ಬೆಂಗಳೂರು, ಫೆಬ್ರವರಿ 06: ಕಲಾವಿದ ಡಾ. ಬಿ. ಕೆ. ಎಸ್. ವರ್ಮಾ (ಬುಕ್ಕಾ ಸಾಗರ ಕೃಷ್ಣಯ್ಯ ಶ್ರೀನಿವಾಸ್ ವರ್ಮಾ) ಇಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ ಜನಿಸಿದ ಇವರ ತಂದೆ ಸಂಗೀತಗಾರರು ಹಾಗೂ ತಾಯಿ ಜಯಲಕ್ಷ್ಮಿ ಚಿತ್ರ ಕಲಾವಿದೆ. ತಾಯಿಯ ಪ್ರತಿಭೆಯನ್ನು ಮೈಗೂ ಡಿಸಿಗೊಂಡು ಬೆಳೆದ ಇವರು 6ನೆಯ ವಯಸ್ಸಿನಲ್ಲಿಯೇ ಚಿತ್ರ ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದ ಬಿ.ಕೆ.ಎಸ್ ತೈಲ ಚಿತ್ರಗಳನ್ನೂ ಬಿಡಿಸುತ್ತಿದ್ದರು. ಇವರು ಬಿಡಿಸಿದ ಪೂಜೆಯಲ್ಲಿ ಮೈಮರೆತ ರಾಘವೇದ್ರಸ್ವಾಮಿಯ ಕಲಾಕೃತಿ ಬಹು ಮನೆಯ ದೇವರ ಕೋಣೆಯಲ್ಲಿ ಪೂಜಿಸಲ್ಪಡುತ್ತಿದೆ. ಸಿನಿ ತಾರೆಗಳಾದ ಡಾ.ರಾಜ್ ಕುಮಾರ್, ರಜನಿಕಾಂತ್, ಮತ್ತು ಅನೇಕ ದೆವಾನುದೇವತೆಗಳ ಚಿತ್ರಗಳು ಇವರ ಕುಂಚದಿಂದ ಅದ್ಭುತವಾಗಿ ಮೂಡಿಬಂದಿವೆ. ಎಂಬೋಸಿಂಗ್, ಅದರಲ್ಲೂ ಥ್ರೆಡ್ ಪೈಂಟಿಂಗ್ ಗಳಲ್ಲಿ ಇವರ ಪ್ರತಿಭೆ ಅಡಗಿದೆ ಎಂಬುದು ಅವರ ಕಲಾಕೃತಿಗಳಲ್ಲಿ ಎದ್ದು ಕಾಣುತ್ತದೆ. ನೃತ್ಯಕ್ಕೆ,ಕಾವ್ಯಕ್ಕೆ ಅವರು ಬಿಡಿಸುವ ಚಿತ್ರದಲ್ಲಿನ ಕೈಚಳಕದಲ್ಲಿ ಅವರ ಪ್ರತಿಭೆ ಮತ್ತು ಪರಿಣತಿ ಕಂಡು ಬರುತ್ತದೆ.ಶತಾವಧಾನಿ ಗಣೇಶ್ ಅವರ ಹಾಡುಗಳಿಗೆ ಪೂರಕ ಚಿತ್ರ ಬಿಡಿಸುವ ಮೂಲಕ ಹಾಡುಗಳಿಗೆ ಕಣ್ಣಾದರು. ಇವರ ಕಲಾಸಾಧನೆಗೆ 1986ರಲ್ಲಿ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ 2001ರಲ್ಲಿ ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ಪುರಸ್ಕಾರ, ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಾಗೂ 2011 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಇವರ ಕಲಾಸೇವೆಗೆ ಸಾಕ್ಷಿಯಾಗಿವೆ.