Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ವಿಶಿಷ್ಟ ಪ್ರತಿಭೆಯ ವಿ.ಜಿ. ಭಟ್ಟ
    Article

    ಪರಿಚಯ ಲೇಖನ | ವಿಶಿಷ್ಟ ಪ್ರತಿಭೆಯ ವಿ.ಜಿ. ಭಟ್ಟ

    December 2, 2023No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉತ್ತರ ಕನ್ನಡ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಲ್ಲಿ ಒಬ್ಬರಾದ ವಿಷ್ಣು ಗೋವಿಂದ ಭಟ್ಟರು (02-12-1923ರಿಂದ 06-04-1991) ಹೊನ್ನಾವರ ಜಿಲ್ಲೆಯ ಕಡತೋಕದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕೆಲವು ವರ್ಷಗಳವರೆಗೆ ಪ್ರೌಢಶಾಲೆಯ ಶಿಕ್ಷಕರಾಗಿ ದುಡಿದ ಬಳಿಕ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದರು. ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಿಂಧೆ, ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು, ದಿವಸ, ಬುರುಕಿ (ಕಥಾ ಸಂಕಲನಗಳು), ಸವಿನೆನೆಪು (ಲೇಖನಗಳು), ಸಹ್ಯಾದ್ರಿ (ಜೀವನಚರಿತ್ರೆ), ಖಾದಿ ಗ್ರಾಮೋದ್ಯೋಗ (ಅನುವಾದ) ಮುಂತಾದ ಕೃತಿಗಳನ್ನು ರಚಿಸಿದ ಇವರು ‘ಆತ್ಮಗೀತೆ’ ಕವನ ಸಂಕಲನಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡರು.

    ತಮ್ಮ ಇಪ್ಪತ್ತಮೂರನೇ ಹರೆಯದಲ್ಲಿ ‘ಪಲಾಯನ’ ಎಂಬ ಸಂಕಲನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಕಾಲಿರಿಸಿದ ಇವರು ಬೇಂದ್ರೆ, ಕುವೆಂಪು, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿಯವರ ಪ್ರಭಾವಕ್ಕೆ ಒಳಗಾಗದೆ ತಮ್ಮದೇ ಹಾದಿಯಲ್ಲಿ ನಡೆದರು. ‘ಸಿದ್ಧ ಸರಕಿನ ಪಾತ್ರ ಕೈಕೊಳ್ಳಲೊಲ್ಲೆ; ಹೇಗೆ ಬೇಕೋ ಹಾಗೆ ತಿರುಗಾಡಿ ಒಂದು ದಿನ ಕೇಂದ್ರವನು ತಲುಪುವುದು ಗಾಡಿ’ ಎಂಬ ಸ್ವತಂತ್ರ ಮನೋಭಾವದೊಂದಿಗೆ ಪ್ರಗತಿಶೀಲ, ನವ್ಯ, ನವ್ಯೋತ್ತರಗಳನ್ನು ದಾಟಿದರು. ವಿಗ್ರಹ ಭಂಜಕ ಮನೋಧರ್ಮದವರಾಗಿದ್ದುದರಿಂದ ‘ಅರವಿಂದ ಕಂಪೆನಿಯ ವಿಮೆ ಇಳಿಸಿದವರು’ ಎಂದು ಬೇಂದ್ರೆಯವರನ್ನು ಲೇವಡಿ ಮಾಡಲು ಅವರಿಗೆ ಸಾಧ್ಯವಾಯಿತು. ಬೇಂದ್ರೆ ಮತ್ತು ಕುರ್ತಕೋಟಿ ಜೋಡಿಯ ಕುರಿತು “ಮಂತ್ರಗಳ ಧಾಟಿಯಲಿ ಕವಿತೆಗಳ ಓದಿದನು ಅಂಬಿಕಾತನಯದತ್ತ ನಿಮ್ಮ ಕವಿತೆಗಳ ಅರ್ಥ ತುಸು ತಿಳಿಸಿ ಎನೆ ಅವನು ನೋಡಿದನು ಕೀರ್ತಿಯತ್ತ” ಎಂದು ವಿಡಂಬಿಸುವ ಎದೆಗಾರಿಕೆಯು ದೊರಕಿತು.

    ಕಿಟ್ಟೆಲ್ ಕೋಶದ ನೂರಾ ಐವತ್ತಮೂರನೇ ಪುಟದಲ್ಲಿ ‘ಆತ್ಮಶೋಧನೆ’ಯನ್ನು ಮಾಡಿದ ವಿ.ಜಿ. ಭಟ್ಟರ ಕೊನೆಯ ರಚನೆಗಳಲ್ಲಿ ಝೆನ್ ಮತ್ತು ಓಶೋ ಅವರ ವೇದಾಂತಗಳ ಕುರಿತು ವಿಶೇಷ ಒಲವುಗಳು ಕಾಣಿಸಿಕೊಂಡವು. ಸೂತ್ರಗಳಿಗೆ ಸಿಕ್ಕದೆ ಸುಸೂತ್ರ ಬದುಕಲು ಆಗುವುದೆಂಬ ವಿಶ್ವಾಸವನ್ನು ಬದುಕಿನುದ್ದಕ್ಕೂ ಉಳಿಸಿಕೊಂಡು ಬಂದಿದ್ದ ಅವರು ವಿಡಂಬನೆಯಿಂದ ಅನುಭಾವದ ನೆಲೆಯನ್ನು ತಲುಪಿದರು.

    ವಿ.ಜಿ. ಭಟ್ಟರ ಪ್ರಾತಿನಿಧಿಕ ರಚನೆಗಳಲ್ಲಿ ಒಂದಾಗಿರುವ ‘ಯಮದೇವನಿಗೆ’ ಎಂಬ ಕವಿತೆಯು ಸಾವಿನ ಬಗೆಗಿನ ನಿರ್ಭೀತ ನಿಲುವನ್ನು ಪ್ರಕಟಿಸುತ್ತದೆ. ಕಠೋಪನಿಷತ್ತಿನ ನಚಿಕೇತನಂತೆ ಯಮನೊಂದಿಗೆ ಮುಖಾಮುಖಿಯಾಗುವ ಕವಿಯ ಮಾತು ನಚಿಕೇತನಂತೆ ಗಂಭೀರವಾಗಿರದೆ ಲಘುವಾದ ಧಾಟಿಯನ್ನು ಹೊಂದಿದೆ. ಎಲ್ಲರಿಗೂ ಭಯವನ್ನು ಹುಟ್ಟಿಸುವ ಯಮನನ್ನು ಪ್ರೀತಿಯಿಂದ ಮಾತನಾಡಿಸಿ, ಅವನ ಚಟುವಟಿಕೆಗಳ ಬಗ್ಗೆ ಸೂಚನೆಗಳನ್ನು ಕೊಡುವ ಕವಿಯ ರೀತಿಯು ವಿಲಕ್ಷಣವೆನಿಸುತ್ತದೆ.

    ಎಂದೋ ಒಂದು ದಿನ ಮುಪ್ಪಡರಿ
    ದಮ್ಮು ಹಿಡಿದೋ ಕರುಳಲ್ಲಿ ಹುಣ್ಣಾಗಿಯೋ
    ಹೃದಯಕ್ರಿಯೆ ತೊಡಕಿಗೆ ಸಿಕ್ಕೋ
    ನಾನು ಒದ್ದಾಡುತ್ತಾ ಬಿದ್ದಾಗ
    ಕೋಣನ ಮೇಲೆ ಸವಾರಿ ಮಾಡಿ ಬಂದು
    ನನ್ನ ಕುತ್ತಿಗೆಗೆ ಉರುಳು ಬೀಸಿ ಜಗ್ಗಿ
    ಎಳೆಯುತ್ತ ಹೋಗುವುದು ಯಾವ ಚೆಂದವಯ್ಯಾ?

    ಎಂದು ಕವಿಯು ಯಮನಲ್ಲಿ ಕೇಳುತ್ತಾರೆ. ಮನುಷ್ಯನು ಅಸಹಾಯಕ ಸ್ಥಿತಿಯಲ್ಲಿರುವಾಗ ಅವನನ್ನು ಎಳೆದೊಯ್ಯುವುದರಲ್ಲಿ ಸಾಹಸವಿಲ್ಲದಿರುವುದರಿಂದ ಯಮನು ಹೀಗೆ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಸಾವನ್ನು ನಿವಾರಿಸಿಕೊಳ್ಳಲು ಬಯಸುವ ಚಿರಂಜೀವಿಗಳು, ಮುಪ್ಪನ್ನು ಮುಂದೂಡಲು ಬಯಸುವ ಯಯಾತಿಗಳೇ ಕಂಡು ಬರುವ ಹೊತ್ತಿನಲ್ಲಿ
    ಇನ್ನೂ ಗಟ್ಟಿಮುಟ್ಟಾಗಿರುವಾಗಲೇ
    ಆಮಂತ್ರಿಸುತ್ತೇನೆ ಇಕೋ
    ಈಗಲೇ ದಯಮಾಡಿಸು
    ಎಂದು ಮರಣವನ್ನೇ ಆಹ್ವಾನಿಸುವ ಇಂಥವರು ವಿರಳ.

    ನಿನ್ನ ಕೋಣ ಇಲ್ಲೇ ಕೊಟ್ಟಿಗೆಯಲ್ಲಿ
    ನಮ್ಮ ಎಮ್ಮೆ ಆಕಳ ಜತೆಗೆ ಹುಲ್ಲು ತಿನ್ನುತ್ತ
    ಅಕ್ಕಚ್ಚು ಮೋರುತ್ತ ಹಾಯಾಗಿರಲಿ
    ಬೇಕಾದರೆ ಹುರುಳಿ ಬೇಯಿಸಿ ಕೊಡುವ
    ಹಲಸಿನ ಸಾರೆ, ಬೇಳೆ, ಹಿಂಡಿಯ ಮುರುಗು ಮಾಡಿಸಿ ಹಾಕಿಸುವ
    ಎಂದು ಯಮನಿಗೆ ಉಪಚಾರವನ್ನು ಮಾಡುವುದರೊಂದಿಗೆ ಆತನ ಹಗ್ಗವು ಬಾವಿಯ ನೀರನ್ನು ಎಳೆಯುವ ಕೆಲಸಕ್ಕೆ ಉಪಯೋಗವಾಗಲಿ ಎಂಬ ಸಲಹೆಯನ್ನು ನೀಡುತ್ತಾರೆ. ಅತಿಥಿಯಾಗಿ ಬಂದ ಯಮನು ತನ್ನ ಓರಗೆಯವನು ಎಂಬಂತೆ ಸಲುಗೆಯಿಂದ ಮಾತನಾಡಿಸುವ ಮೂಲಕ ಮರಣವನ್ನು ಕುರಿತಾದ ಭಯವನ್ನು ನಿರಾಕರಿಸುತ್ತಾರೆ. ದೇವರ ಕೋಣೆಯಲ್ಲಿ ಆತನಿಗೆ ಮಲಗುವ ವ್ಯವಸ್ಥೆಯನ್ನು ಮಾಡಿ ಆರಾಮವಾಗಿ ಪವಡಿಸು, ಬೇಕಾದರೆ ಡ್ಯೂಟಿಯ ಮೇಲೆ ಹೋಗಿ ಬರುತ್ತಾ ಇರು ಎನ್ನುತ್ತಾರೆ.

    ಯಾವ ಹೊತ್ತಿಗೆ ಬೇಕಾದರೂ
    ನನ್ನ ಮಡದಿ ಚಹ ಕಾಫಿ ಮಾಡಿಕೊಡುತ್ತಾಳೆ.
    ನಮ್ಮ ಮನೆಯಲ್ಲಿ ಮಾತ್ರ
    ಕಟ್ಟಾ ಶಾಖಾಹಾರ; ನಡೆದೀತಲ್ಲವೇ ?
    ಪರಿಸ್ಥಿತಿ ಏನೇ ಇದ್ದರೂ
    ಒಂದಿಷ್ಟು ಉಪ್ಪಿನಕಾಯಿ, ಮಜ್ಜಿಗೆ ನೀರಿಗೆ
    ತತ್ವಾರವಿಲ್ಲ.
    ಅನ್ನದ್ದೇ ಕಷ್ಟ ಮಾರಾಯಾ.
    ಅಕ್ಕಿಯ ದರ ವಿಪರೀತ
    ನಿನ್ನ ರಾಜ್ಯದಲ್ಲಿ ಹೇಗೆ ಕೇಜಿ?
    ಎಂದು ಊರ ಸಮಾಚಾರವನ್ನು ವಿಚಾರಿಸುವ ಕವಿಗೆ ಯಮನನ್ನು ಕರ್ತವ್ಯದಿಂದ ವಿಮುಖಗೊಳಿಸುವ ಉದ್ದೇಶವಿಲ್ಲ.

    ನಾನು ಹೊರಡುವ ಸಮಯ ಬಂದ ಕೂಡಲೇ
    ನನ್ನ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ
    ಸೂಚನೆ ಕೊಡು.
    ನಿನ್ನ ಬೆಂಬದಿಗೆ ನಿನ್ನ ಕೋಣನ ಮೇಲೆ ಕುಳಿತು
    ನಾನೂ ಹೊರಟು ಬಿಡುತ್ತೇನೆ
    ನಗು ನಗುತ ಬಂದು ಬಿಡುತ್ತೇನೆ
    ಎಂದು ಸಾಗುವ ಕವಿತೆಯ ಹಿಂದಿರುವ ದನಿಯು ಹಗುರವಲ್ಲ. ಸಾವನ್ನು ಹೇಗೆ ಸ್ವೀಕರಿಸಬೇಕೆಂಬ ಗಂಭೀರ ಚಿಂತನೆಯು ಇಲ್ಲಿದೆ. ಇದನ್ನು ಓದಿದಾಗ ಸಾವಿನ ಕುರಿತು ರವೀಂದ್ರನಾಥ ಠಾಕೂರ್, ಎಮಿಲಿ ಡಿಕನ್ಸನ್ ಅವರು ಬರೆದ ಕವಿತೆಗಳೂ ನೆನಪಾಗುತ್ತವೆ. ‘ಜೀವನದ ದ್ವಂದ್ವಗಳಿಗೆಲ್ಲ ಸ್ವಾಗತ. ದ್ವಂದ್ವಾತೀತಕ್ಕೂ ಮೃತ್ಯುವಿಗೂ ಹೃತ್ಪೂರ್ವಕ ಸ್ವಾಗತ. ಇದು ಅಸ್ತಿತ್ವದ ಸ್ವೀಕಾರ. ಪರಮ ಸ್ವೀಕೃತಿ’ ಎಂದ ವಿ.ಜಿ. ಭಟ್ಟರ ಧೋರಣೆಯ ಪ್ರತಿಫಲನವನ್ನು ಈ ಕವಿತೆಯಲ್ಲಿ ಕಾಣುತ್ತೇವೆ.

    ಡಾ. ಸುಭಾಷ್ ಪಟ್ಟಾಜೆ
    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕಗಳ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡು ಪದ್ಮಗಿರಿ ಕಲಾ ಕುಟೀರದಲ್ಲಿ ಸ್ವರಚಿನ್ನಾರಿ ‘ಕನಕ ಸ್ಮರಣೆ’
    Next Article ಮೈಸೂರಿನಲ್ಲಿ ಅಭಿನಯ ಕಾರ್ಯಾಗಾರ ಮತ್ತು ‘ಪಾತ್ರ ಪ್ರವೇಶ’ ಕೃತಿ ಬಿಡುಗಡೆ | ಡಿಸೆಂಬರ್ 2 ಮತ್ತು 3
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.