ಕಾಸರಗೋಡಿನ ಕುರಿತಾದ ತಮ್ಮ ಒಡಲ ನಂಟನ್ನು ಲೋಕಕ್ಕೆ ಸಾರುವ ಬಗೆಯಲ್ಲಿ ತಮ್ಮ ಹೆಸರಿನೊಂದಿಗೆ ಈ ಗಡಿನಾಡಿನ ಹೆಸರನ್ನು ಬಿಡದೆ ಬಳಸುತ್ತ ಬಂದಿದ್ದ ವೇಣುಗೋಪಾಲ ಕಾಸರಗೋಡು 18 ವರ್ಷಗಳ ಹಿಂದೆ ನಮ್ಮನ್ನಗಲಿ ಈಗ ನೆನಪು ಮಾತ್ರವಾಗಿದ್ದಾರೆ. ನಮ್ಮ ಕರಾವಳಿಯ ಉದ್ದಗಲಕ್ಕೆ ಮಾತ್ರವಲ್ಲ ಅಖಿಲ ಕರ್ನಾಟಕಕ್ಕೂ ಅದರಾಚೆಗೂ ಅವರು ಕಾಸರಗೋಡಿನೊಂದಿಗೇ ಗುರುತಿಸಲ್ಪಟ್ಟವರು. ವಾಸ್ತವವಾಗಿ ಅವರು ಕರ್ನಾಟಕದ ಅನೇಕರ ಬಾಯಿಯಲ್ಲಿ ಕೇವಲ ‘ಕಾಸರಗೋಡು’ ಆಗಿದ್ದರು.
ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡವನ್ನು ಬೋಧಿಸುವುದರೊಂದಿಗೆ ಸಾಹಿತ್ಯ ರಂಗಭೂಮಿ, ಸಿನೆಮಾ, ಕನ್ನಡ ಹೋರಾಟ-ಹೀಗೆ ಅತ್ಯಂತ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಎಳೆಯರಿಗೆ ಕನ್ನಡದ ದೀಕ್ಷೆಯನ್ನೂ, ಹೋರಾಟದ ಸ್ಫೂರ್ತಿಯನ್ನೂ, ಸೃಜನಶೀಲತೆಯ ನಂಟನ್ನೂ ಬೆಸೆದು ಗುರು ಧರ್ಮವನ್ನು ಪಾಲಿಸಿದ್ದರು.
ನೀರ್ಚಾಲಿನ ಸಮೀಪದ ಪೊನ್ನೆಪ್ಪಲದಲ್ಲಿ ತಮ್ಮ ಬಾಲ್ಯವನ್ನು ಕಳೆದ ಅವರಿಗೆ ತಾವು ಕಲಿತ ಸ್ಥಳೀಯ ವಿದ್ಯಾ ಸಂಸ್ಥೆ ಮಹಾಜನ ಕಾಲೇಜು ಮತ್ತು ಹೈಸ್ಕೂಲು ಕೊಟ್ಟ ಸಾಹಿತ್ಯ ಮತ್ತು ಕಲೆಯ ಸಂಸ್ಕಾರ ದೊಡ್ಡದು. ಅದನ್ನು ಮುಂದೆ ಅವರು ಸ್ವಪ್ರಯತ್ನದಿಂದ ಬೆಳೆಸಿಕೊಂಡರು. ನವ್ಯಕಾವ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರು ಹಾಗೂ ವರ್ಧಮಾನಕ್ಕೆ ಬರುತ್ತಿದ್ದ ಕವಿಯಾಗಿ ಚಿಕ್ಕಪ್ಪ ಕೆ.ವಿತಿರು ಮಲೇಶ್ ಅವರ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರಿದ್ದು ಕೂಡ ಉಲ್ಲೇಖನೀಯ. ಆದರೆ ಅವರು ಪ್ರಭಾವಗಳನ್ನು ಅರಗಿಸಿಕೊಂಡು ತಮ್ಮದೇ ವ್ಯಕ್ತಿತ್ವದ ಛಾಪನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದರು.
ಉತ್ಸಾಹಿ ಮತ್ತು ಬಂಡಾಯ ಮನೋಭಾವದ ತರುಣನಾಗಿ ಅವರು ಕಾರ್ಕಳ ಮತ್ತು ಮೂಡುಬಿದರೆಗಳಲ್ಲಿ ಅನುಕ್ರಮವಾಗಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಮುಗಿಸಿ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ. ತರಗತಿಯ ಮೊದಲ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಪ್ರವೇಶ ಪಡೆದಿದ್ದರು. ಪದವಿ ತರಗತಿಯಲ್ಲಿ ಜೀವಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರು ಸ್ನಾತಕೋತ್ತರ ತರಗತಿಯಲ್ಲಿ ತಮ್ಮ ಕನ್ನಡದ ಪ್ರತಿಭೆಯನ್ನು ಸಾಬೀತುಪಡಿಸಿದರು. ದಿ.ಪ್ರೊ. ಸುಬ್ರಾಯ ಭಟ್ಟರ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ವಿಭಾಗದಲ್ಲಿ ವಿದ್ಯಾರ್ಥಿಯಾಗಿ ತಮ್ಮ ಆಧುನಿಕ ಉಡುಪು ತೊಡುಪು, ಚಿಂತನೆ ಹಾಗೂ ಒಟ್ಟಾರೆಯಾದ ಒಂದು ಬಂಡಾಯದ ಚೈತನ್ಯವಿರುವ ವಿಭಿನ್ನ ವ್ಯಕ್ತಿತ್ವದಿಂದ ಒಬ್ಬ ‘ಹೀರೋ’ ಆಗಿ ಅವರು ಗುರುತಿಸಲ್ಪಟ್ಟಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಅಖಿಲ ಕರ್ನಾಟಕ ಮಟ್ಟದ ಕವನ ಸ್ಪರ್ಧೆಯಲ್ಲಿ ಅವರು ಪ್ರಥಮ ಬಹುಮಾನವನ್ನು ಗಳಿಸಿ ಆ ವಿದ್ಯಾರ್ಥಿದೆಸೆಯಲ್ಲಿಯೇ ಗಮನಸೆಳೆದಿದ್ದರು. ತಮ್ಮ ಚೊಚ್ಚಲ ಕೃತಿ (ಗರಿಮುರಿದ ಹಕ್ಕಿಗಳು)ಯನ್ನು ‘ಪಂಪ ಅಡಿಗರ ನಡುವೆ ತೊನೆವ ವೇದನೆ ಪುಳಕ ನೀಡಿ ಹರಸಿದ ಗುರು’ ಎಂಬ ಸಾಲುಗಳೊಂದಿಗೆ ಪ್ರಾಚಾರ್ಯ ಸುಬ್ರಾಯ ಭಟ್ಟರಿಗೆ ಅವರು ಅರ್ಪಿಸಿದ್ದರು. ಆಗ ಅವರು ತಾವು ಕಲಿತ ಅದೇ ವಿಭಾಗದ ಉತ್ಸಾಹೀ ತರುಣ ಪ್ರಾಧ್ಯಾಪಕರಾಗಿ ಶಿಷ್ಯವೃಂದದಲ್ಲಿ ರಂಗಭೂಮಿ, ಸಾಹಿತ್ಯ ಚಟುವಟಿಕೆಗಳ ಕಡೆಗೆ ಆಸಕ್ತಿಯನ್ನು ಹುಟ್ಟುಹಾಕಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದ್ದರು. ಅವರ ಚೊಚ್ಚಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಬಂದಾಗ ಅವರ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳಾಗಿದ್ದ ನಾವು- ಎಲ್ಲರೂ ಸಂಭ್ರಮಿಸಿದ ನೆನಪು ಹಸಿರಾಗಿದೆ. ನಮ್ಮ ಕಾಲೇಜಿನ ಕನ್ನಡ ವಿಭಾಗಕ್ಕೆ ಕರ್ನಾಟಕದ ಅಕಾಡಮಿ, ಸಾಹಿತ್ಯ ಪರಿಷತ್, ಪ್ರಾಧಿಕಾರ ಮುಂತಾದ ಸಂಘಟನೆಗಳ ಜತೆಗೆ ಹಾಗೆಯೇ ಕನ್ನಡ ನಾಡಿನ ಸಾಹಿತ್ಯ ಹಾಗೂ ರಂಗಭೂಮಿಯ ದಿಗ್ಗಜರೊಂದಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದ್ದರು.
ಅವರು ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದಾಗ ಕಾಸರಗೋಡಿನಲ್ಲಿ ‘ಕವಿತೆ ಓದುವ ವಿಧಾನ’ ಎಂಬ ವಿಶಿಷ್ಟ ಕಮ್ಮಟವನ್ನು ಆಯೋಜಿಸಿದ್ದರು. ಸುಮತೀಂದ್ರ ನಾಡಿಗರ ಮಾರ್ಗದರ್ಶನದಲ್ಲಿ ನಡೆದ ಆ ಶಿಬಿರ ಕವನವೊಂದನ್ನುಇತರರ ಮುಂದೆ ಸಮರ್ಥವಾಗಿ ಮಂಡಿಸುವ ಮತ್ತು ಅದನ್ನು ಅರ್ಥೈಸುವ ವಿಧಾನಗಳ ಬಗ್ಗೆ ತರಗತಿ ಮತ್ತು ಪ್ರಾತ್ಯಕ್ಷಿಕೆಗಳೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊಂಡಿತ್ತು. ಅದರಲ್ಲಿ ಪಾಲ್ಗೊಂಡ ತಜ್ಞರ, ಕವಿಗಳ ಆಲೋಚನೆಗಳನ್ನು ಒಳಗೊಂಡು ಪುಸ್ತಕ ರೂಪದಲ್ಲಿ ಅದೇ ಹೆಸರಿನಿಂದ (ಕವಿತೆ ಓದುವ ವಿಧಾನ) ವೇಣುಗೋಪಾಲರ ಸಂಪಾದಕತ್ವದಲ್ಲಿ ಪ್ರಕಟವಾದ ಈ ಕೃತಿಯು ಆ ದಾರಿಯಲ್ಲಿ ವಿಶಿಷ್ಟವಾಗಿದ್ದು ಒಂದು ಕೈಪಿಡಿಯಂತೆ ಇಂದಿಗೂ ಪ್ರಸ್ತುತವಾಗಿದೆ. ಅವರ ನೇತೃತ್ವದಲ್ಲಿ ಹಾಗೂ ಪರಿಕಲ್ಪನೆಯಲ್ಲಿ ಕಾಲೇಜಿನ ಒಳಗೂ ಹೊರಗೂ ನಡೆದ ಸಾಹಿತ್ಯಗೋಷ್ಠಿಗಳು, ಸಮ್ಮೇಳನಗಳು ಹಲವು. ಅವುಗಳಲ್ಲಿ ಪಾಲ್ಗೊಂಡ ಅನೇಕರು ಇಂದಿಗೂ ಆ ನೆನಪನ್ನು ಮೆಲುಕು ಹಾಕುತ್ತಾರೆ.
ಕಾಲೇಜಿನ ಒಳಗೆ ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅವರು ಖಂಡಿತವಾಗಿ ಸುಮ್ಮನಿರುತ್ತಿರಲಿಲ್ಲ. ಕನ್ನಡದ ವಿಷಯದಲ್ಲಿ ನಡೆಯುವ ಹೋರಾಟಗಳಲ್ಲಿ ಅವರು ಭಾಗಿಯಾಗದ ಸಂದರ್ಭಗಳೇ ಇಲ್ಲ ಎಂದರೆ ತಪ್ಪಾಗಲಾರದು. ಕಾಸರಗೋಡಿನಲ್ಲಿ ಕನ್ನಡದ ಗೌರವ ಪೂರ್ಣವಾದ ಅಸ್ತಿತ್ವ ಅವರ ಕಾಳಜಿಯಾಗಿತ್ತು. ಅವರು ಕಾಸರಗೋಡಿನ ಕನ್ನಡಿಗರ ಅನಾಥ ಪ್ರಜ್ಞೆಯನ್ನು ಕೇಂದ್ರವಾಗಿರಿಸಿ ರಚಿಸಿದ ಕವನ ‘ದತ್ತು ಪುತ್ರನ ದುರಂತ ಗೀತೆ’ಗೆ ಐತಿಹಾಸಿಕ ಮಹತ್ವವಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಕರ್ನಾಟಕದಲ್ಲಿ ಜವಾಬ್ದಾರಿಯ ಸ್ಥಾನದಲ್ಲಿದ್ದ ಸಚಿವರು ‘ಮಹಾಜನ ವರದಿಯ ಭಜನೆ ಸಾಕು’ ಎಂದು ಹೇಳಿದ್ದಕ್ಕೆ ತುಂಬ ನೊಂದುಕೊಂಡ ಅವರು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಯನ್ನು ಓದುವ ಮುನ್ನ ಆ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದರು. ಈ ಬಂಡಾಯದ ಮನೋಭಾವ ಅವರಲ್ಲಿ ಪ್ರಖರವಾಗಿತ್ತು.
ಕಾಸರಗೋಡಿನಲ್ಲಿ ರಂಗಭೂಮಿಯನ್ನು ಚೈತನ್ಯಶೀಲವಾಗಿ, ಹೊಸಕಾಲದ ಅಗತ್ಯಗಳಿಗನುಸಾರವಾಗಿ ರೂಪಿಸಿ ಬೆಳೆಸಿ ಸ್ವತ: ನಾಟಕಗಳನ್ನು ಬರೆದು ನಿರ್ದೇಶಿಸಿ ಅನೇಕ ಶಿಷ್ಯರನ್ನು ತಯಾರು ಮಾಡಿ ಅಖಿಲ ಕರ್ನಾಟಕ ಮಟ್ಟದಲ್ಲಿ ಕಾಸರಗೋಡಿನ ರಂಗಭೂಮಿಗೆ ಹೆಸರನ್ನು ತಂದುಕೊಟ್ಟವರು ಅವರು. ಕೇರಳದ ತ್ರಿಶ್ಶೂರಿನ ಸ್ಕೂಲ್ ಆಫ್ ಡ್ರಾಮಾದಲ್ಲಿ ಅವರು ತರಬೇತಿಯನ್ನು ಪಡೆದಿದ್ದರು ಎನ್ನುವುದು ಗಮನಾರ್ಹ. ಅವರ ‘ದೃಷ್ಟಿ’, ‘ನೀನಲ್ಲಾಂದ್ರೆ ನಿನ್ನಪ್ಪ’, ‘ಡ್ಯೂಟಿ ಎಂದರೆ ಡ್ಯೂಟಿ’, ’ಬAಗಾರಾಂ’ ಮುಂತಾದ ನಾಟಕಗಳು ರಂಗಪ್ರಯೋಗದಲ್ಲಿ ಸಂಚಲನವನ್ನು ಸೃಷ್ಟಿಸಿದವು. ಅವರು ಬರೆದ ‘ನಾಯಿಬಾಲ’ ನಾಟಕ ಶಿಷ್ಯ ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯಲ್ಲಿ ಲಾರಿನಾಟಕವಾಗಿ ನಾಡಿನ ವಿವಿಧೆಡೆಗಳಲ್ಲಿ ಪ್ರದರ್ಶನವನ್ನು ಕಂಡು ಜನಮನ ಸೂರೆಗೊಂಡಿತು.
ಗರಿಮುರಿದ ಹಕ್ಕಿಗಳು, ಗೆರಿಲ್ಲಾ, ಬೊಗಸೆ ಮೀರಿದ ಬದುಕು ಮುಂತಾದ ಕವನಸಂಕಲನಗಳು, ಅವರ ಸಮಗ್ರ ಕವನಗಳ ಸಂಗ್ರಹ ‘ಕಾಸರಗೋಡು ಕವಿತೆಗಳು’, ಆಹುತಿ, ಬಯಲಾಟ ಎಂಬೆರಡು ಕಾದಂಬರಿಗಳು, ಹತ್ತು ನಾಟಕಗಳ ಸಂಪುಟ- ಅಲ್ಲದೆ ಏಡ್ಸ್ ಸಂತ್ರಸ್ತೆಯ ಕಥಾನಕವನ್ನೊಳಗೊಂಡ ಮಲಯಾಳದಿಂದ ಅನುವಾದಿತ ‘ಕಲ್ಯಾಣಿಯ ಕರುಣ ಕಥೆ’ – ಈ ಮುಂತಾದ ಕೃತಿಗಳು ಅವರ ಸಾಹಿತ್ಯ ಶಕ್ತಿಯ ಹೆಗ್ಗುರುತುಗಳಾಗಿ ನಮ್ಮೊಡನಿವೆ. ಅಪೂರ್ವವಾದ ಮಾರಕ ಕಾಯಿಲೆಗೆ ತುತ್ತಾಗಿ ಔದ್ಯೋಗಿಕ ಬದುಕಿನಿಂದ, ಸಾಹಿತ್ಯ, ರಂಗಭೂಮಿಯ ಚಟುವಟಿಕೆಗಳಿಂದ ದೂರವಾಗಿ ಮನೆಗೆ ಸೀಮಿತವಾಗಿದ್ದಾಗಲೂ ಅವರು ಬೌದ್ಧಿಕವಾಗಿ ಕ್ರಿಯಾಶೀಲರಾಗಿಯೇ ಇದ್ದರು. ಅವರ ಮುಖದಲ್ಲಿ ದಣಿವು ಕಾಣಿಸುತ್ತಿರಲಿಲ್ಲ. ಅವರಿಗೆ ಓಡಾಡಲು ಸಾಧ್ಯವಿಲ್ಲದ ಕಾರಣದಿಂದ ನಮ್ಮ ಕಾಲೇಜಿನ ಸಮೀಪವೇ ಇದ್ದ ಅವರ ಮನೆಗೆ ನನ್ನ ಎಂ.ಎ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರಿಂದ ಪಾಠ ಹೇಳಿಸಿ, ವಿದ್ಯಾರ್ಥಿಗಳ ಜೊತೆ ನಾನು ಮತ್ತೊಮ್ಮೆ ವಿದ್ಯಾರ್ಥಿಯಾಗಿ ಕೂತು ಕಿವಿಯಾದ ಅನುಭವ ಮರೆಯಲಾಗದ್ದು. ಅವರಿಗೂ ಅದು ಬಹಳ ಸಂತೋಷ ಕೊಟ್ಟಿತ್ತು. ಒಬ್ಬ ಒಳ್ಳೆಯ ಅಧ್ಯಾಪಕ ಒಳ್ಳೆಯ ವಿದ್ಯಾರ್ಥಿಯೂ ಆಗಿರಬೇಕು – ಎನ್ನುತ್ತಾರಲ್ಲ ಹಾಗಿದ್ದರು ಗುರು ವೇಣುಗೋಪಾಲರು. ನಿರಂತರ ಕಲಿಕೆಯ ಉತ್ಸಾಹ ಅವರಲ್ಲಿತ್ತು. ಸ್ತ್ರೀವಾದವು ಸಿದ್ಧಾಂತವಾಗಿ ಸಾಹಿತ್ಯ ವಿಮರ್ಶೆಯ ಒಂದು ವಿಧಾನವಾಗಿ ರೂಪುಗೊಳ್ಳತೊಡಗಿದ ಆ ದಿನಗಳಲ್ಲಿ ಅವರು ಅದರ ಬಗ್ಗೆ ಶ್ರದ್ಧೆಯಿಂದ ಓದಿ ತಿಳಿದುಕೊಳ್ಳುತ್ತಿದ್ದರು. ನನಗೆ ನೆನಪಿದೆ; ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಒಂದು ಕಮ್ಮಟದಲ್ಲಿ ಸ್ತ್ರೀವಾದಿ ವಿಮರ್ಶೆಯ ಬಗ್ಗೆ ನಾನು ಮಾತನಾಡುವಾಗ ಅವರು ವಿದ್ಯಾರ್ಥಿಗಳ ಜೊತೆ ಕೂತು ನೋಟ್ಸ್ ಮಾಡಿಕೊಳ್ಳುತ್ತಿದ್ದರು. ನನಗೆ ಒಂದೆಡೆ ಅಚ್ಚರಿಯೂ ಇನ್ನೊಂದೆಡೆ ಸಂಕೋಚವೂ ಆಯಿತು. ಆದರೆ ಅದು ನನಗೊಂದು ಪಾಠವನ್ನು ಕಲಿಸಿತು. ಕನ್ನಡದ ಮೊದಲ ಕಾದಂಬರಿಗಳ ಕುರಿತಾದ ನನ್ನ ಪಿಎಚ್.ಡಿ ಮಹಾಪ್ರಬಂಧವು ಪ್ರಕಟಣೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಆಮೂಲಾಗ್ರವಾಗಿ ಓದಿ ಸೂಕ್ತಸಲಹೆಗಳನ್ನಿತ್ತು ಕೃತಿಗೆ ‘ಇದು ಮಾನುಷಿಯ ಓದು’ ಎಂಬ ವಿಶಿಷ್ಟ ಹೆಸರನ್ನು ಸೂಚಿಸಿದ್ದರು. ನನಗೆ ಮಾತ್ರವಲ್ಲದೆ ಇನ್ನೂ ಅನೇಕ ಬರಹಗಾರರಿಗೆ ಪ್ರೋತ್ಸಾಹ, ಮಾರ್ಗದರ್ಶನಗಳನ್ನು ನೀಡಿ ಕಾಸರಗೋಡಿನಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳ ಜೀವಂತಿಕೆಗೆ ಆಧಾರವಾಗಿದ್ದರು. ಇಂದು ಅವರಿಲ್ಲವಾದರೂ ನಾಡು ಅವರ ಧೀರೋದಾತ್ತ ವ್ಯಕ್ತಿತ್ವಕ್ಕೆ ಸದಾಋಣಿಯಾಗಿದೆ.
ಮಹೇಶ್ವರಿ ಯು.
ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದ ಮಹೇಶ್ವರಿ ಯು. ವಿಭಾಗ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿದರು. ಬಳಿಕ ಕಣ್ಣೂರು ವಿ.ವಿಯ ಭಾರತೀಯ ಭಾಷಾ ಅಧ್ಯಯನಾಂಗ ವಿಭಾಗದಲ್ಲಿ ಸಂಯೋಜಕಿಯಾಗಿ ಅಲ್ಪಕಾಲ ಸೇವೆ.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕಿಯಾಗಿ ಅನುಭವ.
ಇವರ ಪ್ರಕಟಿತ ಕೃತಿಗಳು – ಮುಗಿಲ ಹಕ್ಕಿ (ಕವನಸಂಕಲನ), ಇದು ಮಾನುಷಿಯ ಓದು (ಸಂಶೋಧನೆ), ಮಧುರವೇ ಕಾರಣ (ವಿಚಾರ, ವಿಮರ್ಶೆ), ಅಟ್ಟುಂಬೊಳದ ಪಟ್ಟಾಂಗ (ಅಂಕಣ ಬರಹ), ಎಡ್ಯುನೇಶನ್ (ಇಂಗ್ಲೀಷ್ ನಿಂದ ಅನುವಾದ), ಗಡಿನಾಡಿನ ಬಾನಾಡಿ ಪ್ರತಿಭೆ ಕೆ.ವಿ.ತಿರುಮಲೇಶ್ (ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ) ಮತ್ತು ‘ಶಬ್ದಸೂರೆ ‘ಇತ್ತೀಚೆಗೆ ಪ್ರಕಟವಾದ ವಿಮರ್ಶಾ ಕೃತಿ.
‘ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ’, ‘ವಿ.ಎಂ.ಇನಾಂದಾರ್ ಪ್ರಶಸ್ತಿ’, ‘ಸುಶೀಲಾ ಸೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ’, ‘ಅಲ್ಲದೆ ಸಂಕ್ರಮಣ ಕಾವ್ಯ ಪ್ರಶಸ್ತಿ’ ಇವು ಇವರ ಸಾಹಿತ್ಯ ಕ್ಷೇತ್ರದ ಕೃಷಿಗೆ ಸಂದ ಗೌರವ. ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ, ಕವಿಗೋಷ್ಠಿಗಳಲ್ಲಿ, ವಿಚಾರಸಂಕಿರಣಗಳಲ್ಲಿ ಭಾಗಿ, ಸಾಹಿತ್ಯ ಅಕಾಡಮಿಯ ಪ್ರಕಟಣೆಯೂ ಸೇರಿದಂತೆ ಹಲವು ಸಂಗ್ರಹಗಳಲ್ಲಿ, ಸಂಪುಟಗಳಲ್ಲಿ ಇವರ ಲೇಖನಗಳು, ಕವಿತೆಗಳು ಪ್ರಕಟವಾಗಿವೆ. ಕ.ಸಾ.ಪ.ದ ಕಾಸರಗೋಡು ತಾಲೂಕು ಘಟಕದ ಅಧ್ಯಕ್ಷೆಯಾಗಿ ಮತ್ತು ಕರಾವಳಿ ಲೇಖಕಿ-ವಾಚಕಿಯರ ಸಂಘದ ಉಪಾಧ್ಯಕ್ಷೆಯಾಗಿ ಅನುಭವ ಹೊಂದಿದ್ದಾರೆ.