15 ಏಪ್ರಿಲ್ 2023, ಮಂಗಳೂರು: ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ ‘ನಂಬಿ ಸತ್ಯೋಲು’ ಅನುವಾದಿತ ಕೃತಿ ಮತ್ತು ‘ರಕ್ತ ಶುದ್ಧಿ-ಆರೋಗ್ಯ ವೃದ್ಧಿ’ ಎಂಬ ವೈದ್ಯಕೀಯ ಲೇಖನಗಳ ಸಂಕಲನ ಕೃತಿ ಹಾಗೂ ಡಾ. ಪ್ರಭಾಕರ್ ನೀರುಮಾರ್ಗ ಅವರ ‘ಓಲಗ’ ಕಾದಂಬರಿ ಬಿಡುಗಡೆ ಸಮಾರಂಭ ಮತ್ತು ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮವು ಮಂಗಳೂರಿನ ಬಂಟ್ಸ್ ಹಾಸ್ಟಲ್ ಸಮೀಪದ ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 13-04-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ ಕೃತಿಗಳನ್ನು ಬಿಡುಗಡೆಗೊಳಿಸಿ “ಪುಸ್ತಕ ಪ್ರಕಟಣೆ ಮಾಡುವಷ್ಟೆ ಕಷ್ಟದ ಕೆಲಸ ಅದನ್ನು ಮಾರಾಟ ಮಾಡುವುದು. ಆದರೆ ಲೇಖಕರು ವರ್ಷಕ್ಕೆ ಒಂದು ಅಥವಾ ಎರಡು ಪುಸ್ತಕಗಳ ಬಿಡುಗಡೆ ಮಾಡುವ ಮೂಲಕ ಆಶ್ಚರ್ಯ ಮೂಡಿಸುತ್ತಿದ್ದಾರೆ ಹಾಗೂ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸುವುದು ತುಂಬಾ ವಿಶೇಷವಾಗಿದೆ”ಎಂದು ಹೇಳಿದರು.
ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮಾತನಾಡಿ ತುಳು ನಾಡಿನಲ್ಲಿ ಬಿಸು ಹಬ್ಬದ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ವಿವರಣೆ ನೀಡಿದರು. ಲೇಖಕಿ ಶಾರದ ಅಂಚನ್ ಮಾತನಾಡಿ ನನ್ನ ತುಳು ಸಾಹಿತ್ಯದ ಬರವಣಿಗೆಗೆ ಮೊದಲು ಪ್ರೋತ್ಸಾಹ ದೊರೆತದ್ದು ಮುಂಬಯಿಯ ಮೊಗವೀರ ಪತ್ರಿಕೆಯಿಂದ ಎಂದು ಹೇಳಿ, ಬಿಸು ಹಬ್ಬದ ಮಹತ್ವದ ಬಗ್ಗೆ ಮಾತನಾಡಿದರು.
ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷರಾದ ದಿನೇಶ್ ಆಳ್ವ ಮಾತನಾಡಿ ಬಿಸು ಹಬ್ಬದ ಮಹತ್ವ ಮತ್ತು ಆಚರಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಗೆ ಮಾಡಿದ ಕುಶಾಲಾಕ್ಷಿ ಅವರನ್ನು ಅಭಿನಂದಿಸಿ ಕೃತಿಯ ಲೇಖಕರಿಗೆ ಶುಭ ಹಾರೈಸಿದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕರಾದ ವೀಣಾ ಶೆಟ್ಟಿಯವರು ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿ ”ವಿದ್ಯಾರ್ಥಿಗಳ ಬದುಕು ಕೇವಲ ವೃತ್ತಿಗೆ ಮಾತ್ರ ಸೀಮಿತವಾಗಿರಬಾರದು. ಸಾಮಾಜಿಕ ಆಯಾಮಗಳು ಬದುಕಿಗೆ ಬಹಳ ಮುಖ್ಯವಾಗಿದೆ. ಕೇವಲ ಹಣ ಸಂಪಾದನೆ ಒಂದೇ ಉದ್ದೇಶವಾಗಿರದೆ ತಮ್ಮ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಂದ್ರಹಾಸ ಸುವರ್ಣ, ತುಳು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಸಾಹಿತಿ ಡಾ. ಪ್ರಭಾಕರ್ ನೀರುಮಾರ್ಗ ಉಪಸ್ಥಿತರಿದ್ದರು. ತುಳು ಪರಿಷತ್ತಿನ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಶುಭೋದಯ ಆಳ್ವ ಸ್ವಾಗತಿಸಿ, ಡಾ. ಪ್ರಭಾಕರ್ ನೀರುಮಾರ್ಗ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.