2023 ಸೆಪ್ಟೆಂಬರ್ 27. ನಾಡಿನ ಹಿರಿಯ ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರರಿಗೆ 88. ತಮ್ಮ ತಾರುಣ್ಯದ ಕಾಲದಲ್ಲೇ ಅಮೃತರ ತುಳುಗೀತೆಗಳನ್ನು ಗುನುಗುನುಗಿಸುತ್ತಿದ್ದ ನೆರೆಕೂದಲ ಹಿರಿಯರನೇಕರಿಗೆ ‘ನಾವು ಅಂದೇ ಅಮೃತರನ್ನು ಓದಿದ್ದೆವು. ಈಗವರಿಗೆ ಎಂಬತ್ತೆಂಟು ಆಗುವುದಷ್ಟೆನಾ?’ ಎಂಬ ಸಂಶಯಾಶ್ಚರ್ಯ. ಇಂದಿನ ತರುಣ ವಿದ್ಯಾರ್ಥಿಗಳಿಗಂತೂ ‘ ನನ್ನ ಅಜ್ಜನೇ ಅಮೃತರ ನಾಟಕದ ಬಗ್ಗೆ ಹೇಳುತ್ತಿದ್ದರು’ ಎಂಬ ತಲೆಮಾರುಗಳ ನೆನಪು. ಅಂದಿನವರಿಗೂ ಬೇಕಿರುವವರಾಗಿ ಇಂದಿನವರಿಗೂ ಪ್ರಸ್ತುತರಾಗಿ ಬದುಕುವುದೆಂದರೆ ಅದೆಂತಹ ಸಾರ್ಥಕತೆ!
ತಿಳಿದ ವಿಚಾರಗಳ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಂದಿನವರಿಗೆ ತಕ್ಷಣ ಗೂಗಲ್ ನೆನಪಾಗುತ್ತದೆ. ಆದರೆ ಕೆಲವು ದಶಕಗಳ ಹಿಂದೆ ವಿಚಾರ ಹುಡುಕಾಡುವವರಿಗೆ ಗೂಗಲ್‌ನಂತಿದ್ದವರು ಅಮೃತರು. ಹೌದು, ಅಮೃತ ಸೋಮೇಶ್ವರರು ಮಾನವತೆಯ ನೆಟ್‌ವರ್ಕ್ ಮೂಲಕ ಆಂತರ್ಯವನ್ನು ಬೆಸೆದ ಅಂತರ್ಜಾಲ. ಸದಾಸಮೃದ್ಧ ಅವಿಚ್ಛಿನ್ನ ಜ್ಞಾನ ಸಂಪುಟ.
ಅನೇಕರಿಗೆ ಅಮೃತ ಸೋಮೇಶ್ವರರು ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆಸುವ ಕಾರಣದಿಂದ ಹತ್ತಿರವಾದವರು. ಅವರು ಬರೆದಿರುವ ಮುನ್ನುಡಿಗಳನ್ನೇ ಸಂಕಲಿಸಿದರೆ ಒಂದು ಕೃತಿಯೇ ಆಗಬಹುದು. ಮೊನ್ನೆಯಷ್ಟೇ ಕವನ ಬರೆಯಲು ಪ್ರಾರಂಭಿಸಿದ ಚಿಣ್ಣನೂ ತನ್ನ ಚೊಚ್ಚಲ ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಹಂಬಲಿಸುವುದು ಅಮೃತರನ್ನು . ಕೃತಿಯ ಮೇಲ್ಗಾರಿಕೆಗೆ ತಕ್ಕ ಮುನ್ನುಡಿ ಇರಬೇಕು ಎನ್ನುವ ವಿದ್ವಜ್ಜನರಿಗೂ ಅವರೇ ನೆನಪಾಗುತ್ತಾರೆ. . ಅಲ್ಲಿಗೆ ತಗ್ಗಿ, ಇಲ್ಲಿಗೆ ಎತ್ತರಿಸಿ ಆಲೋಚಿಸುವ ಭಿನ್ನನೆಲೆಯ ಓದು ಅವರಿಗೆ ಸಾಧ್ಯವಾದುದಾದರೂ ಹೇಗೆ? ಪ್ರಾಯಶಃ ಅವರ ಬಹುರಸಮಿಳಿತ ಜೀವನಕ್ರಮ ಮತ್ತು ಸಾಮಾಜಿಕ ಒಡನಾಟ.
ಬರೆಯುವುದೆಂದರೆ ಅವರಿಗೊಂದು ವ್ರತ. ವ್ರತಕ್ಕಾದರೂ ಪುಣ್ಯಸಂಚಯನದ ಅಪೇಕ್ಷೆ ಇರಬಹುದೇನೋ? ಅಮೃತರಿಗೆ ತಾವು ಬರೆದ ಪುಸ್ತಕಗಳು ಪ್ರಶಸ್ತಿ ಗಳಿಸಿ ಜನಪ್ರಿಯವಾಗಬೇಕೆಂಬ ಸಹಜ ಆಸೆಯೂ ಇಲ್ಲ. “ಹೆಚ್ಚು ಓದಿ ಕಡಿಮೆ ಬರೆಯಬೇಕು. ಇಂದಿಗಿಂತ ನಾಳೆ ನಿಮ್ಮ ಬರೆಹ ಬಲಿತಿರುತ್ತದೆ. ಪ್ರಕಟಣೆಯ ಅವಸರ ಬೇಡ. ಬರೆದಿರುವುದಕ್ಕೆ ಚಿಕಿತ್ಸೆ ಕೊಡಿಸಿ. ಬರೆವಣಿಗೆ ಒಂದು ದಿನದಲ್ಲಿ ಕೈಗತವಾಗುವ ಸಿದ್ಧಿ ಅಲ್ಲ. ಅದು ಪಕ್ವವಾಗುವಷ್ಟು ದಿನ ಅದರ ಮೇಲೆ ಪ್ರಾಮಾಣಿಕ ಶ್ರಮವಿರಲಿ. ಪುಸ್ತಕಗಳನ್ನೇ ಓದದವರು ಪುಸ್ತಕಗಳನ್ನು ಹೇಗೆ ತಾನೆ ಬರೆದಾರು?” – ಇವೆಲ್ಲಾ ತಮ್ಮೆಡೆಗೆ ಸಾಹಿತಿಗಳಾಗುವ ಹಪಹಪಿಕೆಯಿಂದ ಬರುವವರಿಗೆ ಅಮೃತರ ಸರ್ವೇ ಸಾಮಾನ್ಯ ಸಲಹೆಗಳು. ಸ್ತುತಿನಿರೀಕ್ಷಿತ ಮನಸ್ಸುಗಳಿಗೆ ಈ ಬಗೆಗಿನ ಚಿಕಿತ್ಸಕ ಮಾತುಗಳು ಹಿತವೆನಿಸದೆ ಕಸಿವಿಸಿಯಾದದ್ದೂ ಇದೆ.
ಗುರುಗಳಿಗೆ ಗುರುವೆನಿಸುವಷ್ಟು ಪಾಂಡಿತ್ಯವಿದ್ದರೂ ಅವರದ್ದು ನಿರಾಡಂಬರ ವ್ಯಕ್ತಿತ್ವ. ನೀಳಕಾಯದ ದೃಢನಿಲುವು. ವಿನಯತೆ ಮಡುಗಟ್ಟಿರುವ ಮೆಲುಗಂಭೀರಧ್ವನಿ. ಪಟ್ಟ ಪರಮ ಪದವಿಗಳನ್ನು ಆಸೆ ಪಟ್ಟವರಲ್ಲ. ತಾವಾಗಿಯೇ ಬಂದ ಗೌರವ ಡಾಕ್ಟರೇಟ್‌ನ ಗುರುತನ್ನೂ ಹೆಸರಿನೆದುರು ಅಂಟಿಸಿಕೊಳ್ಳಲು ಸಂಕೋಚಪಟ್ಟುಕೊಳ್ಳುವರು. ತಮ್ಮ ಉನ್ನತಿಯನ್ನು ಹೇಳಿಕೊಂಡು ಮೆರೆದವರಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮದಲ್ಲದ ಶಿಕ್ಷಣ ಕ್ರಮದಲ್ಲಿ ರೂಪು ತಳೆಯುತ್ತಿರುವ ಆಂಗ್ಲ ಗುಂಗಿನ ವಿದ್ಯಾರ್ಥಿಗಳಿಗೆ ಈ ಕನ್ನಡ ತುಳು ಅವಶ್ಯವಿನಿಸುವುದು ವ್ಯವಹಾರಿಕ ಕಾರಣಗಳಿಗಷ್ಟೇ. ಅವುಗಳಲ್ಲಿ ಕವನ ಪ್ರಕಾರವು ಸ್ವಲ್ಪಮಟ್ಟಿಗಾದರೂ ಜೀವಂತವಾಗಿದ್ದರೆ ಅದು ಶ್ರವ್ಯಗೀತೆಯಾಗಿದ್ದಾಗಲಷ್ಟೆ. ಗೇಯತೆ ಇಲ್ಲದ ನವ್ಯ ಮಾದರಿಯ ಓದುಗಬ್ಬಗಳು ಕನ್ನಡ ಐಚ್ಚಿಕ ವಿದ್ಯಾರ್ಥಿಗಳ ಪಠ್ಯವಾಗಿ ಉಸಿರಾಡುತ್ತಿವೆಯೇ ಹೊರತು ಆಕರ್ಷಕ ಅಭಿವ್ಯಕ್ತಿ ಮಾರ್ಗದಿಂದ ದೂರವುಳಿದಿವೆ. ಕಾಲದ ಅವಶ್ಯಕತೆಯ ಅರಿವು ಅಪೇಕ್ಷೆಗಳು ಅಮೃತರಿಗೆ ಚೆನ್ನಾಗಿತ್ತು. ಪುಸ್ತಕ ಮಳಿಗೆಗಳು ಕೂಡ ಕವನ ಸಂಕಲನ ಎಂದಾಕ್ಷಣ ತಮ್ಮಲ್ಲಿರಿಸಿಕೊಳ್ಳಲು ನಿರಾಕರಿಸುತ್ತಾರೆ. ವರ್ಷಕ್ಕೊಂದು ಕವನ ಸಂಕಲನದ ಪ್ರತಿಯೊಂದು ಮಾರಾಟವಾಗದಿರುವುದು ಇದಕ್ಕೆ ಕಾರಣವಾಗಿರಬಹುದು. ಅದವರ ತಪ್ಪಲ್ಲ ಬಿಡಿ. ಪರಿಸ್ಥಿತಿ ಹೀಗಿದ್ದರೂ ಕಾವ್ಯರಂಗದ ಸೃಷ್ಟಿ ಶೀಲತೆಯು ನವಿರಾಗಿ ಇದೆ ಎಂಬುದು ಆಶಾದಾಯಕ ಸಂಗತಿ.
ಛಂದೋಬದ್ಧ ಗೇಯಕಾವ್ಯ ರಚನೆಯ ಕುರಿತು ಒಲವು ತೋರಿಸಿದ ಅಮೃತರು ಕವಿಗಳಾಗುವ ಹವಣಿಕೆಯಿಂದಾಗಿ ಅವಸರಿಸಿ ತಮ್ಮಲ್ಲಿಗೆ ಬರುವವರಿಗೆ ಇನ್ನಷ್ಟು ಅಧ್ಯಯನ, ಪರಿಶ್ರಮಬೇಕೆಂಬ ಕಿವಿಮಾತು. ಹೀಗೆ ಪ್ರಾಂಜಲವಾಗಿ ಪ್ರತಿಕ್ರಿಯಿಸಿ ತಿದ್ದಿ ತೀಡುವವರು ಈಗ ವಿರಳ. ಕಾಲ ಪ್ರವಾಹದಲ್ಲಿ ಪ್ರತಿಭೆಯ ಅಸ್ತಿತ್ವ ನಷ್ಟ ಆಗಬಾರದೆಂಬ ಕಾಳಜಿ ಅವರದ್ದು . ಭ್ರಮಾಲೋಕದಿಂದ ಹೊರಬಂದು ವಾಸ್ತವತೆಯೊಂದಿಗೆ ಬಾಳಬೇಕೆಂಬ ಕಳಕಳಿಯದು.
ಅಂದೊಂದು ದಿನ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಯಾರಾಗುವರೆಂಬ ಪ್ರಸ್ತಾಪವೆದ್ದಾಗ ಬಹುತೇಕರು ಜಿಲ್ಲೆಗೆ ಕೀರ್ತಿಯಂತಿದ್ದ ಅಮೃತರ ಹೆಸರೆತ್ತಿ ಚರ್ಚಿಸತೊಡಗಿದರು. ಆಗ ಅಮೃತ ಸೋಮೇಶ್ವರರು ಪತ್ರಿಕೆಯಲ್ಲೊಂದು ಸ್ಪಷ್ಟೀಕರಣ ಕೊಟ್ಟು ‘ನಾನು ಈ ಬಗ್ಗೆ ಸರ್ವಥಾ ಆಸಕ್ತನಲ್ಲ’ ಚರ್ಚೆ ಕೈಬಿಡುವಂತೆ ವಿನಯತೆಯಿಂದ ಕೇಳಿಕೊಂಡರು.
ಅನ್ಯಮಾರ್ಗದಲ್ಲಾದರೂ ಸರಿಯೆ ಸಮ್ಮೇಳನದ ಅಧ್ಯಕ್ಷತೆಗಾಗಿ ಲಾಭಿ ನಡೆಯುವ ಈ ಕಾಲದಲ್ಲಿ ಯಾರದ್ದಾದರೂ ಪ್ರಭಾವವಿಲ್ಲದೆ ಕೊನೆಯವರೆಗೂ ದಕ್ಕದು ಎಂದು ತಿಳಿದಿದ್ದರೂ ಈ ಬಗೆಯ ಹೇಳಿಕೆ ಕೊಡುವ ಅಮೃತ ಸೋಮೇಶ್ವರರು ನಿಸ್ವಾರ್ಥತೆಯ ಪರಮಾದರ್ಶ. ಪುರಾಣ ವಸ್ತುವಿಗಷ್ಟೆ ಸೀಮಿತವಾಗಿದ್ದ ಯಕ್ಷಗಾನದಂತಹ ಶಾಸ್ತ್ರೀಯ ಪ್ರಸಂಗ ಕತೆಗಳನ್ನು ‘ಸಾವವರ ನೋವವರ’ ಮೇಲೆ ಬರೆದದ್ದು ಒಂದು ಕ್ರಾಂತಿ.
ಅಮೃತ ಸೋಮೇಶ್ವರರ ಆಸಕ್ತಿಗಳು ಅವರ ನಂತರದ ಪೀಳಿಗೆಗೂ ದಾಟಿ ಬಂದಿವೆ ಎಂಬುದು ಭರವಸೆಯ ಸಂಗತಿ. ಹಿರಿಯ ಪುತ್ರ ಚೇತನ ಸೋಮೇಶ್ವರರವರು ತಂದೆಯ ಜೀವನೋದ್ಯೋಗವಾಗಿದ್ದ ಕನ್ನಡ ಪ್ರಾಧ್ಯಾಪನದಲ್ಲಿ ಮುಂದುವರಿದರು. ಇವರು ತಂದೆಯಂತೆ ಮಾನವೀಯ ನೆಲೆಯ ವೈಚಾರಿಕ ಒಳನೋಟ ಇರುವ ಕೃತಿಗಳನ್ನು ಬರೆದವರು. ಚೇತನರ ಪತ್ನಿ ರಾಜೇಶ್ವರಿ ಕನ್ನಡ ಉಪನ್ಯಾಸಕಿ. ಕಿರಿಯಮಗ ಜೀವನ ಸೋಮೇಶ್ವರ ಹವ್ಯಾಸಿ ಯಕ್ಷಗಾನ ಕಲಾವಿದರು. ಕಿರಿಸೊಸೆ ಸತ್ಯಜೀವನ್ ಯಕ್ಷಕಲಾವಿದೆಯಾಗಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದವರು. ಅಮೃತರೇ ಬರೆದ ಗೊಂದೋಳು ನಾಟಕದ ನಾಯಕಿ ಪಾತ್ರ ಅವರಿಗೆ ವಿಶೇಷವಾದ ರಂಗಕೀರ್ತಿಯನ್ನು ತಂದುಕೊಟ್ಟಿದೆ ಎಂಬುದು ಸಂತೋಷದ ಸಂಗತಿ.
ಅಮೃತರ ಮನೆ ಒಲುಮೆಗೆ ಅವರನ್ನೊಮ್ಮೆ ಕಂಡುಮಾತನಾಡಿಸುವ ಆಕಾಂಕ್ಷೆಯಿಂದ ಬರುವವರ ಸಂಖ್ಯೆಗೆ ಎಂದಿಗೂ ಕೊರತೆ ಇಲ್ಲ. ಬರುವವರಿಗೆ ನಿರ್ದಿಷ್ಟ ಸಮಯವೂ ಇಲ್ಲ. ಹಿರಿಜೀವಕ್ಕೆ ಮಧ್ಯಾಹ್ನ ಊಟಾನಂತರ ಒಂದು ಸಣ್ಣ ವಿರಾಮ ಬೇಕಾಗಬಹುದು. ರಾತ್ರಿ ತಡವಾದರೆ ಅವರ ದಿನದ ವಿಶ್ರಾಂತಿಗೆ ಭಂಗವಾಗಬಹುದು ಎಂಬ ಕನಿಷ್ಠ ಪರಿವೆಯೂ ಇಲ್ಲದೆ ಅವರ ಭೇಟಿಗೆ ಎಲ್ಲರೂ ದೌಡಾಯಿಸುವವರೇ. ಆದರೆ ಒಲುಮೆಮಂದಿಗೆ ಈ ಬಗ್ಗೆ ಅಸಮಾಧಾನ ಇಲ್ಲ. ತಮ್ಮಲ್ಲಿಗೆ ಜನ ಬರುವುದನ್ನೇ ಆ ಕುಟುಂಬ ಸಡಗರಿಸುತ್ತದೆ. ಅಮೃತರ ಪತ್ನಿ ನರ್ಮದಾರವರ ಅನನ್ಯ ತಾಳ್ಮೆ, ಅತಿಥಿಸತ್ಕಾರದ ಹೃದಯ ವೈಶಾಲ್ಯತೆ, ನಿಷ್ಕಲ್ಮಶ ಕುಶಲೋಪರಿಯನ್ನು ನಿಜಕ್ಕೂ ಇಲ್ಲಿ ಉಲ್ಲೇಖಿಸಬೇಕಾದದ್ದೆ. ಎಷ್ಟೋ ಸಲ ಬಂದು ಹೋದವರಾದರು ‘ಭಾರೀ ಅಪರೂಪ’ ಎನ್ನುತ್ತಲೇ ಬಾಗಿಲು ತೆರೆಯುವವರು. ತಿನಿಸಿತ್ತು ಸತ್ಕರಿಸುವವರು. ಅಮೃತರೊಂದಿಗೆ ಕುಳಿತು ತಾವೂ ಮಾತಿಗಿಳಿಯುವವರು.
ಅಮೃತರ ಉಪನ್ಯಾಸಗಳಂತೂ ಜ್ಞಾನವಾರಿಧಿಯ ನೌಕಾಯಾನ. ಬೃಹತ್ ಸಮಾವೇಶಗಳಲ್ಲಿ ನುಡಿದವರಿಗೆ ಮನೆಪಕ್ಕದ ದಿನಸಿ ಅಂಗಡಿಯ ಶುಭಾರಂಭ ಸಮಾರಂಭದ ಆಶಯ ಭಾಷಣಕ್ಕೂ ಅದೇ ಸಮಾನಾಸಕ್ತಿ. ದೈಹಿಕವಾಗಿ ಚೈತನ್ಯ ಇರುವ ಕಾಲಕ್ಕೆ ತಮ್ಮನ್ನು ಭಾಷಣಕ್ಕೆ ಕರೆದಲ್ಲಿಗೆಲ್ಲಾ ತೆರಳಿ ಸರದಿ ಬರುವವರೆಗೂ ಕಾದು ದಣಿದು ಬಂದವರು. ಅವರಲ್ಲೊಂದು ಸ್ವಂತ ವಾಹನವಿರಲಿಲ್ಲ. ಬಸ್ಸನ್ನೇರಿ ಹೋದರೆ ಸಂಘಟಕರು ಮನೆಗೆ ಮತ್ತೆ ತಂದು ಬಿಡುವರೆಂಬ ಖಾತ್ರಿಯೂ ಇರಲಿಲ್ಲ. ಎಷ್ಟೋ ಸಲ ಸಭಾ ಕಾರ್ಯಕ್ರಮಗಳ ಹಣೆಬರೆಹದಂತೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗದೆ ತಡರಾತ್ರಿ ಮುಕ್ತಾಯವಾದಾಗ ಮನೆಗೆ ಹಿಂದಿರುಗುವ ವ್ಯವಸ್ಥೆ ಇಲ್ಲದೆ ದಿಕ್ಕು ತೋಚದೆ ನಿಂತದ್ದಿದೆ ಎಂಬುದನ್ನು ಸ್ವತಃ ಅಮೃತರೇ ನೆನಪಿಸಿಕೊಳ್ಳುತ್ತಾರೆ . ಹೀಗಿದ್ದರೂ ಈಗಿನ ಕೆಲವರಂತೆ ತಮ್ಮ ಭಾಷಣ ಮುಗಿಸಿ ಸಭಾಮಧ್ಯೆ ವೇದಿಕೆಯಿಂದ ಇಳಿದು ಬರುವ ಜಾಯಾಮಾನ ಅಮೃತರಿಗೆ ಸಲ್ಲದು.
ಅಧ್ಯಯನ, ಸಂಶೋಧನೆ, ಜಾನಪದ, ಪ್ರಾಧ್ಯಾಪನ, ಬರೆವಣಿಗೆ, ಉಪನ್ಯಾಸ, ಯಕ್ಷಗಾನ, ಸಿನಿಮಾ, ರಂಗಭೂಮಿ, ವೈಚಾರಿಕ ಹೋರಾಟ ಅಬ್ಬಬ್ಬಾ ಓರ್ವ ವ್ಯಕ್ತಿ ಇಷ್ಟೆಲ್ಲಾ ರಂಗದಲ್ಲಿ ಕೆಲಸ ಮಾಡಲು ಸಾಧ್ಯವೇ? ಆದರೂ ಅಮೃತರೇಕೆ ಇನ್ನೂ ತುಳುನಾಡಿನ ಸಾಹಿತಿಯಾಗಿಯಷ್ಟೆ ಉಳಿದಿದ್ದಾರೆ ? ಹತ್ತು ಕೃತಿ ಬರೆದವರಿಗೆ ಒಲಿದ ಪಂಪ ಪ್ರಶಸ್ತಿಯೇ ಮೊದಲಾದ ರಾಜ್ಯ – ರಾಷ್ಟ್ರ ಗೌರವಗಳು ನೂರಕ್ಕಿಂತ ಹೆಚ್ಚು ಉದ್ಗ್ರಂಥಗಳನ್ನು ತಲುಪುವುದಕ್ಕೆ ಅಡ್ಡಿಯಾದರೂ ಏನು? ಅಮೃತ ಸೋಮೇಶ್ವರ ಜಾತಿಸಮುದಾಯದ ಪ್ರಾತಿನಿಧಿಕ ಸಾಹಿತಿಯಾಗಿ ಗುರುತಿಸಿಕೊಳ್ಳದ್ದೇ? ರಾಜಕೀಯ ನಂಟು ಬೆಸೆದುಕೊಳ್ಳದಿದ್ದದ್ದೇ ? ಅಥವಾ ಎಲ್ಲೂ ಯಾರಲ್ಲೂ ಯಾವುದಕ್ಕೂ ಲಾಭಿ ನಡೆಸದ ಅವರ ಸೌಶೀಲ ವಿನಮ್ರತೆಯೇ?
ಇವಲ್ಲದಿದ್ದರೆ ಅಬ್ಬಕ್ಕರಾಣಿ, ಕಾರ್ನಾಡ್ ಸದಾಶಿವ ರಾವ್, ಕಲ್ಯಾಣಸ್ವಾಮಿ, ಉಪ್ಪಿನಂಗಡಿ ಮಂಜಬೈದ್ಯ ಮೊದಲಾದವರಂತೆ ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕರ ಬಗೆಗಿದ್ದ ನಿರ್ಲಕ್ಷ್ಯವೇ?
ಇಂದು ಅಮೃತರ ದೇಹ ಕೇಳುತ್ತಿಲ್ಲವಾದರೂ ಮನಸ್ಸು ಅಂದಿನದ್ದೇ ಉತ್ಸಾಹದಲ್ಲಿದೆ. ಅವರಿಗೆ ಮರೆವು ಬಂತೆಂದರೆ ಗ್ರಂಥಾಲಯಕ್ಕೆ ಬೆಂಕಿ ಹತ್ತಿಕೊಂಡಂತೆ. ಆ ಮರೆವಿಗೆ ತಮ್ಮನ್ನು ವಶವಾಗಿಸದ ಅಮೃತರು ಈಗಲೂ ಮುಖಗುರುತು ಹಿಡಿದು ಮಮತೆಯಿಂದ ಮಾತನಾಡುತ್ತಾರೆ. ನೀವು ಹೇಗಿದ್ದೀರಿ ಎಂದು ಹೋದವರು ಕೇಳುವ ಮೊದಲೇ ಅವರೇ ಆ ಪ್ರಶ್ನೆಯನ್ನು ಹೋದವರಿಗೆ ಕೇಳಿ ಬಿಡುತ್ತಾರೆ. ಅಂದೆಂತಹ ಜೀವನ ಬದ್ಧತೆ.
ಅಮೃತರಿಗೆ ಅಮೃತರೇ ಸಾಟಿ. ಈಗ 88. ಎರಡು ಎಂಟುಗಳು ಜೊತೆಗಿವೆ. ಹೀಗೆಯೇ ಎರಡು ಒಂಬತ್ತುಗಳು ಜೊತೆಗಾಗುವ ಜನ್ಮದಿನಾಚರಣೆಯಲ್ಲಿ ಅಮೃತರ ನುಡಿಗಳನ್ನು ಕೇಳುಕೇಳುತ್ತಾ ಬರಿಯ ಕಿವಿ ಮಾತ್ರವಲ್ಲ. ಹೃದಯವನ್ನೂ ತುಂಬಿಸಿಕೊಳ್ಳುವ ತವಕದಲ್ಲಿದ್ದೇನೆ.
- ಡಾ. ಅರುಣ್ ಉಳ್ಳಾಲ್, ಸಹಾಯಕ ಪ್ರಾಧ್ಯಾಪಕರು, ಸಂತ ಆಗ್ನೆಸ್ ಕಾಲೇಜು ( ಸ್ವಾಯತ್ತ) ಮಂಗಳೂರು
[email protected]
3 Comments
ಶ್ರೀ ಅಮೃತ ಸೋಮೇಶ್ವರರ ಬಗ್ಗೆ ಅರುಣ್ ಉಳ್ಳಾಲ್ ರವರು ಬರೆದಿರುವ ಲೇಖನ ಬಹಳ ಗೌರವಯುತವಾಗಿದೆ.
ಅಸಾಧಾರಣ ವ್ಯಕ್ತಿಯನ್ನು ಕುರಿತು ಬರೆಯುವಾಗ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಆ ಎಚ್ಚರದೊಂದಿಗೆ
ನಯ ವಿನಯಗಳೊಡನೆ ಅರುಣ್ ಸರ್ ಚಿನ್ನವನ್ನು ಅನಾವರಣಗೊಳಿಸಿದ್ದಾರೆ.
” ಅವರಿಗೆ ಮರೆವು ಬಂತೆಂದರೆ ಗ್ರಂಥಾಲಯಕ್ಕೆ ಬೆಂಕಿ ಹತ್ತಿಕೊಂಡಂತೆ.. ” – ಈ ಹೋಲಿಕೆ ಧ್ವನಿಯುಕ್ತವಾಗಿದೆ.
ಅರುಣ್ ರವರಿಗೆ ಧನ್ಯವಾದಗಳು ಹಾಗೂ 88 ರ ಯುವಕವಿ ಶ್ರೀ ಅಮೃತರಿಗೆ ಅಭಿನಂದನೆಗಳು!!
ಸಮಯಾರ್ಥಪೂರ್ಣವಾದ ಲೇಖನವನ್ನು ಪ್ರಸ್ತುತಿ ಮಾಡಿದ roovari.com ಗೆ ವಂದನೆಗಳು.
ನನ್ನ ಮಾನಸಿಕ ಗುರುಗಳು ಅಮೃತರು. ಅಮೃತಕ್ಕೆ ಸಮ ಅಮೃತವೇ. ಅಂತೆಯೇ ಅಮೃತರಿಗೆ ಸಮ ಅಮೃತರೇ. ಆ ಘನ ವ್ಯಕ್ತಿತ್ವ, ಸರಳತೆ ಇನ್ನಾರಲ್ಲೂ ಕಾಣಲು ಸಾಧ್ಯವಿಲ್ಲ.. ಡಾ. ಅರುಣ್ ಬಹಳ ಚೆನ್ನಾಗಿ ಅವರ ಬಗ್ಗೆ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅಭಿನಂದನೆಗಳು ಅರುಣ್ ಅವರಿಗೆ.
ನಾನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾಗ ಶ್ರೀಯುತ ಅಮೃತ ಸೋಮೇಶ್ವರ ಸಾರ್
ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರ ಧೀಮಂತ ವ್ಯಕ್ತಿತ್ವವನ್ನೂ ಸರಳತೆಯನ್ನೂ ನೋಡಿದ್ದು ಇಂದಿಗೂ ಮರೆಯಲಾಗದ ನೆನಪು. ಅವರ ಬಗ್ಗೆ ಬರೆದ ವಿವರಣಾತ್ಮಕ ಲೇಖನ ಓದಿ ತುಂಬಾ ಖುಷಿ ಆಯ್ತು. ಲೇಖಕರಿಗೆ ಧನ್ಯವಾದಗಳು.🙏