ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಬರಹದ ಮೊದಲ ಮೆಟ್ಟಿಲಿನ ಕಾಲಘಟ್ಟದಲ್ಲಿ ಬರವಣಿಗೆಯ ಪ್ರೀತಿ ಮತ್ತು ಉತ್ಸಾಹವನ್ನು ತನ್ನದನ್ನಾಗಿಸಿಕೊಂಡು ಬರೆದವರಲ್ಲಿ ಪ್ರಮುಖ ಲೇಖಕಿ ಚಂದ್ರಭಾಗೀ ಕೆ.ರೈ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮರ್ಮು ಎಂಬಲ್ಲಿ ಶ್ರೀ ಸುಬ್ಬಯ್ಯ ಆಳ್ವ ಮತ್ತು ಶ್ರೀಮತಿ ತಂಗಮ್ಮ ದಂಪತಿಗಳಿಗೆ ಮಗಳಾಗಿ 29.10 1916ರಲ್ಲಿ ಜನಿಸಿದವರು ಇವರ ಶಾಲಾ ಅಭ್ಯಾಸ ನಾಲ್ಕನೇ ತರಗತಿಯವರೆಗೆ. ಪುರಾಣ ಶಾಸ್ತ್ರಗಳಲ್ಲಿ ಪರಿಣಿತರಾಗಿ, ಬಾಲ್ಯದಲ್ಲಿಯೇ ನಾಟಕಗಳ ರಚನೆಯನ್ನು ಮಾಡುತ್ತಿದ್ದರು. ಮನೆಯಲ್ಲಿ ಇದ್ದ ಸಾಹಿತ್ಯಿಕ ವಾತಾವರಣ ಅವರಿಗೆ ಉತ್ತಮ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಒದಗಿಸಿತ್ತು. ಕರಾವಳಿ ಕರ್ನಾಟಕದ ಸಾಹಿತ್ಯಕ ಸಾಂಸ್ಕೃತಿಕ ಜಗತ್ತಿನಲ್ಲಿ ಭೀಷ್ಮನಂತೆ ಗುರುತಿಸಿಕೊಂಡಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಸಹೋದರಿ ಇವರು. ‘ತನ್ನ ಸಾಹಿತ್ಯದ ಒಲುಮೆಯ ತಾಯಿ ಬೇರು ತನ್ನ ತಂದೆಯಿಂದ ಲಭಿಸಿತು’ ಎಂದು ಹೆಮ್ಮೆಯಿಂದ ನೆನೆಯುತ್ತಿದ್ದರು. ಆ ಕಾಲಘಟ್ಟದ ರೀತಿ ನೀತಿಗಳಂತೆ ಎಳವೆಯಲ್ಲಿಯೇ ರಾಯಿಯ ಶ್ರೀ ಕೃಷ್ಣಪ್ಪ ರೈಯವರೊಂದಿಗೆ ಇವರ ವಿವಾಹ ನಡೆದು, ಕೂಡು ಕುಟುಂಬದಲ್ಲಿ, ಕೃಷಿ ಮನೆತನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಕನ್ನಡ ನಾಡಲ್ಲಿ ಸ್ವಾತಂತ್ರ್ಯ ಚಳುವಳಿ ಅದರ ಭಾಗವಾಗಿದ್ದ ಸಮಾಜ ಸುಧಾರಣಾ ಚಳುವಳಿಗಳು ತುಂಬಾ ಸಕ್ರಿಯವಾಗಿದ್ದ ಕಾಲ ಅದು. ಅಲ್ಪಸ್ವಲ್ಪ ಶಿಕ್ಷಣ ಪಡೆಯುತ್ತಿದ್ದ ಸ್ತ್ರೀಯರು ಮನೆಯಲ್ಲಿನ ಸಾಹಿತ್ಯಿಕ ಪ್ರಭಾವಗಳಿಂದ ಸ್ಪೂರ್ತಿಗೊಂಡೋ ಇಲ್ಲವೇ ಶೀಘ್ರ ವಿವಾಹ, ಶೀಘ್ರ ವೈಧವ್ಯಗಳಿಂದ ಅನುಭವಿಸುತ್ತಿದ್ದ ಕಾಲಿತನವನ್ನು ತುಂಬಿಕೊಳ್ಳಲೆಂದೇ ಬರೆಯಲು ಕೈ ಹಾಕಿದರು. ಮನೆಯ ಸೀಮಿತ ಚೌಕಟ್ಟಿನಲ್ಲಿ ಕೌಟುಂಬಿಕ ಸಮಾರಂಭಗಳಿಗೆ ಸೀಮಿತರಾಗಿ, ಸಮಯದೊಡನೆ ಎಲ್ಲಾ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾ ಬರವಣಿಗೆಯನ್ನು ನಡೆಸಿದರು. ಸಾಂಪ್ರದಾಯಿಕತೆಗೆ ಒತ್ತುಕೊಟ್ಟು ಆ ಕಾಲದ ಹೆಚ್ಚಿನ ಲೇಖಕಿಯರು ಬರೆಯುತ್ತಿದ್ದರೆ, ಚಂದ್ರಭಾಗಿ ರೈ ಅವರೆಲ್ಲರಿಗಿಂತ ಭಿನ್ನರಾಗಿ ಅಪ್ಪಟ ವೈಚಾರಿಕ ಲೇಖನಗಳನ್ನು ಬರೆದರು.
ಮಹಿಳೆ ಎಂದರೆ ಸಮಾಜದ ಅರ್ಧಾಂಗ ಮಾತ್ರವಲ್ಲ ಮುಖ್ಯಾಂಗ ಎಂದರೂ ಸಲ್ಲುವುದು. ಪುರುಷರಿಗಾದರೂ ಸೀಮಿತ ಕೆಲಸ. ಮಹಿಳೆ ಹಾಗಲ್ಲ. ಮನೆಯ ಕೆಲಸ ಮತ್ತು ಮಕ್ಕಳ ಪಾಲನೆ ಎಂಬುದು ಬಿಡುವಿಲ್ಲದ ಕೆಲಸವಾಗಿರುತ್ತದೆ. ಅದರ ಮೇಲೆ ಇತರ ಬಂಧು ಬಳಗ, ಅತಿಥಿ ಅಭ್ಯಾಗತರ ಸರ್ವ ಕೆಲಸವೂ ಆಕೆಯ ಪಾಲಿಗೆ ಇದೆ. ಆದ್ದರಿಂದ ಬಿಡುವು ಎಂಬುದನ್ನು ಮಾಡಿಕೊಳ್ಳಬೇಕಲ್ಲದೆ ಬೇರೆ ದಾರಿ ಇಲ್ಲ. ಜಲ್ಲಿ ಗುದ್ದುವ ಕೆಲಸ ಮಾಡಿದರೂ ಅದು ಒಂದು ಕಡೆ ರಾಶಿ ಬಿದ್ದು ಇಂತಿಷ್ಟೇ ಕೆಲಸ ಆಯಿತು ಎಂಬ ಲೆಕ್ಕ ಸಿಗುತ್ತದೆ. ಆದರೆ ಗೃಹಿಣಿ ಆದವಳು ಮಾಡುವ ಕೆಲಸ ಕಣ್ಣಿಗೆ ಕಾಣಿಸದ ಇತಿಮಿತಿಗಳಿಲ್ಲದ ಕೆಲಸವಾಗಿದೆ. ಗೃಹಿಣಿ ಎಂದರೆ ಮನೆಯ ಯಜಮಾನಿ ಮತ್ತು ಸೇವಕಿ ಎರಡೂ ಆಗಿದ್ದಾಳೆ. “ಗೃಹ ಆಗುವುದು ಕಟ್ಟಡದಿಂದಲ್ಲ ಗೃಹಿಣಿಯಿಂದ. ಹೆಣ್ಣು ಮನುಕುಲದ ಕಣ್ಣು ಎಂಬುದನ್ನು ಬಲ್ಲವರು ಅರಿತಿದ್ದಾರೆ.” ಎಂದು ದಿಟ್ಟೆಯಾಗಿ ಬರೆದವರು ಚಂದ್ರಭಾಗಿ ಕೆ.ರೈ.
ಸರಿ ಸುಮಾರು 30ಕ್ಕೂ ಮೀರಿದ ವೈಚಾರಿಕ ಲೇಖನಗಳನ್ನು ಇವರು ಬರೆದಿದ್ದಾರೆ. ಈ ಲೇಖನಗಳು ಆ ಕಾಲದಲ್ಲಿ ಪ್ರಕಟಣೆಗೊಳ್ಳುತ್ತಿದ್ದ ‘ಸರ್ವೋದಯ’, ‘ಜ್ಯೋತಿ’ , ‘ನವ ಭಾರತ’, ‘ನವಯುಗ’, ‘ರಾಯಭಾರಿ’ ‘ಪ್ರಪಂಚ’,ಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದವು. ಐತಿಹಾಸಿಕ, ಸಾಮಾಜಿಕ, ಜಾನಪದ, ಸ್ಥಳ ಪುರಾಣ, ಸಂದರ್ಶನ ಹೀಗೆ ಹಲವು ಸ್ವರೂಪಗಳೊಂದಿಗೆ ವಿಭಿನ್ನ ವಿಚಾರಗಳ ಬಗೆಗೂ ಲೇಖನಗಳನ್ನು ಬರೆದಿದ್ದಾರೆ. ಕೆಲವು ಶೀರ್ಷಿಕೆಗಳನ್ನು ಹೆಸರಿಸುವುದಾದರೆ “ಸ್ತ್ರೀ ವಿದ್ಯಾಭ್ಯಾಸವೂ ಹಳ್ಳಿಗಳ ಸ್ತ್ರೀಯರೂ” , ” ಮಾಣಿಗ – ಬಲ್ಲಾಳ ಜಾತಿ ಸಮಿತಿಯ ಪರಿಣಾಮ” , “ಹರಿಜನೋದ್ಧಾರ” “ವರದಕ್ಷಿಣೆ” , “ಪರಿವಾರ ಭೂತಗಳು” , “ತುಳು ಜಾನಪದ ಕನ್ನಡದಂತೆಯೇ ಹುಲುಸಾಗಿದೆ” ಇತ್ಯಾದಿ ವಸ್ತುವೈವಿಧ್ಯ, ವಿಚಾರಗ್ರಹಿಕೆ, ಸಮಾನತೆಯ ಆಶಯ, ಸಮ. ಸಮಾಜದ ಲೋಕದೃಷ್ಟಿ ಹೀಗೆ ಅವರ ವೈಚಾರಿಕ ದೃಷ್ಟಿಕೋನವೂ ಪ್ರಕಟಗೊಂಡಿದೆ.
ಅವರು ಬರೆದ ನೀಳ್ಗತೆ “ಮಂಗಳ – ಅಮಂಗಳ” ಇದು 1958ನೇ ಇಸವಿಯ ಒಂದಾಣೆ ಮಾಲೆಯಲ್ಲಿ ಪ್ರಕಟಗೊಂಡಿತ್ತು. ಈ ಕಥೆಯ ನಾಯಕಿ ವಿಧವೆ ಮತ್ತು ಎಳೆಯ ಮಗು ಸತೀಶನ ತಾಯಿಯೂ ಆಗಿರುವ ಇಂದಿರಾ. ಮುಂದೆ ಸತೀಶ ಬೆಳೆದು ದೊಡ್ಡವನಾಗುವವರೆಗೂ ಅವಳು ಎದುರಿಸಿದ ತೊಂದರೆಗಳ ಮಹಾಪೂರದ ವಿವರಣೆ ಇದೆ. ಇಂದಿರಾಳಂತಹ ವಿಧವೆ ಹೆಣ್ಣು ದಾಟಿ ಬಂದ ಅಗ್ನಿ ದಿವ್ಯಗಳೊಂದಿಗೆ ಎದುರಿಸಿದ ವಿಧಿ ನಿಷೇಧಗಳೂ ಲೇಖಕಿಯನ್ನು ಕಾಡಿದೆ. ಮಗನ ಮದುವೆಯ ದಿನ ಎಲ್ಲರ ಕೆಂಗಣ್ಣಿನ ನಡುವೆ ಕರುಳಕುಡಿಯ ಒತ್ತಾಯಕ್ಕೆ ಮಣಿದು ಮದುವೆ ಮಂಟಪದ ಒಳ ಹೊಕ್ಕು ಮಗನಿಗೂ ಸೊಸೆಗೂ ಅಕ್ಷತೆ ಹಾಕಿ ಹರಸುತ್ತಾಳೆ. ವಿಧವೆಯ ಅಕ್ಷತೆಯಿಂದ ಅನಾಹುತಗಳು ಏನು ಆಗದೆ ಮಗನ ಸಂಸಾರ ಸುಖ ಸಂತೋಷದಲ್ಲಿ ಸಾಗುತ್ತದೆ. ಇಲ್ಲಿಗೆ ಕಥೆ ಮುಕ್ತಾಯಗೊಂಡರೂ ಈ ಸಂದರ್ಭದಲ್ಲಿ ಮಗ ಸತೀಶ ತಾಯಿ ಇಂದಿರಾಳ ಬಳಿ ಕೇಳುವ ಪ್ರಶ್ನೆಗಳು ಈ ಸಮಾಜ ವಿಧವೆಯರಿಗೆ ವಿಧಿಸಿರುವ ನೀತಿ ನಿಯಮ ವಿಧಿ ನಿಷೇಧಗಳು ಅತಿಕ್ರೂರವಾದವು ಎನ್ನುತ್ತದೆ. ಹೆಣ್ಣನ್ನು ನಿಕೃಷ್ಟವಾಗಿ ನಡೆಸಿಕೊಂಡು, ವಿದುರನಾದರೂ ಗಂಡಸಿಗೆ ವಿಭಿನ್ನ ಸವಲತ್ತು ಗಳೊಂದಿಗೆ ‘ಮರು ವಿವಾಹ’ದ ಕಲ್ಪನೆ ಹೇಗೆ ಬಂತು ಎಂದು ಕೇಳುತ್ತಾ, ಹೀಗೆ ಇರುವ ಕಟ್ಟು ಪಾಡುಗಳನ್ನು ಅವುಗಳ ಹಿನ್ನೆಲೆಯನ್ನು ವಿಶ್ಲೇಷಿಸುವ ಕೆಲಸಗಳನ್ನು ತಮ್ಮ ಬರಹಗಳಲ್ಲಿ ವಿಷಯವಸ್ತುವಾಗಿಸುತ್ತಾರೆ. ಇಂತಹ ವೈಚಾರಿಕ ಚಿಂತನೆಯನ್ನು ಪ್ರತಿಪಾದಿಸಿದರೂ ವಿಮರ್ಶಕರು ಅವರನ್ನು ಗುರುತಿಸಲಿಲ್ಲ. ಬರಹ, ಪ್ರಕಟಣೆಯೊಂದಿಗೆ ಅದು ಸಂಕಲಿತವಾಗಿ ಕೃತಿ ರೂಪದಲ್ಲಿ ಬರಬೇಕು ಎಂಬ ದೂರದೃಷ್ಟಿ ಇಲ್ಲದೆ ಮೂವತ್ತಕ್ಕೂ ಹೆಚ್ಚು ಲೇಖನಗಳು ಬಿಡಿಬಿಡಿಯಾಗಿ ಉಳಿದವು. ಇದೆಲ್ಲಕ್ಕೂ ಹೆಚ್ಚಾಗಿ 1920ರಲ್ಲಿ ರಾಷ್ಟ್ರೀಯ ಚಳುವಳಿಯ ಭಾಗವಾಗಿ ಎಸ್. ಯು. ಪಣಿಯಾಡಿಯವರು ನಡೆಸಿದ ತುಳು ಭಾಷಾ ಚಳವಳಿಯ ಪರಿಣಾಮವಾಗಿಯೋ ಏನೋ ತುಳುವಿನಲ್ಲೂ ಸಾಹಿತ್ಯ ರಚನೆ ಮಾಡಿದ್ದಾರೆ. ‘ಗಾಂಧೀ ಕಬಿತೆ’, ‘ ‘ಪುಣ್ಣಮೆ’, ‘ಪೊರ್ಲೆಪೊರ್ಲು’ ಮೊದಲಾದ ಹಲವು ತುಳು ಕವಿತೆಗಳನ್ನು ರಚಿಸಿ ಅವುಗಳನ್ನು ಬಾನುಲಿಯಲ್ಲಿ ವಾಚಿಸಿದ್ದಾರೆ. ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆದ ಪ್ರಪ್ರಥಮ ತುಳು ಸಮ್ಮೇಳನದಲ್ಲಿ ‘ತೂದು ಮುಗಿಯಂದೆ’ ಎಂಬ ಕವಿತೆಯನ್ನು ವಾಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ ಸಾಹಿತ್ಯದ ಕೃತಿಗಳ ರಚನೆ ಮಾತ್ರವಲ್ಲ ನಾಟಕ ಅಭಿನಯದ ಬಗೆಗೂ ಆಸಕ್ತಿ ಹೊಂದಿದ್ದರು. ಎಳವೆಯಲ್ಲಿಯೇ ನಾಟಕ ಬರೆದು, ಮನೆಮಂದಿಯೊಂದಿಗೆ ಸ್ವತಃ ಅಭಿನಯಿಸಿದವರು. ಇವರ ಈ ಎಲ್ಲ ಪ್ರವೃತ್ತಿಗೆ ಗಂಭೀರ ಚಾಲನೆ ದೊರೆತಿದ್ದು ಅವರ 20ನೆಯ ವಯಸ್ಸಿನಲ್ಲಿ. ವಿವಾಹಿತರಾಗಿ ಕೊಯಿಲದ ಪುಟ್ಟ ಹಳ್ಳಿ ರಾಾಯಿಗೆ ಬಂದ ಮೇಲೂ ಜಮೀನ್ದಾರಿ ಮನೆತನದಲ್ಲಿ ಇದ್ದರೂ ಎಲ್ಲರನ್ನು ಒಗ್ಗೂಡಿಸಿಕೊಂಡು ನಾಟಕ ಅಭಿನಯ ನಡೆಸುತ್ತಿದ್ದರು. ಕೃಷಿ ಕುಟುಂಬದ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ಮಧ್ಯೆಯೂ ತಮ್ಮ ಪ್ರತಿಭೆ ತುಕ್ಕು ಹಿಡಿಯದಂತೆ ಕ್ರಿಯಾಶೀಲರಾಗಿದ್ದರು.
ಸಾಹಿತ್ಯದ ಜೊತೆಗೆ ಕಸದಿಂದ ಕಲೆಯ ಕುರಿತು ಸಂಶೋಧಿಸಿದಾಕೆ ಇವರು. ಆ ಹುಡುಕುವಿಕೆ, ಹೊಸತಿನ ಅನ್ವೇಷಣೆಗೆ ಉತ್ತರವಾಗಿ ಮೂಡಿ ಬಂದದ್ದು ಅಡಿಕೆ ಸಿಪ್ಪೆ , ಗೆರಟೆ , ಕಪ್ಪೆ ಚಿಪ್ಪು , ಮುಳ್ಳಿ ಹುಲ್ಲು ಇತ್ಯಾದಿಗಳಿಂದ ತಯಾರಿಸಿದ ಕಲಾತ್ಮಕ ವಸ್ತುಗಳು. ನಾಟ್ಯ ಮಯೂರಿ, ದೀಪ ಧಾರಿಣಿ, ಬುಟ್ಟಿ ಮನೆ, ಹೂದಾನಿ, ನವಿಲು ಹೀಗೆ ತಯಾರಾಗಿರುವ ಕಲಾಕೃತಿಗಳ ಮೂಲ ತಿಳಿದಾಗ ಎಂತವರೂ ಹುಬ್ಬು ಮೇಲೇರಿಸದೆ ಇರಲಾರರು. ಶ್ರೀಮತಿ ಚಂದ್ರಭಾಗಿಯವರ ನೈಪುಣ್ಯತೆಗೆ ತಲೆದೂಗಿ ಅಖಿಲ ಭಾರತ ದ್ವಿತೀಯ ಕೈಗಾರಿಕಾ ಸಪ್ತಾಹ ಹಾಗೂ ಇನ್ನಿತರ ಸಂಘ, ಸಂಸ್ಥೆಗಳು ಇವರಿಗೆ ಆದರದೊಂದಿಗೆ ಪ್ರಶಸ್ತಿ ಪತ್ರಗಳನ್ನು ಇತ್ತು ಗೌರವಿಸಿವೆ. ಅಸ್ಮಿತೆಯ ಅರಿವಿ ನಾಟಕದಲ್ಲಿ ಹೆಣ್ಣು ಮಕ್ಕಳು ಬರಹವನ್ನು ನಡೆಸುತ್ತಿದ್ದ ಕಾಲ 20ನೆಯ ಶತಮಾನದ ಪೂರ್ವಾರ್ಧದಲ್ಲಿ ತಮ್ಮ ವೈಚಾರಿಕ ಬರಹಗಳಿಂದ ಗಮನ ಸೆಳೆದವರು ಚಂದ್ರಭಾಗಿ ಕೆ. ರೈ ಆಗಿದ್ದು ವಿಮರ್ಶಕರ ಗಮನ ಸೆಳೆಯದಿದ್ದರೂ ಹಂಪಿ ಕನ್ನಡ ವಿವಿಯು ಪ್ರಕಟಿಸಿರುವ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ ಇವರು ದಾಖಲಾಗಿದ್ದಾರೆ ಇವರ ಹೆಸರಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘ ರೀ ಅವಿಭಾಜಿತ ದಕ್ಷಿಣ ಕನ್ನಡ ಕಾಸರಗೋಡು ಇವರು ಅವರ ಮಗಳು ಕಾಂತಿರಯ್ಯ ಅವರು ಇರಿಸಿದ ದತ್ತಿ ನದಿಯಿಂದ ದತ್ತಿ ಪ್ರಶಸ್ತಿಯನ್ನು ವರ್ಷನ್ ಪ್ರತಿ ಲೇಖಕಿಯರ ಹಸ್ತಪ್ರತಿಯ ಬರಹಗಳಿಗೆ ನೀಡುತ್ತಿದೆ ಉದಯೋನ್ಮುಖ ಬರಹಗಾರರನ್ನು ಬೆಳೆಸುವ ಉದ್ದೇಶ ಇದರ ಹಿಂದಿನ ಆಶಯವಾಗಿದೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕುಟುಂಬದಲ್ಲಿ ಇದ್ದರೂ ಬರಹ ಮತ್ತು ಬದುಕನ್ನು ಪ್ರೀತಿಯಿಂದ ಮುನ್ನಡೆಸಿದವರು ಚಂದ್ರಬಾಗಿ ಕೆರಯ್ಯ ಅವರು ನಿತ್ಯ ಉತ್ಸಾಹಿಯಾಗಿ ಧೀಮಂತ ನಿಲುವಿನಿಂದ ಎಲ್ಲರ ಗಮನ ಸೆಳೆಯುವವರು. ಅವರ ಭೌತಿಕವಾದ ಆಕರ್ಷಕ ನಿಲುವು ಚಿಂತನೆಯ ಬೌದ್ಧಿಕವಾಗಿಯು ಗಮನ ಸೆಳೆಯುವಂತಹದು ಗಂಡ ಮಕ್ಕಳು ಮೊಮ್ಮಕ್ಕಳೊಂದಿಗೆ ರಾಯಿಯ ರಾಮ ಸದನದಲ್ಲಿ ತುಂಬಾ ಬಾಳುವೆಯನ್ನು ಬಾಳಿದವರು ಬದುಕಿನ ನಿಲುಮೆಯಿಂದ ಬಾಳು ಶ್ರೀಮಂತವಾದರೆ ಬರಹದ ಧೋರಣೆ ಚಿಂತನೆ ಮೌಲ್ಯಗಳು ಒಂದಿಗೆ ಸಾಹಿತ್ಯ ಚಿರಕಾಲ ಉಳಿಯುತ್ತದೆ ಇಂತಹ ಧೀಮಂತ ವ್ಯಕ್ತಿತ್ವ ಶ್ರೀಮತಿ ಚಂದ್ರಭಾಗೀ ಅವರದು ತನ್ನ ಕಾಲದ ಚಿಂತನೆಗಳಿಂದ ನೂರು ವರ್ಷಗಳಷ್ಟು ಮುಂದಿನ ಆಲೋಚನೆಗಳನ್ನು ಹೊಂದಿದ್ದ ಚಂದ್ರ ಭಾಗಿಯವರು ಸ್ತುತ್ಯಾರ್ಹರು.
ಡಾ.ಜ್ಯೋತಿ ಚೇಳಾಯ್ರು ಕಳೆದ 27ವರ್ಷಗಳಿಂದ ನಿರಂತರ ಅಧ್ಯಯನ ಮತ್ತು ಅಧ್ಯಾಪನದ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳು ಮತ್ತು ಕನ್ನಡದಲ್ಲಿ ಕವಿತೆ, ಲೇಖನ, ಅಂಕಣ ಬರಹ ಮತ್ತು ಸಂಶೋಧನಾ ಬರಹಗಳ ಕೆಲಸವನ್ನು ಮಾಡುತ್ತಾ ಬಂದವರು.ಪ್ರಸ್ತುತ ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಹಂಪಿ ವಿವಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಿಂದ ಡಾಕ್ಟರ್ ಎ. ಸುಬ್ಬಣ್ಣ ರೈ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧ “ಕರಾವಳಿ ಕರ್ನಾಟಕದಲ್ಲಿ ಕೃಷಿ ಸಂಸ್ಕೃತಿ ಪಲ್ಲಟ ಮತ್ತು ಸಾಹಿತ್ಯಿಕ ಅಭಿವ್ಯಕ್ತಿ.”
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾಗಿ ಸಂಘದ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬ ಹೆಗ್ಗಳಿಕೆ ಇವರದು.