13 ಮಾರ್ಚ್ 2023, ಬೆಂಗಳೂರು: ರಂಗಶಾಲಾ ಅಭಿನಯ ತರಬೇತಿ ಕೇಂದ್ರ ಪ್ರಸ್ತುತಪಡಿಸುತ್ತಿರುವ. ಮೂಲ ಫೆಡರಿಕೊ ಗಾರ್ಸಿಯ ಲೋರ್ಕ ರಚಿಸಿ, ಕೆ.ಎನ್. ವಿಜಯಲಕ್ಷ್ಮಿ ಕನ್ನಡಕ್ಕೆ ಅನುವಾದಿಸಿ, ಡಾಕ್ಟರ್ ಉದಯ್ ಸೊಸ್ಲೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕವೇ ‘ಬ್ಲಡ್ ವೆಡ್ಡಿಂಗ್’ ಈ ನಾಟಕವು ಇದೆ ಬರುವ 16-03-2023ರಂದು ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಗೊಳ್ಳಲಿದೆ.
ಫೆಡರಿಕೊ ಗಾರ್ಸಿಯ ಲೋರ್ಕ ಎನ್ನುವ ಸ್ಪೇನಿನ ನಾಟಕಕಾರನ “ಬ್ಲಡ್ ವೆಡ್ಡಿಂಗ್” ಅನ್ನೋ ನಾಟಕ, ಸರ್ವಕಾಲಕ್ಕೂ ಸಲ್ಲಬಹುದಾದ, ಮನುಷ್ಯನ ಸಹಜ ಆಯ್ಕೆಗಳನ್ನ ಅಷ್ಟೇ ನಿಷ್ಠೂರವಾಗಿ ಪ್ರಶ್ನೆಗಚ್ಚುವ ಸ್ಕ್ರಿಪ್ಟ್.. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಅದರೊಟ್ಟಿಗೆ ಬಿಗಿತುಗೊಂಡ ಗಂಡು ಮತ್ತು ಹೆಣ್ಣಿನ ಸಹಜ ಆಕರ್ಷಣೆ, ಆಯ್ಕೆ, ದ್ವಂದ್ವ, ನಿಲುವು, ಅಸ್ಮಿತೆ, ಅಸ್ತಿತ್ವ ಇವುಗಳ ಚಂದದ ಕಟ್ಟುವಿಕೆಯೆ ಬ್ಲಡ್ ವೆಡ್ಡಿಂಗ್..
ರ೦ಗಶಾಲಾ ಅಭಿನಯ ತರಬೇತಿ ಕೇಂದ್ರ: ರಂಗಶಾಲಾ ಬೆಂಗಳೂರು ಸಂಸ್ಥೆಯು ವಿನಯ್ ನೀನಾಸಮ್ ರವರ ರಂಗಭೂಮಿ ಕನಸುಗಳಲ್ಲೊಂದು ಈ ತರಬೇತಿ ಸಂಸ್ಥೆಯು ಸಮಾಜಕ್ಕೆ ನೇರವಾಗಿ ಉಪಯುಕ್ತವಾಗಬಲ್ಲಂತಹ ಸಂವಹನ ತರಬೇತಿ,ವ್ಯಕ್ತಿತ್ವ ವಿಕಸನ ತರಬೇತಿ, ನಾಯಕತ್ವದ ತರಬೇತಿ, ಶಿಕ್ಷಣದಲ್ಲಿ ರಂಗಭೂಮಿ ಇತ್ಯಾದಿ ಮಹತ್ವದ ಕ್ಷೇತ್ರಗಳಲ್ಲಿ ಕಲಸ ಮಾಡುತ್ತಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದೂ ಬದುಕಿಗಾಗಿ ಹಲವು ವೃತ್ತಿಗಳಲ್ಲಿ ತೊಡಗಿರುವ ಯುವಕ ಯುವತಿಯರನ್ನ ಗಮನದಲ್ಲಿಟ್ಟುಕೊಂಡು ರಂಗಭೂಮಿಯ ಕುರಿತು ಹತ್ತು ಹಲವಾರು ವಿಷಯಗಳಲ್ಲಿ ತರಬೇತಿ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಾ ಬಂದಿರುವ ಈ ಸಂಸ್ಥೆಯ ಫಲಾನುಭವಿಗಳು ರಂಗಭೂಮಿಯಲ್ಲಿ ವೃತ್ತಿಪರರಾಗಿ ತೊಡಗಿಸಿಕೊಂಡು ಕಿರುತೆರೆ ಹಿರಿತೆರೆಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ರಂಗ ಚಟುವಟಿಕೆಗಳ ಮೂಲಕ ಮನಸ್ಸಿನ ವಿಕಸನಕ್ಕೆ ಮತ್ತು ಚಿಂತನಾಲಹರಿಗೆ ರಂಗಶಾಲಾ ಒಂದು ವಿಶಿಷ್ಟ ವೇದಿಕಯನ್ನು ಒದಗಿಸುತ್ತಿದೆ. ವಿನಯ್ ರವರ ಕನಸುಗಳ ಮೂಲಕ ಆರಂಭವಾಗಿ ಬೆಳೆದು ಮತ್ತು ಬೆಳೆಯುತ್ತಿರುವ ರಂಗಶಾಲಾ ಸಾಧನೆಯ ಮಜಲಿಗೆ ಅದು 8 ವರ್ಷಗಳಿಂದ ಹಮ್ಮಿಕೊಂಡು ಬಂದ ಕಾರ್ಯಕ್ರಮಗಳೇ ಪುರಾವೆ. ಡ್ರಾಮಾ ಲೋಕ, ನಾಟಕ ಉತ್ಸವಗಳು , ಚಿನ್ನರ ಮೇಳ ಬೇಸಿಗೆ ಶಿಬಿರ, ಯುವಜನ ರಂಗ ತರಬೇತಿ ಶಿಬಿರ, ರಂಗೋತ್ಸವಗಳು ಮುಂತಾದ ಕಾರ್ಯಕ್ರಮಗಳು ರಂಗಶಾಲಾ ಕ್ರಿಯಾಶೀಲತೆಗೆ ಕಲವು ಉದಾಹರಣೆಗಳು.
ನಿರ್ದೇಶಕರು: ಉದಯ್ ಸೋಸಲೆ
ಮೂಲತಃ ಮೈಸೂರಿನ ಸೋಸಲೆ ಗ್ರಾಮದವರು. ಇವರು ನೀನಾಸಂನ ರಂಗ ಶಿಕ್ಷಣ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಹಾಗೂ ಪ್ರದರ್ಶನಾಕಲಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಕಲೆ, ಸಾಹಿತ್ಯ ಕೃಷಿ ರಂಗಭೂಮಿ ಹೀಗೆ ಹಲವು ಕ್ಷೇತ್ರದಲ್ಲಿ ಸಮಾನ ಅಭಿರುಚಿ, ಆಸಕ್ತಿ ಹೊಂದಿರುವ ಉದಯ್, ನಿರಂತರ ಹುಡುಕಾಟ ಹಾಗೂ ಅಭ್ಯಾಸದಲ್ಲಿ ತೊಡಗಿರುವ ಉತ್ಸಾಹಿ ಯುವಕ, ವೀಣಾಪಾಣಿ ಚಾವ್ಲಾ , ಕನ್ಹಯ್ಯ ಲಾಲ್ ಸೇರಿದಂತೆ ಹಿರಿಯ ರಂಗ ನಿರ್ದೇಶಕರೊಟ್ಟಿಗಿನ ಇವರ ಕಲಿಕೆಯ ಒಡನಾಟ ಇವರನ್ನು ಮತ್ತಷ್ಟು ಪ್ರಬುದ್ಧಗೊಳಿಸಿದೆ ಎಂದೇ ಹೇಳಬೇಕು. “ನರ್ಮದಾ ಬಚಾವ್’’ ಅಂದೋಲನ ಸೇರಿದಂತೆ ಇಲ್ಲಿಯವರೆಗೂ ಹಲವು ಪ್ರಮುಖ ಚಳುವಳಿ ಹಾಗು ಹೋರಾಟಗಳಲ್ಲಿ ಬೀದಿನಾಟಕಗಳನ್ನು ನಿರ್ದೇಶಿಸಿದ್ದಾರೆ. ಈ ಹೊತ್ತಿನ ಸಾಂಸ್ಕೃತಿಕ ರಾಜಕಾರಣದಲ್ಲಿ ಕಳೆದುಹೋಗಿರುವ ನಾಟಕಗಳ ಸಾಮಾಜಕ ಜವಾಬ್ದಾರಿಯನ್ನು ತನ್ನ ನಾಟಕಗಳಲ್ಲ್ಲಿ ಎತ್ತಿ ಹಿಡಿಯುವ ಪ್ರಯತ್ನವನ್ನು ಇವರು ನಿರಂತರವಾಗಿ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ನಾಟಕಗಳಲ್ಲದ ಲೇಖಕರ ಮಾನೋಭಿಲಾಷೆಯನ್ನು ರಂಗದ ಮೇಲೆ ತರಬಯಸುವ ಇವರ ತುಡಿತ ಇವರನ್ನು ಯಶಸ್ವಿ ನಿರ್ದೇಶಕರ ಸಾಲಿಗೆ ನಿಲ್ಲಿಸಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅಲ್ಲದೆ ಈ ನೆಲದ ನಿಜ ಸಾಂಸ್ಕೃತಿಕ ಸೊಗಡಿನ ಆಂತರ್ಯವನ್ನು ಬಸಿದು, ರಂಗದ ಮೇಲೆ ಭಾವನಾತ್ಮಕವಾಗಿ ಇವರು ಕಟ್ಟಿ ಕೊಡುವ ದೃಶ್ಯಗಳು ಪ್ರೇಕ್ಷಕರ ಮನಸಿನ ಮೇಲೆ ಗಾಢವಾದ ಪರಿಣಾಮವನ್ನುಬೀರಿ ಸಾಮಾಜಿಕ ನ್ಯಾಯಪರ ಚಿಂತನೆಗೆ ಒಡ್ಡುತ್ತದೆ.
ಇವರ ಪ್ರಮುಖ ನಾಟಕಗಳೆಂದರೆ “ಅಲ್ಲಮನ ಬಯಲಾಟ’, ‘ಒಂದು ಬೊಗಸೆ ನೀರು’, ‘ಮೀಡಿಯ’, “ಸೆಜುವಾನ್ ನಗರದ ಸದ್ವಿ’, ‘ಮೂರು ಹಾಸಿನ ಸಂಗೀತ ನಾಟಕ’, “ಜೊತೆಗಿರುವನು ಚಂದಿರ’, ‘ಹೆಣದ ಮನೆ’, ‘ಇರುವುದೆಲ್ಲವ ಬಿಟ್ಟು’, ‘ಡಾ. ಫಾಸ್ಟಸ್ ‘, ‘ಮ್ಯಾಕ್ಬೆತ್’, ‘ಮಿಂಚುಳ’, “ಪೋಸ್ಟ್ ಬಾಕ್ಸ್ ನಂ.9”, “ಕನ್ನಡತಿ” ಇವೇ ಮುಂತಾದ ಸುಮಾರು 60ಕ್ಕೂ ಹೆಚ್ಚು ವೈವಿಧ್ಯಮಯ ನಾಟಕಗಳನ್ನು ರಂಗಭೂಮಿಗೆ ಅವರದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ, ಕಳೆದ 5 ವರ್ಷಗಳಿಂದ ‘ಆಜೀವಿಕ’ ಎಂಬ ಸಾಂಸ್ಕೃತಿಕ ಸಂಸ್ಥೆಯ ರುವಾರಿಯಾಗಿ ನಾಟಕ ಸೇರಿದಂತೆ ಇತರ ಸಾಂಸ್ಕೃತಿಕ ಚಟುವಟಕೆಗಳಲ್ಲಿ ಸಕ್ರಿಯವಾಗಿದ್ದಾರೆ.