1950ರ ಕಾಲಘಟ್ಟದಲ್ಲಿ ಹೆಸರಾಂತ ರಂಗ ಕಲಾವಿದರಾಗಿ, ಗಾಯಕರಾಗಿ ಮತ್ತು ಚಿತ್ರ ನಟರಾಗಿ ಮಿಂಚಿದವರು ಹೊನ್ನಪ್ಪ ಭಾಗವತರ್. ಬೆಂಗಳೂರಿನ ನೆಲಮಂಗಲದ ಚೌಡಸಂದ್ರ ಗ್ರಾಮದಲ್ಲಿ 1916 ಜನವರಿ 15ರಂದು ಜನಿಸಿದ ಹೊನ್ನಪ್ಪರ ತಂದೆ ಚಿಕ್ಕಲಿಂಗಪ್ಪ, ತಾಯಿ ಕಲ್ಲಮ್ಮ. ಎಳವೆಯಲ್ಲಿ ತಂದೆಯನ್ನು ಕಳೆದುಕೊಂಡು ತಂದೆಯ ಪ್ರೀತಿಯಿಂದ ವಂಚಿತರಾಗಿ ಬೆಳೆದ ಇವರು ತಮ್ಮ ಬಾಲ್ಯವನ್ನು ತಾಯಿಯ ತವರು ಮೋಟಗಾನಹಳ್ಳಿಯಲ್ಲಿ ಕಳೆದರು. ಇವರಿಗೆ ತಾಯಿ ಹಾಡುತ್ತಿದ್ದ ಸಂಗೀತ, ಭಜನೆ, ಹಳ್ಳಿಯಲ್ಲಿ ಕಾಣಸಿಗುತ್ತಿದ್ದ ನಾಟಕ, ಊರಿನ ಹಬ್ಬ ಹರಿದಿನಗಳು ಆಪ್ತವಾಗಿದ್ದು, ಇವರ ಮೇಲೆ ಬಹಳ ಪರಿಣಾಮ ಬೀರಿದವು. ಕೆಲ ಕಾಲದ ನಂತರ ಬೆಂಗಳೂರಿಗೆ ಬಂದ ಹೊನ್ನಪ್ಪನವರು ದುಡಿಯಲಾರಂಭಿಸಿದರು. ಮನೆತನದ ವೃತ್ತಿ ನೇಯ್ಗೆ ಆದ್ದರಿಂದ ಬೆಂಗಳೂರಿಗೆ ಬಂದ ಹೊನ್ನಪ್ಪನವರು ಅಣ್ಣನೊಡನೆ ಮಗ್ಗದ ಕೆಲಸದಲ್ಲಿ ತೊಡಗಿಕೊಂಡರು. ಇದರೊಂದಿಗೆ ಇವರು ಮೂರ್ತಿ ಭಾಗವತರ್ ಮತ್ತು ಅರುಣಾಚಲಪ್ಪನವರ ಶಿಷ್ಯರಾಗಿದ್ದು, ಹಾರ್ಮೋನಿಯಂ ಮತ್ತು ಸಂಗೀತ ಅಭ್ಯಾಸ ಮಾಡಿದರು.
ಒಂದು ಬಾರಿ ಹೊನ್ನಪ್ಪರ ಸಂಗೀತವನ್ನು ಕೇಳಿ ಮೂರ್ತಿ ಭಾಗವತರ್ ಇವರ ಕಂಟಸಿರಿಗೆ ದಂಗಾಗಿ ಆಕರ್ಷಿತರಾಗಿದ್ದರು.
ಒಂದು ಬಾರಿ ಸೇಲಂನಲ್ಲಿ ಹೊನ್ನಪ್ಪನವರು ಮಾಡಿದ ಸಂಗೀತ ಕಚೇರಿ ಅಲ್ಲಿಯ ಜನರ ಮೆಚ್ಚುಗೆ ಪಡೆಯಿತು. ‘ಅದ್ಭುತ ಕಚೇರಿ ಮಾಡಿದ ಕನ್ನಡಿಗ’ ಎಂದು ಎಲ್ಲರೂ ಹೊಗಳಲಾರಂಭಿಸಿದರು. ಹೊನ್ನಪ್ಪನವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅವರ ಹೆಸರಿನ ಮುಂದೆ “ಭಾಗವತರ್” ಎಂಬ ಬಿರುದನ್ನು ಸೇರಿಸಿ ಗೌರವಿಸಿದರು. ತಮಿಳು ಸಿನಿಮಾದ ನಾಯಕನ ಗೆಳೆಯನ ಪಾತ್ರಕ್ಕೆ ಒಬ್ಬ ಕಲಾವಿದನನ್ನು ಹುಡುಕುತ್ತಿದ್ದ ಸಂದರ್ಭ ಅದು. ಸುಂದರ ಮೈಕಟ್ಟು ಹೊಂದಿದ್ದ ಈ ತರುಣನ ಮುಖದ ಕಳೆಯನ್ನು ನೋಡಿ ಆ ಪಾತ್ರಕ್ಕೆ ಸರಿಯಾದ ವ್ಯಕ್ತಿ ಎಂದು ಹೊನ್ನಪ್ಪನವರನ್ನು ಆಯ್ಕೆ ಮಾಡಿದರು. ಮಹಾಕವಿ ಕಾಳಿದಾಸ ಚಿತ್ರದಲ್ಲಿ “ಚೆಲುವಯ್ಯ ಚೆಲುವೋ ತಾನಿ ತಂದಾನ” ಹಾಡಿಗೆ ಕುಣಿಯುವಾಗ ಹೊನ್ನಪ್ಪನವರಲ್ಲಿ ಎದ್ದು ಕಾಣುವ ಮುಗ್ಧತೆ, ಆಕರ್ಷಕ ಭಂಗಿ ನೋಡುಗರ ಚಿತ್ತವನ್ನು ಸೆಳೆದಿಡುವಂತಿತ್ತು. ‘ಅಂಬಿಕಾ ಪತಿ’ ಚಿತ್ರದಲ್ಲಿ ಅವಕಾಶ ದೊರೆತಾಗ ಇವರ ಅಭಿನಯವನ್ನು ನೋಡಿ ಬೆರಗಾದ ಜನರು ‘ಅಂಬಿಕಾ ಪತಿ’ ಎಂದೇ ಇವರನ್ನು ಸಂಬೋಧಿಸುತ್ತಿದ್ದರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಮುಂದೆ “ನಾದ ಬ್ರಹ್ಮ ಸಂಗೀತ ವಿದ್ಯಾಲಯ” ಎಂಬ ಸಂಸ್ಥೆಯನ್ನು ಆರಂಭಿಸಿ ಅನೇಕ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಕಲಾರಾಧಕ ಭಾಗವತರ್. ಕರ್ನಾಟಕ ರಾಜ್ಯ ಚಲನಚಿತ್ರ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. 1976 ನೇ ಇಸವಿಯಲ್ಲಿ ಕರ್ನಾಟಕ ಗಾನ ಕಲಾ ಪರಿಷತ್ತು ತನ್ನ ಆರನೇ ಸಂಗೀತ ವಿದ್ವಾಂಸರ ಸಮ್ಮೇಳನವನ್ನು ಮಾಡಿದಾಗ ಅಧ್ಯಕ್ಷರನ್ನಾಗಿ ಹೊನ್ನಪ್ಪ ಭಾಗವತರ್ ರನ್ನು ಆಯ್ಕೆ ಮಾಡಿ, ಅವರಿಗೆ ಚಿನ್ನದ ಪದಕದೊಂದಿಗೆ ‘ಗಾನ ಕಲಾಭೂಷಣ’ ಎಂಬ ಬಿರುದನ್ನು ನೀಡಿ ಗೌರವಿಸಿತು. ನಟನಾ ರಂಗದಲ್ಲಿಯೂ ಖ್ಯಾತಿ ಪಡೆದ ಹೊನ್ನಪ್ಪ ಭಾಗವತರ್ ‘ಮಹಾಕವಿ ಕಾಳಿದಾಸ’ ಮತ್ತು ‘ಜಗಜ್ಯೋತಿ ಬಸವೇಶ್ವರ’ ಚಿತ್ರಗಳ ಅದ್ಭುತ ನಟನೆಗಾಗಿ 1955 ಮತ್ತು 56 ರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ. ಇವರ ಅಮೋಘ ಸಂಗೀತ ಸೇವೆಯನ್ನು ಪರಿಗಣಿಸಿ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ’ಯ ಪ್ರಶಸ್ತಿಯೊಂದಿಗೆ ‘ರಂಗ ಸಂಗೀತ ಕ್ಷೇತ್ರದ ಪ್ರಶಸ್ತಿ’ಯು ಇವರಿಗೆ ದೊರಕಿದೆ. ಇವರ ಉತ್ತಮ ಚಲನಚಿತ್ರದ ನಟನೆಗಾಗಿ ಮದ್ರಾಸ್ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
1944 ರಲ್ಲಿ ಹೊನ್ನಪರ ಜೀವನದಲ್ಲಿ ಮಹತ್ತರದ ತಿರುವೊಂದು ಕಾಣಿಸಿಕೊಂಡಿತು. ತ್ಯಾಗರಾಜ ಭಾಗವತರ್ ಒಂದು ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನವಾಗಿ ಜೈಲಿಗೆ ಹೋಗಬೇಕಾಯಿತು. ಬಹು ಬೇಡಿಕೆಯ ಕಲಾವಿದರಾಗಿದ್ದ ಅವರ ಕೈಯಲ್ಲಿ ಆಗ 12 ಚಿತ್ರಗಳು ಇದ್ದವು. ತಮಿಳಿನಲ್ಲಿ ಅವರಂತೆ ಗಾಯನ ಮತ್ತು ಅಭಿನಯ ಎರಡನ್ನು ಮಾಡಬಲ್ಲ ಕಲಾವಿದರು ಬೇರೆ ಯಾರು ಇರಲಿಲ್ಲ. ಇಂಥ ಒಂದು ಸಂದರ್ಭದಲ್ಲಿ ಎಲ್ಲಾ ಅವಕಾಶಗಳು ಹೊನ್ನಪ್ಪನವರಿಗೆ ದೊರೆತವು. ಕೈಗೆ ಬಂದ ಅವಕಾಶವನ್ನು ಹೊನ್ನಪ್ಪನವರು ಸುಮ್ಮನೆ ಒಪ್ಪಿಕೊಳ್ಳಲಿಲ್ಲ. ಭಾಗವತರ್ ಅವರ ಬಳಿಗೆ ಹೋಗಿ ವಿನಮ್ರ ಭಾವದಿಂದ “ನಾನು ಈ ಚಿತ್ರಗಳನ್ನೆಲ್ಲ ಒಪ್ಪಿಕೊಳ್ಳಬಹುದೇ ?” ಎಂದು ಕೇಳಿ ಅವರ ಆಶೀರ್ವಾದ ಪಡೆದ ನಂತರವೇ ಅವುಗಳಲ್ಲಿ ನಟಿಸಿದರು. ಇದು ಅವರಲ್ಲಿ ಕಲೆಯ ಬಗ್ಗೆಗಿದ್ದ ಗೌರವ ಹಾಗೂ ಅವರ ಸಂಸ್ಕಾರವನ್ನು ಬಯಲು ಮಾಡಿದೆ.
ಹೊನ್ನಪ್ಪ ಭಾಗವತರ್ ಅಭಿನಯದ ಜೊತೆಗೆ ಗಾಯಕರಾಗಿದ್ದರು. ವಾಗ್ಗೇಯಕಾರರಾಗಿ ‘ರಾಮದಾಸ’ ಎಂಬ ಅಂಕಿತದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದರು. ಈ ಕೀರ್ತನೆಗಳು “ಓಂಕಾರ ನಾದ ಸುಧಾ” ಎಂಬ ಕೃತಿಯಲ್ಲಿ ಪ್ರಕಟಗೊಂಡಿದ್ದವು. ತಾವೇ ಸ್ವತಹ ಸ್ಥಾಪಿಸಿದ ‘ಉಮಾಮಹೇಶ್ವರಿ’ ಕಂಪನಿಯ ಮೂಲಕ ಅನೇಕ ಮಹತ್ವದ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರಿಗೆ ನೀಡಿ, ಬದುಕಿದ್ದಾಗಲೇ ದಂತಕಥೆ ಎನಿಸಿಕೊಂಡವರು ಭಾಗವತರ್. ಮಹತ್ತರವಾದ ಸಾಧನೆಗಳನ್ನು ಮಾಡಿದ ಭಾಗವತರ್ ಜನಸಾಮಾನ್ಯರ ಹಾಗೆ ಕಾಣುತ್ತಿದ್ದರೂ, ಇವರ ಬದುಕು ಮತ್ತು ಸಾಧನೆಯನ್ನು ಶ್ರೀಧರಮೂರ್ತಿ ಎಂಬವರು “ಹೊನ್ನ ಪರ್ವತ” ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ.
ಕನ್ನಡ ನಾಡು ಕಂಡ ಈ ಮಹೋನ್ನತ ಕಲಾವಿದ 1992 ಅಕ್ಟೋಬರ್ 2ರಂದು ಇಹವನ್ನು ತ್ಯಜಿಸಿದರೂ ಅವರ ಸಾಧನೆಯಿಂದ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.