Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮನೆ, ಮನಗಳಲ್ಲಿ ಕನ್ನಡದ ದೀಪ ಬೆಳಗಿಸಿದ ಡಾ. ಡಿ.ಎಸ್. ಕರ್ಕಿ 
    Article

    ಮನೆ, ಮನಗಳಲ್ಲಿ ಕನ್ನಡದ ದೀಪ ಬೆಳಗಿಸಿದ ಡಾ. ಡಿ.ಎಸ್. ಕರ್ಕಿ 

    November 15, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ ಮತ್ತು ಆ ಗೀತೆಯಲ್ಲಿ ಅಡಗಿರುವ ಕನ್ನಡತ್ವವನ್ನು ಅನುಭವಿಸದವರೇ ಇಲ್ಲ. ಇಂದಿಗೂ ಆ ಹಾಡನ್ನು ಕೇಳಿದರೆ ಮೈಮನಗಳಲ್ಲಿ ಇರುವ ನರವನ್ನು ಹೊಸೆದು ಬತ್ತಿ ಮಾಡಿ ದೀಪ ಬೆಳಗಿದ ಅನುಭವ. ಅಷ್ಟೊಂದು ಉತ್ಕಟ ಭಾಷಾ ಅಭಿಮಾನವನ್ನು ಮತ್ತು ಪ್ರೀತಿಯನ್ನು ತಮ್ಮ ಸಾಹಿತ್ಯದ ಮೂಲಕ ಪ್ರತಿಬಿಂಬಿಸಿದವರು ಕರ್ಕಿಯವರು.

    ಡಿ.ಎಸ್. ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907 ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ,  ತಂದೆ ಸಿದ್ದಪ್ಪ. ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣನಾಮ. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

    ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫಗುರ್ಯ್‌ಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1940ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಹೈಸ್ಕೂಲಿನಲ್ಲಿಯೇ ಶಿಕ್ಷಕರಾದರು. 1949ರಲ್ಲಿ ‘ಕನ್ನಡ ಛಂದಸ್ಸಿನ ವಿಕಾಸ’ ಮಹಾಪ್ರಬಂಧಕ್ಕಾಗಿ ಪಿ.ಎಚ್ಡಿು. ಪಡೆದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಆಟ್ರ್ಸ್‌ ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು.

    ದಕ್ಷ ಆಡಳಿತಗಾರರೆಂದು ಇವರು ಹೆಸರು ಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು.

    “ಕರ್ಕಿಯವರು ಭೂಮಿಯ ಸಂಗೀತದ ನಾದದೊಂದಿಗೆ ಭುವನದ ಭಾಗ್ಯರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು. ಆಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ ‘ಕನ್ನಡದ ಕಿಟ್’ ಎಂದೇ ಹೆಸರುವಾಸಿಯಾಗಿದ್ದರು” ಎಂದು ಪ್ರೊ. ಎಂ.ಎಸ್. ಇಂಚಲ ಅಭಿಪ್ರಾಯ ಪಡುತ್ತಾರೆ.

    ಕರ್ಕಿಯವರು ಸಹಜಮಾಧುರ್ಯದ ಸಂವೇದನಾಶೀಲ ಮತ್ತು ಭಾವನಾತ್ಮಕ, ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತ ಮೌಲ್ಯಗಳನ್ನು, ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು. ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು.

    ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು, ಸೌಂದರ್ಯಪ್ರಜ್ಞೆ ಮತ್ತು ಜೀವನ ಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲುವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು.

    ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977) – ಇವು ಇವರ ಕವನ ಸಂಕಲನಗಳು. ‘ಹಚ್ಚೇವು ಕನ್ನಡದ ದೀಪ’, ‘ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವ ದೀಪ’ ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಮಕ್ಕಳ ಶಿಕ್ಷಣ (1956) ಶಿಕ್ಷಣ ತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ.

    ‘ಬಣ್ಣದ ಚೆಂಡು’ ಮತ್ತು ‘ತನನತೋಂನಂ’ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆಯನ್ನೊಳಗೊಂಡಿದೆ. ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ.

    ಪ್ರೊ. ಕರ್ಕಿ ಅವರ ಕೃತಿ ‘ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991). ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಹ ಕರ್ಕಿಯವರು ಸೇವೆ ಮಾಡಿದ್ದಾರೆ. ಪಿ.ಇ.ಎನ್. ಸಂಸ್ಥೆಯಿಂದ ಫ್ರಾನ್ಸ್ ಹಾಗು ರಶಿಯಾ ದೇಶಗಳಿಗೆ ಭೇಟಿ ನೀಡಿದ್ದರು.

    ಡಿ.ಎಸ್. ಕರ್ಕಿಯವರು 1984 ಜನವರಿ 16ರಂದು ನಿಧನರಾದರು. ಆದರೆ ಅವರು ಹಚ್ಚಿದ ಕನ್ನಡದ ದೀಪ ನಿರಂತರವಾಗಿ ಬೆಳಗುತ್ತಲೇ ಇದೆ ಮತ್ತು ಬೆಳಗುತ್ತಲೇ ಇರುತ್ತದೆ. ಅದು ಆರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೆಳಗಾವಿಯ ಡಿ.ಎಸ್. ಕರ್ಕಿ ಪ್ರತಿಷ್ಠಾನ ಅನೇಕ ಕನ್ನಡಪರ ಚಟುವಟಿಕೆಗಳನ್ನ ಹಮ್ಮಿಕೊಳ್ಳುತ್ತಿದ್ದು, ಪ್ರತಿ ವರ್ಷ ಡಿ.ಎಸ್. ಕರ್ಕಿ ಅವರ ಹೆಸರಿನಲ್ಲಿ ಶ್ರೇಷ್ಠ ಕವನ ಸಂಕಲನಕ್ಕೆ ಮೂರು ಪ್ರಶಸ್ತಿಗಳನ್ನ ನೀಡಿ, ಡಿ.ಎಸ್. ಕರ್ಕಿ ಅವರ ಸಾಹಿತ್ಯ ಎಲ್ಲರ ಮನೆ ಮತ್ತು ಮನಮುಟ್ಟುವಂತ ಕಾರ್ಯ ಕೈಗೊಳ್ಳುತ್ತಿದೆ. ಈ ಪ್ರತಿಷ್ಠಾನದ ಅಧ್ಯಕ್ಷರು ಡಾ. ರಮೇಶ್ ಕರ್ಕಿ, ನಿವೃತ್ತ ಪ್ರಾಚಾರ್ಯರು, ಮಹಿಳಾ ಘಟಕದ ಅಧ್ಯಕ್ಷರು ಡಾ. ವಿಜಯಲಕ್ಷ್ಮಿ ತಿರ್ಲಾಪುರ, ಕಾರ್ಯದರ್ಶಿ ಪ್ರೊ ಗಿರೀಶ್ ಕರ್ಕಿ, ಶ್ರೀಯುತ ಸತೀಶ್ ಕರಕಿ, ಮತ್ತು ಮಹೇಶ್ ಕರ್ಕಿ ಇತರ ಅಸಂಖ್ಯಾತ ಸಾಹಿತಿಗಳು ಮತ್ತು ಆಸಕ್ತರು ಪ್ರಾಮಾಣಿಕವಾಗಿ ಪ್ರತಿಷ್ಠಾನದ ಪ್ರಗತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    • ಡಾ. ವಿಜಯಲಕ್ಷ್ಮಿ ತಿರ್ಲಾಪೂರ (ಪುಟ್ಟಿ)
      ಕುಲ ಸಚಿವರು ಮೌಲ್ಯಮಾಪನ, ಹಾವೇರಿ ವಿಶ್ವವಿದ್ಯಾಲಯ

    Share. Facebook Twitter Pinterest LinkedIn Tumblr WhatsApp Email
    Previous Articleಷಷ್ಠಿ ಪೂರ್ತಿಯಲ್ಲಿ ಮನಸೂರೆಗೊಂಡ ‘ನಾಟ್ಯಾಯನ’
    Next Article ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಕಟೀಲಿನಲ್ಲಿ “ಜಾಂಬವತಿ ಕಲ್ಯಾಣ” ತಾಳಮದ್ದಳೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.