಂದೆ ಶಿರಸ್ತೆದಾರ್ ರಂಗಸ್ವಾಮಿ ಅಯ್ಯಂಗಾರ್ ಸಂಗೀತ ಪ್ರಿಯರಾಗಿದ್ದರು. ಎಳವೆಯಲ್ಲಿಯೇ ಮಗನಲ್ಲಿದ್ದ ಸಂಗೀತ ಆಸಕ್ತಿಯನ್ನು ಕಂಡುಕೊಂಡು, ಸಾಂಪ್ರದಾಯಿಕ ಶಿಕ್ಷಣದೊಂದಿಗೆ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಬಾಲ್ಯದಿಂದಲೇ ಸಂಗೀತ ಶಿಕ್ಷಣ ಕೊಡಿಸಿದರು. ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದ ವರದಾಚಾರ್ಯರು ತಮ್ಮ ಚುರುಕು ಬುದ್ಧಿ ಮತ್ತು ಉತ್ತಮ ಕಂಠಸಿರಿಯ ವರ್ಚಸ್ಸಿನಿಂದ ಎಲ್ಲರ ಪ್ರೀತಿಗೆ ಪಾತ್ರರಾದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ತನ್ನ ಸುಂದರ ದೇಹದಾರ್ಢ್ಯ ಹಾಗೂ ಕಂಠಸಿರಿಯಿಂದ ಕಲಾರಸಿಕರ ಗಮನ ಸೆಳೆದರು. ಈ ಮಧ್ಯೆ ಅವರ ತಾಯಿಯ ಮರಣದಿಂದಾಗಿ ನಿರುತ್ಸಾಹದಿಂದ ಕುಗ್ಗಿ ಹೋಗಿ, ಸಂಗೀತ ಕಛೇರಿ ನಾಟಕಗಳಲ್ಲಿಯೇ ಕಾಲಕಳೆಯತೊಡಗಿದರು.
ತಾವಾಗಿಯೇ ವಿವಿಧ ಕಂಪನಿ ನಾಟಕಗಳಲ್ಲಿ ಕೇಳಿಕೊಂಡು ಮಾಡಿದ ನಾಟಕಗಳಲ್ಲಿನ ಪಾತ್ರಗಳನ್ನು ನೋಡಿದ ಪ್ರೇಕ್ಷಕರು ಅವರ ಕಲಾಾವಂತಿಕೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಅಭಿನಯದಲ್ಲಿ ಆಸಕ್ತಿ ಇದ್ದ ವರದಾಚಾರ್ಯರು ನಾಟಕ ಕಂಪನಿಯವರ ಕರೆಗೆ ಸ್ಪಂದಿಸಿ, ನಾಟಕದಲ್ಲಿ ಬರುವ ಹಾಡುಗಳನ್ನು ಇನ್ನೂ ಸುಂದರಗೊಳಿಸಿ, ವಿಶಿಷ್ಟವಾದ ರೀತಿಯ ಸೃಜನಶೀಲ ಅಭಿನಯದ ಪಾತ್ರನಿರ್ವಹಣೆಯೊಂದಿಗೆ ಪ್ರಸಿದ್ಧಿಗೆ ಬಂದರು.
ಇವೆಲ್ಲವುಗಳ ಮಧ್ಯೆ ಆಚಾರ್ಯರ ಕರುಳಿನ ಕುಡಿ ಮತ್ತು ಪತ್ನಿ ಬೆಂಗಳೂರಿನಲ್ಲಿ ಪ್ಲೇಗು ಮಾರಿಗೆ ಬಲಿಯಾದರು. ತಮ್ಮ ದುಃಖ, ಮನಸ್ಸಿನ ತುಂಬಾ ಆವರಿಸಿದ ಕತ್ತಲೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನಾಟಕ ರಂಗವೇ ಬೇಡ ಎಂಬ ನಿರ್ಧಾರದಿಂದ ಬೆಂಗಳೂರಿಗೆ ಬಂದು ಜೀವನ ನಿರ್ವಹಣೆಗಾಗಿ ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಸ್ನೇಹಿತರು ಮತ್ತು ಅಭಿಮಾನಿಗಳ ಪ್ರಯತ್ನದಿಂದ 1900ರಲ್ಲಿ ‘ಬೆಂಗಳೂರು ಯೂನಿಯನ್’ ಎಂಬ ಹೆಸರಿನಿಂದ ನಾಟಕ ಸಭೆಯನ್ನು ಸ್ಥಾಪಿಸಿದರು. ತದನಂತರ ಪ್ರೆಸಿಡೆಂಟರ ಕಚೇರಿಯ ಉದ್ಯೋಗದಿಂದ ಪೂರ್ಣವಾಗಿ ಹೊರಬಂದು ನಾಟಕ ಕಂಪನಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಲ್ಲಿಂದ ಆಚಾರ್ಯರು ಯಶಸ್ಸಿನ ಮೆಟ್ಟಲುಗಳನ್ನು ಏರಲಾರಂಭಿಸಿದರು. ಪ್ರಥಮ ನಾಟಕ ರತ್ನಾವಳಿಯಿಂದ ಪ್ರಸಿದ್ಧಿಗೆ ಬಂದ ಆಚಾರ್ಯರು ಆ ನಾಟಕ ಸಂಸ್ಥೆಗೆ ‘ಶ್ರೀರತ್ನಾವಳಿ ನಾಟಕ ಮಂಡಳಿ’ ಎಂದು ಮರುನಾಮಕರಣ ಮಾಡಿದರು. ನಂತರ ಪ್ರಯೋಗ ಕಂಡ ಗುಲೇಬಕಾವಲಿ, ಮನ್ಮಥ ವಿಜಯ, ಹರಿಶ್ಚಂದ್ರ, ಶಾಕುಂತಲ, ಪ್ರತಾಪ ಸಿಂಹ, ಪ್ರಹ್ಲಾದ, ಧ್ರುವ ಚರಿತ್ರೆ, ಸದಾರಮೆ, ಇತ್ಯಾದಿ ಅಮೋಘ ನಾಟಕಗಳನ್ನು ಕಳೆಗಟ್ಟಿಸಿ ಸಾಮಾನ್ಯ ಪ್ರೇಕ್ಷಕರು ರಂಗಮಂದಿರದತ್ತ ಆಕರ್ಷಿತರಾಗುವಂತೆ ಮಾಡಿದ ಕೀರ್ತಿ ಆಚಾರ್ಯರದು. ನಾಟಕಗಳಲ್ಲಿ ನಾಯಕರಾಗಿ, ಗಾಯಕರಾಗಿಯೂ ಇದ್ದ ವರದಾಚಾರ್ ತಾವೇ ರಚಿಸಿದ ಇಂದಿರಾ ನಂದ ಹಾಗೂ ವಿಮಲಾ ವಿಜಯ ನಾಟಕಗಳಲ್ಲೂ ಪರಿಣಾಮಕಾರಿ ನಟನೆಯನ್ನು ಮಾಡಿದರು. ಸ್ವಲ್ಪ ಹೊತ್ತು ಆಚಾರ್ಯರ ಅಭಿನಯವನ್ನು ನೋಡಲು ನಾಟಕಕ್ಕೆ ಬಂದ ರವೀಂದ್ರನಾಥ ಟ್ಯಾಗೋರ್ ಪೂರ್ಣ ನಾಟಕವನ್ನು ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾಳಿದಾಸನ ಶಾಕುಂತಲ ನಾಟಕದ ಕನ್ನಡ ಅವತರಣಿಕೆಯನ್ನು ರಂಗದ ಮೇಲೆ ವೀಕ್ಷಿಸಿದ ಡಾ. ಆನಿಬೆಸೆಂಟರು ಸಂಸ್ಕೃತದಲ್ಲಿ ಶಾಕುಂತಲ ನಾಟಕವನ್ನು ಅಧ್ಯಯನ ಮಾಡಿ ಆಚಾರ್ಯರ ದುಶ್ಯಂತನ ಅಮೋಘ ಪಾತ್ರ ನಿರ್ವಹಣೆಯಿಂದ ಪ್ರೇರಿತರಾಗಿ ‘ನಾಟಕ ಶಿರೋಮಣಿ’ ಎಂಬ ಬಿರುದನ್ನು ನೀಡಿದರು. ಮುಂದಕ್ಕೆ ರೋಮಿಯೋ ಅಂಡ್ ಜೂಲಿಯೆಟ್ ನಾಟಕ ವನ್ನು ‘ರಾಮ ವರ್ಮ- ಲೀಲಾವತಿ’ ಎಂಬ ಹೆಸರಿನಲ್ಲಿ ರಂಗಭೂಮಿಗೆ ತಂದರು. ರಾಮ ವರ್ಮನ ಅಂದರೆ ರೋಮಿಯೋ ಪಾತ್ರದಲ್ಲಿ ಸ್ವತಃ ಆಚಾರ್ಯರೇ ಅಭಿನಯಿಸಿದರು. ನಾಟಕ ವೀಕ್ಷಿಸಿದ ಬಿಳಿಯರು ಆಶ್ಚರ್ಯ ಚಕಿತರಾದರು. ಬ್ರಿಟಿಷ್ ಮಹಿಳೆ ಒಬ್ಬರು ರಂಗಕ್ಕೆ ಬಂದು ತಮ್ಮ ಕುತ್ತಿಗೆಯಲ್ಲಿದ್ದ ಸರವನ್ನು ವರದರಾಜ ಅವರಿಗೆ ಅರ್ಪಿಸಿದರು. ಹೀಗೆ ಇದು ನಾಟಕ ಪ್ರದರ್ಶನದ ವೈಭವವನ್ನು ಹೆಚ್ಚಿಸಿದ ನಾಟಕ . ರಂಗಕಳಲೆಯಲ್ಲಿ ನೈಜ ವೇಷಾಲಂಕಾರ ಮಾತ್ರವಲ್ಲದೆ ಪಾತ್ರಗಳಿಗೆ ಸರಿಯಾದ ಅಭಿನಯ, ಮುಖಭಾವ, ಹಾವಭಾವಗಳನ್ನು ರೂಡಿಸಿಕೊಳ್ಳುವಂತೆ ಅಭ್ಯಾಸ ಮಾಡಿದವರು ಆಚಾರ್ಯರು. ಕನ್ನಡ ನಾಟಕ ರಂಗದ ಮಾರ್ಗದರ್ಶಕರಾದ ಆಚಾರ್ಯರ ಸ್ಮರಣೆಯಲ್ಲಿ ಭಕ್ತ ಧ್ರುವ ಎನ್ನುವ ವಾಕ್ಚಿತ್ರವೊಂದು ತಯಾರಾಯಿತು. ಸತಿ ಸುಲೋಚನಾದ ನಂತರ ತೆರೆಕಂಡ ಎರಡನೇ ವಾಕ್ಚಿತ್ರ ಎಂಬ ಕೀರ್ತಿ ಇದಕ್ಕೆ ಸಲ್ಲುತ್ತದೆ. ರಂಗಭೂಮಿಯನ್ನು ಮೇರು ಸ್ಥಾನಕ್ಕೆ ಕೊಂಡೊಯ್ದು ನೂರಾರು ನಾಟಕಗಳನ್ನಾಡಿ ಜನರ ಮನಸ್ಸನ್ನು ಸೂರೆಗೊಂಡ ಆಚಾರ್ಯರು ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಅವರ ಉದಾರ ಗುಣ ಅವರನ್ನು ಕೀರ್ತಿ ಶಿಖರಕ್ಕೆ ಏರಿಸಿತು. ಅವರನ್ನೇ ನಂಬಿ ನಿಂತ ವಿದ್ಯಾಸಂಸ್ಥೆಗಳು, ವಾಚನಾಲಯಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಲಯಗಳು ಹಾಗೂ ಬಡ ಕುಟುಂಬಗಳ ಮಂಗಳಕಾರ್ಯಗಳಿಗಾಗಿ ಸಹಾಯವನ್ನು ಯಾಚಿಸಿ ಬಂದವರಿಗೆ ಎಂದು ಹಸ್ತವನ್ನು ಕೆಳಮುಖ ಮಾಡದ ಸಹೃದಯಿ ಇವರು. ಇವರ ಅಭಿನಯದ ನಾಟಕ ಪ್ರದರ್ಶನವಿದೆ ಎಂದು ಪ್ರಕಟಿಸಿದಾಗ ತಮ್ಮ ಅನಾರೋಗ್ಯದಲ್ಲಿಯೂ ರಂಗಕ್ಕೆ ಬಂದು ನಟಿಸಿ, ಹಾಡಿ ಪ್ರೇಕ್ಷಕರನ್ನು ತಣಿಸಿದವರು ಆಚಾರ್ಯರು. ಅದೇ ಆಚಾರ್ಯರ ಅಂತಿಮ ಅಭಿನಯ ಆಗಿತ್ತು. 1926 ಏಪ್ರಿಲ್ ತಿಂಗಳ ನಾಲ್ಕನೇ ದಿನದಂದು ಆಚಾರ್ಯರು ತಮ್ಮ 57ನೇ ವಯಸ್ಸಿನಲ್ಲಿ ನಾಟನಾರಂಗ ಮಾತ್ರವಲ್ಲದೆ ಲೋಕರಂಗವನ್ನೇ ತ್ಯಜಿಸಿದರು. ನಾಟಕ ರಂಗದಲ್ಲಿ ಪ್ರಗತಿಯನ್ನು ಸಾಧಿಸಿ ಸುಧಾರಣೆಯನ್ನು ತಂದ ವರದಾಚಾರ್ಯರ ಕಾಲ ವೃತ್ತಿರಂಗದ ಸ್ವರ್ಣಯುಗವೆಂದೇ ಕರೆಸಿಕೊಂಡಿತು. ನಾಟಕ ಶಿರೋಮಣಿ ವರದ ವರದಾಚಾರ್ ಅವರು ರಂಗ ಕಲಾವಿದರು ಹಾಗೂ ರಂಗಾಸಕ್ತರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಇರುತ್ತಾರೆ.
Subscribe to Updates
Get the latest creative news from FooBar about art, design and business.
Previous Articleಸಮಾರೋಪಗೊಂಡ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಂಸ್ಕೃತಿ ಉತ್ಸವ’