17 ಮಾರ್ಚ್ 2023, ಶಿವಮೊಗ್ಗ: “ನನ್ನ ಕೈಯಲ್ಲಿ ಶಾಲೆ-ದೇವಸ್ಥಾನಗಳನ್ನು ಕಟ್ಟಲು ಆಗಲಿಲ್ಲ. ಗಾಯಕಿಯಾಗಿದ್ದರಿಂದ 35 ಸಾವಿರ ಜನರಿಗೆ ಗಾಯನ ಕಲಿಸಿದೆ.” ಎಂದು ಹಿರಿಯ ಗಾಯಕಿ ಡಾ.ಬಿ.ಕೆ.ಸುಮಿತ್ರಾ ಹೇಳಿದರು.
ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನವು 11-03-2023 ಶನಿವಾರ ಹಮ್ಮಿಕೊಂಡ ಡಾ.ಜಿ.ಎಸ್.ಎಸ್. ಜನ್ಮದಿನ ಕಾವ್ಯ ಸೌರಭ ಮತ್ತು ಜಿ.ಎಸ್.ಎಸ್. ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಪುರಸ್ಕಾರ ಸ್ವೀಕರಿಸಿದರು. ಜಾನಪದೀಯ ಸಂಗೀತಕ್ಕೆ ಹೊಸ ಕಾಯಕಲ್ಪ ನೀಡಿದವರು ಬಿ.ಕೆ.ಸುಮಿತ್ರಾ. ಸಂಗೀತ ರಸಿಕರ ಎದೆಯಲ್ಲಿ ಅಳಿಸದೆ ಅಜರಾಮರವಾಗಿ ಉಳಿದ ಹಲವಾರು ಗೀತೆಗಳು ಇವರ ಕಂಠ ಸಿರಿಯಿಂದ ಬಂದವು ಮತ್ತು ಕನ್ನಡ ಕವಿಗಳ ಅಸಂಖ್ಯಾತ ಭಾವಗೀತೆಗಳಿಗೂ ದನಿಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ “ಗೌರವ ಡಾಕ್ಟರೇಟ್ ಪ್ರಶಸ್ತಿ”, “ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ” ಹಾಗೂ ಪ್ರತಿಷ್ಟಿತ ಹಂಪಿ ವಿಶ್ವವಿದ್ಯಾಲಯದ “ನಾಡೋಜ ಪ್ರಶಸ್ತಿ”ಗೆ ಇವರು ಭಾಜನರಾಗಿದ್ದಾರೆ.
“ಜಿ.ಎಸ್.ಎಸ್.ಅವರೊಂದಿಗೆ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಜೊತೆಜೊತೆಯಾಗಿ ಭಾಗವಹಿಸಿದ್ದೇನೆ. ಕೇವಲ ಪುರಸ್ಕಾರಕ್ಕೆ ಬರಲಾರೆ. ನಮ್ಮೂರಿನ ಮಹಿಳೆಯರಿಗೆ ಒಂದಿಷ್ಟು ಗಾಯನಗಳನ್ನು ಹೇಳಿಕೊಡುತ್ತೇನೆಂಬ ಷರತ್ತಿನನೊಂದಿಗೆ ಬಂದೆ. ಮಹಿಳೆಯರು ಉತ್ತಮ ಪ್ರತಿಕ್ರಿಯೆ ನೀಡಿದರು. ಶಾಲೆ-ದೇವಸ್ಥಾನಗಳನ್ನು ಕಟ್ಟಲು ಆಗದಿದ್ದರೂ ಗಾಯಕಿಯಾಗಿ ಗಾಯನವನ್ನು ಕಲಿಸಿದ ತೃಪ್ತಿ ನನಗಿದೆ. ನಾಡಿನೆಲ್ಲೆಡೆ 500 ಶಿಬಿರಗಳಲ್ಲಿ ಸುಮಾರು 35 ಸಾವಿರ ಜನರಿಗೆ ಗಾಯನ ಕಲಿಸಿಕೊಟ್ಟ ಸಂತಸವಿದೆ. 1945-50ರಲ್ಲಿ ಕೋಟೆ ರಸ್ತೆ ಭೀಮೇಶ್ವರ ದೇವಸ್ಥಾನದ ಬಳಿ ವಾಸವಿದ್ದು ವ್ಯಾಸಂಗ ಮಾಡಿದ ನಾನು ಶಿವಮೊಗ್ಗದೊಂದಿಗೆ ಈಗಲೂ ಉತ್ತಮ ಬಾಂಧವ್ಯ ಮತ್ತು ಸಂಪರ್ಕ ಇಟ್ಟುಕೊಂಡಿದ್ದೇನೆ. ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ಹಲವರೊಂದಿಗೆ ವ್ಯಾಸಂಗವನ್ನೂ ಮಾಡಿದ್ದೇನೆ, ಗಾಯನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ.” ಎಂದು ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಕಿರಣ್ ದೇಸಾಯಿ ಪುರಸ್ಕಾರ ಪ್ರದಾನ ಮಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ. ಎಚ್.ಟಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.