ಸಕಾರಾತ್ಮಕ ಚಿಂತನೆಗಳು ಮಾತ್ರ ನಮ್ಮನ್ನು ಗುರಿಯಡೆಗೆ ತಲುಪಿಸುವುದಿಲ್ಲ, ಅದರೊಂದಿಗೆ ಕಠಿಣ ಪರಿಶ್ರಮವೂ ಬೇಕು ಎಂಬ ಮಾತಿದೆ. ಬಹುಶ: ನಂದಾವರ ದಂಪತಿಗಳಲ್ಲಿ ಇಂದು ಇಂತಹ ಕಠಿಣ ಪರಿಶ್ರಮವು ಜೊತೆಗಿತ್ತು ಎಂದರೆ ತಪ್ಪಾಗಲಾರದು. ಸುಂದರಿ ಮತ್ತು ವಾಮನ ಮೇಷ್ಟ್ರ ಹಿರಿಯ ಮಗಳಾಗಿ ದಿನಾಂಕ 21-11-1950ರಲ್ಲಿ ನಮ್ಮೆಲ್ಲರ ಪ್ರೀತಿಯ ಕೆ.ವಿ. ಚಂದ್ರಕಲಾ ಮೇಡಂ ಜನಿಸಿದರು. ಮುನಿಸಿಪಲ್ ಹಾಯರ್ ಪ್ರೈಮರಿ ಶಾಲೆ, ಕಾಪಿಕಾಡು ಇಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಸೆಂಟ್ ಬಾಲಿಕಾ ಪ್ರೌಢಶಾಲೆ ಕೊಡಿಯಾಲ್ ಬೈಲಿನಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ನಗರದ ಸರಕಾರಿ ಕಾಲೇಜಿನಲ್ಲಿ ಪಡೆದ ಇವರು ನಂತರ ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಹಾಗೂ ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಎರಡು ವರ್ಷದ ಕನ್ನಡ ಡಿಪ್ಲೋಮಾ ಪದವಿಯನ್ನು ಮೂರನೇಯ ರ‍್ಯಾಂಕಿನೊಂದಿಗೆ ಉತ್ತಿರ್ಣರಾದ ನಂತರ ಬಜ್ಪೆಯ ಹೋಲಿ ಫ್ಯಾಮಿಲಿ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿಗೆ ಸೇರಿಕೊಂಡರು. ಮಂಗಳ ಗಂಗೋತ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಕನ್ನಡ ಎಂ.ಎ. ಪದವಿ ಮುಗಿಸಿದ ಕೆ.ವಿ. ಚಂದ್ರಕಲಾ ಹಿಂದಿ ಮತ್ತು ಕನ್ನಡ ಉಪನ್ಯಾಸಕಿಯಾಗಿ ಗಣಪತಿ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಯಾದರು. ಇದೇ ಸುಮಾರಿಗೆ ತುಳು ಕನ್ನಡ ವಿದ್ವಾಂಸರಾಗಿರುವ ಡಾ.ವಾಮನ ನಂದಾವರರೊಂದಿಗೆ ವಿವಾಹವಾಗಿ ಚಂದ್ರಕಲಾ ನಂದಾವರ ಎನ್ನಿಸಿಕೊಂಡರು.
ಶಿಕ್ಷಕರು, ಹರಿದಾಸರು ಆಗಿ ಖ್ಯಾತರಾಗಿದ್ದ ತಂದೆಯ ನೆರಳಿನಲ್ಲಿ ಬೆಳೆದ ಚಂದ್ರಕಲಾ ಅವರಿಗೆ ಗಮಕ ಕಾವ್ಯದ ಬಗ್ಗೆ ಸೆಳೆತವಿತ್ತು. ಈ ಸೆಳೆತ ದಂಪತಿಗಳಿಬ್ಬರೂ ಗಮಕ ವಿದ್ವಾನ್ ಪರೀಕ್ಷೆ ಬರೆಯಲು ಪ್ರೇರಣೆ ನೀಡಿತು. ಇದರಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣರಾದ ಚಂದ್ರಕಲಾ ನಂದಾವರ ನಂತರ ಹಲವಾರು ವೇದಿಕೆಗಳಲ್ಲಿ ಗಮಕ ಕಾವ್ಯ ವಾಚನವನ್ನು ಮಾಡಿ ಖ್ಯಾತರಾದರು. ಆದರೆ ದಂಪತಿಗಳಿಬ್ಬರ ಪ್ರಥಮ ಒಲವು ಸಾಹಿತ್ಯವೇ ಆಗಿದ್ದರಿಂದ ಹೇಮಾಂಶು ಪ್ರಕಾಶನವನ್ನು ಸ್ಥಾಪಿಸಿ ಉಪನ್ಯಾಸಕ ವೃತ್ತಿಯ ಜೊತೆ ಜೊತೆಗೆ ಇದನ್ನು ಮುನ್ನಡೆಸುತ್ತಾ ಹಲವಾರು ಉದಯೋನ್ಮುಖ ಪ್ರತಿಭೆಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಕಾರಣೀಭೂತರಾದರು. ವೃತ್ತಿ ಜೀವನದಲ್ಲಿ ಹಲವು ಮಕ್ಕಳ ತಾಯಿಯಾಗಿ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿ, ಬಡ ಮಕ್ಕಳು ಶಿಕ್ಷಣದಲ್ಲಿ ಮುಂದುವರಿದು, ಬದುಕಿನಲ್ಲಿ ನೆಲೆ ನಿಲ್ಲಲು ತನ್ನ ಕೈಯಲ್ಲಿ ಸಾಧ್ಯವಾದ ಸಹಾಯ ಮಾಡುತ್ತ, ದಾನಿಗಳನ್ನು ಹುಡುಕಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಧನ ಸಹಾಯ ಒದಗಿಸುತ್ತ ಆ ಮಕ್ಕಳ ಬಾಳಿಗೆ ಬೆಳಕಾದರು. ಗಣಪತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಮುನ್ನಡೆಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದರು. ಇಬ್ಬರು ಮಕ್ಕಳಿರುವ ಸಂತೃಪ್ತ ಕುಟುಂಬದ ದಂಪತಿಗಳಾದ ವಾಮನ ನಂದಾವರ ಮತ್ತು ಚಂದ್ರಕಲಾ ನಂದಾವರ ಸಾಹಿತ್ಯದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಪ್ರಕಾಶನದ ಪುಸ್ತಕಗಳನ್ನು ಮಾರುವ ವ್ಯವಸ್ಥೆ ಮಾಡುತ್ತಿದ್ದರು. ಹೆತ್ತವರ ಸಾಹಿತ್ಯ ಸೇವೆಯಲ್ಲಿ ಮಕ್ಕಳು ಕೈಜೋಡಿಸುತ್ತಿದ್ದರು.
“ನನ್ನೂರು ನನ್ನ ಜನ” ಚಂದಕಲಾ ನಂದಾವರ ಇವರು ವಾರ್ತಾಭಾರತಿ ದೈನಿಕದಲ್ಲಿ ಬರೆದಿದ್ದ ಅಂಕಣ ಬರಹ. ಇದು ಅವರ ಐದು ದಶಕಗಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ, ಸಾಂಸ್ಕೃತಿಕ, ಸಾಹಿತ್ಯ ಲೋಕದ ಅವಿಸ್ಮರಣಿಯ ಅನುಭವಗಳನ್ನು ಅನಾವರಣಗೊಳಿಸಿದೆ. ಸಾಹಿತಿಯಾಗಿ, ಸಂಘಟಕಿಯಾಗಿ ಮತ್ತು ಪ್ರಾಂಶುಪಾಲರಾಗಿ ಚಂದ್ರಕಲಾ ನಂದಾವರ ಪ್ರತಿನಿಧಿಸಿದ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಮೆ ಇವರದು. ಕವಿಯಾಗಿ, ಕಥೆಗಾರ್ತಿಯಾಗಿ, ಲೇಖಕಿಯಾಗಿ ಜನ ಮಾನಸವನ್ನು ಗೆದ್ದ ಚಂದ್ರಕಲಾ ಮೇಡಂ ಕಿರಿಯರ ಪುಸ್ತಕಗಳನ್ನು ಪರಿಚಯಿಸಿ ಅವರು ಕನ್ನಡ ಸಾಹಿತ್ಯದಲ್ಲಿ ನೆಲೆ ನಿಲ್ಲುವುದಕ್ಕೆ ಸಾಕ್ಷಿಯಾದವರು. ಸಾಹಿತ್ಯದಲ್ಲಿ ಆಗಷ್ಟೇ ಕಣ್ಣು ಬಿಡುತ್ತಿದ್ದ ನನ್ನ ಮೊದಲ ಕವನ ಸಂಕಲನ ‘ಮುಸ್ಸಂಜೆ’ಯನ್ನು ಪರಿಚಯ ಮಾಡುವ ಮೂಲಕ ನನ್ನೊಳಗೆ ಶಕ್ತಿ ತುಂಬಿದವರು. ಇವರು ಹಲವಾರು ಸಂಘಟನೆಗಳಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ನಿರ್ವಹಿಸಿದ ಜವಾಬ್ದಾರಿಗಳು ಅಸಮಾನ್ಯವಾದವು.
ಚಂದ್ರಕಲಾ ನಂದಾವರ ಅವರ ಕವನ ಸಂಕಲನಗಳು ಒಂದು ರೀತಿಯಲ್ಲಿ ಅವರ ಆತ್ಮಾವಲೋಕನದ ಮುತ್ತುಗಳು. ‘ನಾವು ಪ್ರಾಮಾಣಿಕರೇ’, ‘ಮತ್ತೆ ಚಿತ್ತಾರ ಬರೆ ಗೆಳತಿ’, ‘ಮುಸ್ಸಂಜೆಯ ತೆರೆಗಳು’ ಇವರ ಕವನ ಸಂಕಲನಗಳಾದರೆ ‘ಮುಖ ಮುಖಿ’ ಕಥಾ ಸಂಕಲನ. ‘ಹೊಸ್ತಿಲಿನಿಂದ ಈಚೆಗೆ’ ಲೇಖನ ಸಂಕಲನ. ಇವರ ಒಟ್ಟು ಹತ್ತಕ್ಕೂ ಮಿಕ್ಕಿದ ಕೃತಿಗಳು ಇವರದೇ ಹೇಮಾಂಶು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ. ಮಂಗಳೂರು ನಗರದಲ್ಲಿ ಸಂಘಟಕಿಯಾಗಿ ಚಂದ್ರಕಲಾ ನಂದಾವರ ಅವರದು ದೊಡ್ಡ ಹೆಸರು. ಮಂಗಳೂರು ಕನ್ನಡ ಸಂಘ (ರಿ.) ಇದರಲ್ಲಿ ಕಾರ್ಯದರ್ಶಿಯಾಗಿ ಇವರು ಮಾಡಿದ ಸಾಹಿತ್ಯ ಸೇವೆ ಅವಿಸ್ಮರಣೀಯವಾದದ್ದು. ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)ವನ್ನು ಕಟ್ಟಿ ಬೆಳೆಸಿದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಚಂದ್ರಕಲಾ ನಂದಾವರ ಅಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದು ಮಾತ್ರವಲ್ಲದೆ 2006ರಿಂದ 2009ರವರೆಗೆ ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯದ ಪರವಾದ ತನ್ನ ತುಡಿತವನ್ನು ತಣಿಸಿಕೊಂಡವರು ಚಂದ್ರಕಲಾ ಮೇಡಂ. ಬಹಳ ಹಿಂದೆ ಮಂಗಳೂರಿನ ಆಶ್ರಮ ಒಂದರಲ್ಲಿ ನಡೆಯುತ್ತಿದ್ದ ಲೈಂಗಿಕ ಹಗರಣದ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಸಂಘಟಿಸಿ ಮುಂದಾಳತ್ವ ತಾನೇ ವಹಿಸಿಕೊಂಡು ಯಶಸ್ವಿಗೊಳಿಸಿದ್ದು, ಮಾತ್ರವಲ್ಲದೆ ಇಲ್ಲಿ ನೊಂದ ಹೆಣ್ಣು ಮಕ್ಕಳಿಗೆ ರಕ್ಷಣೆಯ ವ್ಯವಸ್ಥೆ ಒದಗಿಸುವಲ್ಲಿ ಇವರು ತೋರಿಸಿದ ಕಾಳಜಿ ಇತರರಿಗೆ ಮಾದರಿಯಾಗುವಂತಹದ್ದು. ಜೀವಪರ ಸಂವೇದನೆಗಳಿಗೆ ಸದಾ ಸ್ಪಂದಿಸುವ ಪ್ರಾಮಾಣಿಕ ಕವಿ ಹೃದಯ ಇವರದು. ಇವರ ಸಮಾಜಮುಖಿ ಕಾಳಜಿ, ವ್ಯಕ್ತಿತ್ವ ನೊಂದವರ ಧ್ವನಿಯಾಗಿ ಮೂಡಿ ಬಂದದ್ದು ಮಾತ್ರವಲ್ಲದೆ ಇವರ ಹೆಚ್ಚಿನ ಬರಹಗಳಲ್ಲಿ ಒಡ ಮೂಡಿವೆ ಕೂಡ. ಹಿರಿಯ ಸಾಹಿತಿ ದಂಪತಿಗಳಾಗಿ ಇವರು ಕಿರಿಯ ಲೇಖಕ-ಲೇಖಕಿಯರನ್ನು ಆದರಿಸಿ ಬೆಳೆಸಿದ, ಪ್ರೀತಿಯ ಋಣ ನಮ್ಮ ಕಾಲದ ಬಹುತೇಕ ಲೇಖಕರಿಗೆ ಇದೆ. ಉತ್ತಮ ವಾಗ್ಮಿಯಾದ ಚಂದ್ರಕಲಾ ನಂದಾವರ ಅವರದು ಬಹುಮುಖ ಪ್ರತಿಭೆ. ವ್ಯಕ್ತಿ ಶಕ್ತಿಯಾಗಿ ಬೆಳೆದ ಅಪರೂಪದ ವ್ಯಕ್ತಿತ್ವದ ಚಂದ್ರಕಲಾ ಮೇಡಂ ಇವರಿಗೆ ಹುಟ್ಟು ಹಬ್ಬದ ಅಭಿನಂದನೆಗಳನ್ನು ಸಲ್ಲಿಸಲು ಈ ಮೂಲಕ ನನಗೆ ಸಾಧ್ಯವಾಗಿರುವುದಕ್ಕೆ ಸಂತಸವಿದೆ. ಮೇಡಂ ನಿಮಗೆ ಪ್ರೀತಿಯ ಅಭಿನಂದನೆಗಳು.
- ಶ್ರೀಮತಿ ದೇವಿಕಾ ನಾಗೇಶ್
ಕವಯತ್ರಿ, ಸಾಹಿತಿ ಮತ್ತು ಸಮಾಜ ಸೇವಕಿ
2 Comments
ತುಂಬ ಆಪ್ತ ಬರಹ. ನಾನು ಕೂಡ ತುಂಬ ಪ್ರೀತಿ ಅಭಿಮಾನಗಳಿಂದ ಕಾಣುವ ಜೀವ ಚಂದ್ರಕಲಾ ಮೇಡಂ . ಅವರಿಗೆ ಹುಟ್ಟು ಹಬ್ಬದ ನಲ್ಮೆಯ ಶುಭಾಶಯ ಗಳು🙏
ಚಂದ್ರಕಲಾ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು
ದೇವಿಕಾ ನಾಗೇಶರ ಬರಹಕ್ಕೆ ಅ
ಭಿನಂದನೆಗಳು.
ಮೋಲಿ ಮಿರಾಂದಾ
ಕ ಲೆ ವಾ ಸಂಘದ ಸದಸ್ಯೆ