ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ‘ಬಿಸು ಪರ್ಬ’ ಕಾರ್ಯಕ್ರಮವನ್ನು ದಿನಾಂಕ 14 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಮಂಗಳಾದೇವಿ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಗಳಾದೇವಿ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಕುಮಾರ್ ಐತಾಳ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ತುಳು ಕೂಟ (ರಿ.) ಕುಡ್ಲ ಇದರ ಅಧ್ಯಕ್ಷರಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರಿಗೆ ‘ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ 2025’ ಪ್ರದಾನ ಮಾಡಲಾಗುವುದು. ಪ್ರಥಮ ಬಹುಮಾನ ಶ್ರೀ ಶಶಿರಾಜ್ ರಾವ್ ಕಾವೂರು ಇವರ ‘ಕರುಣೆದ ಕಣ್ಣ್’, ದ್ವಿತೀಯ ಬಹುಮಾನವನ್ನು ಅಕ್ಷತಾ ರಾಜ್ ಪೆರ್ಲ ಇವರ ‘ಯಜ್ಞ ಪುತ್ತೊಲಿ ಹಾಗೂ ತೃತೀಯ ಬಹುಮಾನವನ್ನು ಗೀತಾ ನವೀನ್ ಇವರ ‘ಅಪ್ಪೆ ಮಹಾಮಾಯಿ’ ನಾಟಕ ಕೃತಿಗಳು ಪಡೆದಿರುತ್ತವೆ. ಅಲ್ಲದೇ, ಈ ಬಾರಿ ‘ಬಂಗಾರ್ ಪರ್ಬಾಚರಣೆ’ಯ ಪ್ರಯುಕ್ತ ಇನ್ನೆರೆಡು ನಗದು ರಹಿತ ಪ್ರೋತ್ಸಾಹಕ ಬಹುಮಾನ ನೀಡಲು ತುಳುಕೂಟ ನಿರ್ಧರಿಸಿದ್ದು, ಪ್ರಕಾಶ್ ಬಂಗೇರ ಬಗಂಬಿಲ ಇವರ ‘ಕರಿಮಣದ ಪಿರವು’ ಮತ್ತು ವಿಲಾಸ್ ಕುಮಾರ್ ನಿಟ್ಟೆ ಇವರ ‘ಗಗ್ಗರ’ ನಾಟಕ ಕೃತಿಗಳಿಗೆ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.